ಹಣಕಾಸು ಕ್ಷೇತ್ರದಲ್ಲಿ ಇಡೀ ವಿಶ್ವ ಕುತೂಹಲದಿಂದ ಗಮನಿಸುತ್ತಿರುವ ವ್ಯಕ್ತಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್ ಕೆ ಶೆಟ್ಟಿಯವರು ಜೀವವಿಮಾ ಕ್ಷೇತ್ರದ ಸಲಹೆಗಾರರಾಗಿ ಮುಂಬಯಿ ನಗರ ಮಾತ್ರವಲ್ಲದೇ ವಿಶ್ವದ ನಲವತ್ತೆರಡು ರಾಷ್ಟ್ರಗಳಲ್ಲಿ ಪರಿಚಿತರಿರುವ ಪ್ರಪ್ರಥಮ ಭಾರತೀಯ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದ ಬಂಟ ಜನಾಂಗದ ಹೆಮ್ಮೆಯ ಪುತ್ರ.
ಘನ ಮಹಾರಾಷ್ಟ್ರ ಸರಕಾರದ ಮಾನ್ಯ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕಿಶ್ಯಾರಿ ಅವರು ರಾಜಭವನದಲ್ಲಿ ಆರ್ ಕೆ ಶೆಟ್ಟಿಯವರನ್ನು ಗೌರವಿಸಿದ್ದಾರೆ ಎಂದಾದರೆ ಅವರ ಘನತೆ ಪ್ರಸಿದ್ಧಿಗೆ ಬೇರೆ ಸಾಕ್ಷಿ ಬೇಕೆ?!. ಮಾನ್ಯ ಆರ್ ಕೆ ಶೆಟ್ಟರು ವಿಶ್ವ ಮಟ್ಟದ ಪ್ರತಿಷ್ಠಿತ ಎಂ.ಡಿ.ಆರ್.ಟಿ. ಇದರ ಸದಸ್ಯತನ ಪಡೆದುದನ್ನು ಗಮನಿಸಿದರೆ ಜೀವವಿಮಾ ಕ್ಷೇತ್ರದ ಅವರ ಅಪ್ರತಿಮ ಸಾಧನೆ ಕುರಿತು ಯೋಚಿಸಬಹುದು. ವಿಶ್ವ ಪ್ರಸಿದ್ಧ ಎಂ.ಡಿ.ಆರ್.ಟಿ ಸಂಸ್ಥೆಯ ರೀಜನಲ್ ಛೇರ್ಮನ್ ಹುದ್ದೆಗೇರಿರುವ ಪ್ರಥಮ ಭಾರತೀಯ ಹಾಗೂ ಎಂಬತ್ತೆರಡು ವರ್ಷಗಳ ಇತಿಹಾಸದಲ್ಲೇ ಮೊದಲಿಗ. ಈ ಅಧಿಕಾರ ವಿಶ್ವದ ನಲವತ್ತೆರಡು ರಾಷ್ಟ್ರಗಳನ್ನು ಪ್ರತಿನಿಧಿಸುತ್ತವೆ ಎಂದರೆ ಇವರ ಕಾರ್ಯಕ್ಷಮತೆಯನ್ನು ನಾವು ಗ್ರಹಿಸಿಕೊಳ್ಳಬಹುದು.
ಎಂ.ಡಿ.ಆರ್.ಟಿ ಇದರ ಹದಿನೇಳು ಸದಸ್ಯರ ತಂಡದ ಮ್ಯಾನೇಜ್ಮೆಂಟ್ ಕೌನ್ಸಿಲ್ ನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಹೆಗ್ಗಳಿಕೆ ಇವರದ್ದು. ಇವರ ವೈಯಕ್ತಿಕ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಕರ್ನಾಟಕದ ಸುಂದರ ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿ ದಿವಂಗತ ಕೃಷ್ಣ ಕೆ ಶೆಟ್ಟಿ ಮತ್ತು ದಿವಂಗತ ಅಪ್ಪಿ ಕೆ ಶೆಟ್ಟಿ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದ ಆರ್ ಕೆ ಶೆಟ್ಟಿ ಅವರು ಅರ್ಥಶಾಸ್ತ್ರದಲ್ಲಿ ಬಿಕಾಂ ಮತ್ತು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ನಲ್ಲಿ ವಿಶೇಷ ಡಿಪ್ಲೋಮಾ ಪಡೆದಿದ್ದಾರೆ. ಅಮೆರಿಕಾದ ಇನ್ಸೂರೆನ್ಸ್ ಕಾಲೇಜಿನಿಂದ ಎಲ್.ಟಿ.ಯು.ಸಿ ಪದವಿ ಪಡೆದ ಮೇಧಾವಿ. ಶ್ರೀಲಂಕಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಧೀಮಂತ. ಇವರು ಎಂ.ಡಿ.ಆರ್.ಟಿ. ವಾರ್ಷಿಕ ಸಮಾವೇಶದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ತನ್ನ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ.
ಆರ್ ಕೆ ಶೆಟ್ಟಿಯವರು ಇಡೀ ವಿಶ್ವದ ಮೂವತ್ತೆರಡು ಸಾವಿರ ಅತ್ಯುತ್ತಮ ಹಣಕಾಸು ಸಲಹೆಗಾರರಲ್ಲಿ ಒಬ್ಬರೆಂದು ಮಾನ್ಯತೆ ಪಡೆದಿದ್ದಾರೆ. ಗ್ಲೋಬಲ್ ಇಂಡಿಯನ್ ಅಚೀವರ್ ಪ್ರಶಸ್ತಿಗೆ ಭಾಜನರಾದ ಧನ್ಯತೆಯೂ ಇವರಿಗಿದೆ. ಇವರ ಸಾಧನೆಗಳ ಕುರಿತ ಲೇಖನ ಬರೆಯುವುದೆಂದರೆ ಅದೊಂದು ಗ್ರಂಥವಾಗಬಹುದು. ಅವರು ಏರಿದ ಎತ್ತರ, ಪಡೆದ ಅಂತರಾಷ್ಟ್ರೀಯ ಪ್ರಶಸ್ತಿ, ವರ್ತಮಾನದಲ್ಲಿ ಅವರು ಪಡೆದಿರುವ ಸ್ಥಾನಮಾನ, ಅಧಿಕಾರ ಅವರ್ಣನೀಯ.
ಬಂಟರ ಸಂಘ ಮುಂಬಯಿಯ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ಆರ್ ಕೆ ಶೆಟ್ಟಿ ಅವರ ಸಮಾಜ ಸೇವಾ ಚಟುವಟಿಕೆಗಳು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ತನ್ನ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿಯ ಶಾಲಾ ಜೀರ್ಣೋದ್ಧಾರ ಕಾರ್ಯಕ್ಕೆ ಗಣನೀಯ ದೇಣಿಗೆ ನೀಡಿದ್ದಾರೆ. ಮಹಾನಗರಪಾಲಿಕೆ ಆಡಳಿತದಲ್ಲಿರುವ ಶಾಲೆಗೆ ಕನ್ನಡ ಶಿಕ್ಷಕರುಗಳನ್ನು ನೇಮಿಸಿ ತನ್ನ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ತಾನು ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ವೇಳೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಒಟ್ಟು 62 ಮಕ್ಕಳನ್ನು ದತ್ತು ಸ್ವೀಕರಿಸಿ ಅವರ ಶಿಕ್ಷಣದ ವೆಚ್ಚ ಭರಿಸಿದ್ದಾರೆ. ಈಗಲೂ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ನೀಡುತ್ತಾ ಬಡಮಕ್ಕಳ ಬಾಂಧವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ 26 ಬಡ ಕುಟುಂಬಗಳ ದೈನಂದಿನ ಖರ್ಚು ಭರಿಸುವ ಮಾನವೀಯತೆ ಮೆರೆದಿದ್ದಾರೆ. ಬಡ ಕುಟುಂಬದ ಹೆಣ್ಣು ಮಗಳೊಬ್ಬಳ ವಿವಾಹದ ಸಂಪೂರ್ಣ ಜವಾಬ್ದಾರಿ ವಹಿಸಿ ಕುಟುಂಬದ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. 15 ಅತ್ಯಂತ ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರ ವಿತರಿಸಿ ಅವರನ್ನು ಆರ್ಥಿಕ ಸ್ವಾವಲಂಬಿಯರನ್ನಾಗಿಸಿ ಪುಣ್ಯ ಕಟ್ಟಿ ಕೊಂಡಿದ್ದಾರೆ. ದೇಶ ಕೋವಿಡ್ ಭೀತಿಯಲ್ಲಿ ಕಂಗಾಲಾಗಿರುವ ಸಮಯ ಸುಮಾರು ಮೂವತ್ತೇಳು ಸಾವಿರಕ್ಕೂ ಹೆಚ್ಚು ಫುಡ್ ಪ್ಯಾಕೇಜ್ ವಿತರಿಸುವ ಮೂಲಕ ಆಪತ್ಭಾಂದವನೆಂದು ಕರೆಸಿಕೊಂಡಿದ್ದಾರೆ. ಇನ್ನೂ ಇಂಥಹ ಅದೆಷ್ಟೋ ಸಮಾಜ ಪರ ಚಟುವಟಿಕೆಗಳಿಂದ ಗುರುತಿಸಿಕೊಂಡಿರುವ ಶ್ರೀಯುತರ ಜನಪರ ಕಾಳಜಿ ಅನನ್ಯ ಸದೃಶವಾದುದು. ಇಂಥಹ ಬಲು ಅಪರೂಪದ ವ್ಯಕ್ತಿತ್ವ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ಸಮಸ್ತ ಬಂಟ ಜನಾಂಗಕ್ಕೆ ಅಭಿಮಾನದ ವಿಷಯ. ಇವರ ಕಾರ್ಯ ದಕ್ಷತೆಯನ್ನು ಗಮನಿಸಿದ ಬಂಟರ ಸಂಘದ ಉನ್ನತ ಮಟ್ಟದ ಸಮಿತಿ ಎರಡನೇ ಅವಧಿಗೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾರೆಂದರೆ ಅವರ ಯೋಗ್ಯತೆ ಕುರಿತಂತೆ ಹೆಚ್ಚು ಬರೆಯಬೇಕಾಗಿಲ್ಲ.
ಇಂಥಹ ಅಸಾಮಾನ್ಯ ಸಾಧಕನ ಸೇವೆ ಬಂಟರ ಸಂಘಕ್ಕೆ ಲಭ್ಯವಾಗಿರುವುದು ನಿಜವಾಗಿಯೂ ಸಂತಸದ ವಿಷಯ. ಶ್ರೀಯುತರಿಗೆ ಶುಭವಾಗಲಿ. ಭವಿಷ್ಯದಲ್ಲಿ ಇನ್ನಷ್ಟು ಉನ್ನತೋನ್ನತ ಸ್ಥಾನಮಾನ ತಮಗೆ ಲಭಿಸಲಿ ಎಂಬ ಶುಭ ಹಾರೈಕೆಗಳು. ವಿಶ್ವಬಂಟರ ಮಹಾ ಸಮಿತಿಯಲ್ಲೂ ಸೇವೆ ಸಲ್ಲಿಸುವ ಯೋಗ ಭಾಗ್ಯ ಆರ್ ಕೆ ಶೆಟ್ಟರಿಗೆ ದೊರೆಯಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು