ಗುರಿ ಎನ್ನುವುದು ಒಂದು ಯೋಚನೆಯಲ್ಲ, ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸಿಕೊಂಡು ಕೂರುವ ಬದಲು ಸತತ ಪ್ರಯತ್ನ ಪಡಬೇಕು ಆಗ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಉದಯ ಶೆಟ್ಟಿ ಅವರು ಅಂತರಾಷ್ಟ್ರೀಯ ಮಟ್ಟದ ಅಪ್ರತಿಮ ಪ್ರತಿಭಾವಂತ ಕ್ರೀಡಾಪಟು.
ಜುಲೈ ಒಂದರಂದು 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯ ಸಮೀಪದ ಮಣಿಪುರ ಗ್ರಾಮದವರು. ಬೆಳಿಯೂರು ಬಂಟಕಲ್ಲು ಕೋಡಿಬೆಟ್ಟು ಸದಾಶಿವ ಶೆಟ್ಟಿ ಮತ್ತು ಗಿರಿಜಾ ಶೆಟ್ಟಿ ದಂಪತಿಗಳ ಪುತ್ರರಾದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಣಿಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಲೆವೂರು ನೆಹರೂ ಹೈಸ್ಕೂಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಕೆ.ಎಲ್. ಇ. ನಲ್ಲಿ ಪೂರೈಸಿದರು. ಮುಂಬೈಯ ಕೆ.ಪಿ.ಬಿ. ಹಿಂದುಜಾ ಕಾಲೇಜಿನಲ್ಲಿ 1983ರಲ್ಲಿ ತಮ್ಮ ಬಿಕಾಂ ಪದವಿಯನ್ನು ಪಡೆದರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀ ಉದಯ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣದಲ್ಲಿ ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್ ನಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ವಿಶೇಷವೆಂದರೆ ಇವರ ಮೂವರು ಸಹೋದರರು ವೈಟ್ ಲಿಫ್ಟಿಂಗ್ನಲ್ಲಿ ವಿಶೇಷ ಸಾಧಕರು ಆಗಿದ್ದರು.
ತದನಂತರ ವೈಟ್ ಲಿಫ್ಟ್ ನಲ್ಲಿ ತನ್ನ ಪ್ರತಿಭೆಯನ್ನು ಗುರುತಿಸಿಕೊಂಡ ಇವರು ಮುಂಬೈಯ ನ್ಯಾಷನಲ್ ಹೆಲ್ತ್ ಲೀಗ್ ನ ಲಿಂಗಪ್ಪ ಸಾಲ್ಯಾನ್ ಅವರ ಗರಡಿಯಲ್ಲಿ ವೈಟ್ ಲಿಫ್ಟಿಂಗ್ ತರಬೇತಿ ಪಡೆದರು. ನಂತರ ಮುಂಬೈ ವಿಶ್ವವಿದ್ಯಾನಿಲಯವನ್ನು ಈ ವಿಭಾಗದಲ್ಲಿ ಪ್ರತಿನಿಧಿಸುವ ಮೂಲಕ ಮಹಾರಾಷ್ಟ್ರದ ಉತ್ತಮ ವೈಟ್ ಲಿಫ್ಟರ್ ಎಂದು ಚಿನ್ನದ ಪದಕ ಪಡೆದರು. 1984ರಿಂದ 1992 ರವರೆಗೆ ಮೈಸೂರು ದಸರಾದಲ್ಲಿ ನಿರಂತರವಾಗಿ ವೈಟ್ ಲಿಪ್ಟಿಂಗಿನಲ್ಲಿ ಪ್ರಥಮ ಸ್ಥಾನ ಪಡೆದರು. ಈ ಅವಧಿಯಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಚಾಂಪಿಯನ್ ಆಗಿ ಗುರುತಿಸಿಕೊಂಡರು. ಅಮೃತಸರದಲ್ಲಿ ನಡೆದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ವೈಟ್ ಲಿಫ್ಟಿಂಗ್ ಕ್ರೀಡಾಕೂಟದಲ್ಲೂ ಭಾಗವಹಿಸಿ ಚಾಂಪಿಯನ್ ಆದರು. ನಂತರ ಮಹಾರಾಷ್ಟ್ರದ ವೈಟ್ ಲಿಫ್ಟಿಂಗ್ ನ ವಯಸ್ಕರ ವಿಭಾಗವನ್ನು ನಿರಂತರ 10 ಬಾರಿ ಪ್ರತಿನಿಧಿಸುವ ಮೂಲಕ ಈ ಗೌರವಕ್ಕೆ ಪಾತ್ರರಾದ ಅಪರೂಪದ ಒಬ್ಬನೇ ಒಬ್ಬ ಎಂಬ ಗೌರವಕ್ಕೆ ಪಾತ್ರರಾದರು.
ಶ್ರೀ ನಗರದಲ್ಲಿ ನಡೆದ ಅಖಿಲ ಭಾರತ ಅಂತರ್ ಝೋನಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ರಾಷ್ಟ್ರದಲ್ಲಿ ಆವರೆಗೆ ಇದ್ದ ರೆಕಾರ್ಡ್ ಮುರಿದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. 1985ರಲ್ಲಿ ಉದಯಪುರದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸಿದರು. 1985 ರಿಂದ 1990 ರವರೆಗೆ ನಿರಂತರ ರಾಷ್ಟ್ರೀಯ ಚಾಂಪಿಯನ್ ಶಿಪ್ ಮೆಡಲ್ ಪಡೆದ ಅಪರೂಪದ ಕ್ರೀಡಾಪಟುಗಳಲ್ಲಿ ಒಬ್ಬರು ಎಂಬ ಗರಿಮೆ ಇವರದ್ದು.
ಮಹಾರಾಷ್ಟ್ರದ ವೈಟ್ ಲಿಫ್ಟಿಂಗ್ ಕ್ಯಾಪ್ಟನ್ ಎಂದು ಗುರುತಿಸಿಕೊಂಡರು. 1992ರಲ್ಲಿ ಮಹಾರಾಷ್ಟ್ರ ಸರಕಾರವು ರಾಜ್ಯದ ಅತ್ಯಂತ ಕಿರಿಯ ಕ್ರೀಡಾ ಪ್ರತಿಭೆ ಎಂದು ಗುರುತಿಸಿ ಮುಖ್ಯಮಂತ್ರಿಗಳು ಇವರಿಗೆ ಶಿವ ಛತ್ರಪತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 1983ರಲ್ಲಿ ಕ್ರೀಡಾ ಕೋಟಾದ ಅಡಿ ಯೂನಿಯನ್ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಶ್ರೀ ಉದಯ ಶೆಟ್ಟಿಯವರು ಯೂನಿಯನ್ ಬ್ಯಾಂಕಿನಲ್ಲಿ ಕ್ರೀಡಾ ವಿಭಾಗದ ಕಾರ್ಯದರ್ಶಿಯಾಗಿ ಮುಂದಾಳತ್ವ ವಹಿಸಿ ಬ್ಯಾಂಕ್ ನ ತಂಡವನ್ನು ಕಟ್ಟಿ ಬೆಳೆಸುವಲ್ಲಿ ವಿಶೇಷ ಶ್ರಮ ವಹಿಸಿದರು. ರಾಷ್ಟ್ರ, ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಆಗಿದ್ದ ಇವರು 1991ರಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಮಾರಣಾಂತಿಕ ಗಾಯವಾಗಿ ಕ್ರೀಡೆಯಿಂದ ನಿರ್ಗಮಿಸಬೇಕಾಗಿ ಬಂದರೂ, ಕರ್ನಾಟಕ ಮತ್ತು ದಕ್ಷಿಣ ಭಾರತದ ಹಲವಾರು ಕ್ರೀಡಾ ಪ್ರತಿಭೆಗಳನ್ನು ಬ್ಯಾಂಕ್ ಉದ್ಯೋಗಿಗಳಾಗಿ ನೇಮಿಸಿಕೊಂಡು ಅವರು ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಮೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟರು.
ಒಲಿಂಪಿಯನ್ ಸತೀಶ್ ರೈ, ಅರ್ಜುನ್ ಪ್ರಶಸ್ತಿ ಪಡೆದ ಪಿ.ಎಮ್.ಬಾಲಚಂದ್ರ, ಸತೀಶ್ ದೇವಾಡಿಗ, ಪವರ್ ಲಿಫ್ಟರ್ ಸುಧಾಕರ್ ಕಾಮತ್, ಸದಾನಂದ ಪೂಜಾರಿ, ಲಕ್ಷ್ಮಣ ಕಾಮತ್ ಕರ್ನಾಟಕದವರಾದರೆ, ಪವರ್ ಲಿಪ್ಟಿಂಗ್ ನಲ್ಲಿ ವಿಶ್ವ ಚಾಂಪಿಯನ್ ಪಡೆದ ಎರ್ನಕುಲಂನ ಜೆಂಟ್ರಿ ಪ್ರಾನ್ಸಿಸ್, ನೆವಿಲೆ ದರೋಗಾ ಇನ್ನೂ ಹಲವರು ಕ್ರೀಡಾಪಟುಗಳ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಶ್ರೀಯುತ ಜನಾರ್ದನ ಪೂಜಾರಿ ಅವರಿಗೆ ನಿಕಟವರ್ತಿಯಾಗಿದ್ದ ಶ್ರೀ ಉದಯ ಶೆಟ್ಟಿಯವರು 1992ರಿಂದ 2000ದವರೆಗೆ ಮಹಾರಾಷ್ಟ್ರದ ವಯಸ್ಕರ ವಿಭಾಗದ ವೈಟ್ ಲಿಪ್ಟಿಂಗ್ ತಂಡದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯವು ಸತತ ಏಳರಿಂದ ಎಂಟು ಭಾರಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಿಸಿತ್ತು. ಇದೇ ಸುಮಾರಿಗೆ ರಾಷ್ಟ್ರವು ಇವರನ್ನು ಉತ್ತಮ ರೆಫ್ರಿ ಎಂದು ಗೌರವಿಸಿ ಸನ್ಮಾನಿಸಿತು. ಆಸ್ಟ್ರೇಲಿಯಾದಲ್ಲಿ ನಡೆದ ಮಾಸ್ಟರ್ಸ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ ನಲ್ಲಿ ತರಬೇತುದಾರರಾಗಿ ಭಾರತವನ್ನು ಪ್ರತಿನಿಧಿಸಿರುವ ಶ್ರೀ ಉದಯ ಶೆಟ್ಟಿಯವರು 2013ರಲ್ಲಿ ಬ್ಯಾಂಕ್ ನಿಂದ ಸ್ವಯಂ ನಿವೃತ್ತಿ ಪಡೆದರು. ನಂತರ ಇವರು ಕುಟುಂಬದ ವ್ಯವಹಾರದಲ್ಲಿ ತೊಡಗಿಕೊಂಡರೂ ಕ್ರೀಡೆಯಿಂದ ವಿಶ್ರಮಿಸಲಿಲ್ಲ.
ಪ್ರಸ್ತುತ ಇವರು ಭಾರತದ ಮಾಸ್ಟರ್ಸ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯು ಅಂತರಾಷ್ಟ್ರೀಯ ವೈಟ್ ಲಿಫ್ಟಿಂಗ್ ಫೆಡರೇಶನ್ ನ ಮಾನ್ಯತೆ ಪಡೆದಿದೆ. ಮುಂಬರುವ ಮಾಸ್ಟರ್ಸ್ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಕ್ರೀಡಾ ಸ್ಪರ್ಧೆಯಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದಾರೆ. 10 ಚಿನ್ನದ ಪದಕ, ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಶ್ರೀಯುತ ಉದಯ ಶೆಟ್ಟಿಯವರನ್ನು ಮುಂಬೈ ಬಂಟರ ಸಂಘ, ಬೋಂಬೆ ಬಂಟ್ಸ್ ಅಸೋಸಿಯೇಷನ್ ನಂತಹ ಸಂಘಟನೆಗಳು ಸನ್ಮಾನಿಸಿ ಗೌರವಿಸಿದೆ. ಈ ಸಂದರ್ಭದಲ್ಲಿ ಶ್ರೀಯುತ ಉದಯ ಶೆಟ್ಟಿಯವರು ತನ್ನ ಸಾಧನೆಯ ಹಾದಿಯಲ್ಲಿ ನಿರಂತರ ಪ್ರೋತ್ಸಾಹಿಸಿದ ಹಿರಿಯ ಅಣ್ಣ ಲಕ್ಷ್ಮಣ ಶೆಟ್ಟಿಯವರನ್ನು ಸದಾ ಸ್ಮರಿಸಿಕೊಳ್ಳುತ್ತಾರೆ.
ಕೊರೋನ ಕಾಲದಲ್ಲಿ ಶ್ರೀಯುತ ಉದಯ ಶೆಟ್ಟಿಯವರು ಸಲ್ಲಿಸಿದ ಸೇವೆ ವಿಶಿಷ್ಟವಾದದ್ದು. ಮುಂಬೈ ಮಹಾನಗರದ ಅಂಧೇರಿಯಿಂದ ಬೊರಿವಲಿವರೆಗೆ ನೂರಾರು ಬಡ ಕುಟುಂಬಗಳನ್ನು ಗುರುತಿಸಿ ತಮ್ಮ ಸ್ವಂತ ಹಣ 6 ಲಕ್ಷವನ್ನು ಬಳಸಿ ಈ ಕುಟುಂಬಗಳಿಗೆ ಲಾಕ್ ಡೌನ್ ಸಂದರ್ಭದಲ್ಲಿ ಆಹಾರದ ಕಿಟ್ ನೀಡಿರುತ್ತಾರೆ. ಬಾಳ ಸಂಗಾತಿ ವೀಣಾ ಮಕ್ಕಳಾದ ಹರ್ಷಲ್ ಮತ್ತು ಸೋನಿಯಾ, ಸೊಸೆ ಡಾ.ರಿಯಾ ರವರೊಂದಿಗೆ ಸುಖಿ ಜೀವನ ನಡೆಸುತ್ತಿದ್ದು, ಇವರು ಕರ್ನಾಟಕದ ಹೆಮ್ಮೆಯ ಕ್ರೀಡಾಪಟು. ಮುಂದಿನ ದಿನಗಳಲ್ಲಿ ಹೊರನಾಡು ಕನ್ನಡಿಗರಿಗೆ ಸಲ್ಲುವ ರಾಜ್ಯ ಪ್ರಶಸ್ತಿ ಇವರಿಗೆ ಲಭಿಸಲಿ ಎನ್ನುವುದು ನಮ್ಮೆಲ್ಲರ ಆಸೆ.
ಹಿಡಿದು ನಡೆಸುವ ಕೈಗಳು ಪ್ರೀತಿಯಿಂದ ಆಲಿಸುವ ಕಿವಿಗಳು ಜೊತೆಗೆ ಅರ್ಥ ಮಾಡಿಕೊಳ್ಳುವ ಹೃದಯ ನಮ್ಮೊಡನೆ ಇದ್ದಾಗ ಇನ್ನಾವ ಭಾಗ್ಯವೂ ಬೇಕಿಲ್ಲ ಎನ್ನುವ ಮಾತಿಗೆ ಸಾಕ್ಷಿ ಎನ್ನುವಂತೆ ಬದುಕುತ್ತಿರುವ ಶ್ರೀ ಉದಯ ಶೆಟ್ಟಿಯವರ ಬದುಕು ಸಮೃದ್ಧವಾಗಲಿ ಎಂಬ ಆಶಯ ನಮ್ಮದು.