ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಮೂಡಿ ಮರೆಯಾಗುವ ಅಣಬೆಯ ವೈವಿಧ್ಯತೆಗೆ ಲೆಕ್ಕವಿಟ್ಟವರಿಲ್ಲ. ಕೆಲವರಿಗೆ ಇದು ಸ್ವಾದಿಷ್ಟ ಖಾದ್ಯ ಮೂಲ. ಇನ್ನು ಕೆಲವರಿಗೆ ಆಹಾರವಾಗಿ ಬಳಕೆಯಲ್ಲಿಲ್ಲ, ಬಹುದೂರ. ನನ್ನ ಅಕ್ಕನ ಮಗ ಹರೀಶ್ ರೈ ಎರಡು ವಿಶಿಷ್ಟ ಅಣಬೆಗಳನ್ನು ಪರಿಚಯಿಸಿದ. ಒಂದು ; ಅಡಿಕೆ ಅಣಬೆ. ಅಡಿಕೆ ಸಿಪ್ಪೆಯನ್ನು ಅಂಗಳದಲ್ಲೂ ತೆಂಗು, ಅಡಿಕೆಯ ಬುಡದಲ್ಲೋ ರಾಶಿ ಹಾಕಿದರೆ ಅದು ಅಲ್ಲೇ ಕುಮೆದು ಸ್ವಲ್ಪ ಕಪ್ಪಾದ ಮೇಲೆ ಮಲ್ಲಿಗೆ ಮೊಗ್ಗಿನಂತಹ ಪುಟ್ಟ ಅಣಬೆ ಬಿಡುತ್ತದೆ . ಸಂಜೆ ಐದರ ಹೊತ್ತಿಗೆ ಇಂಥ ಸಿಪ್ಪೆ ರಾಶಿಯನ್ನು ಸ್ವಲ್ಪ ಬಿಡಿಸಿ ನೋಡಿ .ಆಗ ತಾನೇ ಮೂಡಿದ ಮೊಗ್ಗು ಅಣಬೆ ಯತೇಚ್ಛವಾಗಿ ಸಿಗುತ್ತೆದೆ.
ಇಂಥ ಅಣಬೆಯ ಆಯುಷ್ಯ ಬಹಳ ಕಡಿಮೆ. ಎರಡು ಗಂಟೆಯ ಒಳಗಡೆ ಅದು ವ್ಯಂಜನವಾಗಿ ಮಾರ್ಪಡಬೇಕು. ಸ್ವಾದಿಷ್ಟ ರುಚಿ. ಮತ್ತೆ ಮತ್ತೆ ಬೆಳೆದು ಬಳಸಬಹುದಾದ ಒಂದು ರೀತಿ ಅಣಬೆ ಕೃಷಿ ಎಂದೇ ಪರಿಗಣಿಸಿ ಬಳಸಬಹುದಾದ ಮೂಲವಿದು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಳೆಗಾಲ ಪೂರ್ವದಲ್ಲಿ ಅಡಿಕೆ ಸುಲಿದು ಅಂಗಳಕ್ಕೆ ಹುಲ್ಲು ಬರದ ಹಾಗೆ ಹರಡುವುದಿದೆ. ಅದರಲ್ಲಿ ಯಥೇಚ್ಛವಾಗಿ ಬೆಳೆಯುತ್ತವೆ. ಮೇಲ್ನೋಟಕ್ಕೆ ಸುಲಭ ಗೋಚರವಲ್ಲ. ಸ್ವಲ್ಪ ಕೆದಕಿ ನೋಡಬೇಕು . ನೋಡಿದ್ರೆ ಯಥೇಚ್ಛವಾಗಿ ಇಂಥ ಅಣಬೆಗಳು ಲಭ್ಯವಾಗುತ್ತವೆ.
ಹರೀಶ್ ರೈ ಹೇಳಿದ ಅವನ ಕೃಷಿ ಆವಾರ, ಗುಡ್ಡದಲ್ಲಿ ಲಭ್ಯವಾದ ಇನ್ನೊಂದು ಅಣಬೆ ‘ ಕಲ್ಲು ಅಣಬೆ’ ಇದಕ್ಕೆ ಅಳಂಬೆ ಎಂದು ಕರೆಯುತ್ತಾರೆ! ಸುಳಿದ ಅಡಿಕೆಯ ಗಾತ್ರದಂತಿರುವ ಇದು ಕಲ್ಲು ಭೂಮಿಯ ಆಳದಲ್ಲಿ ಎರಡು ಮೂರು ದಿವಸ ಬಾಳುತ್ತದೆ. ಮೊಟ್ಟೆಯಂತೆ ಇರುವ ಅವುಗಳನ್ನು ಕತ್ತರಿಸಿ ತುಂಡರಿಸಿ ಸಾಂಬಾರು ಮಾಡಬೇಕು. ಹಲಸಿನ ಬೀಜ ಸೇರಿಸಿದರೆ ಮತ್ತಷ್ಟು ಸ್ವಾದಿಷ್ಟ. ಗುಡ್ಡದ ಏರಿಯಲ್ಲಿ ಮರಳು ಮಿಶ್ರಿತ ಮಣ್ಣು ಕಲ್ಲುಗಳ ಸಂಧಿಯಲ್ಲಿ ಅರಳುವ ಇವು ಬಹಳ ಸಮಯ ಬಿಟ್ಟರೆ ಕಪ್ಪಾಗಿ ಹಾಳಾಗಿ ಹೋಗುತ್ತವೆ.
“ಬಾಲ್ಯದಲ್ಲಿ ಇಂಥ ಅಣಬೆಗಳನ್ನು ಹುಡುಕುವುದು, ಉಗುರಲ್ಲೇ ಬಿಡಿಸುವುದು ಬೇಕಾದ ವ್ಯಂಜನ ತಯಾರಿಸುವುದು ನಮಗೆಲ್ಲ ಬಹಳ ಇಷ್ಟದ ಕೆಲಸ” ಎನ್ನುತ್ತಾರೆ ಕಾರ್ಕಳದ ಕ್ರಿಯಾಶೀಲ ಶಿಕ್ಷಕಿ ವಿದ್ಯಾ. ಕಾರ್ಕಳ ಶೃಂಗೇರಿ ಮುಂತಾದ ಕಡೆ ಕೊಂಕಣಿ ಸಮುದಾಯದವರು ಇದನ್ನು ಬಹಳಷ್ಟು ಇಷ್ಟಪಡುತ್ತಾರೆ. ಆ ಕಡೆ ಇದು ತರಕಾರಿ ಅಂಗಡಿಗಳಲ್ಲಿ ಲಭ್ಯ. ಶ್ರೀಮಂತ ಮಾಲ್ ಗಳಲ್ಲಿ ಇದು ಮಾರಾಟ ಗೊಳ್ಳುತ್ತವೆ. ಕೆ.ಜಿಗೆ 800 ರಿಂದ ಸಾವಿರದ ವರೆಗೂ ಬಿಕರಿಯಾಗುತ್ತದೆ. ಹಳ್ಳಿಗರು ಇವುಗಳನ್ನು ಹುಡುಕಿ ತಂದು ಮಾರಾಟ ಮಾಡುವುದೂ ಇದೆ.
ಕರಾವಳಿಯ ಸುಳ್ಯ ಪುತ್ತೂರು ಪ್ರದೇಶದಲ್ಲಿ ಇವು ಬಹಳ ಅಪರೂಪ. ಬಳಕೆಯ ವಿಧಾನವು ಅನೇಕರಿಗೆ ಗೊತ್ತಿಲ್ಲ. ನಿನ್ನೆ ಹರೀಶ್ ರೈ ಈ ಎರಡು ಅಣಬೆಗಳನ್ನು ನನಗೆ ಹೇಳುವವರೆಗೆ ನನಗೂ ಗೊತ್ತಿರಲಿಲ್ಲ.
ನೆಟ್ಟ ಗಿಡಗಳಿಂದ ಹಣ ಮಾತ್ರ ಉದುರುವುದಿಲ್ಲ, ಬುಡ ಬುಡ ಭೂಮಿ ನೋಡಿದರೆ ಅಲ್ಲಿ ಹತ್ತಾರು ಕೌತುಕಗಳು ದಿನ ಕಾಣಿಸುತ್ತವೆ ಎಂಬ ಮನಸ್ಥಿತಿಯ ಕೃಷಿಕ ಹರೀಶ್ ಇದನ್ನೆಲ್ಲ ಗಮನಿಸಿ ಸ್ವಂತಿಕೆಯ ಚಂದದ ಬದುಕು ರೂಪಿಸಿಕೊಂಡಿದ್ದಾನೆ. ಬಿದಿರು ನೆಟ್ಟು ಕಣಿಲೆಯ ಬಹುಖಾಧ್ಯ ಮಾಡುವ, ಕಾಟುಮಾವಿನ ವೈವಿಧ್ಯತೆಯನ್ನು ಇನ್ನು ಉಳಿಸಿಕೊಂಡ ಅಪರೂಪದ ಕೃಷಿಕರಿವರು.
ನರೇಂದ್ರ ರೈ ದೇರ್ಲ