ವಿಮರ್ಶೆಯು ಸಾಹಿತ್ಯದ ಸಹೃದಯತೆ, ಸಂವೇದನೆಯನ್ನು ವಿಸ್ತರಿಸುವ ಸಕಾರಾತ್ಮಕ ವಿಶ್ಲೇಷಣೆಯಾಗಿರಬೇಕು. ಪೂರ್ವಾಗ್ರಹ ಮನಃಸ್ಥಿತಿ ಇಟ್ಟುಕೊಂಡು ವಿಮರ್ಶೆ ಮಾಡಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. ಲೇಖಕಿ, ಸಂಶೋಧಕಿ ಇಂದಿರಾ ಹೆಗ್ಡೆ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಎಚ್. ಎಸ್. ಪಾರ್ವತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿಮರ್ಶೆ ಶ್ರೇಷ್ಠತೆಯ ಸೊಕ್ಕು ಆಗಬಾರದು ಶೋಧವಾಗಬೇಕು. ವಿಮರ್ಶೆಯ ವಿವೇಕ ಇರಬೇಕು. ಈ ಶ್ರೇಷ್ಠತೆಯ ಸೊಕ್ಕಿಗೂ ವರ್ಣಾಶ್ರಮ ಪದ್ಧತಿಗೂ ಇರುವ ಸಂಬಂಧವೇನು ಎಂಬುದರ ಶೋಧವೂ ಆಗಬೇಕು ಎಂದು ವಿಶ್ಲೇಷಿಸಿದರು. ಎಚ್. ಎಸ್. ಪಾರ್ವತಿ ಅವರು ಅನುವಾದಕರು, ಕಾದಂಬರಿಕಾರ್ತಿ. ಅವರನ್ನು ಜನಪ್ರಿಯ ಸಾಹಿತಿ ಎಂದು ಸಾಹಿತ್ಯ ಲೋಕ ಗುರುತಿಸಿದೆ. ಜನಪ್ರಿಯ ಸಾಹಿತಿಗಳು ನಿರ್ಲಕ್ಷ್ಯಕ್ಕೆ ಒಳಗಾದವರು. ನಿರ್ಲಕ್ಷ್ಯ ಮಾಡುವ ಬದಲು ಕನ್ನಡ ಕಟ್ಟುವ ಪ್ರಕ್ರಿಯೆಯಲ್ಲಿ ಅವರ ಕೊಡುಗೆಯನ್ನು ಗುರುತಿಸಬೇಕು ಎಂದು ತಿಳಿಸಿದರು.
ಇಂದಿರಾ ಹೆಗ್ಡೆ ಅವರು ಲೇಖಕಿಯಾಗಿ, ಸಂಶೋಧಕಿಯಾಗಿ ಸ್ಥಳೀಯ ಸಂಸ್ಕೃತಿಗೆ ಮಹತ್ವ ತಂದುಕೊಟ್ಟವರು. ಸ್ಥಳೀಯತೆ ಇಲ್ಲದೇ ರಾಷ್ಟ್ರೀಯತೆಯೂ ಇಲ್ಲ, ಅಂತಾರಾಷ್ಟ್ರೀಯತೆಯೂ ಇಲ್ಲ ಎಂದು ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್. ಎಲ್. ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ವಸುಂಧರಾ ಭೂಪತಿ ಅಭಿನಂದನಾ ನುಡಿಗಳನ್ನಾಡಿದರು. ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್. ವಿದ್ಯಾ, ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಇದ್ದರು.