ದೆಹಲಿ ಕರ್ನಾಟಕ ಸಂಘದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ದೆಹಲಿ ಘಟಕ ಮತ್ತು ಸುಳ್ಯದ ಬೆಳ್ಳಾರೆಯ ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ ‘ಯಕ್ಷಧ್ರುವ ಪಟ್ಲ ಸಂಭ್ರಮ-2023’ನ್ನು ದಿನಾಂಕ 30-09-2023ರಂದು ಹಿರಿಯ ಕಲಾವಿದ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಸಂಪೂರ್ಣ ಕಲೆಗಾರಿಕೆಯನ್ನು ಯಕ್ಷಗಾನದಲ್ಲಿ ಮಾತ್ರ ಕಾಣಲು ಸಾಧ್ಯ. ಅದೊಂದು ಅದ್ಭುತ ಲೋಕ. ಇಂದು ಯಕ್ಷಗಾನ ಕೇವಲ ದೇಶ ಮಾತ್ರವಲ್ಲ, ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ತಾವು ಮಾತ್ರ ಬೆಳೆಯದೆ ತಮ್ಮೊಂದಿಗಿರುವವರನ್ನೂ ಬೆಳೆಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಷನ್ ಮೂಲಕ ಹತ್ತಾರು ಪ್ರತಿಭೆಗಳು ಹೊರಬರುವಂತೆ ಮಾಡಿದ್ದಾರೆ” ಎಂದು ಹೇಳಿದರು.
ವಿಶೇಷ ಅತಿಥಿಯಾಗಿ ಪಾಲ್ಗೊಂಡ ಜಮ್ಮು-ಕಾಶ್ಮೀರ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಹಿರಿಯಡ್ಕ, “ಇಂದಿನ ಮಕ್ಕಳಿಗೆ ನಾವು ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಕಲಿಸಬೇಕು. ಪಟ್ಲ ಸತೀಶ್ ಶೆಟ್ಟಿ ಅವರಿಗೆ ಹಾಡುಗಾರಿಕೆಯ ದೈವಿಕ ಶಕ್ತಿ ಒಲಿದಿದೆ. ಒಂದು ಜನಸಮೂಹವನ್ನೇ ಸೆಳೆಯುವಂತಹ ಅದ್ಭುತ ಸಾಮರ್ಥ್ಯವನ್ನು ಅವರಿಗೆ ದೇವರು ಕಲ್ಪಿಸಿದ್ದಾನೆ. ಯಕ್ಷಗಾನದಂತಹ ಜನಪದ ಕಲೆಯನ್ನು ಉಳಿಸಿ-ಬೆಳೆಸುವ ಅವರ ಕಾರ್ಯ ಅಭೂತಪೂರ್ವವಾದುದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿಂದಿಯ ಸಿಐಡಿ ಧಾರಾವಾಹಿಯಲ್ಲಿ ತನಿಖಾಧಿಕಾರಿಯಾಗಿರುವ ದಯಾ ಖ್ಯಾತಿಯ ದಯಾನಂದ ಶೆಟ್ಟಿ, “ದೆಹಲಿಯಲ್ಲಿ ಇಂಥದ್ದೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದೇ ನನ್ನ ಭಾಗ್ಯ. ಚಿಕ್ಕಂದಿನಲ್ಲಿ ನನ್ನ ತಂದೆ ಜತೆ ಯಕ್ಷಗಾನ ನೋಡಲು ಹೋಗುತ್ತಿದ್ದೆ. ಆದರೆ, ಕುಣಿತ ನೋಡುತ್ತಿದ್ದೆಯೇ ವಿನಃ ಉಳಿದದ್ದೇನೂ ಅರ್ಥವಾಗುತ್ತಿಲ್ಲ. ಆದರೆ, ಊರು ಬಿಟ್ಟು ಮುಂಬೈ ಸೇರಿದ ಮೇಲೆ ಯಕ್ಷಗಾನದ ಮೇಲೆ ವಿಶೇಷ ಆಸಕ್ತಿ ಬಂತು. ಮೇಲಾಗಿ, ಪಟ್ಲ ಸತೀಶ್ ಶೆಟ್ಟಿ ಅವರ ಗಾನ-ವೈಭವಗಳ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇನೆ” ಎಂದು ಹೇಳಿದರು.
ಉದ್ಯಮಿ, ಪಟ್ಲ ಫೌಂಡೇಷನ್ಗೆ ಅಗತ್ಯ ನೆರವುಗಳನ್ನು ನೀಡುತ್ತಾ ಬಂದಿರುವ ಬರೋಡಾ ಶಶಿಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಫೌಂಡೇಷನ್ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗಿದೆ ಮತ್ತು ಅರ್ಹರಿಗೆ ಪೂರಕ ನೆರವುಗಳನ್ನು ಒದಗಿಸಲಾಗಿದೆ. ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಅವರೊಂದು ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಶ್ಲಾಘಿಸಿದರು.
ಬರೋಡಾ ಶಶಿಧರ ಶೆಟ್ಟರು ನಮ್ಮ ಸಂಸ್ಥೆಗೆ ಈವರೆಗೆ ರೂ ಒಂದು ಕೋಟಿಗಿಂತಲೂ ಹೆಚ್ಚು ನೆರವು ನೀಡಿ, ಕೈ ಹಿಡಿದಿದ್ದಾರೆ. ಇಂಥವರ ಹೃದಯ ವೈಶಾಲ್ಯತೆಯಿಂದ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಖ್ಯಸ್ಥ, ಭಾಗವತ ಪಟ್ಲ ಸತೀಶ್ ಶೆಟ್ಟಿ ಕೃತಜ್ಞತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ದೆಹಲಿ ಸರ್ಕಾರದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ದೆಹಲಿ ಕನ್ನಡ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಡೆರೆಲ್ ಜೆಸ್ಸಿಕಾ ಫರ್ನಾಂಡೀಸ್ ಮತ್ತು ಪಟ್ಲ ಸತೀಶ್ ಶೆಟ್ಟಿ ಇವರೆಲ್ಲರನ್ನೂ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಅರುವ ಕೊರಗಪ್ಪ ಶೆಟ್ಟರಿಗೆ ಇದು 1013ನೇ ಸನ್ಮಾನ ಎನ್ನುವುದೊಂದು ವಿಶೇಷ ವಿಚಾರ.
ಪಾವಂಜೆ ಮೇಳದ ಕಲಾವಿದರಿಂದ ‘ಮಾಯಾ ಮೋಹಿನಿ’ ಮತ್ತು ‘ವೀರ ಭಾರ್ಗವ’ ಯಕ್ಷಗಾನ ಪ್ರದರ್ಶನ ನಡೆಯಿತು. ನಿನಾದ ಸಾಂಸ್ಕೃತಿಕ ಕೇಂದ್ರ ಗ್ರಾಮೀಣ ಪ್ರತಿಭೆಗಳು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ, ಪ್ರಧಾನ ಕಾರ್ಯದರ್ಶಿ ಆರ್. ರೇಣುಕುಮಾರ್ ಉಪಸ್ಥಿತರಿದ್ದರು. ಯಕ್ಷಧ್ರುವ ದೆಹಲಿ ಘಟಕದ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ವಂದಿಸಿದರು. ಕಾರ್ಯದರ್ಶಿ ಪೃಥ್ವಿ ಕಾರಿಂಜೆ ಕಾರ್ಯಕ್ರಮ ನಿರೂಪಿಸಿದರು.