ನಾಡ ಹಬ್ಬ ಮೈಸೂರು ದಸರಾ ಅಂದಾಕ್ಷಣ ಗಜಪಡೆಗಳು ನೆನಪಾಗುತ್ತದೆ. ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಶ್ರೀಮಂತ ಸಂಸ್ಕೃತಿಯ ಪರಂಪರೆಯು ದಸರಾದ ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆಯನ್ನು ಸಜ್ಜುಗೊಳಿಸಲು ಅಭ್ಯಾಸ ಮಾಡಿಸುವ ಸಂಪ್ರದಾಯ ಇದೆ. ಇಲ್ಲಿ ಗಜ ಪಡೆಯ ಗಂಭೀರ ನಡಿಗೆಗೆ ತಾಲೀಮು ದಸರಾಗೆ ತಿಂಗಳು ಇರುವಾಗಲೇ ಪ್ರಾರಂಭವಾಗುತ್ತದೆ. ಅದ್ದೂರಿಯಾಗಿ ದಸರಾ ಜಂಬೂ ಸವಾರಿಗಾಗಿ ಕಾಡಿನಿಂದ ನಾಡಿಗೆ ತಂದಿರುವ ಆನೆಗಳಿಗೆ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ನಡೆಯುತ್ತದೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಎಷ್ಟು ಸುಂದರವೋ ಅಷ್ಟೇ ಸುಂದರ ನಾಡಹಬ್ಬಕ್ಕೆ ಮುನ್ನುಡಿಯಂತಿರುವ ಗಜ ಪಯಣ ದಸರಾದಲ್ಲಿ ಆನೆ ಅಂಬಾರಿ ಹೊರುವುದನ್ನು ಜನ ವಿಶೇಷವಾಗಿ ನೋಡಿರಬಹುದು. ಆದರೆ ಅದೇ ಆನೆಗಳು ಕಾಡಿನಿಂದ ನಾಡಿಗೆ ಬರುವ ದಿನ ಅಂದರೆ ದಸರಾಕ್ಕೆ ಒಂದು ತಿಂಗಳು ಮೊದಲು ಗಜ ಪಡೆಗಳನ್ನು ನಾಡಿಗೆ ಸ್ವಾಗತಿಸುವ ರೀತಿ ರಿವಾಜುಗಳು ಒಂದು ತರದ ಹಬ್ಬದ ವಾತಾವರಣವನ್ನು ನಿರ್ಮಾಣಗೊಳಿಸುತ್ತವೆ.
ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ ಹೊಸಹಳ್ಳಿ ವಲಯ ಕೇಂದ್ರದಲ್ಲಿ ಆನೆಗಳ ಪಯಣಕ್ಕೆ ಚಾಲನೆಯ ಮೂರ್ತ ನೀಡಿ, ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜ ಪಯಣ ನಾಗರಹೊಳೆ ಹೆಬ್ಬಾಗಿಲು ವೀರನ ಹೊಸಹಳ್ಳಿಯ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪೂಜೆ ನೇರವೇರಿಸುವ ಮೂಲಕ ದಸರಾ ಮಹೋತ್ಸವದಲ್ಲಿ ನಾಂದಿ ಹಾಡುವ ಪ್ರಮುಖ ಆಕರ್ಷಣೆಯಾದ ಗಜ ಪಡೆಗೆ ಸ್ವಾಗತ ಕೋರಲು ವಿವಿಧ ಕಲಾ ತಂಡಗಳು,ಮಂಗಳ ವಾದ್ಯಗಳೊಂದಿಗೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುವ ಆನೆ ಪಡೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಲಾಗುತ್ತದೆ.
ಗಜಪಡೆ : ಮೈಸೂರು ದಸರಾ ಆರಂಭಕ್ಕೆ ನಾಂದಿ ಹಾಡುವ ಗಜ ಪಯಣಕ್ಕೆ ಮೈಸೂರಿಗೆ ಬಂದ ಆನೆಗಳ ಕ್ಯಾಪ್ಟನ್ ಅಭಿಮನ್ಯು ನೇತ್ರತ್ವದ ತಂಡದಲ್ಲಿನ ಮಹೇಂದ್ರ,ವಿಜಯ,ವರಲಕ್ಷೀ, ಧನಂಜಯ, ಗೋಪಿ, ಭೀಮ ಹಾಗೂ ಹೊಸದಾಗಿ ಸೇರ್ಪಡೆಗೊಂಡ ಕಂಜನ್ ಆನೆಗಳಿಗೆ ಅದ್ದೂರಿಯ ಸ್ವಾಗತ ನೀಡಲಾಗುವುದು.
ಗಜಪೂಜೆ : ದಸರಾ ಉತ್ಸವದ ಆನೆಗಳಿಗೆ ಮೈಸೂರಿನಿಂದ ಆಗಮಿಸಿದ ಅರ್ಚಕರೇ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ. ಆನೆಗಳನ್ನು ಸಾಲಾಗಿ ನಿಲ್ಲಿಸಿ ಆನೆಗಳ ಪಾದ ತೊಳೆದು ಪಾದ ಪೂಜೆ ಮಾಡಿ ಆನೆಗಳ ಹಣೆ, ಸೊಂಡಿಲು, ಪಾದಗಳಿಗೆ ಅರಶಿನ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಅಲಂಕರಿಸಲಾಗುತ್ತದೆ. ತೆಂಗಿನ ಕಾಯಿ ಒಡೆದು ಲಿಂಬೆ ಹಣ್ಣು ಸುತ್ತು ತಿರುಗಿಸಿ ದೃಷ್ಟಿ ದೋಷ ತೆಗೆಯುತ್ತಾರೆ. ನಂತರ ಅರಮನೆ ಮಂಡಳಿ, ಅರಣ್ಯಾಧಿಕಾರಿಗಳು, ಶಾಸಕರು, ಸಚಿವರು, ಜನ ಪ್ರತಿನಿಧಿಗಳು, ಮಾವುತರು ಆನೆಗಳಿಗೆ ಹೂವಿನ ಮಾಲೆ ಹಾಕಿ ಆನೆಗಳಿಗೆ ಪಂಚ ಫಲ ಮತ್ತು ಕಬ್ಬು ತಿನ್ನಿಸಿ ನೈವೇದ್ಯ ನೀಡಿ ಶೋಡಷೋಪಚಾರ ಪೂಜೆ ನೀಡಲಾಗುತ್ತದೆ. ಗಜ ಪಯಣದ ಅಂಗವಾಗಿ ಆನೆಗಳನ್ನು ವಿಶೇಷವಾಗಿ ಶೃಂಗರಿಸಿ ಚಾಮರ ಬೀಸಲಾಗುತ್ತದೆ.
ಅರಮನೆಯ ಅಂಗಳ ಪ್ರವೇಶಿಸುವ ದಸರಾ ಗಜ ಪಡೆಗೆ ಅದ್ದೂರಿಯ ಸ್ವಾಗತ ಕೋರಿದ ನಂತರ ದಸರಾಕ್ಕೆ ಸಜ್ಜುಗೊಳಿಸಲು ಗಜಪಡೆಯನ್ನು ನಿತ್ಯ ಅರಮನೆಯಿಂದ ಬನ್ನಿ ಮಂಟಪದವರೆಗೆ ಭಾರ ಹೊರಿಸುವ ತಾಲೀಮು ಮಾಡಿಸಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಆನೆಗಳು ರಾಜ ಮಾರ್ಗದಲ್ಲಿ ಹೆಜ್ಜೆ ಹಾಕುತ್ತವೆ. ಕೆಲ ದಿನಗಳ ನಂತರ ಮರಳಿನ ಮೂಟೆ ಹೊರಿಸಿ ಅಭ್ಯಾಸ ಮಾಡಿಸಲಾಗುತ್ತದೆ. ಹಂತ ಹಂತವಾಗಿ ಆನೆಗಳಿಗೆ ಮೂಟೆಯ ತೂಕವನ್ನು ನಿಧಾನವಾಗಿ ಹೆಚ್ಚಿಸಲಾಗುತ್ತದೆ. ನಂತರ ಅಂಬಾರಿ ಹೊರಿಸಲಾಗುತ್ತದೆ. ವಿಜಯ ದಶಮಿಯ ಮುನ್ನ ಅರಮನೆ ಅಂಗಳದಲ್ಲಿ ಜಂಬೂ ಸವಾರಿ ಮೆರವಣಿಗೆಯ ಅಂತಿಮ ಅಭ್ಯಾಸ ಜರಗಬೇಕಾಗುತ್ತದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ನಮ್ದಾ, ಹಾಸಿಗೆ ಸೇರಿ ಒಟ್ಟು ಒಂದು ಸಾವಿರ ಕಿಲೋ ಭಾರದ ಅಂಬಾರಿ ಹೊತ್ತು ಆನೆ ಸಾಗಬೇಕಾಗುತ್ತದೆ. ಆನೆಗಳ ತೂಕ ಮತ್ತು ಆರೋಗ್ಯವನ್ನು ಗಮನಿಸಿಕೊಳ್ಳಲು ಪಶು ವೈದ್ಯಕೀಯ ತಂಡ ಆನೆಗಳ ಜೊತೆಗಿರುತ್ತದೆ. ಆನೆಗಳಿಗೆ ಬಾರಿ ಸಿಡಿ ಮದ್ದಿನ ಅಭ್ಯಾಸವನ್ನು ನೀಡಲಾಗುತ್ತದೆ.
ಕಾಡಿನಿಂದ ನಾಡಿಗೆ ಪಯಣ ಬೆಳೆಸಿದ ಗಜ ಪಡೆಯ ದಸರಾ ಮಹೋತ್ಸವದಲ್ಲಿ ಪಾಲ್ಗೋಳ್ಳಲು ತಯಾರಿ ನಡೆಸುವ ಗಜ ಪಡೆಯ ಎಲ್ಲಾ ಆನೆಗಳನ್ನು ಮನೆ ಮಕ್ಕಳ ರೀತಿ ಉಪಚರಿಸಲಾಗುತ್ತದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮತ್ತು ಉತ್ತಮ ಆಹಾರ ನೀಡಿ ಪೋಷಿಸಲಾಗುತ್ತದೆ. ಆನೆಗಳಿಗೆ ವಿವಿಧ ಬಗೆಯ ಹುಲ್ಲು, ಎಲೆ, ಕಾಂಡ, ಬಿದಿರಿನ ಚಿಗುರೆಲೆ, ಬಾಳೆಗಿಡ, ಕಬ್ಬು, ಕಪ್ಪು ಬೆಲ್ಲ ಆಹಾರ ರೂಪದಲ್ಲಿ ನೀಡಲಾಗುತ್ತದೆ.
750 ಕಿಲೋ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ದಸರಾ ಗಜಪಡೆಯ ಸಾರಥಿ ಸೇರಿದಂತೆ ಇನ್ನುಳಿದ ಆನೆಗಳು ಜಂಬೂ ಸವಾರಿಯಲ್ಲಿ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸುತ್ತವೆ. ಆಗೆಲ್ಲಾ ಮಾವುತರು ಆನೆಗಳೊಂದಿಗೆ ಕಣ್ಣ್ಗಾವಲಾಗಿ ಇರುತ್ತಾರೆ. ಅದಕ್ಕೆ ನಡೆವ ದೊಡ್ಡ ಮಟ್ಟದ ತಯಾರಿಯೇ ಗಜ ಪಯಣ.
ಚಿನ್ನದ ಅಂಬಾರಿಯ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಸಾಂಪ್ರದಾಯಿಕ ದಸರಾ ಮೆರವಣಿಗೆಯ ಜಂಬೂ ಸವಾರಿಯಲ್ಲಿ ಆನೆ ಹೊತ್ತು ಸಾಗುವುದನ್ನು ನೋಡುವುದೇ ಒಂದು ಸೊಗಸು. ಆ ಸೊಗಸಿನ ಹಿಂದೆ ದಿನ ರಾತ್ರಿಯ ಶ್ರಮವಿದೆ.
ಈ ವರ್ಷದ ಗಜ ಪಯಣದ ವಿಶೇಷತೆ ಅಂದರೆ ಹೆಣ್ಣಾನೆಗಳಿಗೆ ಅವಕಾಶವಿದೆ. ಆರು ಆನೆಗಳ ರಕ್ತ ಮತ್ತು ಮೂತ್ರದ ಮಾದರಿಯನ್ನು ದೆಹಲಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆಯ್ಕೆಯಾದ ಆರು ಆನೆಗಳಲ್ಲಿ ಎರಡು ಅಥವಾ ನಾಲ್ಕು ಆನೆಗಳು ಈ ವರ್ಷದ ಗಜ ಪಯಣದಲ್ಲಿ ಭಾಗವಹಿಸಲಿದೆ. ಭೂಚರ ಪ್ರಾಣಿಗಳಲ್ಲಿ ಅತೀ ದೊಡ್ಡ, ವಿಶಾಲ ಕಾಯದ, ಅಗಲವಾದ ಕಿವಿ, ಕಿರಿದಾದ ಕಣ್ಣು, ಕಂಬದಂತ ಉದ್ದ ಕಾಲುಗಳನ್ನು ಆನೆಗಳು ಹೊಂದಿದ್ದರೂ ಅವುಗಳ ದವಡೆ ಚಿಕ್ಕದಾದರೂ ದವಡೆಯೊಳಗಿನ ಹಲ್ಲುಗಳು ಮಾತ್ರ ದೊಡ್ಡದಾಗಿರುತ್ತದೆ. ಸಾಧಾರಣ ಆನೆ 100 ವರ್ಷ ತನಕ ಜೀವಿಸಬಲ್ಲದು.
ಗಾಂಭೀರ್ಯ ನಡಿಗೆಯ ಮೈತಳೆದಂಥ ಬಲಿಷ್ಠ ಆನೆಗಳು ರಕ್ಷಿತಾರಣ್ಯ ಪ್ರದೇಶದಲ್ಲಿ ಸ್ವತಂತ್ರವಾಗಿ ಕಾಲ ಕಳೆಯುತ್ತಾ ತಮ್ಮದೇ ಆದ ಸಾಮ್ರಾಜ್ಯದಲ್ಲಿ ವಿಹರಿಸುತ್ತವೆ. ಇತಂಹ ಆನೆಗಳು ರೊಚ್ಚಿಗೆದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಆದರೆ ಆನೆಗಳನ್ನು ಪಳಗಿಸಿ ಗಜ ಪಯಣಕ್ಕೆ ಅಣಿಗೊಳಿಸುವ ಮಾವುತರು ಯಾವುದೇ ಮಹಾ ಗುರುವಿಗೆ ಕಡಿಮೆಯವರಲ್ಲ.
ನಾಡಹಬ್ಬ ದಸರಾ ಅಂದರೆ ಮೈಸೂರು ಭವ್ಯತೆಯ ಸಂಪ್ರದಾಯ ಬದ್ಧವಾದ ಉತ್ಸವ. ದೀರ್ಘ ಕಾಲದಿಂದ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಅದರಲ್ಲೂ ವಿದೇಶಿಯರನ್ನು ವಿಶೇಷವಾಗಿ ಆಕರ್ಷಿಸುತ್ತಾ ಬಂದಿದೆ. ಮೈಸೂರು ದಸರಾ ಉತ್ಸವದ ದಿನಗಳಲ್ಲಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ದಸರಾ ಉತ್ಸವವನ್ನು ದೇಶದಾದ್ಯಂತ ಆಚರಿಸಿದರೂ ಮೈಸೂರಿನ ಅರಸರ ಕಾಲದಿಂದಲೂ ವಿಶ್ವ ಪ್ರಸಿದ್ಧವಾದ ಮೈಸೂರು ಅರಮನೆಯಲ್ಲಿ ಹತ್ತು ದಿನಗಳ ಕಾಲ ವೈಭವೋಪೇತವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ದಸರಾ ಉತ್ಸವ ತನ್ನದೇ ಆದ ವ್ಯೆಶಿಷ್ಟ್ಯವನ್ನು ಹೊಂದಿದೆ. ಅದಕ್ಕೆ ಮುನ್ನುಡಿ ಎಂಬಂತೆ ಗಜಪಯಣ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ