ಜೀವನ ಒಂದು ಸುಂದರವಾದ ಉದ್ಯಾನವನದಂತೆ. ಅದರಲ್ಲಿ ನಮ್ಮೆಲ್ಲರ ಪಾತ್ರ ಬಹುಮುಖ್ಯ. ಅಲ್ಲಿ ಮೊಳೆವ ಕಳೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದು ಹಾಕದಿದ್ದರೆ ಜೀವನ ಸೌಂದರ್ಯ ಹಾಳಾಗುತ್ತದೆ. ಮಾನವನ ಯೋಚನೆ, ಯೋಜನೆಯು ವಿಚಿತ್ರವಾದದು. ಸಾಕೆನಿಸದ ಸ್ವಪ್ರತಿಷ್ಠೆ, ಸ್ವಾರ್ಥ, ದುರಾಸೆಯನ್ನು ನಿಯಂತ್ರಿಸಲಾಗದೆ ಸುಲಭದಲ್ಲಿ ಸುಖ ಸೌಕರ್ಯ ಪಡೆಯುವ ಹಪಾಹಪಿಯಲ್ಲಿ ಕಿರುದಾರಿ, ಅಡ್ಡದಾರಿಯ ಓಟದಲ್ಲಿ ಅಮೂಲ್ಯವಾದುದು ಕಳೆದು ಹೋದದ್ದು ಗೊತ್ತೇ ಆಗುವುದಿಲ್ಲ. ಸುಖ, ಶಾಂತಿ ಮತ್ತೆಲ್ಲೋ ಯಾವುದರಲ್ಲೋ ಇರುವುದಿಲ್ಲ. ಅವರವರ ಮನಸ್ಸಿನಲ್ಲಿ ಅಡಗಿರುತ್ತದೆ. ಕೆಲವರಂತೂ ನಿರ್ದಾಕ್ಷಿಣ್ಯವಾಗಿ ನಕಾಲರಾತ್ಮಕ ಆಲೋಚನೆಗಳಿಂದ ತುಂಬಿರುತ್ತಾರೆ. ಸಂತೋಷಕರ ಜೀವನಕ್ಕಾಗಿ ಒಳ್ಳೆಯ ಆಲೋಚನೆಗಳನ್ನು ಮಾಡಿ ನಿರಂತರ ಆಶಾವಾದಿಗಳಾಗಿರೋಣ. ಕರ್ತವ್ಯದ ಬಗ್ಗೆ ಆಲೋಚಿಸಿ ಫಲಿತಾಂಶಗಳ ಮೇಲೆ ಆಧಾರವಾಗಿರಬೇಡಿ. ಯಾವುದೇ ಕೆಲಸದಲ್ಲಿ ಏಕಾಗ್ರತೆ ಎಷ್ಟು ಮುಖ್ಯವೋ ಕರ್ತವ್ಯ ನಿರ್ವಹಣೆ ಕೂಡ ಅಷ್ಟೇ ಮುಖ್ಯ.
ಈ ಪ್ರಪಂಚಕ್ಕೆ ಒಡೆಯನಾದರೂ ಕೆಲವರು ಸಂತೋಷದಿಂದ ಇರುತ್ತಾರೆ ಅನ್ನೋ ಗ್ಯಾರಂಟಿ ಏನು ಇಲ್ಲ . ಸಂತೋಷ ಅಂತರಂಗದಲ್ಲಿ ಅಡಗಿದ ಒಂದು ಭಾವನೆ. ಅದರ ಇರುವಿಕೆಯನ್ನು ತಿಳಿದುಕೊಂಡು ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಪುಟ್ಟ ವಿಷಯಗಳನ್ನು ರಾದ್ದಾಂತವಾಗಿ ಮಾಡಿಕೋಳ್ಳದೆ ಕ್ಷಮಿಸುವುದನ್ನು ರೂಢಿಸಿಕೊಂಡರೆ ಜೀವನವೆಂಬ ತೋಟದಲ್ಲಿ ಸುಮಧುರ ಸುಮಗಳೆ ಅರಳುತ್ತವೆ. ಆಗ ನಮ್ಮ ಬದುಕು ಒಂದು ಸುಂದರ ಉದ್ಯಾನವನದಂತೆ ಕಂಗೊಳಿಸುತ್ತದೆ.
ತನ್ನನ್ನು ತಾನು ಪ್ರೀತಿಸುವಂತೆ ಪ್ರತಿಯೊಬ್ಬರನ್ನು ಗೌರವಿಸಿ, ಪ್ರೀತಿಸಿ. ಜಗತ್ತು ಭಿನ್ನಾಭಿಪ್ರಾಯಗಳಿಂದ ಕೂಡಿದ ಕಾರಣ ವಾದ- ವಿವಾದಗಳು ಕೆಲವೊಮ್ಮೆ ಅನಿವಾರ್ಯವಾಗಿದ್ದರೂ ತಾಳ್ಮೆ, ವಿವೇಕ ಹಾಗೂ ಕುಶಲತೆಗಳಿಂದ ಸಂತೋಷದಾಯಕ ಜೀವನ ನಡೆಸಬಹುದು. ಅದು ಬಿಟ್ಟು ಇತರರನ್ನು ಶಪಿಸುವುದರಿಂದ ಮನಶಾಂತಿ ಕಳೆದುಕೊಳ್ಳುವಿರಿ. ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಉಪಯೋಗಿಸಿಕೊಳ್ಳಿ. ನಿತ್ಯ ಜೀವನ ಬಹಳಷ್ಟು ಅಲ್ಲೋಲ್ಲ ಕಲ್ಲೋಲಗಳಿಂದ ಕೂಡಿದ್ದರೂ ಸಮಸ್ಯೆಗೆ ಭಯಪಡದೆ ಆಗುವುದೆಲ್ಲ ಒಳ್ಳೆಯದಕ್ಕೆ ಅಂದುಕೊಂಡು ಸಂತೋಷಕರ ಜೀವನಕ್ಕಾಗಿ ಮನಸ್ಸಿನಲ್ಲಿ ತುಂಬಿದ ಮನೋಚಿಂತೆಗಳ ಪ್ರತಿರೋಧಗಳನ್ನೆಲ್ಲಾ ದಾಟಿ ಛಿದ್ರಗೊಳಿಸುವುದಕ್ಕೆ ಏಕೈಕ ಸುಲಭ ಮಾರ್ಗ ಮನಸ್ಸು ನಿರ್ಮಲವಾಗಿರಿಸುವುದು. ಆಗ ತನ್ನ ತಾನೆ ಬಾಳಲ್ಲಿ ಹೊಸತನ ನಳನಳಿಸುತ್ತದೆ. ಬದುಕು ಅರಳುತ್ತದೆ. ಹಿತವಾಗಿ ಹಾಯಾಗಿ ತನಗೆ ತಾನಾಗಿಯೆ ಜೀವನ ಕತ್ತಲೆಯಿಂದ ಬೆಳಕಿನೆಡೆಗೆ ದುಃಖದಿಂದ ಸಂತೋಷದೆಡೆಗೆ ಸಾಗುತ್ತದೆ. ಬಾಳು ಬಂಗಾರವಾಗುತ್ತದೆ.
ಸ್ವಾರ್ಥ ಬಿಟ್ಟು ಒಳ್ಳೆಯ ಅಭ್ಯಾಸ, ಸಭ್ಯತೆ, ಉತ್ತಮ ನಾಗರಿಕ ಲಕ್ಷಣಗಳನ್ನು ತೋರುತ್ತಿದ್ದರೆ ಜೀವನದಲ್ಲಿ ಆನಂದಕರ ಅಲೆ ತನ್ನ ತಾನೆ ಬೀಸುತ್ತದೆ. ದುಡ್ಡಿಗಾಗಿ ಹಾತೊರೆಯುವುದು ಬೇಡ. ದಿಢೀರ್ ಹಣಗಳಿಸುವ ಆಸೆಗಳಿಂದ ಜೀವನ ಶೈಲಿಯನ್ನು ಬದಲಾಯಿಸಿಕೊಂಡ ದುರಂತಗಳೆಷ್ಟೋ. ಆಡಂಬರದ ಜೀವನಕ್ಕಾಗಿ ಸಾಲವೆಂಬ ಚಕ್ರವ್ಯೂಹದಲ್ಲಿ ಸಿಲುಕಿ ಒತ್ತಡದಲ್ಲಿ ಕೊರಗುತ್ತಾರೆ. ಜ್ಞಾನ, ಜಾಣ್ಮೆ ಕೇವಲ ನಮ್ಮ ವಿಕಾಸಕ್ಕಾಗಿ ಮಾತ್ರ ಉಪಯೋಗವಾಗದೆ ಇತರರ ಹಾಗೂ ಸಮುದಾಯದ ಅಭಿವೃದ್ಧಿಗೂ ಉಪಯೋಗ ವಾಗಲಿ. ಪ್ರತಿ ಮನುಷ್ಯ ತನ್ನ ಹತ್ತಿರ ಇರುವುದೆಲ್ಲ ಶಾಶ್ವತ ಅಂತ ಭಾವಿಸುತ್ತಾನೆ. ನಶಿಸಿ ಹೋಗುವ ವಸ್ತುಗಳನ್ನು ಗಳಿಸುವುದರಲ್ಲಿ ಸಂತೋಷಕರ ಜೀವನವನ್ನು ಹಾಳುಮಾಡಿಕೊಳ್ಳದೆ ಸುಂದರ ಬದುಕಿಗೊಂದು ನಾಂದಿ ಹಾಡಲೇ ಬೇಕು ತಾನೆ.
ಸಣ್ಣ ಸಣ್ಣ ವಿಷಯಗಳ ಕುರಿತು ಕಂಗಾಲಾಗುವುದು ಗೊಂದಲಕ್ಕೆ ಒಳಗಾಗುವುದು ಕೇವಲ ನಮ್ಮ ಒಂದು ಅಹಮಿಕೆಯನ್ನು ಸಂತೃಪ್ತಿಪಡಿಸುತ್ತದೆ ಆಷ್ಟೆ. ಅದರಿಂದ ಯಾವುದೇ ಪ್ರಯೋಜನವಿಲ್ಲ. ಮನಸ್ಸಿನಲ್ಲಿ ಹೊಲಸು ತುಂಬಿಸಿಕೊಳ್ಳದೆ, ಉದ್ವೇಗ, ಭಯ, ಅಸೂಯೆ, ದ್ವೇಷ ಕೆಲಸಕ್ಕೆ ಬಾರದ ಚಿಂತೆಯಿಂದ ದೂರ ಇದ್ದರೆ ಬದುಕೆಂಬುದು ಬೆಳದಿಂಗಳ ಹೊನಲು. ಇಲ್ಲದಿದ್ದರೆ ಕಗ್ಗತ್ತಲ ಕೂಪ ಆಯ್ಕೆ ನಮ್ಮದೆ. ಪ್ರತಿಯೊಬ್ಬ ಮಾನವನ ಉನ್ನತಿ ಅವನತಿ ಅವರವರ ಕೈಯಲ್ಲಿ ಇರುವುದರಿಂದ ಒಳಿತು ಕೆಡುಕುಗಳ ಯೋಚಿಸಿ ಆಲೋಚಿಸಿ ಅಡಿ ಇಡಬೇಕು.
ಎಲ್ಲಕ್ಕಿಂತ ಸಹನಾ ಶಕ್ತಿ ಅತೀ ಮುಖ್ಯ. ಸಹನೆ ಹೆಚ್ಚಾಗಿರುವ ವ್ಯಕ್ತಿ ಎಷ್ಟು ಎತ್ತರಕ್ಕಾದರೂ ಬೆಳೆಯಬಲ್ಲರು. ನಮ್ಮೊಳಗಿನ ದೌರ್ಬಲ್ಯವನ್ನು ಅರಿತು ಸಜ್ಜನರ ಸಾಂಗತ್ಯವನ್ನು ಬೆಳೆಸಿಕೊಂಡು ಬದುಕಿ ಬಾಳಬೇಕು. ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ಸ್ವಾಥ್ಯವೂ ಆನಂದಕರ ಜೀವನಕ್ಕೆ ಎಷ್ಟೋ ಅವಶ್ಯಕ. ಮನುಷ್ಯನ ಹುಟ್ಟು ಸಾವು ಒಂದು ಪರಮ ರಹಸ್ಯ. ಇವೆರಡರ ನಡುವಿನ ಜೀವನ ಅತ್ಯದ್ಭುತ ರಹಸ್ಯ. ಈ ರಹಸ್ಯ ಬೇದಿಸಲು, ಜೀವನ ಸುಂದರವಾಗಿರಿಸಲು ತಮ್ಮ ಅವಶ್ಯಕತೆ ಸೀಮಿತಗೊಳಿಸಿಕೊಂಡರೆ ನೆಮ್ಮದಿಯ ಬಾಳು ನಮ್ಮೆಲ್ಲರದ್ದು ಆಗುವುದು ಖಂಡಿತ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ