“ಯಾರು ಆಳಿದರೇನು ನಾವು ರಾಗಿ ಬೀಸುವುದು ತಪ್ಪುವುದೇ? ಎಂಬ ಮಾತಿಗೆ ಸರಿಯಾಗಿ “ಯಾರು ಊಳಿದರೇನು ಹಸಿವು ನೀಗುವಷ್ಟು ಸಮೃದ್ಧವಾಗಿದೆಯೇ?” ದೇಶದ ಪರಿಸ್ಥಿತಿ. ಆಗಿಲ್ಲವೆಂದಾದ ಮೇಲೆ ನಮಗೆ ನಾವೇ ಶಿಲ್ಪಿಗಳು ಯಾಕಾಗಬಾರದು? ಹೌದು, ಪ್ರತಿಯೊಬ್ಬ ಮಾನವನ ಉನ್ನತಿ ಮತ್ತು ಅವನತಿ ಅವರವರ ಕೈಯಲ್ಲಿಯೇ ಇರುವುದರಿಂದ ನಮ್ಮ ನಮ್ಮ ಪ್ರಗತಿಗೆ ಅಡಿಗಲ್ಲು ನಾವೇ ಹಾಕಿಕೊಳ್ಳಬೇಕು. ಯಾರಿಂದಲೂ ಯಾವುದೇ ತರದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ.
ಇಂದು ನಮ್ಮ ದೇಶದಲ್ಲಿ ಸರಿಪಡಿಸಲಾರದ ಅನೇಕ ಅನಾಹುತ, ಅನಾಚಾರಗಳಿಗೆ ಕಾರಣರು ಯಾರು? ಅದರಲ್ಲಿ ಮುಖ್ಯವಾಗಿ ನಮ್ಮ ನೆಲದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಉಡುಗೆ, ತೊಡುಗೆ, ಆಹಾರ, ಹಬ್ಬ ಹರಿದಿನಗಳಲ್ಲಿ ತಂದುಕೊಂಡ ಬದಲಾವಣೆಯ ಅಗತ್ಯ ನಮಗಿತ್ತೇ? ಆ ನಿಟ್ಟಿನಲ್ಲಿ ಬುದ್ದಿ ಜೀವಿಗಳಾದವರು ಯೋಚಿಸಬೇಕು.
ಇಂದು ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ನಮಗೆ ನಾವೇ ದೊರೆಗಳು. ಪ್ರಜೆಗಳು ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ದೇಶ ಆಳಲಾಗುತ್ತಿದೆ. ವಿದ್ಯಾವಂತ ಬುದ್ದಿವಂತರ ನಾಡಿನಲ್ಲಿ ಅತ್ಯಾಚಾರಕ್ಕೆ ಕೊನೆಯಿಲ್ಲ ಎಂಬಂತೆ ಕಂಡು ಕೇಳಿ ಬರುತ್ತಿದೆ. ವಿದ್ಯಾವಂತ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಇಂದು ನಾವಿದ್ದೇವೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜನತೆಯ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮ ಭಾರತ ಸ್ವಾತಂತ್ರ್ಯವಾಯಿತು ಬ್ರಿಟಿಷರು ಭಾರತ ಬಿಟ್ಟು ತೊಲಗಿದರು.
ಸ್ವತಂತ್ರ ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಜಾತಂತ್ರ ವ್ಯವಸ್ಥೆಯ ಆಡಳಿತದ ಮಾದರಿಯನ್ನು ಅನುಸರಿಸಿತು. ಆದರೆ ಇಂದು ಪ್ರಜಾತಂತ್ರತೆಯ ಬಹು ಮುಖ್ಯ ಹಕ್ಕು ಆದ ಮತದಾನಕ್ಕೆ ನಾವು ನ್ಯಾಯ ಒದಗಿಸಿಲ್ಲ. ಹೆಂಡ, ಹಣದ ಆಸೆಗೆ ಮತದಾನದ ಹಕ್ಕನ್ನು ಮಾರಿಕೊಂಡು ದುಷ್ಟರ ಕೈಗೆ ಆಡಳಿತ ಕೊಡಲು ಅಂಜದೆ ಇರುವ ಮನಸ್ಥಿತಿಯಲ್ಲಿ ಜನರಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ರಕ್ಷಕನೇ ಭಕ್ಷಕನಾದಾಗ ಸರಿದೂಗಿಸುವುದಾದರೂ ಎಂತು? ಎಲ್ಲಾ ಬಗೆಯ ಪಾಠ ಕಲಿತ ಮೇಲೂ ಬುದ್ದಿ ಕಲಿಯದ ಬುದ್ದಿಜೀವಿ ಮಾನವ.
ಹೌದು, ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶಿ ದಾಳಿಕೋರರು ನಮ್ಮ ಸಾಂಸ್ಕೃತಿಕ, ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿ ಅದನ್ನು ವಿರೂಪಗೊಳಿಸಿದ್ದರು. ಆದರೆ ಇಂದು ನಮ್ಮ ಸಾಂಸ್ಕೃತಿಕ ಧಾರ್ಮಿಕ ಕೇಂದ್ರಗಳನ್ನು ವ್ಯಾಪಾರ ಕೇಂದ್ರವಾಗಿರಿಸಿಕೊಂಡು ಪ್ರವಾಸೋದ್ಯಮದ ಹಣೆ ಪಟ್ಟಿ ಕಟ್ಟಿ ಮೂಲ ರೂಪವನ್ನು ಬದಲಾಯಿಸಿ ಮೂಲ ಸಂಸ್ಕೃತಿಗೆ ಇಂದಿಗೂ ಧಕ್ಕೆ ತರುವಂತಹ ಕೆಲಸವನ್ನು ನಾವೇ ಮಾಡುತ್ತಿದ್ದೇವೆ.
ಭಾಷೆ : ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬಂತೆ ಅಂಗೈ ಅಗಲದ ಹೊಟ್ಟೆ ತುಂಬಿಸಿಕೊಳ್ಳಲು ಹಗಲು ರಾತ್ರಿ ಎನ್ನದ ಹೋರಾಟ. ಅದು ಕೂಡ ನಮ್ಮ ದೇಶದಲ್ಲಿ ದುಡಿದರೆ ಸಾಲದು ಎಂಬ ಬಹುದೊಡ್ಡ ಧೋರಣೆ. ದೇಶ ಬಿಟ್ಟು ವಿದೇಶದೆಡೆಗೆ ನಮ್ಮ ಹಾಗೂ ನಮ್ಮ ಮಕ್ಕಳ ಪಯಣ. ನಮ್ಮ ದೇಶ ಆಳಲು ಬಂದ ಪರಕೀಯರು ಪರಭಾಷೆಯನ್ನು ನಮ್ಮ ಮೇಲೆ ಹೇರಿದ ನಿದರ್ಶನವಿದೆಯಾ? ಇಲ್ಲ. ಆದರೆ ನಾವು ಮಾತ್ರ ಇಂದಿಗೂ ಪರಭಾಷಾ ವ್ಯಾಮೋಹ ಬಿಟ್ಟಿಲ್ಲ ಹಾಗೂ ಬಿಡುವ ಹಾಗೆಯೂ ಕಾಣುತ್ತಿಲ್ಲ. ಇದಕ್ಕೆ ಅತೀ ದೊಡ್ಡ ಉದಾಹರಣೆ ಕೊಡುವುದಾದರೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲು ನೇರ ಕಾರಣ ಯಾರು? ಇತ್ತೀಚೆಗೆ ವಿದ್ಯಾರ್ಥಿಗಳ ಕೊರತೆಯಿಂದ ಕನ್ನಡ ಶಾಲೆಗಳು ಮುಚ್ಚಿಕೊಳ್ಳುತ್ತಿದೆ. ಇದಕ್ಕೆ ಸರಕಾರವೇ ಕಾರಣ ಎಂದು ಬೊಬ್ಬಿಡಲಾಗುತ್ತಿದೆ. ಇದಕ್ಕೆಲ್ಲ ನಮ್ಮವರ ಮನಸ್ಥಿತಿ ಕಾರಣ. ಶಾಲೆಗಳ ವಸ್ತು ಸ್ಥಿತಿ, ಉನ್ನತ ಶಿಕ್ಷಣದಲ್ಲಿ ಕನ್ನಡ ಬೋಧನೆ, ಕನ್ನಡ ಶಾಲೆಗಳ ಉಳುವಿಕೆಗೆ ಬೇಕಾದ ಕ್ರಮ ಕೈಗೊಳ್ಳುವುದಕ್ಕೂ ಮಿಗಿಲಾಗಿ ನಮ್ಮೆಲ್ಲರ ಮನಸ್ಥತಿಯೇ ಕನ್ನಡ ಶಾಲೆಗಳು ಬೆರಳೆಣಿಕೆಯಲ್ಲಿರಲು ಕಾರಣ. ಬೇಕಾಗಿರುವುದನ್ನು ಬಿಟ್ಟು ಬೇಡವಾಗಿರುವುದನ್ನು ಹಂಬಲಿಸಿ ಅರಸುತ್ತಾ ಹೋದ ಹಾಗೆ.
ಪ್ರಾಕೃತಿಕ ಹಾಗೂ ಶಾಂತಿ ಸಾರುವ ಧರ್ಮ ಕ್ಷೀಣಿಸಿದ್ದರೆ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂದಿನ ಜನಾಂಗವಾದ ನಾವೇ ಹೊಣೆ ಎನ್ನುತ್ತೇವೆ. ಭಾಷಾ ತೇರನ್ನು ಎಳೆದು ಸಾಂಸ್ಕೃತಿಕ ಬೀಜ ಬಿತ್ತಿ ದೇಶದಲ್ಲಿ ಶಾಂತಿ, ಸಮೃದ್ಧಿಯನ್ನು ಕಾಪಾಡುವಲ್ಲಿ ಯುವ ಜನತೆ ಮುಂದೆ ಬರ ಬೇಕೆಂಬ ಬಯಕೆಗಳಿರುತ್ತವೆ. ಸ್ವಾಭಿಮಾನದ ಜಾಗೃತಿ ಮೂಡಲು ಎಲ್ಲರೂ ಒಗ್ಗಟ್ಟಿನಿಂದ ಹೊರಾಡ ಬೇಕು. ಮೊದಲು ನಮ್ಮ ಮನೆಯ ತಳಹದಿ ಭದ್ರವಾಗಿಟ್ಟುಕೊಂಡು, ನಂತರ ಊರು ಸಮಾಜ, ದೇಶ ಅಭಿವೃದ್ಧಿಗೆ ಮುಂದಡಿಯಿಡಬೇಕು. ಮನೆಯೊಳಗೆ ಸಂಸ್ಕೃತಿ, ಸಂಸ್ಕಾರ ಸಭ್ಯತೆ ಆಚಾರ ವಿಚಾರಗಳು, ಬಾಂಧವ್ಯದ ಬೆಸುಗೆಯಿಂದ ಕೂಡಿರದಿದ್ದರೆ ಊರ ಉದ್ದಾರಕ್ಕೆ ಹೋಗಿ ಫಲವೇನು? ತಾನು ಬೆಳೆದು ತಮ್ಮವರನ್ನೂ ಬೆಳೆಸುವ ಸುಂದರ ಮನಸ್ಸು ನಮಗಿದ್ದರೆ ಎಲ್ಲಾ ಸಾಧ್ಯ.
ಕೃಷಿ ಪ್ರಧಾನವಾದ ನಾಡಿನ ಹಳ್ಳಿ ಹಳ್ಳಿಗಳಲ್ಲಿ ನಗರೀಕರಣ ಮಾಡುವ ಭರದಲ್ಲಿ ಉತ್ತು ಬಿತ್ತಬೇಕಾದ ಹೊಲಗದ್ದೆಗಳನ್ನು ಬರಡು ಬಿಟ್ಟು ಗಗನ ಚುಂಬಿ ಕಟ್ಟಡದಲ್ಲಿ ಕನಸಿನ ಗೋಪುರ ಕಟ್ಟಿ, ಇನ್ನೂ ಯಾರಿಗೆ ಹೇಳುವುದು? ಆರೋಗ್ಯದಾಯಕ, ಶಕ್ತಿಭರಿತ ನಮ್ಮ ದೇಶದ ಹವಾಮಾನಕ್ಕೆ ಅನುಗುಣವಾಗಿ ನಮ್ಮ ದೇಹ ರಚನೆಗೆ ಸರಿ ಹೊಂದುವ ಆಹಾರ ಪದ್ದತಿಯನ್ನು ತೊರೆದು ವಿದೇಶಿ ಆಹಾರಗಳನ್ನು ಇಷ್ಟಪಟ್ಟು ನಾವು ಸ್ವಿಕರೀಸಲು ಯಾವುದೇ ಪರಿಸ್ಥಿತಿಯು ನಮ್ಮನ್ನು ಇಷ್ಟು ಕೆಳಮಟ್ಟಕ್ಕೆ ತಳ್ಳಿಲ್ಲ ಬದಲಾಗಿ ನಮ್ಮ ಮನಸ್ಥಿತಿಯೇ ಇದಕ್ಕೆಲ್ಲ ಕಾರಣ. ಬೇಕಾಗಿರುವುದನ್ನು ಬಿಟ್ಟು ಬೇಡವಾದುದನ್ನು ಅರಸುತ್ತಾ ಭಾರತೀಯತೆ, ಭಾರತೀಯ ಪರಂಪರೆ, ಸಂಸ್ಕ್ರತಿ ಕಣ್ಮರೆಯಾಗುವುದು ಗೊತ್ತಿದ್ದೂ ಕೂಡಾ ಆಧುನೀಕತೆ ಮತ್ತು ಪಾಶ್ಚಾತ್ಯ ಪ್ರಭಾವದಿಂದಾಗಿ ಆಗಬಹುದಾದ ಅನಾಹುತಗಳ ಬಗ್ಗೆ ಮುಂದಿನ ಪೀಳಿಗೆಗೆ ಎಚ್ಚರಿಕೆ ನೀಡುವ ಅಗತ್ಯವಿದೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಳಗಳಲ್ಲಿ ರೂಢಿಯಿಂದ ಬಂದಿರುವ ದೀವಟಿಗೆ ಸಲಾಂ, ಸಲಾಂ ಆರತಿ,ಸಲಾಂ ಮಂಗಳಾರತಿ ಪೂಜಾ ಕಾರ್ಯಕ್ರಮಗಳ ಹೆಸರನ್ನು ದೀವಟಿಕೆ ನಮಸ್ಕಾರ, ಆರತಿ ಎಂದು ಬದಲಾಯಿಸಲು ಇತ್ತೀಚೆಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದರು. ಹಾಗಾದರೆ ಇಷ್ಟು ವರ್ಷ ಸರಕಾರಿ ಆಡಳಿತ ಮಂಡಳಿ ಯಾಕೆ ಮೌನವಾಗಿತ್ತು.” ಯಾರು ಆಳಿದರೇನು ರಾಗಿ ಬೀಸುವುದು ತಪ್ಪುವುದಿಲ್ಲ” ಎಂಬ ಭಾವನೆ ಹೇಗೂ ಜನರಲ್ಲಿದೆ ಎಂದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ