ಹಸಿರೇ ಉಸಿರು ಎನ್ನುವುದು ಕೇವಲ ಘೋಷ ವಾಕ್ಯವಲ್ಲ ಮನುಕುಲದ ಅಸ್ತಿತ್ವದ ಅಧಾರವಾಗಿದೆ. ಪರಿಸರ ಸಂರಕ್ಷಣೆ ಎಂದರೆ ವರ್ಷಕ್ಕೊಮ್ಮೆ ಸಸಿ ನೆಡುವ ದಿನವಲ್ಲ ವರ್ಷದ 365 ದಿನವೂ ಈ ಕಾಯಕ ನಿರಂತರವಾಗಿರಬೇಕು ಎಂದು ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ನುಡಿದರು. ಅವರು ಬಂಟರ ಸಂಘ ಸುರತ್ಕಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಧ್ಯ ಹಾಗೂ ಗ್ರಾಮ ಸೇವಾ ಸಂಘ ಮಧ್ಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಧ್ಯ ಶಾಲೆಯಲ್ಲಿ ನಡೆದ ಉಚಿತ ಸಸಿ ವಿತರಣಾ ಮತ್ತು ಸಾವಯವ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವನು ಅಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಮನುಷ್ಯ ತನ್ನ ಅಭಿವೃದ್ದಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಈ ಬಗ್ಗೆ ನಾವು ಜಾಗೃತರಾಗಬೇಕಿದೆ ಎಂದರಲ್ಲದೆ ಈ ನಿಟ್ಟಿನಲ್ಲಿ ಬಂಟರ ಸಂಘ ಸುರತ್ಕಲ್ ಪ್ರತಿ ವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಚೇಳ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದ, ಅರಣ್ಯಾಧಿಕಾರಿ ಪಿ ಶ್ರೀಧರ್, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ನಿಕಟ ಪೂರ್ವಾಧ್ಯಕ್ಷ ಸುಧಾಕರ ಪೂಂಜಾ, ಮಹಿಳಾ ವಿಭಾಗದ ಅಧ್ಯಕ್ಷೆ ಭವ್ಯ ಶೆಟ್ಟಿ, ಉಲ್ಲಾಸ್ ಶೆಟ್ಟಿ, ನಿವೃತ್ತ ಕೃಷಿ ಅಧಿಕಾರಿ ಬಶಿರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಭಗವಾನ್, ಗ್ರಾಮ ಸೇವಾ ಸಂಘ ಮಧ್ಯ ಅಧ್ಯಕ್ಷ ದಿನೇಶ್ ದೇವಾಡಿಗ, ಶಾಲಾ ಹಿರಿಯ ಶಿಕ್ಷಕಿ ಶೋಭಾ, ಕೃಷಿ ಸಂಚಾಲಕ ಮೇಬೈಲು ಸದಾಶಿವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಿದ್ದರು. ಬಂಟರ ಸಂಘದ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಸ್ವಾಗತಿಸಿ, ಪ್ರಸಾದ್ ಎಂ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂಧರ್ಭದಲ್ಲಿ ಸಾವಯವ ಕೃಷಿಕರಾದ ಚಂದ್ರಹಾಸ ಶೆಟ್ಟಿ ಮಧ್ಯ, ಯಾದವ ಭಂಡಾರಿ ಮಧ್ಯ, ಕುಮುದಾ ಭಟ್ ಚೇಳ್ಯಾರು, ಸಂತೋಷ್ ಕುಮಾರ್ ಶೆಟ್ಟಿ ಕುತ್ತೆತ್ತೂರು ಇವರನ್ನು ಸನ್ಮಾನಿಸಲಾಯಿತು.