‘ನಂಬಿಕೆ ಇರಲಿ, ಮೌಢ್ಯಕ್ಕೆ ಬಲಿಯಾಗಬೇಡಿ’

ವಿದ್ಯಾಗಿರಿ: ಬದುಕಿನಲ್ಲಿ ನಂಬಿಕೆ ಇರಬೇಕು. ಆದರೆ, ಮೂಢನಂಬಿಕೆಗೆ ಬಲಿಯಾಗದಂತಹ ವೈಜ್ಞಾನಿಕ ಹಾಗೂ ವೈಚಾರಿಕ ಎಚ್ಚರಿಕೆ ಅವಶ್ಯ’ಎಂದು ಆಳ್ವಾಸ್ ಪುನರ್ಜನ್ಮ ಕೇಂದ್ರದ ಆಪ್ತ ಸಮಾಲೋಚಕ ಲೋಹಿತ್ ಬಂಟ್ವಾಳ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ‘ಮಾನಸಿಕ ಆರೋಗ್ಯ’ ಕುರಿತು ಮಾತನಾಡಿದರು.
ಬದುಕಿಗೆ ನಂಬಿಕೆ ಬೇಕಾಗುತ್ತದೆ. ಆದರೆ, ಅದೇ ನಂಬಿಕೆಯನ್ನು ವ್ಯಾವಹಾರಿಕವಾಗಿ ಬಳಸುವ, ದುರುಪಯೋಗ ಪಡಿಸುವ ಮೂಢನಂಬಿಕೆಗಳಿಗೆ ಬಲಿಯಾಗಬೇಡಿ. ಎಲ್ಲವನ್ನೂ ತಾರ್ಕಿಕವಾಗಿ ಯೋಚಿಸಿ ಎಂದರು. ದೇವರು ಯಾವತ್ತೂ ಲಂಚ ಕೇಳುವುದಿಲ್ಲ. ಕೆಡುಕನ್ನು ಬೋಧಿಸುವುದಿಲ್ಲ. ವೈಭೋಗ ಬಯಸುವುದಿಲ್ಲ. ದೇವರ ಹೆಸರಲ್ಲಿ ಮೋಸ ಮಾಡುವವರ ಬಗ್ಗೆ ಸದಾ ಎಚ್ಚರಿಕೆ ಇರಲಿ ಎಂದರು. ಬದುಕಿನಲ್ಲಿ ಆತ್ಮವಿಶ್ವಾಸ ಇರಬೇಕು. ಕೀಳರಿಮೆಯನ್ನು ದೂರ ಮಾಡಬೇಕು. ಒತ್ತಡ ಮುಕ್ತ ಬದುಕು ಜೀವಿಸಲು ಉತ್ತಮ ಜೀವನಶೈಲಿ ಹೊಂದಬೇಕು ಎಂದು ಅವರು ಸಲಹೆ ನೀಡಿದರು. ವಾಸ್ತವಿಕವನ್ನು ಒಪ್ಪಿಕೊಳ್ಳಬೇಕು. ಭವಿಷ್ಯದ ಬಗ್ಗೆ ಭರವಸೆ ಬೇಕು. ಯಾರದೇ ಜೊತೆ ಹೋಲಿಕೆಯ ಅಥವಾ ಸ್ಪರ್ಧೆ ನೀಡುವ ದುಸ್ಸಾಹಸ ಬೇಡ. ನೆಮ್ಮದಿಯ ಬದುಕು ಜೀವಿಸಲು ತೃಪ್ತಿಬೇಕುಎಂದರು.

ಯಾರದೋ ಶಾಪ, ಯಾವುದೋ ಜನ್ಮದ ಕರ್ಮದ ಫಲ, ಯಾವುದೋ ಪರಿಹಾರ ಕ್ರಮಗಳ ಮಿಥ್ಯೆಯನ್ನು ಹೇಳುವವರ ಬಗ್ಗೆ
ಎಚ್ಚರ ಇರಲಿ ಎಂದರು. ಮೌಢ್ಯಗಳ ಬಗ್ಗೆ ಪತ್ರಕರ್ತರಿಗೆ ಹೆಚ್ಚಿನ ಅರಿವು ಇರಬೇಕು. ತಪ್ಪು ಮಾಹಿತಿ ರವಾನಿಸಿದಲ್ಲಿ ಆತ್ಮಹತ್ಯೆ, ಶೋಷಣೆ ಮತ್ತಿತರ ಸಾಮಾಜಿಕ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಕಾರ್ಯಕ್ರಮದ ಸಂಯೋಜಕ ಹರ್ಷವರ್ಧನಪಿ.ಆರ್, ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕ ನಿಶಾನ್ ಕೋಟ್ಯಾನ್, ವಿದ್ಯಾರ್ಥಿ ಸಂಯೋಜಕಿ ಅಶ್ವಿನಿ ನಂದಳಿಕೆ ಇದ್ದರು. ವಿದ್ಯಾರ್ಥಿನಿ ಯಶ್ವಿತಾ
ಕಾರ್ಯಕ್ರಮ ನಿರೂಪಿಸಿದರು.
		




































































































