ಗೋಪಿತಲಾಬ್ ಒಂದು ಪುರಾತನ ಸುಂದರ ಸರೋವರ. ಗುಜರಾತಿನ ಗೋಪಿಪುರ ಪ್ರದೇಶದಲ್ಲಿ ಅಂದರೆ ದ್ವಾರಕಾದಿಂದ 20 ಕಿ.ಮಿ ದೂರದಲ್ಲಿರುವ ಗೋಪಿ ತಲಾಬ್ ಶ್ರೀಕೃಷ್ಣ ಮನಸಾರೆ ಮೆಚ್ಚಿದ ಜನಪ್ರೀಯ ಮನರಂಜನಾ ತಾಣವಾಗಿತ್ತು ಯುವ ಪ್ರೇಮಿಗಳಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಪ್ರೇಮಿಗಳಿಗಿಂತ ಭಕ್ತಾದಿಗಳೇ ಹೆಚ್ಚು ಕಾಣಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಸ್ಥಳಿಯರು. ಈ ತಲಾಬ್ ನಲ್ಲಿ ಗೋಪಿಕೆಯರು ಮತ್ತು ಭಗವಾನ್ ಶ್ರಿ ಕೃಷ್ಣ ಜೊತೆಯಾಗಿ ನೀರಾಟ ಆಡುತ್ತಿದ್ದರಂತೆ. ಶ್ರೀ ಕೃಷ್ಣ ಪ್ರ ತಿವರ್ಷ ಶ್ರಾವಣ ಮಾಸದ ಏಕಾದಶಿಯಂದು ದೇವಾದಿ ದೇವತೆಗಳೊಂದಿಗೆ ಗೋಪಿ ತಲಾಬ್ ನಲ್ಲಿ ಸ್ನಾನ ಮಾಡಲು ಇಲ್ಲಿಗೆ ಬರುತ್ತಾನೆ ಎಂಬ ನಂಬಿಕೆ ಇಂದಿಗೂ ಇಲ್ಲಿನ ಭಕ್ತರು ಭಕ್ತಿಯಿಂದ ನಂಬುತ್ತಾರೆ. ಶ್ರಿ ಕೃಷ್ಣ ಗೋಪಿಕೆಯರಿಗೆ ನಾನು ನಿಮ್ಮನ್ನು ಸೇರಲು ಇಲ್ಲಿಗೆ ಪ್ರತಿವರ್ಷ ಬರುತ್ತೇನೆ. ಯಾರು ಇಲ್ಲಿ ಪುಣ್ಯ ಸ್ನಾನ ಮಾಡುತ್ತಾರೊ ಅವರು ಖಂಡಿತಾ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಫಲ ಅನುಭವಿಸುತ್ತಾರೆ ಎಂದು ವರವಿತ್ತಿದ್ದನಂತೆ.
ಶ್ರೀ ಕೃಷ್ಣ ವಿಶ್ವಕರ್ಮನಿಗೆ ಕಮಲದ ಹೂವಿನಿಂದ ಈ ಕೊಳ ಅಥವಾ ತಲಾಬ್ ನಿರ್ಮಾಣ ಮಾಡಲು ಹೇಳಿದ್ದನಂತೆ. ಆ ಗೋಪಿ ತಲಾಬ್ ಈಗ ಹೇಗಿದೆ ನೋಡೋಣವೆಂದು ಅಂದುಕೊಂಡಿದ್ದೆ. ನಾನು ಮನಸ್ಸಲ್ಲಿ ಈ ಕೊಳದಲ್ಲಿ ಕಮಲಗಳು ಅರಳಿ ನಿಂತಿರಬಹುದು ಎಂದು ಊಹಿಸಿದ್ದೆ. ಆದರೆ ಒಂದೇ ಒಂದು ಕಮಲದ ಹೂವಾಗಲಿ, ಗಿಡ ಬಳ್ಳಿಯಾಗಲಿ ತಲಾವ್ ನಲ್ಲಿ ಇಲ್ಲ. ಗೋಪಿ ತಲಾಬ್ ಬಗ್ಗೆ ನಾನು ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ಕಷ್ಣಾ ಕಥಾದಲ್ಲೂ, ಭಗವತ್ ಗೀತೆಯಲ್ಲೂ, ಅನೇಕ ಧಾರ್ಮಿಕ ಕಾರ್ಯಕ್ರಮದಲ್ಲೂ ಕೇಳಿದ್ದೆ. ಆ ತಲಾಬ್ ನ ಮಹತ್ವ ಹಾಗೂ ಅದರಲ್ಲಿ ಗೋಪಿಕೆಯರೊಂದಿಗೆ ಶ್ರೀ ಕೃಷ್ಣನ ರಾಸಲೀಲೆ ಹೀಗೆ ಹತ್ತು ಹಲವು ವಿಚಾರ ವಿಷಯಗಳನ್ನು ಅದಕ್ಕಾಗಿ ಗುಜರಾತಿಗೆ ಹೋದವರು ದ್ವಾರಕಗೆ ಹೋಗುತ್ತೇವೆ. ಹಾಗೆ ಅಲ್ಲಿಂದ ಗೋಪಿ ತಲಾಬ್ ಗೆ ಹೋಗೊಣವೆಂದು ಒಂದು ರಿಕ್ಷಾದಲ್ಲಿ ಕುಳಿತು ಹೊರಟೆವು. ಆಸುಪಾಸಿನಲ್ಲಿ ಅನೇಕ ದೇವಾಲಯಗಳಿವೆ ಎಲ್ಲವನ್ನು ನೋಡಿ ಬರಲು ಗೋಪಿ ತಲಾಬ್ ನತ್ತ ಹೊರಟೆವು. ಇದು ಗೋಪಾಲಕರ ತೀರ್ಥಸ್ಥಳ. ಹೆಚ್ಚಾಗಿ ವೈಷ್ಣವರು ಮತ್ತು ಶ್ರೀ ಕೃಷ್ಣನ ಭಕ್ತರು ಹಣೆಯ ಮೇಲೆ ಹಚ್ಚಿಕೊಳ್ಳುವ ಪವಿತ್ರ ಗೋಪಿ ಚಂದನದ ಮೂಲಸ್ಥಾನ.
ಮಹಾಭಾರತ ಯುದ್ಧದಲ್ಲಿ ಕೌರವರ ವಿನಾಶವಾದ ನಂತರ, ಪಾಂಡವರ ವಿಜಯಕ್ಕೆ ತಾನೇ ಕಾರಣವೆಂದು ಅರ್ಜುನನು ಬೀಗುತ್ತಿದ್ದನು. ಇದು ಕೃಷ್ಣನ ಗಮನಕ್ಕೆ ಬಂದಾಗ ಅರ್ಜುನನಿಗೆ ಜ್ಞಾನವುಂಟು ಮಾಡಲೆಂದು ಶ್ರೀಕೃಷ್ಣನು ತನ್ನ ಶಿಷ್ಯನಿಗೆ ಗೋಪಿಕಾ ಸ್ತ್ರೀಯರನ್ನು ವನ ವಿಹಾರಕ್ಕೆ ಕರೆದುಕೊಂಡು ಹೋಗಲು ಹೇಳಿದನು. ವನ ವಿಹಾರದ ಸಮಯದಲ್ಲಿ ಅರಣ್ಯವಾಸಿಗಳು ಗೋಪಿಕಾ ಸ್ತ್ರೀಯರನ್ನು ಅವಹೇಳನ ಮಾಡಿದಾಗ ಅರ್ಜುನನು ಅವರನ್ನು ಹೊಡೆದೋಡಿಸಲು ಪ್ರಯತ್ನಿಸಿದನು. ಆದರೆ, ನಿಷಾದರೆದುರು ಅರ್ಜುನನ ಶೌರ್ಯ ಕೆಲಸಕ್ಕೆ ಬರಲಿಲ್ಲ. ನಿಷಾದರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ಕೊಳವೊಂದರಲ್ಲಿ ಗೋಪಿಕಾ ಸ್ತ್ರೀಯರು ಹಾರಿಕೊಳ್ಳುತ್ತಾರೆ ಅದೆ ಈ ಕೊಳ.
ಈಗ ಹೇಗಿದೆ ಗೋಪಿ ತಲಾಬ್ : ಗೋಪಿ ಚಂದನದ ಮೂಲ ಸ್ಥಾನವಾದ ಈ ತಲಾಬ್ ನಲ್ಲಿ ಶ್ರೀ ಕೃಷ್ಣನೊಂದಿಗೆ ನೀರಾಟವಾಡುವಾಗ ಗೋಪಿಕೆಯರು ಬಳಸಿದ ಸೌಂದರ್ಯವರ್ಧಕಗಳು ಈ ತಲಾಬ್ ನ ನೀರಿನಲ್ಲಿ ಕರಗಿ ಇಲ್ಲಿನ ಜೇಡಿಮಣ್ಣಿನಲ್ಲಿ ಬೆರೆತು ಸೌಂದರ್ಯ ವರ್ಧಿಸುವ ಗುಣವನ್ನು ಹೊಂದಿದೆ ಎಂದು ಇಂದಿಗೂ ಈ ಗೋಪಿ ತಲಾಬ್ ಗೆ ಇಳಿದು ಅನೇಕರು ಸ್ನಾನ ಮಾಡುವುದ ಕಂಡೆ. ಆದರೆ ಇಲ್ಲಿ ನನ್ನ ಕಾಡಿದ ಒಂದು ಪ್ರಶ್ನೆ ಹಾಗೂ ಆಶ್ಚರ್ಯ ಇಲ್ಲಿನ ನೀರು ಎಷ್ಟು ಕೊಳಕಾಗಿ ಕಾಣಿಸುತ್ತಿದೆ ಅಂದರೆ ಸ್ನಾನ ಬಿಡಿ ಕಾಲು ಹಾಕಲೂ ಆಗದಷ್ಟು ಕೊಳಕು ನೀರು. ಕಾರಣ ಕೇಳಿದರೆ ನೀರು ಕೊಳಕ್ಕಲ್ಲ ನೀರಿನ ಬಣ್ಣ ಹಾಗೆ ಎಂಬ ಉತ್ತರ ಬಂತು. ಒಟ್ಟಿನಲ್ಲಿ 16 ಸಾವಿರ ಗೋಪಿಕೆಯರು ನಲಿದಾಡಿದ ಶ್ರೀಕೃಷ್ಣ ತನ್ನ ಪ್ರೀತಿಯನ್ನು ತೋರಿ ಮಧುರ ಕ್ಷಣವನ್ನು ಕಳೆದ ಈ ಕೊಳವನ್ನು ಅತ್ಯಂತ ಅಸಹ್ಯ ಹುಟ್ಟಿಸುವ ಹಂತದಲ್ಲಿದೆ. ಎಷ್ಟೋಂದು ನಿರ್ಲಕ್ಷ್ಯ ಅಂದರೆ ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ.
ಈ ತಲಾಬ್ ದಂಡೆಯಲ್ಲಿ ಕುಳಿತು ಗೋಪಿಕೆಯರು ಶ್ರೀ ಕೃಷ್ಣನಿಗಾಗಿ ಅನುದಿನವು ಕಾಯುತ್ತಿದ್ದರಂತೆ. ಈಗ ಇಲ್ಲಿ ಕುಳಿತುಕೊಳ್ಳುವುದು ಬಿಡಿ ಪಾದರಕ್ಷೆ ಹಾಕಿ ಹೋಗಲು ಹೇಸಿಗೆ ಆಗುವಷ್ಟು ಕೊಳಕು, ನಾಯಿ, ದನ ಕರುಗಳ ಮಲ ವಿಸರ್ಜನೆ ಎಲ್ಲೆಡೆ ಕಾಣಸಿಗುತ್ತದೆ.
ಗಂಗೆಯ ಕೆಸರಿಗಿಂತ ಎರಡು ಪಟ್ಟು ಪವಿತ್ರವಾದ್ದದ್ದು ಚಿತ್ರ ಕೂಟದ ಧೂಳು. ಅದಕ್ಕಿಂತಲೂ ಶ್ರೇಷ್ಠವಾದದು ಪಂಚವಟಿಯ ಧೂಳು. ಆದರೆ ಗೋಪಿ ಚಂದನದ ಧೂಳು ನೂರಾರು ಪಟ್ಟು ಹೆಚ್ಚು ಪವಿತ್ರವಾದುದು. ಗೋಪಿ ಚಂದನ ವೃಂದಾವನದ ಧೂಳಿಗೆ ಸಮಾನವೆಂದು ಇಲ್ಲಿ ದೊಡ್ಡ ಫಲಕ ತೂಗು ಹಾಕಲಾಗಿದೆ. ಆದರೆ ಈ ನೀರು ಕೈ ಹಾಕುವಂತಿಲ್ಲ. ಅಷ್ಟೊಂದು ಕೊಳಕು.
ಈ ಪವಿತ್ರ ಗೋಪಿ ತಲಾಬ್ ನ ದಡದ ಒಂದು ಭಾಗದಲ್ಲಿ
ಪಿತೃ ಪೂಜೆ ಮಾಡುವವರು ಇದ್ದಾರೆ. ಅಲ್ಲಿಯೂ ಸ್ವಚ್ಚತೆ ಇಲ್ಲ. ಪಿತೃಗಳಿಗೆ ಇಲ್ಲಿ ನೈವೇದ್ಯ ಅರ್ಪಿಸಿದ ನಂತರ ಸ್ನಾನ, ದಾನ ಮತ್ತು ಪಿತೃ ಪೂಜೆ ಮಾಡಿದರೆ ಇಹ ಪರ ಲೋಕದಲ್ಲಿ ಸುಖ ಸಿಗುತ್ತದೆ ಎನ್ನುತ್ತಾರೆ ಇಲ್ಲಿನ ಪಂಡಿತರು. ಅಲ್ಲಲ್ಲಿ ಪಿತೃಗಳಿಗೆ ನೈವೇದ್ಯ ಮಾಡಿ ಎಲೆ ಅಲ್ಲೇ ಇಟ್ಟೊ ಬಿಟ್ಟೊ ಹೋದ ಆಹಾರ ವಸ್ತುಗಳು ಅಲ್ಲಲ್ಲೇ ಹರಡಿಕೊಂಡು ಬಿದ್ದಿದೆ. ಒಡೆದ ತೆಂಗಿನಕಾಯಿ, ಬಾಡಿದ ಹೂ, ಸ್ನಾನ ಮಾಡಿ ಎಸೆದ ಬಟ್ಟೆಗಳು. ಆದರೆ ಪಿತೃಗಳಿಗೆ ಅನ್ನ ಬಡಿಸುವ ಸ್ಥಳ ಇಷ್ಟು ಕೊಳಕಾಗಿಸಿದರೆ ಹೇಗೆ.
ಇಲ್ಲಿನ ಪಂಡಿತರು ಪ್ರವಾಸಿಗರಲ್ಲಿ ಮೊದಲು ಕೇಳುವ ಪ್ರಶ್ನೆ ಅಮ್ಮ ಅಪ್ಪ ಇದ್ದಾರ? ಹೌದೆನ್ನಿ ಎಲ್ಲಿಯಾದರೂ ದಿವಂಗತರು ಪಾಲಕರು ಅಂತ ಗೋತ್ತಾದರೆ ಬೆನ್ನು ಬಿಡದೆ ಪೀಡಿಸುತ್ತಾರೆ. ಅದೂ ಇದೂ ಪಿತೃಪೂಜೆ, ನೈವೇದ್ಯ ಅಂತ ಹಲವು ಸಾವಿರದಿಂದ ಕೆಲವು ನೂರಕ್ಕೂ ಬಂದು ನಂತರ ಒಂದು ನೂರಕ್ಕೂ ಇಲ್ಲಿ ಏನೊ ಮಂತ್ರ ಹೇಳಿ ಪಿತೃಗಳಿಗೆ ತೃಪ್ತಿಯಾಗಿದೆ ನಿಮ್ಮ ಮುಂದಿನ ದಾರಿ ಸುಗಮವಾಗಲಿದೆ ಎಂದು ಆಶಿರ್ವದಿಸಿ ಕಳುಹಿಸುತ್ತಾರೆ.
ಬಹು ದೊಡ್ಡ ತಲಾಬ್ ನ ದಡದಲ್ಲಿ ಯಾವುದೇ ಸುರಕ್ಷತಾ ಗಾರ್ಡ್ ಗಳಿರಲಿಲ್ಲ. ಯಾವುದೇ ಜೀವರಕ್ಷಕ ದಳಗಳಿಲ್ಲ. ಎಲ್ಲವಕ್ಕೂ ದೇವರೇ ಗತಿ ಎಂಬಂತೆ ಇದೆ. ನನಗೆ ಇಲ್ಲಿ ಸ್ವಲ್ಪ ಸಂಶಯ ಬಂತು. ಇಷ್ಟು ಕಾರಣಿಕ ಅದು ವಿಸ್ತಾರವಾದ ಕೊಳಕ್ಕೆ ಗಾರ್ಡ್ ಇರದೆ ಇರಲು ಸಾಧ್ಯವಿಲ್ಲ ಅಂತ ಆಚೆ ಈಚೆಯವರನ್ನೆಲ್ಲ ವಿಚಾರಿಸಿದೆ. ಗಾರ್ಡ್ ಇದ್ದಾನೆ ಅಥವಾ ಇಲ್ಲ ಅನ್ನದೆ ಎಲ್ಲರೂ ಕೇಳುವುದು ಕೈ ತಪ್ಪಿ ಏನಾದರೂ ತಲಾಬ್ ಗೆ ಬಿತ್ತಾ ಅಂತಾನೇ ಕೇಳುತ್ತಿದ್ದರು. ಕೊನೆಗೊಂದು ಉಪಾಯ ಮಾಡಿ ಹೌದು ಎತ್ತಿ ಕೊಡಿ ಗಾರ್ಡ್ ನ್ನು ಕರೆಯಿರಿ ಎಂದೆ. ಒಬ್ಬ ಜಯದೃತ ರೂಪದ ತರುಣ ಬಂದ ಎಲ್ಲಿ ಏನು ಬಿತ್ತು ಅಂತ ಕೇಳಿದ. ನಾನೆ ಬಿದ್ದೆ ಹಾಗೆ ಎದ್ದು ಬಂದೆ ಅಂದೆ. ನಗುತ್ತಾ ಏನಾಯಿತು ಹೇಳಿ ಅಂದ. ನೀವು ಕೆಲಸದ ಸಮಯದಲ್ಲಿ ಎಲ್ಲಿ ಹೋಗುತ್ತಿರಿ ಎಂದೆ. ಅದಕ್ಕವನ ಉತ್ತರ ನಾನು ಒಂದು ಗೋಪಿ ಚಂದನ ಮಾರಾಟದ ಅಂಗಡಿ ಹಾಕಿಕೊಂಡಿದ್ದೆ. ಈ ನಗರ ಪಾಲಿಕೆ ಸಂಬಳ ಸಾಕಾಗುದಿಲ್ಲ ಮೇಡಂ ಅಂದ. ಇಂತಹ ಜನರು ಇಲ್ಲಿ ಉದ್ಯೋಗ, ವ್ಯಾಪಾರಕ್ಕೆ ಮಹತ್ವ ಕೊಡುವವರೆ ಹೆಚ್ಚು. ದೇಶದ ಸಂಪತ್ತಿನ ಚಿಂತೆ ಯಾರಿಗೂ ಇಲ್ಲ.
ಗೋಪಿಚಂದನ : ಗೋಪಿ ಚಂದನ ಪವಿತ್ರ ವಸ್ತುಗಳ ಸ್ಥಾನದಲ್ಲಿ ನಿಲ್ಲುವಂತಹದ್ದು.ಯಮರಾಜನು ಯಾರು ಗೋಪಿ ಚಂದನವನ್ನು ಉಪಯೋಗಿಸುತ್ತಾರೊ ಅವರನ್ನು ಇಹಲೋಕದಿಂದ ಕರೆದುಕೊಂಡು ಹೋಗಲಾರ ಎನ್ನುವ ನಂಬಿಕೆ ಇದೆಯಂತೆ. ಗೋಪಿ ಚಂದನ ಹಚ್ಚಿಕೊಳ್ಳುವರು ಗಂಗಾ ಸ್ನಾನದಷ್ಟೇ ಪುಣ್ಯ ಪಡೆಯುವರುಎಂಬ ನಂಬಿಕೆ ಇದೆ. ಅಂದರೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದಷ್ಟೆ ಫಲ ಪ್ರಾಪ್ತಿ. ಪ್ರತಿ ನಿತ್ಯ ಗೋಪಿಚಂದನದ ತಿಲಕ ಹಚ್ಚುವುದರಿಂದ ಅಶ್ವಮೇಧ ಯಜ್ಞಗಳನ್ನು ಮಾಡಿದಷ್ಟು ಪುಣ್ಯ. ಪವಿತ್ರ ಸ್ಥಳಗಳಲ್ಲಿ ಹಸಿದ ಹೊಟ್ಟೆಗೆ ಅಗತ್ಯದ ಕೈಗಳಿಗೆ ದಾನ ಮಾಡಿದಷ್ಟು ಫಲದಿಂದ ಜೀವನದಲ್ಲಿ ಅಭಿವೃದ್ಧಿ ಸಾಧಿಸಬಹುದು ಎಂದು ಗೋಪಿ ತಲಾಬ್ ಸುತ್ತಲೂ ದೊಡ್ಡ ದೊಡ್ಡ ಫಲಕಗಳನ್ನು ತೂಗು ಹಾಕಲಾಗಿದೆ.
ಕೆಲವು ಸಂದರ್ಭಗಳಲ್ಲಿ ಗೋಪಿ ಚಂದನವನ್ನು ಧರಿಸುವಂತಿಲ್ಲ. ಯಾವುದೇ ಹುಟ್ಟು ಅಥವಾ ಸಾವಿನ ಹತ್ತು ದಿನಗಳಲ್ಲಿ ಮೈಲಿಗೆ ಇರುವುದರಿಂದ ಗೋಪಿ ಚಂದನವನ್ನು ಬಳಸಬಾರದು. ಗೋಪಿ ಚಂದನವನ್ನು ಧರಿಸಿರುವವನು ತನ್ನ ಕಣ್ಣುಗಳಿಂದ ಅವಲೋಕಿಸುವ ಸಮಸ್ತ ವಸ್ತುಗಳೂ ಶುದ್ಧಗೊಳ್ಳುತ್ತವೆ ಎಂಬ ನಂಬಿಕೆ ಇದೆ.
ಇಲ್ಲಿನ ಮಣ್ಣು ಉತ್ತಮ ಮತ್ತು ನಯವಾದ ಹಳದಿ ಬಣ್ಣವನ್ನು ಹೊಂದಿದೆ ಮತ್ತು ಅನೇಕ ರೋಗಗಳನ್ನು ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ಗುಣಪಡಿಸುವ ದೈವಿಕ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಸರಿ ಇದನ್ನೆಲ್ಲಾ ಓದಿ ಅರಿತು ಗ್ರಹಿಸಿ ಬಂದ ಯಾತ್ರಿಗಳು ತಮಗೂ ತಮ್ಮ ಅಂದು ಬಂಧು ಮಿತ್ರರಿಗಾಗಿ ಗೋಪಿ ಚಂದನ ಖರೀದಿಸಿಕೊಂಡು ಹೋಗುತ್ತಾರೆ.
ಸನಾತನ ಧರ್ಮದ ಭಾರತೀಯ ಪರಂಪರೆಯ ಮಹತ್ವವುಳ್ಳ ಗೋಪಿ ಚಂದನ ತಿಲಕಕ್ಕೆ ಅಗ್ರಸ್ಥಾನವಿದೆ. ಎರಡು ಹುಬ್ಬುಗಳ ನಡುವೆ ಹಣೆಯ ಮೇಲೆ ಹಾಗೂ ದೇಹದ ಇತರ ಭಾಗಗಳಲ್ಲಿ ಹಚ್ಚಿ ಕೊಳ್ಳುವ ಅಂಕಿತವಿದು. ಹಿಂದೂ ಪುಣ್ಯ ಗ್ರಂಥಗಳಲ್ಲಿ ತಿಲಕ, ನಾಮದ ಶುದ್ಧತೆ ಹಾಗೂ ಶರೀರಕ್ಕೆ ನೀಡುವ ಒಳ್ಳೆಯ ಅಂಶವನ್ನು ವಿವರಿಸಲಾಗಿದೆ. ಗೋಪಿ ಚಂದನಕ್ಕೆ ಕೆಟ್ಟದನ್ನು ನಾಶಮಾಡುವ ಶಕ್ತಿಯಿದ್ದು ಚಂದನ ಧರಿಸಿದವರ ಹಣೆ ನೋಡುವುದು ಶುಭಫಲ ಎಂಬ ನಂಬಿಕೆ ಇದ್ದು, ಭವ ರೋಗ ಮತ್ತು ಭೌತಿಕ ರೋಗಗಳನ್ನು ಕಳೆಯುವ ಶಕ್ತಿ ಇದ್ದು ದೇಹದ ಏಳು ಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇವರ ಆರಾಧನೆ ಮಾಡಿ ಹಚ್ಚಿಕೊಳ್ಳುವುದರಿಂದ ಧನಾತ್ಮಕ ಶಕ್ತಿ ಉಂಟಾಗುತ್ತದೆ ಎಂಬ ನಂಬಿಕೆ ಇದೆ.
ಏನೇ ಇರಲಿ ಹೇಗೆ ಇರಲಿ ಶ್ರೀ ಕೃಷ್ಣ ರಾಸಲೀಲೆಯಾಡಿದ ಸ್ಥಳವಿದು. ಬೇಟ್ ದ್ವಾರಕ ಹೋಗುವ ದಾರಿಯಲ್ಲಿ ಸಿಗುತ್ತದೆ. ಇಲ್ಲಿ ಆಸುಪಾಸಿನಲ್ಲಿ ಅನೇಕ ಸಣ್ಣ ಸಣ್ಣ ಸುಂದರ ದೇವಾಲಯಗಳಿವೆ. ದ್ವಾರಕಾದಿಂದ ಬಸ್ಸು, ರೀಕ್ಷಾ, ಕ್ಯಾಬ್ ನಲ್ಲೂ ಹೋಗಬಹುದು.
ಲತಾ ಸಂತೋಷ ಶೆಟ್ಟಿ ಮುದ್ದುಮನೆ