ಕನ್ನಡ ಶಾಲೆಯಲ್ಲಿ ಇಂದು ಸಮವಸ್ತ್ರ ವಿತರಣೆ ಮಾಡಿದ್ದೇವೆ, ಮುಂದೆಯೂ ಕೂಡ ಪ್ರತಿ ವರ್ಷವೂ ಕೂಡ ನಾನೇ ಈ ಕನ್ನಡ ಶಾಲೆಗಳಿಗೆ ಸಮವಸ್ತ್ರ ವಿತರಿಸುತ್ತೇನೆ. ಕನ್ನಡ ಶಾಲೆಗಳು ಉಳಿಯಬೇಕು ಈ ನಿಟ್ಟಿನಲ್ಲಿ ನಾವು ಕನ್ನಡ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕಲಂಗುಟ್ ಕನ್ನಡ ಸಂಘದ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ ನುಡಿದರು.
ಕನ್ನಡ ಸಂಘ ಜುವಾರಿನಗರ ಹಾಗೂ ಕಲಂಗುಟ್ ಕನ್ನಡ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜುವಾರಿನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 120 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಸಮವಸ್ತ್ರ ವಿತರಣೆ ಮಾಡಲಾಯಿತು.
ಕೊರ್ಟಾಲಿಂ ಕ್ಷೇತ್ರದ ಶಾಸಕ ಅಂಥೋನಿ ವಾಜ್ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ಶಾಲೆ ಮತ್ತು ಕನ್ನಡಿಗರ ಮೇಲೆ ನನಗೆ ಅಪಾರ ಗೌರವವಿದೆ. ಈ ಭಾಗದ ಕನ್ನಡಿಗರೇ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಕನ್ನಡಿಗರೊಂದಿಗೆ ನಾನು ಸದಾ ಇರುತ್ತೇನೆ, ಕನ್ನಡ ಶಾಲೆಯ ದುರಸ್ತಿ ಕಾರ್ಯಕ್ಕಾಗಿ ಕೂಡಲೇ 15 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುವುದು. ಇಷ್ಟೇ ಅಲ್ಲದೆಯೇ ಕನ್ನಡ ಶಾಲೆಯಲ್ಲಿ ಸ್ಮಾರ್ಟ್ ತರಗತಿ ನಡೆಸಲು ಕೂಡ ವ್ಯವಸ್ಥೆ ಮಾಡಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ವಿತರಿಸಿದ ಸಮವಸ್ತ್ರದ ಖರ್ಚು ವೆಚ್ಚವನ್ನು ಮುರಳಿ ಮೋಹನ್ ಶೆಟ್ಟಿಯವರು ನೀಡಿದ್ದರು. ಸಂಜಯ ತಾಯಾಪುರ ಮತ್ತು ಬೃಂದಾವನ್ ಗಾರ್ಡನ್ ರಿಯಲ್ ಎಸ್ಟೇಟ್ನವರು ಕೂಡ ಧನಸಹಾಯ ಮಾಡಿದ್ದರು. ಸರೋಜಿನಿ ದಾಮೋದರ ಫೌಂಡೇಶನ್ ಮೂಲಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ ಕೂಡ ನೆರವೇರಿತು.
ಈ ಸಂದರ್ಭದಲ್ಲಿ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಜುವಾರಿನಗರ ಕನ್ನಡ ಸಂಘದ ಸದಸ್ಯರಾದ ಮಾರುತಿ ಹಾದಿಮನಿ, ಸಿದ್ಧನಗೌಡ ಗೌಡರ್, ಉದ್ಯಮಿ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ನದಾಫ್, ದಕ್ಷಿಣ ಗೋವಾ ಜಿಲ್ಲಾ ಕಸಾಪ ಅಧ್ಯಕ್ಷ ಪರಶುರಾಮ ಕಲಿವಾಳ, ಶಿಕ್ಷಕರಾದ ವಿ.ಟಿ ಅರೆಬೆಂಚಿ, ಚಂದ್ರಶೇಖರ್ ಬಿಂದಿ, ಮನಿ ದೇವು, ಶ್ರವಣ ಹಿರೇಮಠ, ಬಾಪುಗೌಡ ಗೌಡರ್, ಕನ್ನಡ ಶಾಲೆಯ ಮುಖ್ಯ ಶಿಕ್ಷಕರಾದ ದಯಾ ನಾಯಕ, ಶಿಕ್ಷಕರಾದ ಅಶೋಕ ತಿಲಗಂಜಿ ಮತ್ತಿತರರು ಉಪಸ್ಥಿತರಿದ್ದರು.