ಶ್ರೀಮಂತರೆಲ್ಲ ದಾನಿಗಳಾಗಿರುವುದಿಲ್ಲ. ಹಾಗಾಗಿರುತ್ತಿದ್ದರೆ ಬಂಗಾರದ ಹೂವಿಗೆ ಪರಿಮಳ ಸೇರಿದಂತಾಗುತ್ತಿತ್ತು. ಇದಕ್ಕೆ ಹೃದಯ ಶ್ರೀಮಂತಿಕೆ ಬೇಕಾಗುತ್ತದೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಸತ್ಯದ ಅರಿವು ಇದ್ದ ಉದ್ಯಮಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಅವರು ಹೃದಯ ಶ್ರೀಮಂತಿಕೆ ಇರುವಲ್ಲಿ ಉಳಿದ ಸಿರಿವಂತಿಕೆ ತಾನೇ ತಾನಾಗಿ ಬಂದು ಸೇರಿಕೊಳ್ಳುತ್ತದೆ ಎಂಬ ಸಿದ್ಧಾಂತದಲ್ಲಿ ಆಚಲ ನಂಬಿಕೆ ಇಟ್ಟವರು. ಆರ್ಥಿಕ ಶ್ರೀಮಂತರಾದರೂ, ದಾನ ಗುಣವೂ ರಕ್ತದಲ್ಲಿ ಸೇರಿಕೊಂಡಿರುವ ಅಪರೂಪದ ವ್ಯಕ್ತಿತ್ವ ಶೆಟ್ಟರದ್ದು. ದನಿ ಉಡುಗಿ ಹೋದ ಬಡವರ ದನಿಯಾಗಿ, ಧಣಿಯಾಗಿ, ದಾನಿಯಾಗಿ ಬಡವರ ದಮನಿಸದೆ ದನಿ ಅಡಗಿಸದೆ ದಾನದಿತಾರನಾಗಿ ಖ್ಯಾತಿವೆತ್ತ ಮಾನವತಾವಾದಿ ಶ್ರೀ ಕೂಳೂರು ಕನ್ಯಾನ ಸದಾಶಿವ ಶೆಟ್ಟರು.
ಉದಾರ ದಾನಿ ಸದಾಶಿವ ಕೆ ಶೆಟ್ಟರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನವರು. ಫಕೀರ ಶೆಟ್ಟಿ ಲೀಲಾವತಿ ದಂಪತಿಯರಿಗೆ ಸುಪುತ್ರನಾಗಿ ಜನಿಸಿದ ಶೆಟ್ಟರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಪದವಿ ವ್ಯಾಸಂಗವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದರು. ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ತದನಂತರ ಉದ್ಯೋಗ ನಿಮಿತ್ತ ಮುಂಬಯಿ ಸೇರಿದ ಇವರು ನಿರ್ಲೋನ್ ಲಿಮಿಟೆಡ್, ಫಾರ್ಡ್ ಕೆಮಿಕಲ್ಸ್ ಇಂಡಸ್ಟ್ರೀಸ್, ಹೋಟೆಸ್ಟ್ ಫಾರ್ಮಾಸಿಟಿಕಲ್ಸ್ ಲಿಮಿಟೆಡ್ ಕಂ. ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪನಿಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು. ಅವರ ಈ ಸುದೀರ್ಘ ವೃತ್ತಿ ಜೀವನದ ಅತುಲ ಅನುಭವವೇ ಮುಂದೆ ಆಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ಬೇಡಿಕೆಯ ರಾಸಾಯನಿಕ ಗೊಬ್ಬರ ಹಾಗೂ ಔಷಧಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ತನ್ನದೇ ಆದ ಕಂಪನಿಯನ್ನು ಹುಟ್ಟುಹಾಕಿ ಗ್ರಾಹಕರನ್ನು ಪ್ರಾರಂಭದ ಹಂತದಲ್ಲೇ ತೃಪ್ತಿಗೊಳಿಸಿದ ಗುಣಮಟ್ಟದ ಉತ್ಪಾದನೆ ನೀಡುವ ಪೂರೈಸುವ ಕಂಪನಿಯೆಂಬ ಖ್ಯಾತಿ ಪಡೆದು, ಮುಂದೆ ಕೆಲವೇ ವರ್ಷಗಳಲ್ಲಿ ಓರ್ವ ಯಶಸ್ವಿ ಧೀಮಂತ ಕೈಗಾರಿಕೋದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹೇರಂಬ ದೇಶದಾದ್ಯಂತ ತನ್ನ ಉತ್ಪನ್ನಗಳನ್ನು ಸರಬರಾಜು ಮಾಡುವ ಕಂಪನಿಯಾಗಿದ್ದು ಮುಂದೆ ಉತ್ತಮ ಆದಾಯ ತರುವ ಉದ್ಯಮವಾದ ಪರಿಣಾಮ ಶೆಟ್ಟರು ತಾನು ನಡೆದು ಬಂದ ಸಂಘರ್ಷದ ದಾರಿಯನ್ನು ನೆನಪಿಸಿಕೊಳ್ಳುತ್ತಾ, ಬಡವರ ದೀನರ ಜೀವನದ ಯಾತನೆಗಳನ್ನು ನೆನಪಿಸುತ್ತಾ ತಾನು ಬೆಳೆದು ಬಂದ ಊರು, ಪರಿಸರದ ಜನ ಜೀವನ ಯಾಪನೆಗೆ ಪಡುವ ಪರಿಶ್ರಮ ಎಲ್ಲವನ್ನೂ ಮೆಲುಕು ಹಾಕುತ್ತಾ ಓರ್ವ ಕರುಣಾರ್ದ್ರ ಹೃದಯಿ ವ್ಯಕ್ತಿಯಾಗಿ ಪರಿವರ್ತನೆಗೊಂಡರು. ಹಣದ ಮದ ತಲೆಗಡರುವ ಬದಲು ವಿನಮ್ರತೆ, ಪ್ರೇಮ, ಸೌಹಾರ್ದ ಮೊದಲಾದ ದೈವಿ ಗುಣಗಳು ಅವರ ವ್ಯಕ್ತಿತ್ವವನ್ನು ಸೇರಿಕೊಂಡವು. ತಾನು ಇಂದು ಸ್ಥಿತಿವಂತನಾಗಲು ಕಾರಣ ಭಗವಂತನ ಕೃಪೆ ಎಂದು ಬಲವಾಗಿ ನಂಬಿದರು. ತನ್ನ ಆದಾಯದ ಒಂದಂಶವನ್ನು ಅಶಕ್ತರ ಬಡವರ ದೀನದಲಿತರ ಉದ್ಧಾರಕ್ಕಾಗಿ, ದೈವ ದೇವರು, ನಾಗಬನಗಳು, ಆದಿ ಆಲಡೆಗಳ ಜೀರ್ಣೋದ್ಧಾರ ಕಾರ್ಯ, ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹ, ಮಕ್ಕಳ ಶಿಕ್ಷಣ ಹಾಗೂ ಆರ್ಥಿಕವಾಗಿ ಹಿಂದುಳಿದ ಸ್ವಜನ ಬಾಂಧವರು ಹಾಗೂ ಜಾತಿ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟರು.
ಸುಗುಣ ಸಂಪನ್ನೆ ಶ್ರೀಮತಿ ಸುಜಾತ ಸದಾಶಿವ ಶೆಟ್ಟಿ ಅವರೊಂದಿಗಿನ ಮಧುರ ದಾಂಪತ್ಯದಿಂದ ಹುಟ್ಟಿಕೊಂಡ ವಂಶದ ಕುಡಿಗಳು ಶ್ರೀರಾಜ್ ಮತ್ತು ಶ್ರೇಯಾ. ಶ್ರೀರಾಜ್ ಅವರು ತಂದೆಯೊಂದಿಗೆ ಕಂಪನಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಶ್ರೀರಾಜ್ ಪತ್ನಿ ಸದಾಶಿವ ಶೆಟ್ರ ಸೊಸೆ ಡಾ. ಪ್ರಕೃತಿ ಶ್ರೀರಾಜ್ ಶೆಟ್ಟಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಶ್ರೇಯಾ ಅವರನ್ನು ಮೇಘರಾಜ್ ಶೆಟ್ಟಿ ಎಂಬ ಅನುರೂಪ ವರನಿಗೆ ವಿವಾಹ ಮಾಡಿಸಿಕೊಟ್ಟಿದ್ದಾರೆ..
ವಿಶ್ವ ಬಂಟರ ಸಂಘ ಒಕ್ಕೂಟಗಳ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಜನಸೇವೆ ಸಂಘಟನೆ ಗುಣ ವಿಶೇಷಗಳಿಂದ ಮೊದಲೇ ಪ್ರಭಾವಿತರಾಗಿದ್ದ ಶೆಟ್ಟರು ಐಕಳ ಅವರು ಸದಾಶಿವ ಶೆಟ್ಟರನ್ನು ಸಂಪರ್ಕಿಸಿ ಅವರ ಆರ್ಥಿಕ ಸಹಾಯ ಅಪೇಕ್ಷೆ ವ್ಯಕ್ತಪಡಿಸಿದ ಬಳಿಕವಂತೂ ಅತ್ಯಂತ ಸಂತೋಷದಿಂದಲೇ ಬಂಟ ಬಾಂಧವ ಸಂಘಟನೆಗಳ ವಿಶ್ವ ಬಂಟರ ಒಕ್ಕೂಟಗಳ ಅವಿಭಾಜ್ಯ ಅಂಗವೆಂಬಂತೆ ಮಹಾದಾನಿಯಾಗಿ ತನ್ನನ್ನು ಜೋಡಿಸಿಕೊಂಡು ಜಾಗತಿಕ ಬಂಟರ ಸಂಘಗಳ ಒಕ್ಕೂಟಗಳ ಪ್ರತಿಯೊಂದು ಮಹತ್ವದ ಯೋಜನೆಗಳಲ್ಲಿ ತನ್ನ ಅನುದಾನ ದೊಡ್ಡ ಮೊತ್ತದ ದೇಣಿಗೆಯನ್ನು ನೀಡ ತೊಡಗಿದರು.
ಯಕ್ಷಗಾನ ಕಲಾ ಪ್ರೇಮಿಯಾದ ಇವರು ಪಟ್ಲ ಫೌಂಡೇಶನ್ ಇದರ ಗೌರವಾಧ್ಯಕ್ಷರಾಗಿ ಫೌಂಡೇಷನ್ ನ ಆಧಾರ ಸ್ತಂಭವಾಗಿದ್ದಾರೆ. ಮೂಲ್ಕಿಯಲ್ಲಿ ತಲೆ ಎತ್ತಿದ ವಿಶ್ವ ಬಂಟ ಒಕ್ಕೂಟಗಳ ಸ್ವಜಾತಿ ಬಾಂಧವರ ಸಂಪರ್ಕ ಹಾಗೂ ಸಂಸ್ಥೆಯ ಆಡಳಿತ ಕಛೇರಿಯ ಬಹುಭಾಗದ ದೇಣಿಗೆ ಇವರದ್ದಾಗಿದ್ದು ಶ್ರೀಯುತರ ಹೆಸರನ್ನು ಸಂಸ್ಥೆಯ ಕಟ್ಟಡಕ್ಕೆ ಇಡಲಾಗಿದೆ. ಉಡುಪಿ ಅಜ್ಜರಕಾಡಿನಲ್ಲಿ ನಡೆದ ಬಂಟರ ವಿಶ್ವ ಸಮ್ಮೇಳನದ ಯಶಸ್ಸಿನಲ್ಲಿ ಸನ್ಮಾನ್ಯ ಶೆಟ್ಟರಿಗೆ ಸಿಂಹ ಪಾಲು ಇದೆ. ಹುಟ್ಟೂರಿನ ಹಾಗೂ ಆಸುಪಾಸಿನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಶ್ರೀಯುತರ ಸಂಪತ್ತಿನ ಕೆಲವಂಶ ವಿನಿಯೋಗಿಸಲ್ಪಡುತ್ತದೆ. ಇವರಿಂದ ಅನೇಕ ಸಂಘ ಸಂಸ್ಥೆಗಳು ಉಪಕೃತವಾಗಿವೆ.
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾ ಪೋಷಕರೂ ಆಗಿರುವ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಸಂಪತ್ತು ನಿರಂತರ ವೃದ್ಧಿಶೀಲವಿರಲಿ. ಅವರ ಜೀವನ ಸುದೀರ್ಘವಾಗಿರಲಿ. ಜೀವನದಲ್ಲಿ ನೆಮ್ಮದಿ ಆರೋಗ್ಯ ಸ್ಥಿರವಾಗಿರಲಿ ಎಂಬ ಹಾರೈಕೆಗಳು.
ಲೋಕಾ ಸಮಸ್ತ ಸುಖಿನೋ ಭವಂತು.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು