ಮೆದುಳು ಒಂದು ಕಡೆ ಎಳೆಯುತ್ತದೆ, ಹೃದಯ ಇನ್ನೊಂದು ಕಡೆಗೆ ಸೆಳೆಯುತ್ತದೆ, ಗೊಂದಲವೋ ಗೊಂದಲ ಎಂದು ಯಾರಾದರೂ ಹೇಳುವುದನ್ನು ನೀವು ಕೇಳಿರಬಹುದು. ತಲೆಯ “ಆಲೋಚನೆ”ಗಳು ಬೇರೆ, ಹೃದಯದ “ಭಾವನೆ”ಗಳು ಬೇರೆ ಎನ್ನುವುದು ಅವರ ಮಾತಿನ ಅರ್ಥ. ನಾವೂ ಇಂತಹ ಸನ್ನಿವೇಶಗಳನ್ನು ಅನುಭವಿಸಿದವರೇ. ಆದರೆ ನಿಜ ಹಾಗಿಲ್ಲ. ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಒಂದು, ಒಬ್ಬ. ಹೃದಯ ಮತ್ತು ಮೆದುಳು ಪ್ರತ್ಯೇಕವಲ್ಲ, ನಾವು ನೀವು ಇಡಿಯಾಗಿ ಒಂದು ಅಸ್ತಿತ್ವ.
ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಾವು “ಮೆದುಳು” ಮತ್ತು “ಹೃದಯ” ಎಂದು ಕರೆಯುವುದು ಯಾವುದನ್ನು ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಸಾಮಾನ್ಯವಾಗಿ ಆಲೋ ಚನೆಗಳನ್ನು ಮೆದುಳಿಗೆ ಲಗಾವುಗೊಳಿಸುತ್ತೇವೆ, ಭಾವನೆಗಳನ್ನು ಹೃದಯಕ್ಕೆ ಲಗತ್ತಿಸುತ್ತೇವೆ. ಆದರೆ ಸರಿಯಾಗಿ ಆಳವಾಗಿ ಗಮನಿಸಿ ನೋಡಿ, ನಾವು ಆಲೋಚಿಸಿದಂತೆ ನಮ್ಮ ಭಾವನೆಗಳು ಇರುತ್ತವೆ. ಕೆಲವೊಮ್ಮೆ ನಮ್ಮ ಭಾವನೆಗಳಿಗೆ ತಕ್ಕುದಾಗಿ ಆಲೋಚನೆಗಳೂ ಇರುತ್ತವೆ. ಹೀಗಾಗಿಯೇ ಆಲೋಚನೆ ಮತ್ತು ಭಾವನೆ ಎರಡೂ ಮನೋಮಯ ಕೋಶದ ಭಾಗ ಎಂದು ಯೋಗಶಾಸ್ತ್ರವು ಪರಿಗಣಿಸುವುದು.
“ಮನಸ್ಸು” ಎಂದು ನಾವು ಹೇಳುವುದು ಆಲೋಚನೆಯ ಪ್ರಕ್ರಿಯೆ ಅಥವಾ ಬುದ್ಧಿಯನ್ನು. ಆದರೆ ನಿಜವಾಗಿ ಮನಸ್ಸಿಗೆ ಹಲವು ಆಯಾಮಗಳಿವೆ. ಅವುಗಳಲ್ಲೊಂದು ತಾರ್ಕಿಕ ಆಯಾಮ. ಇನ್ನೊಂದು ಆಳವಾದ ಭಾವನಾತ್ಮಕ ಆಯಾಮ. ಮನಸ್ಸಿನ ಆಳವಾದ ಭಾವನಾತ್ಮಕ ಆಯಾಮವನ್ನೇ ನಾವು “ಹೃದಯ’ ಎನ್ನುವುದು. ಅದು ಸ್ಮರಣೆಗಳ ಕೋಶವಾಗಿದ್ದು, ಭಾವನೆಗಳನ್ನು ನಿರ್ದಿಷ್ಟ ಸ್ವರೂಪಕ್ಕೆ ತರುತ್ತದೆ. ಹೀಗಾಗಿ ಆಲೋಚನೆ ಮತ್ತು ಭಾವನೆ ಎರಡೂ ಮಿದುಳಿನ ಕ್ರಿಯೆಗಳೇ. ಇವೆರಡರ ಮೂಲವಿರುವುದು ಒಂದೇ ಕಡೆಯಲ್ಲಿ.
ಉದಾಹರಣೆಗೆ, ನಮ್ಮ ಸ್ನೇಹಿತ ಎಷ್ಟು ಒಳ್ಳೆಯವನು ಎಂದು ಆಲೋಚನೆ ಮನಸ್ಸಿನಲ್ಲಿ ಮೂಡುತ್ತದೆ ಎಂದಿಟ್ಟು ಕೊಳ್ಳೋಣ. ಆಗ ಅವನ ಬಗ್ಗೆ ಸಿಹಿಯಾದ ಭಾವನೆಗಳು ಉಂಟಾಗುತ್ತವೆ. ಇನ್ನೊಬ್ಬ ವ್ಯಕ್ತಿ ಕೆಟ್ಟವನು ಎಂದುಕೊಂಡರೆ ಅವನ ಬಗ್ಗೆ ಸಿಟ್ಟು ಮೂಡುತ್ತದೆ. ನಾವು ಯೋಚಿಸಿದಂತೆ ನಮ್ಮ ಭಾವನೆಗಳು ಆಗಿದ್ದಲ್ಲಿ ಆಲೋಚನೆಗಳು ಮತ್ತು ಭಾವನೆಗಳು ವಿರುದ್ಧ ದಿಕ್ಕಿನಲ್ಲಿರುವಂತೆ ಭಾಸವಾಗು ವುದೇಕೆ? ಯಾಕೆಂದರೆ, ಆಲೋಚನೆಗಳು ನಿರ್ದಿಷ್ಟತೆ ಮತ್ತು ಖಚಿತತೆಯನ್ನು ಹೊಂದಿರುತ್ತವೆ, ದೃಢವಾಗಿರುತ್ತವೆ. ಭಾವನೆಗಳು ಸ್ವಲ್ಪ ಬಾಗಿಬಳುಕು ವಂಥವು, ನೀರಿನಂತೆ ತೆಳು, ಮೃದು. ನಮ್ಮ ಗೆಳೆಯನ ಬಗ್ಗೆ ಇವತ್ತು ಒಳ್ಳೆಯ ಆಲೋಚನೆ ಹೊಂದಿದ್ದು, ಸಿಹಿಯಾದ ಭಾವನೆ ತಳೆದಿ ರುತ್ತೇವೆ. ನಾಳೆ ಅವನೇನೋ ಕೆಟ್ಟದ್ದನ್ನು ಮಾಡಿದ ಎಂದುಕೊಳ್ಳಿ. ಆಗ ಮನಸ್ಸಿನ ಆಲೋಚನೆ ಬದಲಾಗುತ್ತದೆ, ಆದರೆ ಭಾವನೆ ಗಳು ಬದಲಾಗಲು ಸ್ವಲ್ಪ ಕಾಲ ಹಿಡಿಯುತ್ತದೆ. ಆಲೋಚನೆ ಥಟ್ಟನೆ ಹಿಮ್ಮುಖ ತಿರುವು ತೆಗೆದುಕೊಂಡರೆ ಆಲೋಚನೆಗಳಿಗೆ ಇನ್ನೂ ಸ್ವಲ್ಪ ದೂರ ಹೋಗಿ ನಿಧಾನವಾಗಿ ತಿರುಗಿ ಹಿಂದಕ್ಕೆ ಬರುವುದಕ್ಕಷ್ಟೇ ಸಾಧ್ಯವಾಗುತ್ತದೆ. ಇದರಿಂದಾಗಿಯೇ ಆಲೋಚನೆ ಮತ್ತು ಭಾವನೆಗಳ ಸಂಘರ್ಷ ಉಂಟಾಗುವುದು.
ಹೀಗಾಗಿ “ಮೆದುಳು” ಮತ್ತು “ಹೃದಯ”ದ ಬಗ್ಗೆ ಗೊಂದಲ, ಸಂಘರ್ಷ ಮಾಡಿಕೊಳ್ಳುವ ಅಗತ್ಯವಿಲ್ಲ. ಒಂದು ಕಬ್ಟಾದರೆ ಇನ್ನೊಂದು ಕಬ್ಬಿನ ಹಾಲಿನಂತೆ. ಎರಡನ್ನೂ ಅನುಭವಿಸಿ ಖುಷಿಪಡೋಣ.