ಕನ್ನಡ ಸಾಹಿತ್ಯಕ್ಕೆ ನಾನು ಬಂದಿದ್ದು ಆಕಸ್ಮಿಕ. ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ನನಗೆ ಎಂಎಸ್ಸಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ಸೀಟು ಸಿಗಲಿಲ್ಲ. ಹಾಗಾಗಿ ಐಚ್ಛಿಕ ಕನ್ನಡ ತೆಗೆದುಕೊಂಡು ಎಂಎ ಪದವಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಬಿ.ಎ.ವಿವೇಕ ರೈ ಹೇಳಿದರು.ಬಿಎಂಶ್ರೀ ಪ್ರತಿಷ್ಠಾನ ಎನ್ಆರ್ ಕಾಲನಿಯ ಎಂವಿಸಿ ಸಭಾಂಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಶ್ರೀ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ ಮಾತನಾಡಿ, ವಿವೇಕ ರೈ ಅವರು ಜರ್ಮನಿಯಲ್ಲಿ ಕೂಡ ಕನ್ನಡ ಸಾಹಿತ್ಯದ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಮುಂದಿನ 500 ವರ್ಷಗಳಲ್ಲಿ ಕನ್ನಡ ಸಾಹಿತ್ಯದ ವೈಶಿಷ್ಟ ಏನು ಎಂಬುದು ತಿಳಿಯಲಿದೆ ಎಂದರು.
ಶಾ ಬಾಲುರಾವ್ ನೆನಪುಗಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ| ಬೈರಮಂಗಲ ರಾಮೇಗೌಡ, ನಿಕಟಪೂರ್ವ ಅಧ್ಯಕ್ಷ ಡಾ| ಆರ್.ಲಕ್ಷ್ಮಿನಾರಾಯಣ, ಗೌರವಾಧ್ಯಕ್ಷ ಡಾ| ಪಿ.ವಿ.ನಾರಾಯಣ, ಕಮಲಿನಿ ಬಾಲುರಾವ್ ಮತ್ತಿತರರು ಉಪಸ್ಥಿತರಿದ್ದರು.