ಮೂಡುಬಿದಿರೆ: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಪದವಿ ಪೂರ್ವ ಶಿಕ್ಷಣ-ಮುಕ್ತ ಸಮ್ಮೇಳನ ಸಮಾರೋಪ ಸಮಾರಂಭವು ಆಳ್ವಾಸ್ನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಪ್ಮಾದ ರಾಜ್ಯ ಕಾರ್ಯದರ್ಶಿ ನರೇಂದ್ರ ಎಲ್ ನಾಯಕ್, ಈ
ಸಮ್ಮೇಳನದ ಮೂಲಕ ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಕಾಲೇಜುಗಳ ಜವಾಬ್ದಾರಿ, ಎದುರಿಸುತ್ತಿರುವ ಸವಾಲುಗಳ ಕುರಿತು ವಿಸ್ತ್ರತವಾಗಿ ಚರ್ಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಸರಕಾರದೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳು ಇಡಬೇಕಾದ ಹೆಜ್ಜೆ ಹಾಗೂ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಅವಕಾಶ ಲಭಿಸಿದೆ ಎಂದರು. ಕುಪ್ಮಾ ರಾಜ್ಯ ಸಮಿತಿ ಗುರುತಿಸಲ್ಪಟ್ಟ ಜಿಲ್ಲಾವಾರು ಸಂಯೋಜಕರು ಜಿಲ್ಲಾ ಮಟ್ಟದಲ್ಲಿ ಹತ್ತು
ಸದಸ್ಯರುಗಳನ್ನೊಳಗೊಂಡ ಜಿಲ್ಲಾ ಕಾರ್ಯಕಾರಿಣಿ ಸಮಿತಿಯನ್ನು ಸಂಯೋಜನೆ ಮಾಡಿ 30 ದಿನಗಳೊಳಗೆ ರಚಿಸಿ ವರದಿಯನ್ನು ನೀಡುವುದಾಗಿ ನಿರ್ಧರಿಸಲಾಯಿತು.
ಕುಪ್ಮಾದ ಮೊದಲ ಸಮ್ಮೇಳನ ಯಶಸ್ವಿಯಾಗಿ ನೇರವೇರಲು ಸಂಪೂರ್ಣ ಸಹಕಾರ ನೀಡಿದ ಡಾ ಎಂ ಮೋಹನ್ ಆಳ್ವರ ಕಾರ್ಯವನ್ನು ಶ್ಲಾಘಿಸಲಾಯಿತು. ಈ ಸಂದರ್ಭದಲ್ಲಿ ಬೀದರ್ನ ಗ್ಲೋಬಲ್ ಶಾಹಿನ್ ವಿದ್ಯಾಸಂಸ್ಥೆಯ ಅಂಗಸಂಸ್ಥೆ ತುಮಕೂರು ಶಾಹಿನ್ ಸಂಸ್ಥೆಯಿಂದ ಕುಪ್ಮಾದ ಗೌರವಾಧ್ಯಕ್ಷರುಗಳಾದ ಎಂಬಿ ಪುರಾಣಿಕ್ ಹಾಗೂ ಡಾ. ಕೆ ಸಿ ನಾಯ್ಕ್ರವರನ್ನು ಸನ್ಮಾನಿಲಾಯಿತು. ಬಾಕ್ಸ್ ಐಟಮ್ ಪದವಿ ಪೂರ್ವ ಶಿಕ್ಷಣ ಮುಕ್ತ ಸಮ್ಮೇಳನ-2024ರ ಉದ್ಘಾಟನೆಯನ್ನು ಶುಕ್ರವಾರ ನೇರವೇರಿಸಿದ್ದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಕುಪ್ಮಾ ಮತ್ತು ಸರಕಾರದ ನಡುವೆ 30 ದಿನಗಳೊಳಗೆ ಮಾತುಕತೆ ನಡೆಸಲು ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ ಎಂದು ತಿಳಿಸಿದ್ದರು.
ಇದೀಗ ಕುಪ್ಮಾ ಸಂಸ್ಥೆ ಸರಕಾರದೊಂದಿಗೆ ಮಾತುಕತೆ ನಡೆಸಲು 15 ದಿನಗಳೊಳಗೆ ವ್ಯವಸ್ಥೆ ಮಾಡುತ್ತೇನೆ ಎಂದು ಸಭಾಧ್ಯಕ್ಷರು ತನ್ನ ಸಹಾಯಕನ ಮೂಲಕ ಕುಪ್ಮಾದ ಪದಾಧಿಕಾರಿಗೆ ತಿಳಿಸಿರುವುದು ಆಶಾದಾಯಕ ಬೆಳವಣಿಗೆ- ನರೇಂದ್ರ ಎಲ್ ನಾಯಕ್ . ಎರಡನೇ ದಿನ ಖಾಸಗಿ ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಯ ಸವಾಲುಗಳು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪಾತ್ರದ ಕುರಿತು ಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಡಾ ಎಂ ಮೋಹನ್ ಆಳ್ವ, ಡಾ.ಉಷಾ ಪ್ರಭ ಎನ್ ನಾಯಕ್ ಸುಬ್ರಹ್ಮಣ್ಯ ನಟ್ಟೋಜ ಡಾ.ದೇವರಾಜ್ ಬಿ.ಕೆ ಕೀರ್ತನ್ಕುಮಾರ್, ಡಾ ಜಯರಾಮ್ ಶೆಟ್ಟಿ ಹಾಗೂ ಇನ್ನಿತರರು ಗೋಷ್ಠಿಯನ್ನು ನಡೆಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ, ಕುಪ್ಮಾದ ಗೌರವಾಧ್ಯಕ್ಷರುಗಳಾದ ಡಾ. ಕೆ ಸಿ ನಾಯ್ಕ್, ಎಂಬಿ ಪುರಾಣಿಕ್, ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್ ನಾಯಕ್, ಸಹಕಾರ್ಯದರ್ಶಿ ವಿಶ್ವನಾಥ್, ಕಾರ್ಯಕಾರಿಣಿ ಸದಸ್ಯರುಗಳಾದ ರಾಧಾಕೃಷ್ಣ ಶೆಣೈ, ಮಂಜುನಾಥ್ ರೇವಣ್ಕರ್, ಕುಪ್ಮಾ ರಾಜ್ಯ ಕಾರ್ಯಕಾರಿಣಿ ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಕ್ಸ್ಪರ್ಟ್ ಕಾಲೇಜಿನ ಡಾ ಕರುಣಾಕರ್ ಬಳ್ಕೂರ್ ನಿರೂಪಿಸಿ, ಅಂಕುಷ್ ಎನ್ ನಾಯಕ್ ವಂದಿಸಿದರು.
ಎರಡು ದಿನಗಳಲ್ಲಿ ನಡೆದ ಅಧಿವೇಶನ ದಲ್ಲಿ ಚರ್ಚಿಸಿ ಕೈಗೊಂಡ ಸಭಾ ನಿರ್ಣಯಗಳು ಇಂತಿವೆ:
1) ಸರ್ಕಾರದೊಂದಿಗೆ ಕುಪ್ಮಾವು ಸಂಘರ್ಷದ ಹೊರತಾಗಿ ಸಹಮತ ಹಾಗೂ ಸಮನ್ವಯತೆಯನ್ನು ಸಾಧಿಸುವಲ್ಲಿ ಪ್ರಯತ್ನಿಸುವ ಮೂಲಕ ಕೈ ಜೋಡಿಸುವುದು.
2) ಕುಪ್ಮಾದ ಎಲ್ಲಾ ಮುಂದಿನ ಹೆಜ್ಜೆಗಳನ್ನು, ಕುಪ್ಮಾದ ಸಂಸ್ಥಾಪಕರ ಆಶಯಗಳನ್ನು ಅನುಸರಿಸಿ ಸಮಾಜ, ವಿಧ್ಯಾರ್ಥಿಗಳು ಶಿಕ್ಷಣ ಕ್ಷೇತ್ರ ಹಾಗೂ ದೇಶದ ಬೆಳವಣಿಗೆಗಾಗಿ ರೂಪು ರೇಷೆಗಳನ್ನು ರೂಪಿಸುವುದು.
3) ಕುಪ್ಮಾ ಸಂಘವನ್ನು ರಾಜ್ಯ ಮಟ್ಟದಲ್ಲಿ ಬಲಿಷ್ಠವಾಗಿ ಕಟ್ಟುವುದು ಹಾಗೂ ಕರ್ನಾಟಕದ ಎಲ್ಲಾ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಸದಸ್ಯತ್ವವನ್ನು ಮುಂದಿನ ಮೂರು ತಿಂಗಳೊಳಗಾಗಿ ಮಾಡುವುದು.
4) ಪದವಿ ಪೂರ್ವ ಶಿಕ್ಷಣ ಕ್ಕೇ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮತ್ತು ಅನುದಾನ ರಹಿತ ಕಾಲೇಜುಗಳ ಹಿತ ದೃಷ್ಟಿಯಿಂದ ಸರಕಾರವು ಕೈಗೊಳ್ಳುವ ಯಾವುದೇ ನಿರ್ಣಯಗಳನ್ನು ಸರಕಾರ ಅಂತಿಮ ಮಾಡುವ ಮೊದಲು ರಾಜ್ಯ ಮಟ್ಟದ ಕುಪ್ಮಾ ಸಂಘದ ಅಧ್ಯಕ್ಷರು/ಕಾರ್ಯದರ್ಶಿ ಸೇರಿದಂತೆ ಇತರ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮವನ್ನು ಕೈಗೊಳ್ಳುವುದು.
5) ಸರ್ಕಾರದ ಶೈಕ್ಷಣಿಕ ನೀತಿ ನಿರೂಪಣೆಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾರಿಗೊಳಿಸುವ ಮೊದಲು ಕುಪ್ಮಾದ ಅನುಭವ, ಸಲಹೆಗಳನ್ನು ಪರಿಗಣಿಸಬೇಕು ಎಂದು ಈ ಮೂಲಕ ಒತ್ತಾಯಿಸುವುದು.
6) ಸರಕಾರವು ಅಗತ್ಯ ಹಾಗೂ ಸೂಕ್ತ ನೀಡುವ ಸವಲತ್ತುಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ನೀಡಬೇಕು ಮತ್ತು ಆ ಮೂಲಕ ಗುಣ ಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸರಕಾರ ಪ್ರೋತ್ಸಾಹಿಸಬೇಕು.
7) ಸಹಮತ ಹಾಗೂ ಸಮನ್ವಯತೆಯ ದೃಷ್ಟಿಯಿಂದ ಸರಕಾರ ಆಗಾಗ್ಗೆ ಕುಪ್ಮಾದ ಪದಾಧಿಕಾರಿಗಳನ್ನು ಕರೆಯಿಸಿ ಸಭೆಗಳನ್ನು ನಡೆಸುವುದು ಮತ್ತು ಆ ನಿಟ್ಟಿನಲ್ಲಿ ಪ್ರಥಮ ಸಭೆಯನ್ನು ಆದಷ್ಟು ಬೇಗ ಅಂದರೆ ಈ ವರ್ಷದ ಮೇ ಅಂತ್ಯದೊಳಗೆ ಕರೆದು ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳಬೇಕಾಗಿ ಸರಕಾರದೊಂದಿಗೆ ವಿನಂತಿಸುವುದು.