One of Great Doctor ಜಗವೇ ಝಣ ಝಣ ಕಾಂಚಾಣದ ಬೆನ್ನತ್ತಿ ಹಣವೇ ಬದುಕೆನ್ನುವ ರೀತಿಯಲ್ಲಿ ದುಡ್ಡಿನ ಹಿಂದೋಡುವ ಕಾಲಮಾನದಲ್ಲಿ, ಸೇವೆಯ ಉದ್ದೇಶವೇ ಹೆಸರು ಮಾಡುವುದೆಂಬ ತಪ್ಪು ಕಲ್ಪನೆಯೇ ವಾಸ್ತವಕ್ಕೆ ಪೈಪೋಟಿ ನೀಡುವ ಈ ಹೊತ್ತಿನಲ್ಲಿ, ನಮ್ಮ ನಡುವೆ ಯಾವುದೇ ಹಣದ ಫಲಾಪೇಕ್ಷೆಯಿಲ್ಲದೆ “ವೈದ್ಯೋ ನಾರಾಯಣೋ ಹರಿಃ” ಎನ್ನುವ ಉಕ್ತಿಗೆ ಪುನರ್ಜೀವ ತುಂಬುವಂತೆ ನಿಜವಾದ ಅರ್ಥದಲ್ಲಿ ಜನ ಸೇವೆಗೈಯ್ಯುತ್ತಿರುವ ಆ ವ್ಯಕ್ತಿಯೇ ಡಾ.ಸನ್ಮಾನ್ ಶೆಟ್ಟಿ ಅವರು.
ಮೂಲತಃ ನೈಲಾಡಿ ಗ್ರಾಮದವರಾದ ಇವರು 24.04.1974ರಲ್ಲಿ ಎನ್. ಸರಸ್ವತಿ ಶೆಟ್ಟಿ ನೈಲಾಡಿ ಹಾಗೂ ಹೆಚ್. ಶ್ರೀಧರ್ ಶೆಟ್ಟಿ ಹೊಸ್ಮಠ ಇವರ ಜ್ಯೇಷ್ಠ ಪುತ್ರರಾಗಿ ಜನಿಸಿದರು. ಎಮ್.ಬಿ.ಬಿ.ಎಸ್ ಪೂರ್ಣಗೊಳಿಸಿದ ನಂತರ ಇವರು 2000 ನೇ ಇಸವಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮುಲ್ಕಿಯಲ್ಲಿ ವೈದ್ಯಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸರಳ ವ್ಯಕ್ತಿತ್ವ, ಸಹಾನುಭೂತಿ ತುಂಬಿದ ಇವರ ಮಾತುಗಳು ಇವರ ಬಳಿ ಬರುವ ರೋಗಿಗಳ ಆತ್ಮಶಕ್ತಿಯನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ತಮ್ಮ ಪ್ರೀತಿಭರಿತ ಸೇವೆಯಿಂದ ಮುಲ್ಕಿಯಲ್ಲಿ ಮನೆಮಾತಾದ ಈ ಮಹನೀಯರ ಸೇವೆ 2007 ರ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಭಾಷಿಯಲ್ಲಿ 5 ವರ್ಷ, ಹಳ್ಳಿಹೊಳೆಯಲ್ಲಿ 4 ವರ್ಷ ಮುಂದುವರೆಯಿತು. ತದನಂತರ 2015 ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆಯಲ್ಲಿ ಸೇವೆಗಾಗಿ ನಿಯೋಜನೆಗೊಂಡ ಇವರು ಸರಕಾರಿ ಆಸ್ಪತ್ರೆಯನ್ನು ತಮ್ಮ ಅತ್ಯುತ್ತಮ ಸೇವೆಯ ಮೂಲಕ ಖಾಸಗಿ ಆಸ್ಪತ್ರೆಗಿಂತಲೂ ಹೆಚ್ಚು ಜನ ಮನ್ನಣೆಗಳಿಸುವಂತೆ ಮಾಡಿದರು.
ಈಗಲೂ ಮುಲ್ಕಿ, ಹಳ್ಳಿಹೊಳೆ, ಕುಂಭಾಶಿಯ ಭಾಗದ ರೋಗಿಗಳು ಇವರನ್ನೇ ಅರಸಿ ಬರುವುದು ಇವರ ಜನಪ್ರಿಯತೆ ಮತ್ತು ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿ. ಅತ್ಯಂತ ತಾಳ್ಮೆ, ಶಿಸ್ತು, ಕರುಣೆ, ಹೃದಯ ಮುಟ್ಟುವ ಮಾತು, ಕಾರ್ಯವೈಖರಿ ಇವರ ವಿಶೇಷತೆ. ಹತ್ತಕ್ಕೆ ಹದಿನೈದು ಕೇಳುವ ಧನದಾಹದ ಮನಸ್ಸುಗಳ ನಡುವೆ ಔಷಧವನ್ನೂ ನೀಡಿ ಧೈರ್ಯವನ್ನೂ ತುಂಬಿ ಕಷ್ಟ ಎಂದವರಿಗೆ ಕೈಲಾದದ್ದು ನೀಡಿ ಏನೂ ಗೊತ್ತೆ ಇಲ್ಲದ ಮಗುವಿನಂತೆ ತಾನೇನೂ ಮಾಡಿಯೇ ಇಲ್ಲವೆಂಬಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಗುರುತಿಸಿಕೊಳ್ಳುವ ಇವರ ಮನೋಭಾವಕ್ಕೆ ಮೌನದ ಹೊರತು ಬೇರೆ ಮಾತಿಲ್ಲ.
ಕ್ಷಮಿಸಿ ..! ಇವರ ಕುರಿತು ಹೇಳ ಹೊರಟ ನನಗೆ ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಕುರಿತು ಬರೆದು ಪುಟ ತುಂಬಿಸಲು ಅವಕಾಶವೇ ಇಲ್ಲ!ಏಕೆಂದರೆ ಅರ್ಜಿ ಹಾಕಿ ಸನ್ಮಾನ, ಪ್ರಶಸ್ತಿ, ಪುರಸ್ಕಾರ ಪಡೆಯುವ, ಹೆಸರು ಮಾಡುವುದೇ ಸೇವೆಯ ಉದ್ದೇಶವೆಂಬಂತೆ ನಡೆದುಕೊಳ್ಳುವ ರೀತಿಗೆ ಅಪವಾದವೆಂಬಂತೆ ಅರಸಿ ಬಂದ ಸನ್ಮಾನಗಳನ್ನು ಅಕ್ಕರೆಯಿಂದಲೇ ತಿರಸ್ಕರಿಸಿ ಸೇವೆ ಮಾಡುವುದು ಆತ್ಮತೃಪ್ತಿಗೆ ಅದು ಹೆಚ್ಚುಗಾರಿಕೆಯಲ್ಲ ತನ್ನ ಕರ್ತವ್ಯವಷ್ಟೇ..! ಎನ್ನುವ ಇವರ ನಿಲುವಿಗೆ ತಲೆಬಾಗಲೇಬೇಕು. ಕಳೆದೆರಡು ವರ್ಷಗಳ ಹಿಂದಷ್ಟೇ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ಇವರು ಕೊಲ್ಲೂರಿನ ಲಲಿತಾಂಬಾ ವಸತಿಗೃಹದಲ್ಲಿ 217 ಮಂದಿ ಕೋವಿಡ್-19 ಸೋಂಕಿತರ ಶುಶ್ರೂಷೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸನ್ಮಾನಕ್ಕಾಗಿ ಆಹ್ವಾನ ಬಂದಾಗ ಸ್ವತಃ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಇದೆಲ್ಲ ಬೇಡವೆಂದು ಕೇಳಿಕೊಂಡ ಈ ವ್ಯಕ್ತಿತ್ವದ ಕುರಿತು ಹೆಚ್ಚೇನು ಹೇಳಲು ಸಾಧ್ಯ..! ಆದರೂ ಒತ್ತಾಯಪೂರ್ವಕವಾಗಿಯೇ ಇವರಿಗೆ ಸಂದ ಸನ್ಮಾನ ಇವರಂತಹ ಅದೆಷ್ಟೋ ನಿಸ್ವಾರ್ಥ ಮನಸ್ದುಗಳಿಗೆ ಸಂದ ಗೌರವವೆಂದೇ ಹೇಳಬಹುದು. ಇವರ ಸೇವೆ ಇನ್ನಷ್ಟು ಮನಸ್ಸುಗಳಿಗೆ ಸ್ಪೂರ್ತಿಯಾಗಲಿ. ಹಣದ ಹಪಾಹಪಿಕೆಯಿಲ್ಲದೆ ಹೆಸರಿಗಾಗಿ ಹೆಣಗಾಟವಿಲ್ಲದೆ ಮಾನವೀಯತೆಗೆ, ಸೇವೆಗೆ ಮಿಗಿಲಿಲ್ಲ. ಆತ್ಮತೃಪ್ತಿಗೆ ಮಿಗಿಲಾದ ಸಂಪತ್ತಿಲ್ಲ ಎಂದು ದುಡಿಯುವ ಇವರ ಶಕ್ತಿ ಕುಂದದಿರಲಿ ಎನ್ನುವುದಷ್ಟೇ ನಮ್ಮ ಆಶಯ.