ಮನುಷ್ಯನಾದವನು ತನ್ನ ಭವಿಷ್ಯ, ಜೀವನ ಸುಖ, ಸಂತಸ, ಸಮೃದ್ಧಿಯಿಂದ ತುಂಬಿರಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ಲಭಿಸಬೇಕು. ಸಮಾಜಕ್ಕೆ ತನ್ನಿಂದ ಉಪಕಾರವಾಗಬೇಕು ಎಂಬ ಕನಸು ಕಾಣುವುದು ತಪ್ಪಲ್ಲ. ಆದರೆ ಕನಸ್ಸನ್ನು ನನಸಾಗಿಸುವ ಛಲ, ಪ್ರಾಮಾಣಿಕ ಪ್ರಯತ್ನ, ಅದರ ಬೆನ್ನು ಹಿಡಿದು ತನ್ನದಾಗಿಸುವ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ ಹಾಗೂ ಕ್ರಿಯಾಶಕ್ತಿಗಳು ಇರಬೇಕಾಗುತ್ತದೆ. ಈ ಎಲ್ಲಾ ಗುಣಗಳು ಮೈದಾಳಿ ತನ್ನ ಜೀವನ ಲಕ್ಷ್ಯವನ್ನು ಸಾಧಿಸಿದ ಇಂದು ಓರ್ವ ಪ್ರಖ್ಯಾತ ಕಟ್ಟಡ ನಿರ್ಮಾಣ ಅಭಿವೃದ್ಧಿ ಕ್ಷೇತ್ರದಲ್ಲಿ ಅಪೂರ್ವ ಯಶಸ್ಸು ಗಳಿಸಿದವರು ಬ್ರಹ್ಮಾವರ ಮೂಲದ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ. ಶ್ರೀಯುತರು ಇಂದು ಉಡುಪಿ ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ತನ್ನ ಅತ್ಯುತ್ತಮ ಗುಣಮಟ್ಟದ ನಿರ್ಮಾಣ ಕಾರ್ಯ, ಪಾರದರ್ಶಕತೆ, ಪ್ರಾಮಾಣಿಕತೆಗಳಿಂದ ಪ್ರಸಿದ್ಧರಾಗಿದ್ದಾರೆ.
ಚೇತನ್ ಕುಮಾರ್ ಶೆಟ್ಟಿ ಅವರು ಪ್ರತಿಷ್ಠಿತ ಹಾಗೂ ಸುಶಿಕ್ಷಿತ ಕುಟುಂಬದ ಹಿನ್ನೆಲೆ ಉಳ್ಳವರು. ಎಚ್ ದಯಾನಂದ ಶೆಟ್ಟಿ ಹಾಗೂ ಶ್ರೀಮತಿ ನಾಗರತ್ನ ಶೆಟ್ಟಿ ದಂಪತಿಯರಿಗೆ ಪುತ್ರರಾಗಿ ಜನಿಸಿದ ಚೇತನ್ ಕುಮಾರ್ ಶೆಟ್ಟಿ ಅವರು ತನ್ನ ಶಾಲಾ ಕಾಲೇಜು ದಿನಗಳಿಂದಲೇ ಓರ್ವ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ನಾಯಕತ್ವದ ಗುಣಗಳನ್ನು ಮೈಗೂಡಿಸಿ ಕೊಂಡಿದ್ದರು. ಹೇರೂರಿನಿ ಎಚ್. ಪಿ. ಸ್ಕೂಲಿನಿಂದ ಪ್ರಾಥಮಿಕ ಶಿಕ್ಷಣ ಮುಗಿಸಿ, ಹಂಗಾರಕಟ್ಟೆ ಚೇತನಾ ಹೈಸ್ಕೂಲು ಮೂಲಕ ಶಿಕ್ಷಣ ಮುಂದುವರಿಸಿ ಬಳಿಕ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮೂಲಕ ಪದವಿ ಗಳಿಸಿಕೊಂಡರು. ತನ್ನ ಬಿ.ಎಸ್ಸಿ. ಶಿಕ್ಷಣ ವೇಳೆಗೆ ಶ್ರೀಯುತರು ಮಂಗಳೂರು ವಿಶ್ವವಿದ್ಯಾಲಯ ಸೆನೆಟ್ ಸದಸ್ಯರಾಗಿದ್ದರು. ಅವರ ಓರ್ವ ಸಹೋದರ ಸಿಎ ಜೀವನ್ ಕುಮಾರ್ ಶೆಟ್ಟಿ ಉಡುಪಿಯಲ್ಲಿ ಹೆಸರಾಂತ ಲೆಕ್ಕಪರಿಶೋಧಕ ಹಾಗೂ ತೆರಿಗೆ ಸಲಹೆಗಾರರು.
ತನ್ನ ನ್ಯೂ ಕರ್ನಾಟಕ ಬಿಲ್ಡರ್ಸ್ ಮೂಲಕ ಹಲವಾರು ಮಹತ್ವದ ಪ್ರೊಜೆಕ್ಟ್ ಗಳಿಗೆ ಸಾಕಾರ ನೀಡಿದ ಶ್ರೀಯುತರು ಈ ಕ್ಷೇತ್ರದಲ್ಲಿ ಓರ್ವ ಗಟ್ಟಿ ಕುಳವಾಗಿ ಸ್ಥಾಪಿತಗೊಂಡರು. ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ ಕಟ್ಟಡಗಳನ್ನು ಅತ್ಯಾಧುನಿಕ ಆದರೆ ವಾಸ್ತುಶಾಸ್ತ್ರ ಪ್ರಕಾರ ನಿರ್ಮಿಸಿ ಕೊಡುವಲ್ಲಿ ಶ್ರೀಯುತರಿಗೆ ಪ್ರತ್ಯೇಕ ಸ್ಥಾನ ಲಭಿಸಿದೆ. ಬ್ರಹ್ಮಾವರದ ಸಮೀಪದ 52 ಹೇರೂರು ಎಂಬಲ್ಲಿ ಇವರು ಸೃಜಿಸುವ ಪ್ರಧಾನ್ ಎಂಬ ನಗರ ರಾಜ್ಯ ಮಟ್ಟದಲ್ಲಿ ಮಾದರಿ ಸ್ಥಾನ ಪಡೆದ ಬಳಿಕ ಇವರ ಬೇಡಿಕೆ ದಿನೇ ದಿನೇ ಹೆಚ್ಚಾಗ ತೊಡಗಿತು. ಇವರ ಅತ್ಯಂತ ಸುಸಜ್ಜಿತ ಹಾಗೂ ಕಂಗಳಿಗೆ ಆಕರ್ಷಕವಾಗಿ ಕಾಣುವ ನಿರ್ಮಾಣ ಶೈಲಿಗೆ ಈ ನಗರದಲ್ಲಿ ವಾಸ್ತವ್ಯ ಹೂಡಿದವರು ಮೆಚ್ಚುಗೆ ಸೂಚಿಸುತ್ತಾರೆ. ಇವರ ಕಟ್ಟಡ ನಿರ್ಮಾಣ ಕಾರ್ಯದ ಸಮಯದಲ್ಲೇ ಎಲ್ಲಾ ಜಾಗ ಬುಕ್ ಆಗುತ್ತದೆ ಎಂದರೆ ಇವರ ಜನಪ್ರಿಯತೆ ಹಾಗೂ ಕಾರ್ಯ ಕೌಶಲತೆಗೆ ಬೇರೆ ನಿದರ್ಶನ ಬೇಡ.
ಚೇತನ್ ಶೆಟ್ಟಿ ಅವರು ತನ್ನ ಆರ್ಥಿಕ ಸ್ಥಿತಿ ಭದ್ರವಾಗಿರುವಂತೆಯೇ ತನ್ನನ್ನು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿರುವುದೇ ಇವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ಬರಲು ಕಾರಣವಾಗಿದೆ. ತನ್ನ ಆದಾಯದ ಒಂದಂಶವನ್ನು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಬಡವರ್ಗದ ಜನರ ಮಕ್ಕಳ ಶಿಕ್ಷಣಕ್ಕೆ ಸಹಕರಿಸಿದ್ದಾರೆ. ಇನ್ನೂ ಕೆಲವು ಬಡ ಕುಟುಂಬದ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣ ಅಡೆ ತಡೆಯಿಲ್ಲದೆ ಮುಂದುವರಿಸಲು ವೈಯಕ್ತಿಕ ಆರ್ಥಿಕ ಸಹಾಯ ನೀಡಿದ್ದಾರೆ. ಇವರ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಜೀವನದ ತಿರುವು ಬದಲಾಯಿತೆಂದು ನಂಬುವ ಚೇತನ್ ಕುಮಾರ್ ದಂಪತಿ ಮೊದಲ ಸಂತಾನ ಪ್ರಧಾನ್ ಶೆಟ್ಟಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ದೇವರ ಪಾದ ಸೇರಿದ ಬಳಿಕ ದಂಪತಿ ಪುತ್ರ ಶೋಕದಿಂದ ಕುಸಿದು ಹೋಗಿದ್ದರು. ವಿಶೇಷವೆಂದರೆ ಆ ದಿವಸ ಮಾರಿಗುಡಿಯ ವಾರ್ಷಿಕ ಮಾರಿ ಪೂಜೆ ಇತ್ತು. ದಂಪತಿ ಶೋಕತಪ್ತದಿಂದ ತಾಯೆ ಏಕೆ ಇಷ್ಟೊಂದು ನಿಷ್ಕರುಣಿಯಾದೆಯೆಂದು ಮೊರೆ ಇಟ್ಟಿದ್ದರು. ಕ್ರಮೇಣ ಎಲ್ಲವೂ ದೈವೇಚ್ಛೆ ಎಂದು ಬಗೆದು ಮತ್ತೆ ತನ್ನ ಉದ್ಯಮದಲ್ಲಿ ತೊಡಗಿಸಿಕೊಂಡು ದುಃಖ ಮರೆಯಲು ಪ್ರಯತ್ನಿಸಿದರು. ದೇವಿಯ ಚಮತ್ಕಾರವೆಂಬಂತೆ ಮರು ವರ್ಷದ ಮಾರಿ ಪೂಜೆಯ ದಿನವೇ ಚೇತನ್ ಧರ್ಮಪತ್ನಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆ ದಿವಸದಿಂದ ತಾಯಿ ಮಾರಿಕಾಂಬೆಯ ಉಪಾಸನೆ ದೀಕ್ಷೆ ತೊಟ್ಟು ಪರಮ ವೇದಾಂತಿಯಾಗಿ ದೇವಿಯ ಪರಮ ಭಕ್ತರಾಗಿ ರೂಪುಗೊಂಡರು. ಬಡ ಮಕ್ಕಳ ಕುರಿತ ಕಾಳಜಿ ಇವರ ಜೀವನ ದೀಕ್ಷೆಯಾಗಲು ತನ್ನ ಉದ್ಯಮವೂ ಅಪೂರ್ವ ಯಶಸ್ಸು ಕಂಡಿತು.
ಜೀವನದಲ್ಲಿ ಅನುಭವಿಸಿದ ಪುತ್ರಶೋಕದ ನಿಟ್ಟುಸಿರು ಸಮಾಜ ಸೇವಾದೀಕ್ಷೆಗೆ ನಾಂದಿಯಾಯಿತು. ತನ್ನ ಸ್ವರ್ಗಸ್ಥ ಪುತ್ರನ ನೆನಪಿನಲ್ಲಿ ಅನೇಕ ಸಮಾಜಪರ ಕೆಲಸಗಳಲ್ಲಿ ತೊಡಗಿಸಿಕೊಂಡ ಶೆಟ್ಟಿಯವರು ಪ್ರತಿ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನು ಸಂಚಾರ ವಿಭಾಗದ ಪೊಲೀಸ್ ಇಲಾಖೆಗೆ ಹಸ್ತಾಂತರಿಸುತ್ತಾ ಬಂದಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯ ಬಹುತೇಕ ಪೋಲಿಸ್ ಸ್ಟೇಷನ್ ಪ್ರದೇಶದಲ್ಲಿ ಪುತ್ರ ಪ್ರಧಾನ್ ಹೆಸರಲ್ಲಿ ಕೊಡಮಾಡಿದ ಬ್ಯಾರಿಕೇಡ್ ಗಳಿವೆ. ಆರೋಗ್ಯದಲ್ಲಿದ್ದವರಾರೂ ಅಪಘಾತಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳಬಾರದೆಂದು ಬ್ಯಾರಿಕೇಡ್ ನೀಡುತ್ತಿದ್ದೇನೆ ಎನ್ನುವ ಶೆಟ್ಟರು ಮಾನವ ದೇಹದ ಅಮೂಲ್ಯ ಪ್ರಾಣದ ಮಹತ್ವವೇನು ಎನ್ನುವುದನ್ನು ಬಲುಬೇಗನೆ ಕಲಿತುಕೊಂಡವರು.
ತನ್ನ ಸಾಂಸಾರಿಕ ಜೀವನದಲ್ಲಿ ಚೇತನ್ ಅವರು ಹುಬ್ಬಳ್ಳಿಯ ಹೆಸರಾಂತ ಹೊಟೇಲ್ ಉದ್ಯಮಿ ಪಂಜುರ್ಲಿ ಗ್ರೂಪಿನ ದಿವಂಗತ ವಿಶ್ವನಾಥ್ ಶೆಟ್ಟಿ ಹಾಗೂ ಶ್ರೀಮತಿ ಲೀಲಾವತಿ ಶೆಟ್ಟಿ ದಂಪತಿಯರ ಪುತ್ರಿ ದೀಪಾ. ಸಿ ಶೆಟ್ಟಿ ಅವರನ್ನು ವರಿಸಿ ಅವರು ತನ್ನ ಬಾಳದಾರಿಗೆ ದೀಪವೆಂಬಂತೆ ಪ್ರೀತಿಸುತ್ತಾ ಬಂದಿರುವ ಇವರಿಗೆ ಮೂವರು ಪುತ್ರರು. ವೈಭವ್ ಪ್ರಧಾನ್ ಶೆಟ್ಟಿ, ವೈಷ್ಣವ್ ಪ್ರಧಾನ್ ಶೆಟ್ಟಿ, ವೈನವ್ ಪ್ರಧಾನ್ ಶೆಟ್ಟಿ ನಾಮಧೇಯದ ಮುದ್ದು ಮಕ್ಕಳ ಮುಖದಲ್ಲಿ ಗತಿಸಿದ ಪುತ್ರ ಪ್ರಧಾನ್ ನನ್ನು ಕಾಣುತ್ತಾ ಗೃಹಸ್ಥ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ಹೀಗೆ ದೈವಭಕ್ತಿ, ಉದ್ಯಮಶೀಲತೆ ಹಾಗೂ ಸಾಮಾಜಿಕ ಚಿಂತನೆಗಳು ಮೇಳವಿಸಿ ಮುಪ್ಪುರಿಗೊಂಡ ಈ ಅಪರೂಪದ ವ್ಯಕ್ತಿಗೆ ನಮ್ಮದೂ ಗೌರವ ಪೂರ್ವಕ ವಂದನೆಗಳು. ಭವಿಷ್ಯ ಜೀವನದ ಸನ್ಮಂಗಲಕ್ಕೆ ಶುಭ ಹಾರೈಕೆಗಳು. ಹೊಸ ವರುಷ ಹಳೆ ದುಃಖಗಳ ಮರೆಸಿ ಸಂತಸ ಸಂಭ್ರಮಗಳ ಮೆರೆಸಲೆಂಬ ಶುಭ ಕಾಮನೆಗಳು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ವತಿಯಿಂದ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು