ಬ್ರಹ್ಮಾವರ ಡಿ. 28: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಡಿ. 28 ರಿಂದ 30 ರವರೆಗೆ ಮೂರು ದಿನಗಳ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರು, ಲೇಖಕರು ಹಾಗೂ ಕಾದಂಬರಿಕಾರರಾದ ಶ್ರೀಮತಿ ಸೌಮ್ಯ ಪುತ್ರನ್ರವರು ರಿಬ್ಬನ್ ಕತ್ತರಿಸುವ ಮೂಲಕ ಪುಸ್ತಕ ಮೇಳವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾವು ಸ್ವತಂತ್ರವಾಗಿ ಬದುಕಲು ಮತ್ತು ಬದುಕುವ ದಾರಿಯನ್ನು ಕಂಡುಕೊಳ್ಳಲು ಶಿಕ್ಷಣ ಬೇಕು. ಉತ್ತಮವಾದ ಓದುವ ಹವ್ಯಾಸವನ್ನು ಇಟ್ಟುಕೊಂಡವರು ಮಾತ್ರ ಉತ್ತಮ ಲೇಖಕರಾಗಲು ಸಾಧ್ಯ.
ಬರವಣಿಗೆಯ ಮೂಲಕ ಮನುಷ್ಯನ ಮನಸ್ಸಿನ ಭಾವನೆಯನ್ನು ಅಕ್ಷರಗಳ ಮೂಲಕ ಬಿತ್ತರಿಸಲು ಸಾಧ್ಯ. ಅದರ ಜೊತೆಗೆ ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿ ನಾವು ಧನಾತ್ಮಕ ಗುಣಗಳನ್ನು ಹೆಚ್ಚಿಸಿಕೊಳ್ಳಬಹುದು ಹಾಗಾಗಿ ಮೊಬೈಲ್ಗಳಿಗೆ ಮಾರುಹೋಗದೆ ಪುಸ್ತಕವನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಿ ಎಂದರು. ಹಾಗೆಯೆ ದಸರಾ ರಜೆಯಲ್ಲಿ ಜಿ ಎಮ್ ಶಾಲೆಯಲ್ಲಿ ಹಮ್ಮಿಕೊಂಡ “ಬುಕ್ ರಿವ್ಯೂ” ಬಗ್ಗೆ ಪ್ರಶಂಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಓದುವುದರಲ್ಲಿ ಆಸಕ್ತಿಯನ್ನು ಮೂಡಿಸಲು ಹಾಗೂ ಅವರ ಜ್ಞಾನಾರ್ಜನೆಯನ್ನು ಹೆಚ್ಚಿಸಲು ಜಿ ಎಮ್ ಸಂಸ್ಥೆ ನಿರಂತರವಾಗಿ ಪುಸ್ತಕ ಮೇಳವನ್ನು ಆಯೋಜಿಸಿಕೊಂಡು ಬರುತ್ತಿದೆ ಹಾಗಾಗಿ ಮಕ್ಕಳು ಓದುವ ಹವ್ಯಾಸವನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದರು ಮತ್ತು ದಸರಾ ರಜೆಯಲ್ಲಿ ಆಯೋಜಿಸಿದ್ದ ‘ಬುಕ್ ರಿವ್ಯೂ’ನಲ್ಲಿ ಪಾಲ್ಗೊಂಡು ಬಹುಮಾನ ಗೆದ್ದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಜಿ ಎಮ್ ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ‘ಬುಕ್ ರಿವ್ಯೂ’ ನಲ್ಲಿ ಭಾಗವಹಿಸಿ ಬಹುಮಾನ ಗೆದ್ದ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿ ಹೇಳಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಪುಸ್ತಕದ ಓದು ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿರುವ ಕೀಳರಿಮೆಯನ್ನು ತೊಡೆದುಹಾಕುತ್ತದೆ ಮತ್ತು ಪಠ್ಯಪುಸ್ತಕದ ಜೊತೆಗೆ ನಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸುವ ಪುಸ್ತಕಗಳನ್ನು
ಓದುವ ಹವ್ಯಾಸ ರೂಡಿಸಿಕೊಳ್ಳಿ ಎಂದರು. ಜಿ ಎಮ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ದಸರಾ ರಜೆಯಲ್ಲಿ ಆಯೋಜಿಸಲಾಗಿದ್ದ ಬುಕ್ ರಿವ್ಯೂ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದ ಪ್ರತಿ ತರಗತಿಯ ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಪುಸ್ತಕಗಳು ನೀಡಿದ ಸಿಹಿ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿ ಎಮ್ ಸಂಸ್ಥೆಯ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಜಿ ಎಮ್ ಪುಸ್ತಕ ಮೇಳದಲ್ಲಿ ಎಸ್ ಎಲ್ ವಿ ಬುಕ್ ಹೌಸ್ ಮಂಗಳೂರು ಮತ್ತು ಸ್ಕೂಲ್ ಬುಕ್ ಕಂಪೆನಿ, ಉಡುಪಿ ಇವರ ಮಳಿಗೆಗಳಿದ್ದು ಡಿ.28 ರಿಂದ 30 ರವರೆಗೆ ಪೋಷಕರಿಗೂ ಪುಸ್ತಕವನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.