ರಾಮಕೃಷ್ಣ ಮಿಷನ್, ಮಂಗಳೂರು ಇದರ ಪ್ರೇರಣೆಯಿಂದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಜೆಪ್ಪು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಇದರ ಸಹಯೋಗದಲ್ಲಿ ‘ನಮ್ಮ ಊರು – ನಮ್ಮ ಹೆಮ್ಮೆ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ತಾ. 26/11/2023 ರಂದು ಮಂಗಳಾದೇವಿ ಸುತ್ತಲಿನ ಪ್ರದೇಶದ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸುವ ಮೂಲಕ ಚಾಲನೆ ನೀಡಲಾಯಿತು. ಬೆಳಿಗ್ಗೆ 7:30 ರಿಂದ 9.00 ಗಂಟೆಯವರೆಗೆ ಜಪ್ಪು ಪರಿಸರದ ಸುಮಾರು 800 ಮನೆಗಳಿಗೆ ಕರಪತ್ರ ಹಂಚುವ ಮೂಲಕ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಲಾಯಿತು. ನಂತರ ನಡೆದ ‘ಮಾದರಿ ವಾರ್ಡ್ ನತ್ತ – ಸಂಘ ಸಂಸ್ಥೆಗಳ ಚಿತ್ತ’ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನಡೆದು ಬಂದ ದಾರಿ ಹಾಗೂ ತಮ್ಮ ವಾರ್ಡ್ ಗಳನ್ನು ಮಾದರಿ ವಾರ್ಡ್ ಗಳನ್ನಾಗಿ ಮಾಡಲು ಯೋಜಿಸಿದ ವಿವಿಧ ಚಟುವಟಿಕೆಗಳ ಬಗೆಗೆ ಸಾರ್ವಜನಿಕರಿಗೆ ವಿವರಿಸಲಾಯಿತು.
‘ನಮ್ಮ ಊರು – ನಮ್ಮ ಹೆಮ್ಮೆ’ ಯೋಜನೆಯಡಿಯಲ್ಲಿ ಮುಂದಿನ 6 ತಿಂಗಳುಗಳ ಕಾಲ ನಗರ ಪಾಲಿಕೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಮಂಗಳಾದೇವಿ, ಹೊಯ್ಗೆ ಬಜಾರ್ ಹಾಗೂ ಬೋಳಾರ ವಾರ್ಡ್ ಗಳ ಸುಮಾರು 7000 ಮನೆಗಳನ್ನು ಸಂದರ್ಶಿಸಿ, ಜನರಲ್ಲಿ ಜಾಗೃತಿ ಮೂಡಿಸಿ ಈ ಮೂರು ವಾರ್ಡ್ ಗಳನ್ನು ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿ ಮಾದರಿ ವಾರ್ಡ್ ಗಳನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನದ್ದಾಗಿರುತ್ತದೆ. ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ರವರು ಮಾತನಾಡಿ, ʼಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನ ವಿಶೇಷ ಯೋಜನೆಗೆ ಈ ಭಾಗದ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸುವಂತೆ ಹಾಗೂ ನಗರದ ಬೇರೆ ಬೇರೆ ಭಾಗಗಳಲ್ಲಿನ ಸಂಘ ಸಂಸ್ಥೆಗಳೂ ಸಹ ತಮ್ಮ ಇತರೆ ಸಾಮಾಜಿಕ ಕಾರ್ಯಗಳ ಜೊತೆ ನಗರದ ಜ್ವಲಂತ ಸಮಸ್ಯೆಗಳನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ಮಾಡುವಂತೆ ಕರೆ ನೀಡಿದರು.
ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ರವರಿಗೆ ಸ್ವಚ್ಛತಾ ಜಾಗೃತಿ ಅಭಿಯಾನದ ಪ್ರಾಯೋಗಿಕ ವರದಿಯನ್ನು ಹಸ್ತಾಂತರಿಸಲಾಯಿತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ.ವೇದವ್ಯಾಸ್ ಕಾಮತ್ ರವರು ʼಸೇವಾ ಟ್ರಸ್ಟ್ ನ ಮಾದರಿ ವಾರ್ಡ್ ಯೋಜನೆಗೆ ನಗರ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರುಗಳಾದ ಶ್ರೀ ಪ್ರೇಮಾನಂದ ಶೆಟ್ಟಿ, ಶ್ರೀಮತಿ ರೇವತಿ ಶ್ಯಾಮ್ ಸುಂದರ್, ಶ್ರೀಮತಿ ಭಾನುಮತಿ, ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಸೀತಾರಾಮ್ ಎ ಮೊದಲಾದವರು ಉಪಸ್ಥಿತರಿದ್ದರು.