ಅಹಂಕಾರ ಎಂದರೆ ಜೀವದ ಸ್ವಕೃತ ಧರ್ಮ ಎನ್ನಬಹುದು. ಸ್ವಕೃತ ಎಂಬ ಶಬ್ದವನ್ನು “ಸ್ವ’ದ ಅರಿವಿನಿಂದ ಅಂದರೆ ತನ್ನತನದ ಅರಿವಿನಿಂದ ಜೀವವು ಸ್ವೀಕರಿಸಿದ ಕೃತಿಸ್ವರೂಪ ಕರ್ಮ ಎಂಬ ಅರ್ಥದಲ್ಲಿ ಬಳಸಬಹುದು. “ನನ್ನೊಳಗಿರುವ ನಾನು ಹೋದರೆ ಹೋದೇನು” ಎಂದು ಹೇಳಿದ ಕನಕದಾಸರ ಮಾತಿನಿಂದ ಮನುಷ್ಯನಲ್ಲಿನ ನನ್ನತನದ, ಅಂದರೆ ಅಹಂಭಾವದ ವ್ಯರ್ಥತೆಯು ತಿಳಿಯುತ್ತದೆ. ಅಹಂಭಾವವು ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ಸುಖದಲ್ಲಿನ ಒಂದು ದೊಡ್ಡ ಅಡಚಣೆಯಾಗಿದೆ. ಅಹಂ ಭಾವದ ಬೀಜವು ಮನುಷ್ಯ ಜನ್ಮದಲ್ಲಿಯೇ ಇರುವುದರಿಂದ ಇದಕ್ಕೆ ಹಿರಿಯ-ಕಿರಿಯ, ಬಡವ-ಬಲ್ಲಿದ, ಅಶಿಕ್ಷಿತ-ಸುಶಿಕ್ಷಿತ ಎಂಬ ಯಾವುದೇ ಭೇದ ಇಲ್ಲ. ಎಲ್ಲರಲ್ಲಿಯೂ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಅಹಂಕಾರ ಭಾವವು ಇದ್ದೇ ಇರುತ್ತದೆ.
ಅಹಂಭಾವವು ಹೊಲದಲ್ಲಿ ಬೆಳೆಯುವ ಹುಲ್ಲಿನಂತೆ ಇರುತ್ತದೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಹಿತವಾಗಿ ನಾಶ ಮಾಡುವುದಿಲ್ಲವೋ ಅಲ್ಲಿ ಯವರೆಗೆ ಆ ಹೊಲದಲ್ಲಿ ಉತ್ತಮ ಫಸಲು ಬರುವುದಿಲ್ಲ. ಆ ಹುಲ್ಲನ್ನು ಮನುಷ್ಯ ಪ್ರತೀ ದಿನವೂ ಸತತವಾಗಿ ನಾಶ ಮಾಡುತ್ತಲೇ ಇರಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಲ್ಲಿ ಆ ಹುಲ್ಲು ಇಡೀ ಹೊಲವನ್ನು ಆವರಿಸಿ ನಿಷ್ಪಲವನ್ನಾಗಿಸುತ್ತದೆ. ಅದರಂತೆಯೇ ನಮ್ಮಲ್ಲಿರುವ ಅಹಂಭಾವವು ಸಂಪೂರ್ಣ ನಾಶವಾಗದ ಹೊರತು ನಾವು ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಸಾಧನೆಯ ಹಾದಿಯಲ್ಲಿ ಅಹಂಕಾರ ಎನ್ನುವುದು ಕಲ್ಲುಮುಳ್ಳುಗಳಿದ್ದಂತೆ. ಅಹಂಕಾರದ ಮುಳ್ಳನ್ನು ಹಾದಿಯಿಂದ ದೂರವಾಗಿಸಿ ಗುರಿಯತ್ತ ಹೆಜ್ಜೆ ಹಾಕಿದಲ್ಲಿ ಸಾಧನೆ ಸಾಧ್ಯ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಾಧನೆಯ ಶಿಖರ ಏರಲು ನಮ್ಮಲ್ಲಿನ ಅಹಂಕಾರದ ದಮನವೇ ಮೊದಲ ಮೆಟ್ಟಿಲು.
ಸಾಧನೆಯ ಉದ್ದೇಶವೇ ಅಹಂ ಭಾವವನ್ನು ನಾಶ ಮಾಡುವುದು ಆಗಿದೆ. ಆದರೂ ಮನುಷ್ಯನಲ್ಲಿ ಅಹಂ ಭಾವವು ಎಷ್ಟು ಬೇರೂರಿರುತ್ತದೆ ಎಂದರೆ ಸಾಧನೆಯ ಪಥದಲ್ಲಿರುವಾಗಲೂ ಅದನ್ನು ಸಂಪೂರ್ಣ ನಾಶಮಾಡಲು ಸಹಜವಾಗಿ ಸಾಧ್ಯ ಆಗುವುದಿಲ್ಲ. ಆದು ದರಿಂದ ಸಾಧನೆಯಿಂದ ಅಹಂಭಾವವು ತಾನಾಗಿಯೇ ಕಡಿಮೆ ಆಗುವುದು ಎಂದು ವಿಚಾರವನ್ನು ಮಾಡದೇ ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಲು ಸತತವಾಗಿ ಪ್ರಯತ್ನವನ್ನು ಮಾಡಬೇಕು. ಹಾಗಾದರೆ ಮನುಷ್ಯ ಅಹಂಕಾರದಿಂದ ಪೂರ್ಣ ಮುಕ್ತನಾಗಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮನ್ನು ಕಾಡದೇ ಇರದು. ಇದು ಸಹಜ ಕೂಡ. ಅಹಂಕಾರ ಇದ್ದರೆ ತಾನೆ ವ್ಯಕ್ತಿಯೋರ್ವನಲ್ಲಿ ಛಲ ಮೂಡಲು ಸಾಧ್ಯ. ಹಾಗೆಂದು ಅಹಂಕಾರವೇ ಆತನನ್ನು ಆವರಿಸಿಕೊಂಡರೆ ಅದು ಆತನನ್ನು ವಿನಾಶದತ್ತ ಕೊಂಡೊಯ್ಯುತ್ತದೆ. ಅಹಂಕಾರ ಎನ್ನುವುದು ಒಂದು ಮಿತಿಯಲ್ಲಿರಬೇಕೇ ಹೊರತು ಅದು ಅತಿರೇಕಕ್ಕೆ ತಲುಪಬಾರದು. ಅಹಂಕಾರ ಎಂದಿಗೂ ದುರಹಂಕಾರವಾಗಬಾರದು. ಯಾವಾಗ ನಮ್ಮಲ್ಲಿ ಅಹಂಕಾರ ಮೊಳಕೆ ಯೊಡೆಯಲಾರಂಭಿಸಿತೋ ಅದನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಅದು ನಮ್ಮ ಹಿಡಿತವನ್ನು ತಪ್ಪಿ ನಮ್ಮನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಅಹಂಕಾರದಿಂದ ದೂರವುಳಿಯುವುದೇ ಒಳಿತು ಎಂದು ಸಾಧಕರು ಮತ್ತು ಪ್ರಾಜ್ಞರು ಕಿವಿಮಾತು ಹೇಳಿರುವುದು.
ನಾನು, ನನ್ನದು, ನನಗೆ ಇಂತಹ ಅಭಿಮಾನವನ್ನು ಇಟ್ಟುಕೊಳ್ಳುವುದು ಎಂದರೆ ಅಹಂಕಾರ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಪತ್ನಿ, ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣ ಆಗುತ್ತವೆ. ಈರುಳ್ಳಿಯ ಸಿಪ್ಪೆಯನ್ನು ಸುಲಿದರೆ ಕೇವಲ ಸಿಪ್ಪೆಯೇ ಸಿಗುತ್ತದೆಯೇ ಹೊರತು, ಯಾವ ಸಾರವೂ ಕೈಗೆ ಸಿಗುವುದಿಲ್ಲ, ಹಾಗೆಯೇ ವಿಚಾರ ಮಾಡಿದಾಗ ನಮ್ಮೊಳಗಿನಿಂದ ನಾನು ಎನ್ನುವ ವಸ್ತುವೇ (ಅಹಂ) ಸಿಗಲಾರದು. ಕೊನೆಗೆ ಏನು ಉಳಿಯುತ್ತದೆಯೋ ಅದೇ ವ್ಯಕ್ತಿಯ ಸಾಧನೆ. ಸಾಧನೆಯ ಗುರಿ ತಲುಪಿದಾಗ ಆ ವ್ಯಕ್ತಿಗೆ ಲಭಿಸುವ ಅನುಭವ, ಆತನ ಸಂಭ್ರಮಕ್ಕೆ ಎಣೆ ಇರಲಾರದು. ನಾವು ಯಾವ ಅಹಂಕಾರವನ್ನು ಮೆಟ್ಟಿನಿಂತು ಈ ಸಾಧನೆ ಮಾಡಿದ್ದೇವೆಯೋ ಅದುವೇ ನಮ್ಮಲ್ಲಿ ಮತ್ತೆ ಅಹಂಕಾರದ ಬೀಜ ಮೊಳಕೆಯೊಡೆಯುವಂತೆ ಮಾಡಿದಲ್ಲಿ ಆ ಸಾಧನೆಯೂ ನಿಷ್ಪ್ರಯೋಜಕವಾಗುತ್ತದೆ.