ಬ್ರಹ್ಮಾವರ ಜ. 26: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ 75ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಧ್ವಜಾರೋಹಣವನ್ನು ನೆರವೇರಿಸಿ, ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿ ಮಾತನಾಡಿ ಇಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ದೇಶದ ಸೈನಿಕರನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ನಮ್ಮ ಕರ್ತವ್ಯವನ್ನು ಅರಿತು, ಶಾಂತಿ ಯನ್ನು ಕಾಪಾಡಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕೆಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಭಾರತೀಯ ಸೇನೆಯ ನಿವೃತ್ತ ಸೈನಿಕ ಹವಾಲ್ದಾರ್ ಸುಬ್ರಹ್ಮಣ್ಯ ಉಪಾಧ್ಯ ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡು ಮಾತನಾಡಿ ಸೈನಿಕ ವೃತ್ತಿಯು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಮಾಜದಲ್ಲಿ ಹೇಗೆ ಬದುಕಬೇಕೆನ್ನುವುದನ್ನು ತಿಳಿಸಿಕೊಡುತ್ತದೆ. ಆದರೆ ಕರಾವಳಿಯ ಜನರು ಈ ವ್ರತ್ತಿಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿಲ್ಲ. ಇದಕ್ಕೆ ಸೈನ್ಯ ಸೇರ್ಪಡೆಗೆ ಬೇಕಾದ ಮಾಹಿತಿ ಕೊರತೆ ಎಂದರು.
ಜಿ ಎಮ್ ಗ್ಲೋಬಲ್ ಸ್ಕೂಲ್ ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ಗಣರಾಜ್ಯೋತ್ಸವವು ಕೇವಲ ಸಂಭ್ರಮಕ್ಕೆ ಸೀಮಿತವಾಗಿರದೆ ನಮ್ಮ ಸಾಂಸ್ಕೃತಿಕ ಪರಂಪರೆ, ಶ್ರೀಮಂತ ಇತಿಹಾಸವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಬೇಕೆಂದರು. ಶಾಲಾ ಗುಣ, ಮೇಧಾ, ವಿದ್ಯಾ, ಪ್ರಜ್ಞಾ, ಶ್ರದ್ಧಾ ತಂಡಗಳ, ಸ್ಕೌಟ್ಸ್ ಮತ್ತು ಗೈಡ್
ಪಥಸಂಚನೆ, ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಗಿತ್ತು. ಸ್ಕೌಟ್ಸ್ ಮತ್ತು ಗೈಡ್ನ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ಸಂಸ್ಥೆಯ 14 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯ-ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಬುಕ್ ರಿವೀವ್ ವಿಜೇತರಿಗೆ ಪೋಷಕರ ಜೊತೆಯಲ್ಲಿ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಜಿ ಎಮ್ ಸ್ಪೆಲ್ ಬಿ ವಿಜೇತರಿಗೆ ಅತ್ಯಾಕರ್ಷಕ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳ ನೃತ್ಯ, ಸಮೂಹಗಾಯನ, ಭಾಷಣ ಎಲ್ಲರಲ್ಲಿಯೂ ರಾಷ್ಟ್ರೀಯ ಭಾವೈಕ್ಯತೆ ಭಾವನೆಯನ್ನು ಮೂಡಿಸಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕವೃಂದ, ವಿದ್ಯಾರ್ಥಿವೃಂದ, ಸಹ ಸಿಬ್ಬಂದಿವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.