ವಿದ್ಯಾಗಿರಿ: ಬ್ರೌನಿ ಕೇಕ್, ಆಮ್ಲಾ ಶಾಟ್ಸ್, ಜಿಂಜರ್ ಜ್ಯೂಸ್, ಸೌತೆಕಾಯಿ ಕೂಲರ್, ಗ್ರೇಪ್ ಮೋಗುಮೊಗು, ಸೌತೆಕಾಯಿ ಸುಶಿ, ಪ್ಯಾನ್ ಕೇಕ್ ಬಾಂಬ್… ಹೀಗೆ ವೈವಿಧ್ಯಮಯ ದೇಸಿ ಹಾಗೂ ಪಾಶ್ಚ್ಯಾತ್ಯ ತಿನಿಸುಗಳ ಘಮಲು ಹಾಗೂ ರುಚಿಯ ಸವಿಯು ಆಹಾರ ಪ್ರಿಯರನ್ನು ಕೈ ಸೆಳೆದು ಕರೆಯುತ್ತಿತ್ತು. ಅದು ಯಾವುದೇ ತಾರಾ ಹೋಟೆಲ್, ಖ್ಯಾತ ಕೇಕ್ ಮಳಿಗೆ ಅಥವಾ ಫುಡ್ ಜಂಕ್ಷನ್ಗಳಲ್ಲ.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೋಷಕಾಂಶ ಆಧ್ಯಯನ ವಿಭಾಗದ ವತಿಯಿಂದ ಕಾಲೇಜಿನ ಅಬ್ದುಲ್ ಕಲಾಂ ಸ್ನಾತಕೋತ್ತರ ಕಟ್ಟಡದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶನಿವಾರ ಹಮ್ಮಿಕೊಂಡ ‘ಫ್ಯೂಜೊ – ಆಹಾರ ಮೇಳ’ದ ಘಮಲು. ಇನ್ಸ್ಟಾಗ್ರಾಂನಲ್ಲಿ ‘ಪುಳಿಮುಂಚಿ ವೈನ್ಸ್’ ಖ್ಯಾತಿ ಪಡೆದ ಹಾಗೂ ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೇಸನ್ ಪಿರೇರಾ ಆಹಾರ ಮೇಳವನ್ನು ಉದ್ಘಾಟಿಸಿ ಹಾರೈಸಿದರು. ಬಳಿಕ ವಿವಿಧ ಮಳಿಗೆಗಳ ತಿನಿಸುಗಳನ್ನು ವೀಕ್ಷಿಸಿ, ಸವಿದು ಸಂತಸ ವ್ಯಕ್ತಪಡಿಸಿದರು.
ಸೃಜನಾತ್ಮಕವಾಗಿ ಕಾಗದದಿಂದ ತಯಾರಿಸಿದ ‘ಹಿಮ ಪುರುಷ’ (ಸ್ನೋ ಮ್ಯಾನ್) ಆಕರ್ಷಿಸಿತು. ‘ಒಂದು ತಿಂಗಳಿನಿಂದ ಪೂರ್ವ ತಯಾರಿ ಮಾಡಿಕೊಂಡು, ಕಳೆದ ಮೂರು ದಿನಗಳಲ್ಲಿ ಅಂತಿಮ ಸಿದ್ಧತೆಯನ್ನು ಮಾಡಿ, ಆಹಾರ ಮೇಳವನ್ನು ರೂಪಿಸಲಾಗಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು. ಕ್ರಿಸ್ಮಸ್ ವಿಶೇಷವಾಗಿ ಕೇಕ್ ತಯಾರಿಸಿದ್ದು, ಬಾಯಲ್ಲಿ ನೀರೂರಿಸುವಂತಿತ್ತು.
ಮೇಳದಲ್ಲಿನ ಹೆಚ್ಚಿನ ಆಹಾರ ಪದಾರ್ಥಗಳು ಪ್ರೋಜನ್ (ತಣ್ಣನೆಯ) ಆಹಾರ ಮತ್ತು ಆರೋಗ್ಯಕರವಾದ ಕಾರಣ ‘ಫ್ಯೂಜೊ’ ಎಂಬ ಹೆಸರಿಸಲಾಗಿದೆ ಎಂದು ಆಯೋಜಕ ವಿದ್ಯಾರ್ಥಿಗಳು ತಿಳಿಸಿದರು. ಆಹಾರ ವಿಜ್ಞಾನ ಮತ್ತು ಪೋಷಕಾಂಶ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಅಶ್ವಿನಿ, ಅಲ್ಕಾ, ಕಾರ್ತಿಕಾದೇವಿ ಹಾಗೂ ಯಶಸ್ವಿ ಶೆಟ್ಟಿ ಇದ್ದರು. ವಿದ್ಯಾರ್ಥಿನಿ ಜಿ. ಆರ್.ವಿಭಾಶ್ರೀ ಕಾರ್ಯಕ್ರಮ ನಿರೂಪಿಸಿದರು.