ಮೂರ್ನಾಲ್ಕು ದಶಕಗಳ ಹಿಂದೆ “ಗುಜರಿಗೆ ಹಾಕುವುದು’ ಎಂಬ ಪರಿಕಲ್ಪನೆಯೇ ಇರಲಿಲ್ಲ. ದಿನಬಳಕೆಯಲ್ಲಿ ಇದ್ದುದು ಕೆಲವೇ ಕೆಲವು ಪ್ಲಾಸ್ಟಿಕ್ ವಸ್ತುಗಳು. ಯಾವುದನ್ನೇ ಆದರೂ ಅದರ ಪೂರ್ಣ ಬಾಳಿಕೆಯ ವರೆಗೆ ಉಪಯೋಗಿಸುವುದು ಮತ್ತು ಆ ಬಳಿಕ ಅದನ್ನು ಬೇರಾವುದಾದರೂ ರೂಪದಲ್ಲಿ ಮರುಬಳಕೆ ಮಾಡುವುದು. ಒಂದು ಅಂಗಿಯನ್ನು ತೆಗೆದುಕೊಂಡರೆ, ಅದು ಪೇಟೆಗೆ ಧರಿಸುವ ಯೋಗ್ಯತೆಯನ್ನು ಕಳೆದುಕೊಂಡ ಮೇಲೆ ಮನೆಯಲ್ಲಿ ಧರಿಸುವುದು. ಆ ಬಳಕೆಗೂ ಹಳತಾದ ಬಳಿಕ ನೆಲ ಒರೆಸಲು ಅಥವಾ ನಾಯಿಗೆ ಮಲಗುವುದಕ್ಕಾಗಿ ಅಡಿಗೆ ಹಾಸಲು ಉಪಯೋಗ. ಪ್ರತಿಯೊಂದು ವಸ್ತುವೂ ಹೀಗೆಯೇ.


ಈಗಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ದಿನವೊಂದಕ್ಕೆ ಎಷ್ಟು ಪ್ಲಾಸ್ಟಿಕ್ ವಸ್ತುಗಳು ನಮ್ಮ ಮನೆಯೊಳಕ್ಕೆ ಬರುತ್ತವೆ ಎಂಬುದನ್ನು ಒಂದು ಕ್ಷಣ ಕಣ್ಮುಚ್ಚಿ ಧ್ಯಾನಿಸಿ ನೋಡಿ. ಕ್ಯಾರಿ ಬ್ಯಾಗ್, ಹಾಲಿನ ತೊಟ್ಟೆ, ಜ್ಯೂಸ್ ಬಾಟಲಿ, ಸ್ಟ್ರಾ, ವಿವಿಧ ವಸ್ತುಗಳ ಪ್ಯಾಕಿಂಗ್, ತಿಂಡಿ ತಿನಿಸುಗಳ ಪೊಟ್ಟಣಗಳು… ಹೀಗೆ ಒಂದು ದಿನಕ್ಕೆ ಕಿಲೋಗಟ್ಟಲೆ ಪ್ಲಾಸ್ಟಿಕ್ ಮನೆಯೊಳಗೆ ಬಂದು ಬೀಳುತ್ತದೆ. ಹಿಂದೆ ಪೆನ್ನಿನ ರೀಫಿಲ್ ಖಾಲಿಯಾದರೆ ಹೊಸ ರೀಫಿಲ್ ಹಾಕುತ್ತಿದ್ದೆವು. ಈಗ ಅಂತಹ ಪೆನ್ನುಗಳೇ ಇಲ್ಲ. ಬಳಸಿ ಎಸೆಯುವಂತಹ ಪೆನ್ನುಗಳೇ ಎಲ್ಲ. ಕೇವಲ ಪ್ಲಾಸ್ಟಿಕ್ ಮಾತ್ರ ಅಲ್ಲ; ಲೋಹದವು, ಪ್ಲಾಸ್ಟಿಕ್ನ ಇತರ ಸಂಯುಕ್ತಗಳು, ಕಾಗದ, ಬಟ್ಟೆ ಬರೆ ಇತ್ಯಾದಿಯಾಗಿ ರಾಶಿ ರಾಶಿ ವಸ್ತುಗಳನ್ನು ನಾವು ನಮ್ಮದಾಗಿಸಿಕೊಂಡು ಮನೆಗೆ ತರುತ್ತೇವೆ. ಯಾವುದಾದರೂ ಮಾಲ್, ಸೂಪರ್ ಬಜಾರ್ಗೆ ಹೋಗಿ ನೋಡಿ ಅಥವಾ ಪೇಟೆಯಲ್ಲಿ ರಸ್ತೆ ಬದಿ ಹಾಕಿರುವ “ಬಾಂಬೇ ಬಜಾರ್’, “ಕಲ್ಕತ್ತಾ ಬಜಾರ್’ನಂತಹ ಅಂಗಡಿಗಳನ್ನು ಗಮನಿಸಿ. ಅಲ್ಲಿ ಪ್ಲಾಸ್ಟಿಕ್ನಿಂದ ಮಾಡಿರುವ ಎಷ್ಟೆಲ್ಲಾ ಐಟಂಗಳಿರುತ್ತವೆಯಲ್ಲ!

ಹೀಗೆ ಮನೆಗೆ ತಂದ ಅಥವಾ ಬಂದ ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳಲ್ಲಿ ಶೇಕಡಾ ಒಂದರಷ್ಟು ವಸ್ತುಗಳು ಕೂಡ ಮರುಬಳಕೆ ಆಗುವುದಿಲ್ಲ. ಮೂರ್ನಾಲ್ಕು ದಶಕಗಳ ಹಿಂದೆ ಗುಜರಿ ಎಂಬ ಕಲ್ಪನೆಯೇ ಇಲ್ಲದೆ ಇದ್ದರೆ ಇವತ್ತು ಗುಜರಿಯ ಜತೆಗೆ ಪ್ರತೀ ದಿನ ಒಂದಷ್ಟು ಕೆ.ಜಿ. “ಒಣಕಸ’ ನಮ್ಮ ಮನೆಯಲ್ಲಿ ಉತ್ಪಾದನೆ ಆಗುತ್ತದೆ. ಈ ಒಣಕಸ ಎಂದರೆ ಮುಖ್ಯವಾಗಿ ಪ್ಲಾಸ್ಟಿಕ್, ಕಾಗದ ಇತ್ಯಾದಿ. ಇಲ್ಲಿ ಎರಡು ಅಂಶಗಳಿವೆ. ಒಂದನೆಯದು ನಮ್ಮ ಕೊಳ್ಳುಬಾಕತನ, ಇನ್ನೊಂದು ಅತಿಯಾದ ಉತ್ಪಾದಕತೆ. ಹಳೆಯದಾದ ಶರ್ಟ್ ನ್ನೂ ಈಗ ಕಸದ ಬುಟ್ಟಿಗೆ ಹಾಕಿ ಒಣ ಕಸವಾಗಿ ಕೊಟ್ಟು ಬಿಡುತ್ತೇವೆ. ಅದೂ ಬಹಳವೇನೂ ಹಳೆಯದಾಗಿ ತೊಡುವುದಕ್ಕೇ ಅಯೋಗ್ಯವಾಗಿರುವುದಿಲ್ಲ. ಆದರೆ ಮಾಲ್ಗೆ ಹೋಗಿ ಹೊಸ ಶರ್ಟ್ ಖರೀದಿಸಿದ ಬಳಿಕ ಇದು ಹಳೆಯದಾಯಿತು ಎಂಬ ಭಾವನೆ ಮೂಡಿರುತ್ತದೆ. ಅತಿಯಾದ ಉತ್ಪಾದಕತೆಯ ಪರಿಣಾಮವೇ ಮಾಲ್, ಬಜಾರ್ಗಳಲ್ಲಿ ನಮ್ಮೆದುರು ರಾಶಿ ರಾಶಿಯಾಗಿ ಬಿದ್ದಿರುವ ವಸ್ತುಗಳು.
ಇವೆಲ್ಲವುಗಳು ಪರಿಸರದ ಮೇಲೆ ಬೀರುವ ಒಟ್ಟು ಪರಿಣಾಮವೇನು? ಸ್ವಿಟ್ಸರ್ಲ್ಯಾಂಡ್ ಮೂಲದ ಅರ್ಥ್ ಆ್ಯಕ್ಷನ್ (ಇಎ) ಸಂಸ್ಥೆ ಹೇಳುವ ಪ್ರಕಾರ 2023ರ ಅಂತ್ಯಕ್ಕೆ ಭೂಮಿಯ ಮೇಲೆ ನಾವು ಈಗಾಗಲೇ ಚೆಲ್ಲಾಡಿರುವ ಪ್ಲಾಸ್ಟಿಕ್ ತ್ಯಾಜ್ಯದ ಜತೆಗೆ ಇನ್ನೂ 68,642,999 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೇರಿಕೊಳ್ಳುತ್ತದೆಯಂತೆ. ಜಗತ್ತಿನಲ್ಲಿ ನಿರ್ವಹಣೆ ಮಾಡಲಾಗದ ಪ್ಲಾಸ್ಟಿಕ್ ತ್ಯಾಜ್ಯದ ಪೈಕಿ ಶೇ. 52ರಷ್ಟು ತ್ಯಾಜ್ಯ ಕೇವಲ 12 ದೇಶಗಳಿಂದ ಉತ್ಪಾದನೆಯಾಗುತ್ತಿದೆ. ಈ ದೇಶಗಳ ಪೈಕಿ ಭಾರತವೂ ಒಂದು. ಜಾಗತಿಕವಾಗಿ 2023ರಲ್ಲಿ 159 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯದ ಪೈಕಿ ಶೇ. 43ರಷ್ಟು ಅಂದರೆ 68.5 ದಶಲಕ್ಷ ಟನ್ ಪ್ಲಾಸ್ಟಿಕ್ ಮಾಲಿನ್ಯ ಉಂಟು ಮಾಡಲಿದೆ ಎಂದು ಇಎ ವರದಿ ಹೇಳಿದೆ.
ಭಾರತದಲ್ಲಿ ಸದ್ಯ ಒಂದು ವರ್ಷಕ್ಕೆ ವ್ಯಕ್ತಿಯೊಬ್ಬನ ತಲಾವಾರು ಪ್ಲಾಸ್ಟಿಕ್ ಬಳಕೆ 5.3 ಕೆ.ಜಿ. ಇದೆ. ಅದೇ ಐಸ್ಲ್ಯಾಂಡ್ ದೇಶದಲ್ಲಿ ಒಂದು ವರ್ಷಕ್ಕೆ ವ್ಯಕ್ತಿಯೊಬ್ಬ 128.9 ಕೆ.ಜಿ. ಪ್ಲಾಸ್ಟಿಕ್ ಉಪಯೋಗಿಸುತ್ತಾನಂತೆ! ಜಾಗತಿಕವಾಗಿ ವಾರ್ಷಿಕ ಸರಾಸರಿ ತಲಾವಾರು ಪ್ಲಾಸ್ಟಿಕ್ ಬಳಕೆಯ ಪ್ರಮಾಣ 20.9 ಕೆ.ಜಿ.ಗಳು. ಉತ್ಪಾದನೆಯಾಗುವ ಪ್ಲಾಸ್ಟಿಕ್ ಪ್ರಮಾಣ, ಅದರ ಬಳಕೆಯ ಪ್ರಮಾಣ ಮತ್ತು ಅದು ತ್ಯಾಜ್ಯವಾದ ಬಳಿಕ ಅದನ್ನು ನಿರ್ವಹಿಸಲು ಆಗುವ ಸಮಸ್ಯೆಗಳೇ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣ.
ಅಂಗಡಿಯಲ್ಲಿ ಏನೋ ಖರೀದಿಸಿದ ಬಳಿಕ ಅಂಗಡಿಯಾತ ಪ್ಲಾಸ್ಟಿಕ್ ಕೈಚೀಲ ಕೊಡದಿದ್ದರೆ ನಮಗೆ ಅಸಾಧ್ಯ ಸಿಟ್ಟು ಬಂದು ಬಿಡುತ್ತದೆ. ಆದರೆ ಪೇಟೆಗೆ ಹೋಗುವಾಗ ನಮ್ಮದೇ ಕೈಚೀಲ ಒಯ್ಯುವುದು, ವಸ್ತುಗಳನ್ನು ಸಾಧ್ಯವಾದಷ್ಟು ಪುನರ್ ಬಳಕೆ ಮಾಡುವುದು, ಅನಗತ್ಯವಾದುದನ್ನು ಖರೀದಿ ಮಾಡದೆ ಇರುವುದು, ಸರಳ ಜೀವನ – ಇವೆಲ್ಲ ದೌರ್ಬಲ್ಯ, ನಾಚಿಕೆಯ ವಿಷಯಗಳಲ್ಲ. ನಮ್ಮ ಪರಿಸರಕ್ಕೆ ನಾವು ನೀಡಬಹುದಾದ ಅಮೂಲ್ಯ ಕೊಡುಗೆಗಳು. ಈಗ ಅದಕ್ಕೆ ಮನಸ್ಸು ಮಾಡದೆ ಇದ್ದರೆ ಪರಿಸರವೇ ಅದನ್ನು ಒತ್ತಾಯಪೂರ್ವಕವಾಗಿ ನಮ್ಮ ಮೇಲೆ ಹೇರುವ ದಿನಗಳು ದೂರವಿಲ್ಲ.





































































































