ಐದನೇ ವರ್ಷದ ಎಂ.ಆರ್.ಜಿ. ಗ್ರೂಪ್ ಆಶಾ ಪ್ರಕಾಶ್ ಶೆಟ್ಟಿ ಸಹಾಯಹಸ್ತ “ನೆರವು” ಕಾರ್ಯಕ್ರಮ ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನ್ನಾಡಿದ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, “ಸಮಾಜದಲ್ಲಿ ನೊಂದವರು, ಬೆಂದವರು, ದೀನರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಕೆ ಪ್ರಕಾಶ್ ಶೆಟ್ಟಿ ಅವರು ಪ್ರಾರಂಭಿಸಿರುವ ನೆರವು ಕಾರ್ಯಕ್ರಮ 5 ವರ್ಷದಿಂದ ನಡೆಯುತ್ತಿದೆ. ನೂರು ಕೈಗಳಿಂದ ದುಡಿದಿದ್ದನ್ನು ಸಾವಿರ ಕೈಗಳಲ್ಲಿ ದಾನ ಮಾಡು, ಅದರ ಫಲ ನಿನಗೆ ಸಾವಿರ ಸಾವಿರ ಕೈಗಳಲ್ಲಿ ಮರಳಿ ಸಿಗುತ್ತದೆ ಎಂಬ ಮಾತಿನಂತೆ ಕೆ ಪ್ರಕಾಶ್ ಶೆಟ್ಟಿ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಕೈಗೊಂಡಿದ್ದಾರೆ. ಬಾಲ್ಯದಲ್ಲಿ ಅವರಿಗೆ ಸಿಕ್ಕ ಸಂಸ್ಕಾರದಿಂದ ಅವರಿಂದು ಸಮಾಜದ ಮನ್ನಣೆಗೆ ಪಾತ್ರರಾಗಿದ್ದಾರೆ. ಬದುಕು ದೇವರು ಕೊಟ್ಟ ವರ. ಬದುಕು ಸುಂದರವಾಗಲು ಗಳಿಸಿದ್ದರಲ್ಲಿ ಅಲ್ಪಭಾಗ ದಾನ ಮಾಡಬೇಕು ಎಂಬ ನುಡಿಯಂತೆ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ” ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದ ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು, “ಪ್ರಕಾಶ ಅಂದರೆ ಬೆಳಕು. ಜನರ ಕಷ್ಟಕ್ಕೆ ನೇರವಾಗಬೇಕು ಎನ್ನುವ ಬೆಳಕು ಹೊರಗಿನಿಂದ ಫೋರ್ಸ್ ಆಗಿ ಬರೋದಲ್ಲ, ಮನಸ್ಸಿನ ಒಳಗಿನಿಂದ ಬರಬೇಕು. ಕೆ ಪ್ರಕಾಶ್ ಶೆಟ್ಟಿ ಅವರು ಜಾತಿ ಧರ್ಮ ನೋಡಿ ಜನರಿಗೆ ಸಹಾಯ ಮಾಡಿಲ್ಲ, ಬದಲಿಗೆ ಜನರ ನೋವನ್ನು ನೋಡಿ ಸಹಾಯಹಸ್ತ ಚಾಚಿದ್ದಾರೆ. ಈ ಮೂಲಕ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ. ಇರೋದೊಂದೇ ಬದುಕು ಅದನ್ನು ದಾನ ಧರ್ಮಗಳ ಮೂಲಕ ಚಂದಗಾಣಿಸಬೇಕು. ದಾನ ಅನ್ನೋದನ್ನು ತಕ್ಷಣ ಮಾಡಬೇಕು, ಯಾರಿಗೆ ಎಷ್ಟು ಬೇಕೋ ಅಷ್ಟನ್ನು ವಿನಯದಿಂದ ಅವಶ್ಯಕತೆ ಇದ್ದಾಗಲೇ ದಾನ ಮಾಡಬೇಕು. ಅದನ್ನೇ ಪ್ರಕಾಶ್ ಶೆಟ್ಟಿ ಅವರು ಮಾಡುತ್ತಾ ಬಂದಿದ್ದಾರೆ. ನಾಳೆಯ ಭರವಸೆಯೇ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಿದೆ. ಮಾಡುವ ಕೆಲಸದಲ್ಲಿ ಬದ್ಧತೆ, ನಂಬಿಕೆ ಮತ್ತು ನನ್ನಂತೆ ಬೇರೆಯವರು ಕೆಲಸ ಮಾಡಲಿಕ್ಕಿಲ್ಲ ಎಂಬ ವಿಶ್ವಾಸ ನಿಮ್ಮಲ್ಲಿದ್ದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. 5ನೇ ವರ್ಷದ ನೆರವು ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯ ಬದುಕಿಗೆ ಬೆಳಕಾಗಲಿ” ಎಂದರು.
ಕೆ.ಪ್ರಕಾಶ್ ಶೆಟ್ಟಿ ಅವರು ಮಾತಾಡುತ್ತಾ, “ತುಳುನಾಡಿನಲ್ಲಿ ಜನಿಸಿರುವುದೇ ನನಗೆ ಹೆಮ್ಮೆ. ಬಾಲ್ಯದಲ್ಲಿ ನನ್ನ ಬಡತನ ಮತ್ತು ಸಂಕಷ್ಟದ ಕಾರಣಕ್ಕೆ ನಾನು ಊರು ಬಿಟ್ಟು ಬೆಂಗಳೂರಿಗೆ ಹೋಗಬೇಕಾಯಿತು. ಅಲ್ಲಿ ನನ್ನ ಕಷ್ಟ ಕಳೆದು ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಹತ್ತಲು ಸಾಧ್ಯವಾಯಿತು. ಶ್ರೀಕೃಷ್ಣ ಪರಮಾತ್ಮನ ನೀನು ಕರ್ಮ ಮಾಡು ಫಲ ನಿರೀಕ್ಷಿಸಬೇಡ ಎಂಬ ಮಾತಿನಂತೆ ನಾನು ಕಷ್ಟದಲ್ಲಿರುವ ಜನರ ಸೇವೆ ಮಾಡುತ್ತಿದ್ದೇನೆ. ಕೋವಿಡ್ ಸಮಯದಲ್ಲಿ ನಾವು ಜನರಿಗೆ ನೆರವು ನೀಡಬೇಕು ಎಂಬ ಉದ್ದೇಶದಿಂದ ಸಾವಿರಾರು ಮಂದಿಗೆ ಆಹಾರ ಕಿಟ್ ಗಳನ್ನು ಹಂಚಿದ್ದೇವೆ. ಐದು ವರ್ಷಗಳ ಹಿಂದೆ ಆರಂಭವಾದ ಸೇವಾ ಯೋಜನೆ ಈ ಬಾರಿ ಸುಮಾರು 5 ಕೋಟಿ ಮೊತ್ತದ ನೆರವನ್ನು ನೀಡುವ ಮೂಲಕ ಯಶಸ್ಸು ಕಂಡಿದೆ. ಗುರು ಹಿರಿಯರು, ದೈವದೇವರು, ಫಲಾನುಭವಿಗಳ ಆಶೀರ್ವಾದ ನನ್ನ ಮೇಲೆ ಹೀಗೆಯೇ ಇರಲಿ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಎಲ್ಲರಿಗೂ ನೆರವು ಕೊಡುವುದು ನನ್ನಿಂದ ಅಸಾಧ್ಯ. ಆದರೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಮಂದಿಗೆ ನೆರವು ನೀಡಲು ಖಂಡಿತ ಸಿದ್ಧನಿದ್ದೇನೆ. ನಾನು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದಿಲ್ಲ. ಸಹಾಯ ಪಡೆದ ಫಲಾನುಭವಿಗಳು ನಿಮ್ಮ ಜೀವನವನ್ನು ಸಂಕಷ್ಟದಿಂದ ಗೆಲುವಿನ ಕಡೆಗೆ ಕೊಂಡೊಯ್ಯಿರಿ. ನಿಮಗೆಲ್ಲ ಶುಭವಾಗಲಿ” ಎಂದರು.
ಬಳಿಕ ಮಾತಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅವರು, “ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಜನರ ಮಧ್ಯೆ ಕಂದಕ ಹಾಗೇ ಇದೆ. ಕೋಟ್ಯಧಿಪತಿಗಳ ಮಧ್ಯೆ ಒಂದು ಹೊತ್ತು ಊಟ, ತಿಂಡಿಗೂ ಪರದಾಡುವ, ಅನಾರೋಗ್ಯ ಕಾಡಿದಾಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಜನರಿದ್ದಾರೆ. ಇವರ ಮಧ್ಯೆ ತಾವು ದುಡಿದ ಹಣದಲ್ಲಿ ಒಂದು ಭಾಗವನ್ನು ಸಮಾಜದ ಜನರ ಕಣ್ಣೀರು ಒರೆಸಲು ಮೀಸಲಿಡುವ ಪ್ರಕಾಶ್ ಶೆಟ್ಟಿ ಅವರಂತಹ ವ್ಯಕ್ತಿಗಳು ಇದ್ದಾರೆ. ಇದು ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ. ಬಹಳಷ್ಟು ಶ್ರೀಮಂತರು ದೇವಸ್ಥಾನಕ್ಕೆ ಹೋಗಿ ಹುಂಡಿಗೆ ದುಡ್ಡು ಹಾಕಿ ಜನ್ಮ ಸಾರ್ಥಕವಾಯಿತು ಎನ್ನುತ್ತಾರೆ. ಆದರೆ ಪ್ರಕಾಶ್ ಶೆಟ್ಟಿ ಅವರು ಜನರ ಸಂಕಷ್ಟವನ್ನು ಕಣ್ಣಾರೆ ಕಂಡು ಅವರ ನೋವಿಗೆ ಸ್ಪಂದಿಸುತ್ತಿದ್ದಾರೆ. ಇದು ನಿಜವಾದ ಭಗವಂತನ ಸೇವೆ” ಎಂದರು.
ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ಸಾಂಕೇತಿಕವಾಗಿ ನೆರವು ಸಹಾಯಹಸ್ತ ಯೋಜನೆಯನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಅನುಷ್ಕಾ ಗೌರವ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ವರದಿ, ಚಿತ್ರ : ಜಗನ್ನಾಥ್ ಶೆಟ್ಟಿ ಬಾಳ