ಕಣ್ಣು ಹಾಯಿಸಿದಷ್ಟು ದೂರಕ್ಕೂ ಆವೃತಗೊಂಡ ದಟ್ಟ ಹಸಿರು, ಬೆಟ್ಟಗುಡ್ಡ ಅಪರೂಪದ ಮರಗಳು ಹೇರಳವಾಗಿ ಬೆಳೆದು ನಿಂತು ತಂಪನ್ನೆರೆವ ಕಾಡು, ಪಕ್ಷಿಗಳ ಇಂಚರ, ಸರೀಸೃಪಗಳ ಸರಪರ ಸದ್ದು, ವಿಶಿಷ್ಟವಾದ ಪಕ್ಷಿಗಳು ಕಾಣಸಿಗುವ ಸಸ್ಯಸಂಪತ್ತು ಹಾಗೂ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಬಹುದಾದ ಅರಣ್ಯ ಸುತ್ತಾಡಿ ಪ್ರಾಣಿ, ಪಕ್ಷಿ, ಅರಣ್ಯ ಸಂಪತ್ತನ್ನು ನೋಡಲು ಯಾರ ಮನಬಯಸುವುದಿಲ್ಲ. ಆದರೆ ಕೆಲ ದಿನಗಳ ಹಿಂದೆ ಹಾಸನ ಜಿಲ್ಲೆಯ ಸಕಲೇಶ್ವರಪುರ ತಾಲೂಕಿನಲ್ಲಿ ಪಶ್ಚಿಮ ಘಟ್ಟ ರಕ್ಷಿತಾರಣ್ಯದಲ್ಲಿ ಸಂಭವಿಸಿದ ಅಗ್ನಿ ದುರಂತ, ಕಾಡ್ಗಿಚ್ಚು ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ ಮೃತ ಪಟ್ಟು ಕೆಲವರು ಗಾಯಗೊಂಡಿರುವ ಸುದ್ದಿ ನಿಜಕ್ಕೂ ಆಘಾತಕಾರಿ.
ಸಮೃದ್ದ ಅರಣ್ಯ ಸಂಪತ್ತಿನ ಕಾರಣ ತಂಪಾದ ವಾತಾವರಣ ಹೊಂದಿದ ದಟ್ಟಾರಣ್ಯ ಕಾಡ್ಗಿಚ್ಚಿಗೆ ಆಹುತಿಯಾಗಿ ಬೆಂಕಿಯ ಕೆನ್ನಾಲಿಗೆ
ಹೊತ್ತಿ ಉರಿದು ಅಪಾರ ಸಂಖ್ಯೆಯಲ್ಲಿ ಪ್ರಾಣಿ ಪಕ್ಷಿಗಳ ಜೀವಹಾನಿಗೆ ಕಾರಣವಾಗಿರುವುದು ದಾಖಲಾಗಿದೆ. ಕಾಡ್ಗಿಚ್ಚು ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿ ಹಚ್ಚಿದ್ದು ಎಂಬ ಆರೋಪ ಪಡೆದಿದ್ದು ಮಾನವ ನಿರ್ಮಿತ ಕಾಡ್ಗಿಚ್ಚು ಅಕ್ಷಮ್ಯ ಅಪರಾಧ. ಅರಣ್ಯಕ್ಕೆ ಬೆಂಕಿ ಬೀಳುವ ಅಥವಾ ಬೆಂಕಿ ಹಾಕುವ ಪ್ರಕರಣಗಳನ್ನು ತಡೆಯಲು ಸರ್ಕಾರ ಅತ್ಯಂತ ತುರ್ತುಕ್ರಮ ಕೈಗೊಳ್ಳಬೇಕಾಗಿದೆ. ಅರಣ್ಯದ ಮಾರಣಹೋಮದಿಂದ ಭವಿಷ್ಯದಲ್ಲಿ ಒದಗಬಹುದಾದ ವಿಪತ್ತುಗಳ ಬಗ್ಗೆ ಈಗಿಂದಲೇ ಎಚ್ಚರ ವಹಿಸಬೇಕಾಗಿದೆ.
ಧನ ದಾಹಕ್ಕೆ ಸುಟ್ಟು ಬೂದಿಯಾಯಿತೇ ಅರಣ್ಯ. ಹಾವಿಗೆ ಹಲ್ಲಲ್ಲಿ, ಚೇಳಿಗೆ ಬಾಲದಲ್ಲಿ ವಿಷವಿದ್ದಂತೆ, ಮನುಷ್ಯನ ಮೈಯೆಲ್ಲಾ ವಿಷ ತುಂಬಿಕೊಂಡಿರುತ್ತದೆ ಎನ್ನುವ ಮಾತು ನಿಜವೆನ್ನಿಸುತ್ತದೆ.
ಕಾಡಿಗೆ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮಾನವ ತನ್ನ ದುರಾಸೆಗಾಗಿ ಪ್ರಕೃತಿಯನ್ನು ನಾಶ ಪಡಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳಂತ ಪೆಟ್ಟನ್ನು ಎದುರಿಸಲು ಯಾವುದೇ ವಿಜ್ಞಾನ ತಂತ್ರಜ್ಞಾನದಿಂದ ಸಾಧ್ಯವಿಲ್ಲ. ಬೆಂಕಿ ಆಕಸ್ಮಿಕವಾಗಿರಲಿ, ದುಷ್ಕರ್ಮಿಗಳ ಕೈವಾಡವಿರಲಿ ಆದ ನಷ್ಟ ತುಂಬಿಸಲಾರದು. ಈಗಾಗಲೇ ಕಾಡುಗಳು ವಿನಾಶದ ಅಂಚಿನಲ್ಲಿದೆ. ಅರಣ್ಯ ನಾಶಕ್ಕೆ ಕಡಿವಾಣ ಅನಿವಾರ್ಯ. ವನದಹನ ಮನುಕುಲಕ್ಕೆ ಅಪಾಯ. ವಿಜ್ಞಾನ ಎಷ್ಟೇ ಮುಂದುವರಿದರು ಕೂಡ ಅದ್ಭುತ ಸೃಷ್ಟಿಯ ಈ ಪ್ರಕೃತಿಯನ್ನು ಬಿಟ್ಟು ಮಾನವ ಬದುಕಲಾರ. ಅರಣ್ಯ ಸಂಪತ್ತು ಜೀವ ವೈವಿಧ್ಯ ರಕ್ಷಣೆಯ ಬಗ್ಗೆ ಚರ್ಚೆಗಳು ನಡೆಯಲೇಬೇಕು. ಅರಣ್ಯ ರಕ್ಷಣೆಗಾಗಿ ಅನೇಕ ಕಾನೂನು ಇದೆ. ಆದರೂ ದಿನೇ ದಿನೇ ಕಾಡು ನಾಶವಾಗುತ್ತಿದೆ. ಪ್ರತಿವರ್ಷ ಒಂದಲ್ಲ ಒಂದು ಕಡೆ ಅರಣ್ಯಕ್ಕೆ ಬೆಂಕಿ ಎಂಬ ಅವಘಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ, ಇದು ಅಪಾಯದ ಕರೆಘಂಟೆ. ಕಾಡ್ಗಿಚ್ಚಿನ ತೀವ್ರತೆ ಹೆಚ್ಚಿದರೆ ಹುಲ್ಲಿನ ಬೇರು ನಾಶವಾಗಿ ಮಳೆ ಬಂದ ನಂತರವೂ ಹುಲ್ಲು ಬೆಳೆಯಲಾರದು. ಮಳೆ ನೀರಿನಿಂದ ಭೂ ಕುಸಿತವಾಗಿ ನದಿ ನೀರು ಹಾಗೂ ಜಲಮೂಲಕ್ಕೂ ಅಪಾಯವಿದೆ. ಅರಣ್ಯ ರಕ್ಷಣೆಯ ಹೊಣೆ ಪ್ರತಿಯೊಬ್ಬ ನಾಗರೀಕನದ್ದು ಆಗಿರಬೇಕು. ಕಾನನ ಬರಿದಾದರೆ ಮಾನವನ ಬದುಕು ಬರೀ ಗೋಳು.
ಜೀವ ವೈವಿಧ್ಯ ಸಂಪತ್ತು ತುಂಬುವ ಅರಣ್ಯಸಂಪತ್ತನ್ನು ವ್ಯವಹಾರಿಕವಾಗಿ ಬಳಸಿದನೊ ಆಗಿನಿಂದಲೇ ಇಂತಹ ಪೃಕೃತಿ ವಿಕೋಪಗಳನ್ನು ಕಾಣುತ್ತಾ ಬಂದಿದೆ. ಭಾರಿ ಪ್ರಮಾಣದಲ್ಲಿ ಅರಣ್ಯನಾಶ ಮಿತಿಮೀರುತ್ತಿರುವ ವಾಣಿಜ್ಯಬೆಳೆ ಮನುಷ್ಯನಲ್ಲಿ ಹೆಮ್ಮರವಾಗಿ ಬೆಳೆದ ದುರಾಶೆ ಎಂತಹ ಹೀನಕೃತ್ಯಕ್ಕೂ ಪ್ರೇರೇಪಿಸುತ್ತದೆ. ಕುಟಿಲ ತಂತ್ರೋಪಾಯಗಳಿಂದ ಸೃಷ್ಟಿಯ ನಿರಪದ್ರುವಿಯಾದ ಅಸಂಖ್ಯಾತ ಪ್ರಾಣಿ ಪಕ್ಷಿಗಳಿರುವಾಗ ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕರೆಸಿಕೊಳ್ಳುವ ಮನುಷ್ಯ ಪರಿಸರ ಜೀವವೈವಿಧ್ಯಗಳ ಸೂಕ್ಷ್ಮತೆಯ ಬಗ್ಗೆ ಚಿಂತಿಸದೆ ಕಾಡಿದ್ದರೆ ನಾಡು ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ ತಾನೆ ಎಂಬ ಭಾವನೆ ಹೊಂದದೆ, ನಿಸರ್ಗದ ಉಳಿವಿಗಾಗಿ ಹೊರಡಬೇಕಾದ ಮಾನವನೆ ನಿಸರ್ಗದ ಅನಾಹುತಕ್ಕೆ ಕಾರಣವಾಗುತ್ತಿರುವುದು ವಿಪರ್ಯಾಸ. ಕಾಡು ಬೆಳೆಯದಿದ್ದರೆ, ಮಾನವ ಕುಲಕ್ಕೂ ಅಪಾಯ. ಪೃಕೃತಿಯನ್ನು ಅರಿತು ಯಾಕೆ ಬೆಳೆಯುತ್ತಿಲ್ಲ ನಾವು. ಹಲವು ಪಾಠ ಕಲಿಸಿದ ಪ್ರಕೃತಿಯೆದುರು ಮೂರ್ಖರಾಗುವುದೇಕೆ?..
ಕಾಡ್ಗಿಚ್ಚು ನಿರಂತರ ಕಾಣುತ್ತಿದ್ದರೂ ಜಾಣಮೌನವನ್ನು ಅರಣ್ಯಾಧಿಕಾರಿಗಳು ಹಾಗೂ ಸರಕಾರ ವಹಿಸಿದೆ. “ಕಿಡಿಗೇಡಿಗಳು ಮಾಡಿದ ಕೆಲಸವಿದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚುವ ಕ್ರಮವನ್ನು ಕೈಗೊಳ್ಳಲಾಗುವುದು” ಎಂದು ನುಣುಚಿಕೊಳ್ಳುವ ಸರಕಾರಿ ಅಧಿಕಾರಿಗಳು. ಕಾಡು ಪ್ರಾಣಿಗಳ ಬೇಟೆ, ಮರಗಳ ಕಳ್ಳತನ, ಮತ್ತಿತರ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯಿಂದ ಬೆದೆರಿಕೆಗೂ ಒಳಗಾದವರು ಕಾಡಿಗೆ ಬೆಂಕಿ ಇಡುವ ಪ್ರಕರಣಗಳನ್ನು ಅಲ್ಲಗಳೆಯುವಂತಿಲ್ಲ. ಇದೆಲ್ಲದರ ಹಿನ್ನೆಲೆಯಲ್ಲಿ ನೈಸರ್ಗಿಕ ಅನಾಹುತಕ್ಕಿಂತ ಹೆಚ್ಚು ಮನುಷ್ಯಕೃತ್ಯಗಳಿಂದ ಬೆಂಕಿ ಅನಾಹುತ ಸಂಭವಿಸಿದ ಅರಣ್ಯದಲ್ಲಿ ಹಸಿರು ಹೊದಿಕೆ ವರ್ಷಗಳೇ ಬೇಕು. ಕಾಡ್ಗಿಚ್ಚು ಆಹುತಿಯಾದ ಅರಣ್ಯ ಪ್ರದೇಶ ಮತ್ತೆ ಸಹಜ ಸ್ಥಿತಿಗೆ ಬರಲು ಏಳೆಂಟು ವರ್ಷಗಳೇ ಬೇಕು ಬೆಂಕಿಯಿಂದಾಗಿ ಮಣ್ಣಿನ ಆರೋಗ್ಯ ತೀವ್ರಘಾಸಿಯಾಗಿ ಅರಣ್ಯ ಜೈವಿಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ತಜ್ಞರ ಅಭಿಪ್ರಾಯ.
ಮಾನವನ ಹಸ್ತಕ್ಷೇಪ ಕಾಡು ಹಾಗೂ ಕಾಡುಪ್ರಾಣಿಗಳಿಗೆ ಕಂಟಕವೇ ಆಗಿದೆ. ಕಾಡು ಅಳಿದರೆ ನಾಡಿಗೆ ಉಳಿಗಾಲವಿಲ್ಲ ಎಂಬ ಸಾಮಾನ್ಯ ಜ್ಞಾನವು ಮಾನವನಿಗೆ ಯಾಕೆ ಅರ್ಥವಾಗುತ್ತಿಲ್ಲ. ಹಣದ ದಾಹಕ್ಕೆ ಬಲಿಯಾಗದೇ ಪ್ರಾಣಿ ಮತ್ತು ಸಸ್ಯಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ತಾನೆ. ಅರಣ್ಯ ನಾಶವಾದರೆ ಅನೇಕ ಅನಾಹುತಗಳಿಗೆ ಆಹ್ವಾನ ನೀಡಿದಂತೆ. ಕಾಡು, ಪ್ರಾಣಿಗಳಿಗೆ ಆಶ್ರಯ ಕೊಡುತ್ತಾ ಪ್ರಕೃತಿಯ ಸಮತೋಲನದಲ್ಲಿ ಭಾಗಿಯಾಗುತ್ತದೆ. ಕಾಡು ಮಣ್ಣಿನ ರಕ್ಷಣೆ ಹಾಗೂ ಸತ್ವ ಹೆಚ್ಚಿಸಿ ವಾಯು ಶುದ್ಧವಾಗಿ ತಾಪಮಾನ ನಿಯಂತ್ರಣದಲ್ಲಿಡುತ್ತದೆ. ನೀರನ್ನು ಹಿಡಿದಿಡಲು ಗಿಡ ಮರಗಳು ಇಲ್ಲವಾದಾಗ ಜಲಪ್ರಳಯ ಆಗಬಹುದು. ಜಾಗತಿಕ ತಾಪಮಾನ ಇಳಿಸಲು ಅರಣ್ಯ ಬೆಳೆಸುವುದು ಅತಿ ಸುಲಭ ಮಾರ್ಗ. ಅಷ್ಟೇ ಅಲ್ಲದೆ ಕಾಡು ನಾಶ ಅಂತರ್ಜಲದ ಬತ್ತುವಿಕೆಗೆ ಕಾರಣವಾಗುತ್ತದೆ. ಕಾಡು ಉಳಿದರೆ ನಾಡು ಉಳಿದೀತು. ಕಾಡ್ಗಿಚ್ಚು ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ. ಅರಣ್ಯದೊಳಗೆ ಕಾಣಿಸಿಕೊಳ್ಳುವ ಬೆಂಕಿಯ ಹಿಂದೆ ಮಾನವ ಕೈವಾಡವಿದ್ದು ಕಾಡನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ಕಾಡುತ್ತಿದ್ದಾನೆ.
ಮನುಷ್ಯ ಇಂದು ಮನುಷ್ಯನಾಗಿ ಉಳಿದಿಲ್ಲ, ದುರಾಸೆ ಎಂಬ ಸುಳಿಯಲ್ಲಿ ಕೊಚ್ಚಿ ಹೋಗುತ್ತಿದ್ದಾನೆ. ಅರಣ್ಯಕ್ಕೆ ಬೆಂಕಿ ಬೀಳಲು ಕಾರಣಗಳನ್ನು ಹಲವು ಆಯಾಮಗಳಲ್ಲಿ ನೋಡಲಾಗುತ್ತದೆ. ಒಟ್ಟಿನಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಡು ಸುಟ್ಟು ಕರಕಲಾಗುತ್ತಿದೆ. ಮಾನವ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳನ್ನು ಮರೆಮಾಡಲು ಕಾಡಿಗೆ ಬೆಂಕಿ ಹಾಕಿ ಕಾಡ್ಗಿಚ್ಚು ಬಂದಿದೆ ಎಂದು ಹೇಳಲಾಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಕಾಡಿನ ನಡುವೆ ತಲೆಯೆತ್ತಿ ನಿಂತ ರೆಸಾರ್ಟ್ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಾಡು ನಾಶ, ನಗರೀಕರಣಕ್ಕಾಗಿ ಜೀವ ಪ್ರಭೇದಗಳ ವಾಸಸ್ಥಾನ ನಾಶ ಇವೆಲ್ಲವೂ ಜೀವ ವೈವಿಧ್ಯತೆಯ ಸರಪಳಿಗೆ ಪೆಟ್ಟು, ಅರಣ್ಯ ಅತಿಕ್ರಮಣಕಾರರು ಕೂಡ ಅರಣ್ಯದ ಹಿತದೃಷ್ಟಿಯಿಂದ ಅನಾಹುತಕ್ಕೆ ಕಾರಣ. ಕಾಡು ಪ್ರಾಣಿಗಳ ಸತತ ದಾಳಿಯಿಂದ ಕಂಗೆಟ್ಟವರು ಕಾಡಿಗೆ ಬೆಂಕಿ ಇಡುತ್ತಾರೆ ಎಂಬ ಇನ್ನೊಂದು ಆರೋಪವು ಕೇಳಿ ಬರುತ್ತಿದೆ. ಮರಗಳಿಗೆ ಬೆಂಕಿ ಬಿದ್ದರೆ ಅತೀ ಹೆಚ್ಚು ಲಾಭವಾಗುವುದು ಮರಗಳ್ಳರಿಗೆ ಎಂಬುದರಲ್ಲಿ ಅನುಮಾನವಿಲ್ಲ. ಕಾಡ್ಗಿಚ್ಚಿನಲ್ಲಿ ಸತ್ತ ಮರಗಳನ್ನು ಹರಾಜು ಹಾಕುವಾಗ ಅತೀ ಹೆಚ್ಚು ಮರಗಳನ್ನು ಖರೀದಿಸುವವರು ಮರಗಳ್ಳರೆ ಆಗಿರುವುದು ಸತ್ಯ. ಮರಗಳ್ಳರು ಸ್ವಾರ್ಥಕ್ಕಾಗಿ ಬೆಂಕಿ ಹಚ್ಚಿರಬಹುದು ಎಂಬ ಗುಮಾನಿ ಇರುವುದು ನಿಜ.
ಬೆಂಕಿ ಅವಘಡವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅರೆಬರೆ ಸುಟ್ಟು ನಿಂತ ಮರಗಳು, ಪ್ರಾಣಿಗಳು ಬೆಂಕಿ ಪ್ರತಾಪಕ್ಕೆ ಕಾಲ್ಕಿಳುತ್ತವೆ. ಕಾಡಿನ ಸೊಬಗು, ಪ್ರಾಣಿ, ಪಕ್ಷಿಗಳ ಕಲರವ ಮರುಕಳಿಸಲು ಸಾಕಷ್ಟು ಸಮಯ ಬೇಕಾಗಬಹುದು.
ವೈಜ್ಞಾನಿಕ ವರದಿ ಪ್ರಕಾರ ಅರಣ್ಯಕ್ಕೆ ಬೆಂಕಿ ಬಿದ್ದರೆ ಅದು ಕಾಡಿನ 7 ವರ್ಷಗಳ ಬೆಳವಣಿಗೆಯನ್ನು ಸ್ಥಗಿತಗೊಳಿಸುತ್ತದೆ. ಭಾರತದಲ್ಲಿ ಸಮೃದ್ಧ ಅರಣ್ಯ ಪ್ರದೇಶವಿದೆ. ಕಾಡ್ಗಿಚ್ಚಿನ ಅನಾಹುತದಿಂದ ತಪ್ಪಿಸಿಕೊಳ್ಳಲು ಡ್ರೋನ್ ದೊಡ್ಡ ದೊಡ್ಡ ಕಾಡುಗಳಲ್ಲಿ ನಿಗದಿತ ಕಾರ್ಯವೆಸಗಬೇಕು. ಬೆಂಕಿ ಹರಡದಂತೆ ಫೈರ್ ಲೈನ್ಗಳ ನಿರ್ಮಾಣ ಹಾಗೂ ಕಾಡಿನಂಚಿನಲ್ಲಿ ಸಿಸಿ ಕ್ಯಾಮೆರಾಗಳಂತೆ ಆಧುನಿಕ ಸಾಧನಗಳ ಅಳವಡಿಕೆಯಾಗಬೇಕು. ಕಾಡನ್ನು ಕಾಡುತ್ತಿರುವ ಕಾಡ್ಗಿಚ್ಚಿನಿಂದ ಅಭಯಾರಣ್ಯ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಪದೇ ಪದೇ ಮೂಡದಿರಲಿ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ