ಅದೃಷ್ಟ ಮತ್ತು ಪ್ರಯತ್ನ ಜತೆ ಜತೆಯಾಗಿರುತ್ತದೆ. ಕೆಲವೊಮ್ಮೆ ಪ್ರಯತ್ನವಿಲ್ಲದೇ ಅದೃಷ್ಟ ಖುಲಾಯಿಸಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಒಂದಷ್ಟು ಪ್ರಯತ್ನ ಪಟ್ಟರೂ ಗೆಲುವು ನಮ್ಮದಾಗುವುದಿಲ್ಲ. ಆದರೆ ನಮ್ಮ ಪ್ರಯತ್ನದಲ್ಲಿ ಸೋಲದೆ ಸತತ ಪ್ರಯತ್ನ ಪಟ್ಟರೆ ಯಶಸ್ಸು ನಮ್ಮದಾಗಬಹುದು.
ಚಿನ್ನದ ಗಣಿಗಾರಿಕೆಯ ಕೆಲಸ ಆರಂಭಿಸಿದ ವ್ಯಕ್ತಿಯೊಬ್ಬ ತಿಂಗಳುಗಟ್ಟಲೆ ಚಿನ್ನದ ಹೊಸ ನಿಕ್ಷೇಪಕ್ಕಾಗಿ ದುಡಿದ. ಆದರೆ ಎಷ್ಟು ಆಳಕ್ಕೆ ಅಗೆದರೂ ಚಿನ್ನದ ಅದಿರು ಕಾಣಿಸಲಿಲ್ಲ. ಸುಸ್ತಾಗಿ ಸೋತು ಹೋದ. ತನ್ನಿಂದ ಆಗದು ಎಂದು ಕೈ ಚೆಲ್ಲಿ ಕುಳಿತ. ಸೋತು ತನ್ನ ಕೆಲಸವನ್ನು ನಿಲ್ಲಿಸಿದ. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಇನ್ನೊಬ್ಬ ಗಣಿಗಾರಿಕೆಯ ವ್ಯಕ್ತಿಗೆ ತನ್ನ ವಸ್ತುಗಳನ್ನು ಮಾರಿ ಹೊರಟು ಹೋದ.
ಅರ್ಧ ಅಗೆದು ಬಿಟ್ಟ ಹೊಂಡವನ್ನು ಮತ್ತಷ್ಟು ಅಗೆಯುವಂತೆ ಅಲ್ಲಿನ ತಂತ್ರಜ್ಞ ಹೊಸದಾಗಿ ಬಂದವನಿಗೆ ಹೇಳಿದ. ಮೂರು ಅಡಿಗಳಷ್ಟು ಅಗೆದರೆ ಚಿನ್ನದ ಆದಿರು ಇದೆ ಎಂದ ಹೊಸದಾಗಿ ಬಂದಾತ. ಅಗೆಯಲು ಆರಂಭಿಸಿದ. ಸುಮಾರು ಮೂರು ನಾಲ್ಕು ಅಡಿಗಳಷ್ಟು ಅಗೆಯುವಷ್ಟರಲ್ಲಿ ಅವನಿಗೆ ಚಿನ್ನದ ನಿಕ್ಷೇಪ ಕಾಣಿಸಿತು. ತಜ್ಞನ ಮಾತು ನಿಜವಾಯಿತು. ಇನ್ನಷ್ಟು ಅಗೆದು ಅದರೊಳಗಿದ್ದ ಬಂಗಾರದ ಗಣಿಯನ್ನು ತನ್ನದಾಗಿಸಿಕೊಂಡ. ಹೊರಟು ಹೋದ ವ್ಯಕ್ತಿ ಚಿನ್ನದ ನಿಕ್ಷೇಪಕ್ಕೆ ಮೂರು ಅಡಿಗಳಷ್ಟು ಮಾತ್ರ ದೂರವಿದ್ದ.
ಹಾಗಾದರೆ ಪ್ರಯತ್ನ ಮೇಲೋ ಅದೃಷ್ಟ ಮೇಲೋ? ಮೇಲಿನ ಕಥೆಯನ್ನು ಅವಲೋಕಿಸಿದಾಗ ನಮ್ಮೆಲ್ಲರನ್ನು ಈ ಪ್ರಶ್ನೆ ಕಾಡದಿರದು. ಮೊದಲನೆಯ ವ್ಯಕ್ತಿ ಇನ್ನೂ ಒಂದಿಷ್ಟು ಕಷ್ಟಪಟ್ಟಿದ್ದರೆ ಆತನಿಗೆ ಬಂಗಾರದ ಗಟ್ಟಿ ಸಿಗುತ್ತಿತ್ತು. ಆದರೆ ಇನ್ನೇನು ಸ್ವಲ್ಪವೇ ಪ್ರಯತ್ನ ಬೇಕಿದೆ ಅನ್ನುವಷ್ಟರಲ್ಲಿ ಸಹನೆ ಕಳೆದುಕೊಂಡು ನಿರಾಶನಾಗಿ ಅಗೆಯುವುದನ್ನು ನಿಲ್ಲಿಸಿದ. ಇದ್ದ ವಸ್ತುಗಳನ್ನೂ ಮಾರಿಬಿಟ್ಟ. ಆದರೆ ಎರಡನೆಯ ವ್ಯಕ್ತಿ ಆಶಾವಾದದಿಂದ ಅದೇ ಹೊಂಡವನ್ನು ಮತ್ತಷ್ಟು ಅಗೆದ. ಸ್ವಲ್ಪವೇ ಶ್ರಮದಿಂದ ಅದೃಷ್ಟವನ್ನು ತನ್ನದಾಗಿಸಿಕೊಂಡ.
ಈ ಕಥೆಯಲ್ಲಿ ಅನೇಕ ಸಂದೇಶಗಳಿವೆ. ಕಷ್ಟವೆನಿಸಿದರೂ ಗುರಿಯೆಡೆಗಿನ ನಮ್ಮ ಪ್ರಯತ್ನವನ್ನು ಬಿಟ್ಟು ಬಿಡಬಾರದು. ಹಲವಾರು ಬಾರಿ ನಾವು ಕಷ್ಟಗಳಿಗೆ ಪ್ರತಿಫಲ ಹತ್ತಿರವಿದ್ದಾಗಲೇ ನಿರಾಶೆ ಗೊಳಗಾಗುತ್ತೇವೆ. ಪ್ರತಿಫಲವನ್ನು ಇನ್ನಾರಿಗೋ ಬಿಟ್ಟು ಕೊಡುತ್ತೇವೆ. ದುರದೃಷ್ಟ ಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತೇವೆ. ಇನ್ನೊಂದಿಷ್ಟು ಸಹನೆಯೊಂದಿಗೆ ಕಷ್ಟಪಟ್ಟರೆ ಯಶಸ್ಸನ್ನು ಗಳಿಸುವ ಸಾಧ್ಯತೆಗಳಿರುತ್ತವೆ. ನಿರಾಶೆಯೇ ಸೋಲಿಗೆ ಮೂಲ ಕಾರಣ.
ಅದೆಷ್ಟೋ ಸಲ ನಮ್ಮ ಬದುಕಲ್ಲೂ ಹೀಗೆಯೇ ನಡೆಯುತ್ತದೆ. ನಮ್ಮ ದುಡಿಮೆಯ ಫಲ ಇನ್ನೊಬ್ಬರ ಪಾಲಾಗುತ್ತದೆ. ಕಷ್ಟಪಟ್ಟು ಫಲಿತಾಂಶ ಸಿಗದಾಗ ಪ್ರಯತ್ನವನ್ನು ನಿಲ್ಲಿಸುತ್ತೇವೆ. ಹತಾಶರಾಗುತ್ತೇವೆ. ಋಣಾತ್ಮಕ ಚಿಂತನೆಗಳನ್ನು ತುಂಬಿಕೊಳ್ಳುತ್ತೇವೆ. ಸಿಗಬಹುದಾದ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಕಷ್ಟವೆಂದುಕೊಂಡು ಅಸಾಧ್ಯ ವೆಂದುಕೊಂಡು ಕಂಡ ಕನಸುಗಳನ್ನು ಬಿಟ್ಟುಕೊಡುತ್ತೇವೆ. ಪ್ರಯತ್ನಗಳನ್ನು ನಿಲ್ಲಿಸಿ ಬಿಡುತ್ತೇವೆ.ಆದರೆ ಎಷ್ಟೋ ಬಾರಿ ಯಶಸ್ಸಿನ ಸಮೀಪಕ್ಕೆ ತಲುಪಿದಾಗಲೇ ನಾವು ನಮ್ಮ ಪ್ರಯತ್ನಗಳನ್ನು ನಿರಾಶರಾಗಿಯೋ ಕಷ್ಟವಾಯಿತೆಂದೋ ಬಿಟ್ಟು ಕೊಡುತ್ತೇವೆ.
ಅದೃಷ್ಟ, ದುರದೃಷ್ಟಗಳು ಕೆಲವೊಂದು ಬಾರಿ ನಮ್ಮ ಕೈಯಲ್ಲಿಯೇ ಇರುತ್ತವೆ. ವ್ಯಾಪಾರ-ವ್ಯವಹಾರಗಳಲ್ಲಿ ಇದು ಸಾಮಾನ್ಯ. ಸೋಲು ಬಂದಾಗ ಕುಸಿಯುತ್ತೇವೆ. ಗೆಲುವು ಸಿಕ್ಕಾಗ ಕುಣಿಯುತ್ತೇವೆ. ಆದರೆ ಸೋಲು-ಗೆಲುವುಗಳು ಒಂದನ್ನೊಂದು ಹಿಂಬಾಲಿಸಿ ಬರುತ್ತವೆ ಎಂಬ ನಂಬಿಕೆಯಿದ್ದರೆ ಆಸೆ ಚಿಗುರುತ್ತಿರುತ್ತದೆ. ಸತ್ತು ಹೋದಂತೆ ಕಂಡ ಗಿಡ ಮರಗಳೂ ಮತ್ತೆ ಅನೇಕ ಬಾರಿ ಬುಡದಿಂದ ಚಿಗುರುತ್ತವೆ. ಸೋತಾಗ ಕುಗ್ಗಿ ಬದುಕನ್ನೇ ಬಲಿ ಕೊಡುವ ಬದಲು ಮತ್ತೂಂದಿಷ್ಟು ಪ್ರಯತ್ನ ದೊಂದಿಗೆ ಮುಂದೆ ಸಾಗೋಣ. ಕಷ್ಟವಾದರೂ ಸಹಿಸಿ ಹೆಜ್ಜೆ ಹಾಕೋಣ. ದೂರದಲ್ಲೆಲ್ಲೋ ಯಶಸ್ಸು ನಮ್ಮದಿರಬಹುದು. ಆ ಯಶಸ್ಸನ್ನು ನಮ್ಮದಾಗಿಸಿಕೊಳ್ಳುವ ಛಾತಿ, ಪ್ರಯತ್ನ ಮಾತ್ರ ನಮ್ಮದಾಗಿರಬೇಕು.