ಬ್ರಹ್ಮಾವರ ಜ. 16: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ವಿಜ್ಞಾನ ಮಾದರಿ, ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿತ್ತು. ಕಟಪಾಡಿಯ ಎಸ್.ವಿ.ಕೆ. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತಾ ಪ್ರಶಾಂತ್ ಶೆಟ್ಟಿ ‘ಸೈನ್ಕ್ವೆಸ್ಟ್’ ಉದ್ಘಾಟಿಸಿ ಮಾತನಾಡಿ ವಿಜ್ಞಾನವು ವಾಸ್ತವದಲ್ಲಿ ನಡೆಯುವ ಒಂದು ಮ್ಯಾಜಿಕ್. ಇದು ಮಾನವರಿಗೆ ದೊರೆತ ಒಂದು ವರವಾಗಿದ್ದು ಎಂದಿಗೂ ಇದನ್ನು ಕಳೆದುಕೊಳ್ಳಬಾರದೆಂದು ಹೇಳಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಯನ್ನು ಪ್ರಶಂಸಿದರು.
ಹಿರಿಯಡ್ಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಲಾ ಶಿಕ್ಷಕರಾದ ಮೋಹನ್ ಕಡಬ ‘ಜಿ ಎಮ್ ಸ್ಟ್ರೋಕ್ಸ್’ ಚಿತ್ರ ಸಂತೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ ಮಕ್ಕಳು ತಮ್ಮ ಭಾವನೆಗಳನ್ನು, ರೇಖೆ ಮತ್ತು ಬಣ್ಣದ
ಮೂಲಕ ಪ್ರದರ್ಶಿಸಲು ಚಿತ್ರಕಲೆಯು ಒಂದು ಉತ್ತಮ ಮಾಧ್ಯಮವೆಂದರು. ಕ್ಯಾನ್ವಸ್ ಮೇಲೆ ಅಕ್ಷರವನ್ನು ಬರೆದು ಅದಕ್ಕೆ ಮರದ ರೂಪವನ್ನು ಕೊಟ್ಟು ಸುಂದರವಾದ ಚಿತ್ರವನ್ನು ಬಿಡಿಸುವ ಮೂಲಕ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಕ್ಕಳ ಮನಸ್ಸಿನ ವೈಜ್ಞಾನಿಕ ದೃಷ್ಟಿಕೋನ ಅವರ ಅವಿಷ್ಕಾರದ ಮನೋಭಾವವನ್ನು ಉದ್ದೀಪನಗೊಳಿಸಲು ಜಿ ಎಮ್ ಸಂಸ್ಥೆ ಪ್ರತಿವರ್ಷ ಇಂತಹ ವಸ್ತು ಪ್ರದರ್ಶನಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ಶಾಲೆಯ ಪ್ರತಿಯೊಂದು ಮಗು ತನ್ನ ಪ್ರತಿಭೆ, ಕೌಶಲ್ಯಗಳನ್ನು ಅಭಿವ್ಯಕ್ತಿಗೊಳಿಸಲು ಹಲವಾರು ಅವಕಾಶಗಳನ್ನು, ವೇದಿಕೆಗಳನ್ನು ಒದಗಿಸಿಕೊಡಲಾಗುತ್ತಿದೆ.
ಮಕ್ಕಳೆಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಚಿತ್ರದ ಮೂಲಕ ಅಭಿಪ್ರಾಯಗಳನ್ನು ತಿಳಿಸುವ
ಕಲಾಕಾರರು ನಮಗೆ ನಿಜವಾದ ಸ್ಫೂರ್ತಿ ಎಂದರು. ಕಾರ್ಯಕ್ರಮದಲ್ಲಿ ಜಿ ಎಮ್ ಗ್ಲೋಬಲ್ ಸ್ಕೂಲ್ನ
ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ನಾಗರಾಜ ಸೋಮಯಾಜಿ, ಪೋಷಕರು, ಶಿಕ್ಷಕರು, ವಿಜ್ಞಾನ ಹಾಗೂ ಆರ್ಟ್ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಕಲಾ ಕುಂಚದಲ್ಲಿ ಅರಳಿದ
ಚಿತ್ರಕಲೆಗಳು ಅತ್ಯಾಧುನಿಕ ವಿಜ್ಞಾನ ಮಾದರಿಗಳನ್ನು ಜ. 16 ಮತ್ತು 17 ರಂದು ಪೆÇೀಷಕರಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.