ಒಂದು ಊರಿನಲ್ಲಿ ನಾಲ್ಕು ಜನ ಸೊಸೆಯಂದಿರು ಇದ್ದರು. ತನ್ನ ನಾಲ್ಕು ಮಕ್ಕಳು ಹೆಂಡತಿಯರ ಗುಲಾಂ ಎಂದು ಅರಿತುಕೊಂಡು ಒಂದು ದಿನ ಅಟ್ಟದ ಮೇಲಿರುವ ಒಂದು ಹಳೆಯ ಪೆಟ್ಟಿಗೆ ತಂದು ತನ್ನೆಲ್ಲಾ ವಸ್ತುಗಳನ್ನು ಪೆಟ್ಟಿಗೆಯೊಳಗೆ ಹಾಕಿ ಭದ್ರವಾಗಿ ಮುಚ್ಚಿ ಅದಕ್ಕೆ ಒಂದು ದೊಡ್ಡ ಬೀಗದ ಕೈ ಹಾಕಿ
ಕೀಲಿ ಕೈ ತನ್ನ ಹತ್ತಿರ ಇಟ್ಟುಕೊಂಡು ಇರುತ್ತಿದ್ದಳು. ರಾತ್ರಿ ಮಲಗುವಾಗ ತನ್ನ ತಲೆಯ ಹತ್ತಿರವೇ ಪೆಟ್ಟಿಗೆ ಇಟ್ಟುಕೊಂಡು ಮಲಗುವುದು. ಇದನ್ನು ಕಂಡು ನಾಲ್ಕು ಜನ ಸೊಸೆಯಂದಿರು ಹೇಗಾದರೂ ಮಾಡಿ ಪೆಟ್ಟಿಗೆ ಒಳಗೆ ಏನಿದೆ ಎಂದು ತಿಳಿದುಕೊಳ್ಳಬೇಕೆಂದು ಹೊಂಚು ಹಾಕುತ್ತಿದ್ದರು. ಅವಳು ಆಕಡೆ ಈಕಡೆ ಹೋದರೆ ಸಾಕು ಪೆಟ್ಟಿಗೆ ಎತ್ತಿ ಎತ್ತಿ ನೋಡುವುದು. ಬಹಳ ಭಾರವಾಗಿತ್ತು. ಇದರಲ್ಲಿ ಏನಿದೆ ಎಂಬ ಕುತೂಹಲ ಬೇರೆ. ಭಾರವಾದ ಪೆಟ್ಟಿಗೆಯೊಳಗೆ ನಮ್ಮ ಅತ್ತೆ ಬಂಗಾರ ಬೆಳ್ಳಿ ಇಟ್ಟಿರಬಹುದೆಂದು ಆಕೆಯನ್ನು
ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಹೀಗಿರಲು ಒಂದು ದಿನ ಅತ್ತೆ ತೀರಿ ಹೋದರು. ಎಲ್ಲರಿಗೂ ಖುಷಿಯಾಯಿತು. ವಿಧಿ ವಿಧಾನಗಳನ್ನು ಮುಗಿಸಿದ ಬಳಿಕ ನಾಲ್ಕು ಜನ ಗಂಡು ಮಕ್ಕಳು, ನಾಲ್ಕು ಜನ ಸೊಸೆಯಂದಿರು ಕೂಡಿ ಮೊದಲು ಆ ಪೆಟ್ಟಿಗೆ ಒಡೆಯಿರಿ, ಅದರೊಳಗೆ ಇದ್ದ ಬಂಗಾರ ಬೆಳ್ಳಿಯನ್ನು ಎಲ್ಲರೂ ಸಮವಾಗಿ ಹಂಚಿಕೊಳ್ಳೋಣ ಎಂದರು. ಪೆಟ್ಟಿಗೆಯ ಕೀಲಿ ಕೈ ಒಡೆದರು. ಆ ಪೆಟ್ಟಿಗೆ ತೆಗೆದು ನೋಡುವುದರಲ್ಲಿ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಪೆಟ್ಟಿಗೆಯೊಳಗೆ ಹಳೆಯ ಎರಡು ಸೀರೆ ಹಾಕಿ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ತುಂಬಿದ್ದಳು. ಅಯ್ಯೋ ಈ ಮುದುಕಿ ನಮಗೆ ಮೋಸ ಮಾಡಿ ಬಿಟ್ಟಳು ಎಂದು ಹಿಡಿ ಶಾಪ ಹಾಕಿದರು.
ಸೀರೆಯ ಕೆಳಗೆ ಒಂದು ಪತ್ರ ಬರೆದಿಟ್ಟಿದಳು. ಕ್ಷಮಿಸಿ ನನ್ನನ್ನು ಇಂದಿನ ಯುವ ಪೀಳಿಗೆಯ ದುರ್ಬುದ್ಧಿ ನೋಡಿ ನಾನು ಹೀಗೆ ಮಾಡಬೇಕಾಯಿತು. ನಾನು ಹೀಗೆ ಮಾಡದೆ ಹೋದರೆ ನನ್ನನ್ನು ಎಂದೋ ಹೊರಗೆ ಹಾಕುತ್ತಿದ್ದರು. ಹಣ ಆಸ್ತಿ ಅಂತಸ್ತು ಇವೆಲ್ಲವೂ ನಶ್ವರ. ಇರುವ ತನಕ ಎಲ್ಲರ ಜೊತೆಗೆ ಪ್ರೀತಿಯಿಂದ ಇರಬೇಕು ಅಂತ ಭಾವಿಸಿ ಹಾಗೆ ಮಾಡಿದೆ. ಅದಕ್ಕಾಗಿ ನೀವೆಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿಕೊಂಡಿರಿ. ನನ್ನ ಈ ನಡವಳಿಕೆಯಿಂದ ನೀವು ಅರ್ಥ ಮಾಡಿಕೊಂಡು ಜೀವನ ಮಾಡಿರಿ. ಇಂದು ನನ್ನ ಪಾಳಿಯಾದರೆ, ನಾಳೆ ನಿಮ್ಮ ಪಾಲಿಗೆ ಬರುವುದು. ಅದಕ್ಕಾಗಿ ಇನ್ನಾದರೂ ದುರ್ಬುದ್ಧಿ ಬಿಟ್ಟು ಎಲ್ಲರೊಡನೆ ಪ್ರೀತಿಯಿಂದ ಗೌರವದಿಂದ ಬಾಳಿರಿ. ನನ್ನ ಆರ್ಶೀವಾದ ಸದಾ ಇರುತ್ತದೆ.
ಇಂತಿ ನಿಮ್ಮ ಅಮ್ಮ.