ಆಹಾರ ನಮ್ಮೆಲ್ಲರ ಪ್ರಾಥಮಿಕ ಆವಶ್ಯಕತೆ. ಆದರೆ ಒಪ್ಪೊತ್ತಿನ ಆಹಾರ ಸಿಗದೆ ಹಸಿವಿನಿಂದ ದಿನದೂಡುವವರು ಇನ್ನೂ ವಿಶ್ವದಲ್ಲಿದ್ದಾರೆ ಎಂದರೆ ಮಾನವರ ಅಥವಾ ಮಾನವೀಯತೆಯ ಸೋಲು ಎಂದರೆ ಅದು ಅತಿಶಯೋಕ್ತಿಯಾಗದು. ಇದಕ್ಕೆ ಪ್ರಮುಖ ಕಾರಣ ಬಡತನವಾಗಿದ್ದರೂ, ಪ್ರತೀವರ್ಷ ಸಾವಿರಾರು ಟನ್ ಆಹಾರ ಧಾನ್ಯ, ವಸ್ತುಗಳು ಪೋಲಾಗುತ್ತಿರುವುದನ್ನು ನಿರ್ಲಕ್ಷಿಸಲಾಗದು. ನಾವು ಪ್ರತಿನಿತ್ಯ ವ್ಯರ್ಥ ಮಾಡುವ ಆಹಾರ, ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯ ಹೊಟ್ಟೆ ತುಂಬಿಸಬಹುದು ಎಂಬುದನ್ನು ಎಂದಿಗೂ ಮರೆಯಬಾರದು.
ಹಸಿವಿನಿಂದ ಪ್ರತೀ ವರ್ಷ 50 ಲಕ್ಷ ಮಕ್ಕಳು ಸಾವು!
ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಆಹಾರ ಸೇವಿಸುವ ಹಕ್ಕಿದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತೀ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗು ತ್ತಿದ್ಧಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಏಕೆಂದರೆ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಿದೆ. ಬಡ ರಾಷ್ಟ್ರಗಳಲ್ಲಿ ಶೇ. 50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ಧಾರೆ. ಹೀಗಾಗಿಯೇ ವಿಶ್ವದ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡುವ ಸಂಕಲ್ಪದೊಂದಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ.
ಆಹಾರ ಪೋಲಾಗುವುದನ್ನು ತಡೆಗಟ್ಟುವುದು ಹೇಗೆ?
ಆಹಾರ ಪೋಲಾಗುವುದನ್ನು ಕಡಿಮೆ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಬಹಳ ಮುಖ್ಯ ಎಂಬುದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರತಿಪಾದನೆ. ಪ್ರತಿಯೊಬ್ಬರೂ ಹಿತಮಿತವಾದ ಆಹಾರ ಸೇವಿಸುವ ಮೂಲಕ ಆರೋಗ್ಯಕರ ದೇಹ ಮತ್ತು ಪರಿಸರವನ್ನು ಕಾಪಾಡಿಕೊಳ್ಳಬೇಕು. ಸಮರ್ಪಕ ದಾಸ್ತಾನು ವ್ಯವಸ್ಥೆಯ ಮೂಲಕ ಆಹಾರ ಪದಾರ್ಥಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಉಳಿದ ಅಥವಾ ಹೆಚ್ಚುವರಿ ಆಹಾರ ಪದಾರ್ಥಗಳಿಂದ ಗೊಬ್ಬರ ತಯಾರಿ. ಸ್ಥಳೀಯ ಪರಿಸರ ವ್ಯವಸ್ಥೆಗಳನ್ನು ಪೋಷಿಸಲು ಸಣ್ಣ ರೈತರು ಮತ್ತು ಸ್ಥಳೀಯ ಉತ್ಪಾದಕರನ್ನು ಬೆಂಬಲಿಸುವುದು ಕೂಡ ಈ ನಿಟ್ಟಿನಲ್ಲಿ ಸಹಕಾರಿ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ರೈತರು, ಕಾರ್ಮಿಕರು, ಮಹಿಳೆಯರು, ವಲಸಿಗರು ಮತ್ತು ನಗರಗಳಲ್ಲಿ ದುಡಿಯುವ ಅತ್ಯಂತ ದುರ್ಬಲ ವರ್ಗದ ಜನರಿಗೆ ಅನುಕೂಲವಾಗುವ ಸಾರ್ವಜನಿಕ ನೀತಿಗಳಿಗೆ ಉತ್ತೇಜನ ನೀಡಬೇಕು.
ಪೋಲಾಗುತ್ತಿರುವ ಆಹಾರ ಪ್ರಮಾಣ ಅಗಾಧ
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟದ ಪ್ರಕಾರ
01 ಆಹಾರ ತ್ಯಾಜ್ಯದ ಜಾಗತಿಕ ಪ್ರಮಾಣ ಒಟ್ಟು 1.6 ಬಿಲಿಯನ್ ಟನ್ಗಳಷ್ಟಿದ್ದು, ಅದರಲ್ಲಿ 1.3 ಬಿಲಿಯನ್ ಟನ್ಗಳಷ್ಟು ಖಾದ್ಯ ಆಹಾರ ವ್ಯರ್ಥವಾಗುತ್ತಿದೆ.
02 ಆಹಾರ ತ್ಯಾಜ್ಯವಾಗುವುದರಿಂದ ಪ್ರತೀ ವರ್ಷ ಜಾಗತಿಕವಾಗಿ ಅಂದಾಜು 3.3 ಬಿಲಿಯನ್ ಟನ್ಗಳಷ್ಟು ಕಾರ್ಬನ್ ಡೈ ಆಕ್ಸೆ„ಡ್ ಹೊರಹೊಮ್ಮುತ್ತಿದೆ.
03 ಪ್ರತೀ ವರ್ಷ ವಿಶ್ವದಲ್ಲಿ ವ್ಯರ್ಥವಾಗುತ್ತಿರುವ ಆಹಾರವನ್ನು ಬೆಳೆಯಲು ಬೇಕಾದ ನೀರಿನ ಪ್ರಮಾಣವು ರಷ್ಯಾದಲ್ಲಿ ಹರಿ ಯುವ ವೋಲ್ಗಾ ನದಿಯ ವಾರ್ಷಿಕ ಹರಿವಿಗೆ ಸಮಾನ ವಾಗಿದೆ ಅಥವಾ ಜಿನೇವಾ ಲೇಕ್ನ ಮೂರು ಪಟ್ಟಾಗಿದೆ.
04 ಜಾಗತಿಕವಾಗಿ ಪೋಲಾಗುತ್ತಿರುವ ಆಹಾರದ ಒಟ್ಟು ಬೆಲೆ ಸುಮಾರು 230 ಬಿಲಿಯನ್ ಡಾಲರ್ಗಳಷ್ಟು.
05 ಜಾಗತಿಕವಾಗಿ ವ್ಯರ್ಥವಾಗುತ್ತಿರುವ ಆಹಾರವನ್ನು ಕ್ಯಾಲರಿಗಳಲ್ಲಿ ಹೇಳುವುದಾದರೆ ಒಟ್ಟು ಆಹಾರ ಉತ್ಪಾದನೆಯ ಅಂದಾಜು ಶೇ.24ರಷ್ಟಾಗಿದೆ.
ಭಾರತದ ಪರಿಸ್ಥಿತಿ :
ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್ಇಪಿ)ದ ಪ್ರಕಾರ ಭಾರತದ ಮನೆಗಳಲ್ಲಿ ವಾರ್ಷಿಕವಾಗಿ 68.7 ಮಿಲಿ ಯನ್ ಟನ್ಗಳಷ್ಟು ಆಹಾರ ವ್ಯರ್ಥವಾಗುತ್ತಿದೆ. ಅಂದರೆ ಪ್ರತಿಯೊಬ್ಬನಿಗೆ ತಲಾ 50 ಕೆ.ಜಿ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ )ದ ಪ್ರಕಾರ ದೇಶದಲ್ಲಿ ಉತ್ಪಾದನೆಯಾಗುವ 1/3 ರಷ್ಟು ಆಹಾರವು ಸೇವನೆಗೂ ಸಿಗದೆ ಪೋಲಾಗುತ್ತಿದೆ.
ಜಾಗತಿಕ ಹಸಿವಿನ ಸೂಚ್ಯಂಕ ವರದಿಯಲ್ಲಿ 117 ರಾಷ್ಟ್ರಗಳ ಪೈಕಿ ಭಾರತ 102ನೇ ಸ್ಥಾನಕ್ಕೆ ಕುಸಿದಿದೆ.