ಭಾರತದಲ್ಲಿ ಸಂವಿಧಾನವೇ ಪರಮೋಚ್ಚ. ಈ ದೇಶದ ಬುನಾದಿಯೇ ಸಂವಿಧಾನ. ಉಳಿದೆಲ್ಲವೂ ಕೂಡ ಸಂವಿಧಾನದ ಮೇಲೆಯೇ ಅವಲಂಬಿತವಾಗಿದೆ. ಈ ಸಂವಿಧಾನಕ್ಕೆ ಆಧಾರ ಸ್ಥಂಭಗಳಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಿವೆ. ಈ ಮೂರೂ ಅಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಯಾಗುತ್ತದೆ.
ಆದರೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಮಧ್ಯೆ ಹೊಂದಾಣಿಕೆಯ ಕೊರತೆಯಿಂದಾಗಿ ದೇಶದ ಆಡಳಿತಕ್ಕೆ ಧಕ್ಕೆ ಬರುವ ಸಾಧ್ಯತೆಯೇ ಹೆಚ್ಚು. ಶಾಸಕಾಂಗ ಅತೀ ಕಡಿಮೆ ಅವಧಿಗೆ ಕಾರ್ಯಾಚರಿಸುವ ಅಂಗ. ಪ್ರತೀ ವರ್ಷಗಳಿಗೊಮ್ಮೆ ಇದು ಬದಲಾಗುವ ಸಂಭವ ಇರುತ್ತದೆ. ಅದಕ್ಕಿಂತ ಸ್ವಲ್ಪ ಹೆಚ್ಚಿನ ದಿನಗಳ ಅವಕಾಶ ನ್ಯಾಯಾಂಗ ದಲ್ಲಿ ಚುನಾಯಿತರಾದ ನ್ಯಾಯಾಧೀಶರಿಗೆ ದೊರೆಯುತ್ತದೆ. ಇದ್ದುದರಲ್ಲಿ ಕಾರ್ಯಾಂಗದಲ್ಲಿರುವ ಅಧಿಕಾರಿಗಳಿಗೆ ಹೆಚ್ಚಿನ ವರ್ಷಗಳ ಸೇವಾವಧಿ ಸಿಗುತ್ತದೆ. ಹಾಗಾಗಿಯೇ ಕಾರ್ಯಾಂಗದ ಮೇಲೆ ನ್ಯಾಯಾಂಗಕ್ಕೂ, ಶಾಸಕಾಂಗಕ್ಕೂ ಒಂದಿಷ್ಟು ಹೆಚ್ಚಿನ ಅಧಿಕಾರ ಇರುತ್ತದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಶಾಸಕಾಂಗದ ಪ್ರಭಾವ ಹೆಚ್ಚುತ್ತಿದೆ. ನ್ಯಾಯಾಂಗದ ಆಗುಹೋಗುಗಳಲ್ಲಿ ಶಾಸಕಾಂಗ ಕೈಹಾಕಬಾರದು. ಆದರೆ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿಯ, ಅದರಲ್ಲೂ ಉಚ್ಛ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿಯಲ್ಲಿ ಶಾಸಕಾಂಗದ ಹಸ್ತಕ್ಷೇಪ ಹೆಚ್ಚುತ್ತಿದೆ ಎಂಬ ಆರೋಪ ಇದೆ.
ಉಚ್ಛ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿಯನ್ನು ಅವರವರೇ ಮಾಡಿಕೊಳ್ಳುತ್ತಾರೆ. ಈ ವ್ಯವಸ್ಥೆಗೆ ಕೊಲೀಜಿಯಂ ಅನ್ನೋ ಹೆಸರಿದೆ. ಈ ಕೊಲೀಜಿಯಮ್ ನ ಸದಸ್ಯರಾಗಿರುವುದು ನ್ಯಾಯಾಧೀಶರೇ. ಈ ಕೊಲೀಜಿಯಂ ನಲ್ಲಿ ಶಾಸಕಾಂಗದ ಪ್ರತಿನಿಧಿಯೂ ಕೂಡಾ ಇರಬೇಕೆಂದು ಶಾಸಕಾಂಗದ ಪಟ್ಟು. ಇದಕ್ಕೆ ನ್ಯಾಯಾಂಗ ಸಮ್ಮತಿಸುತ್ತಿಲ್ಲ. ಇದರಿಂದಾಗಿ ಈಗ ನ್ಯಾಯಾಂಗ ಮತ್ತು ಶಾಸಕಾಂಗದ ಮಧ್ಯೆ ತಿಕ್ಕಾಟ ಶುರುವಾಗಿದೆ.
ನ್ಯಾಯಾಂಗ ಮತ್ತು ಶಾಸಕಾಂಗದ ಮಧ್ಯೆ ತಿಕ್ಕಾಟ ಆಂತಂದರೆ ಅದು ಭಾರತದ ಸುಪ್ರೀಂ ಕೋರ್ಟ್ ಮತ್ತು ಭಾರತದ ಕೇಂದ್ರ ಸರಕಾರದ ಮಧ್ಯೆ ನಡೆಯುವ ತಿಕ್ಕಾಟವೇ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ.
ನ್ಯಾಯಾಂಗದ ಕಾರ್ಯ ನಿರ್ವಹಣೆಯಲ್ಲಿ ಸರಕಾರದ ಹಸ್ತಕ್ಷೇಪವನ್ನು ನಾನು ಕೂಡ ವಿರೋಧಿಸುತ್ತೇನೆ. ಈಗಾಗಲೇ ಈ ವಿಷಯದಲ್ಲಿ ಹಲವಾರು ಪರ ವಿರೋಧ ಚರ್ಚೆಗಳು ನಡೆದಿವೆ. ಆದರೆ ಬಹುತೇಕರದ್ದು ಒಂದೇ ಅಭಿಪ್ರಾಯ. ಕೇಂದ್ರ ಸರಕಾರ ಸರ್ವೋಚ್ಛ ನ್ಯಾಯಾಲಯದ ನೇಮಕಾತಿಯಲ್ಲಿ ಈಗ ಇರುವಂಥ ಕೊಲಿಜಿಯಂ ವ್ಯವಸ್ಥೆ ಯನ್ನೇ ಮುಂದುವರಿಸಬೇಕು. ಅದರಲ್ಲಿ ಬದಲಾವಣೆ ಅಗತ್ಯವಿಲ್ಲ. ಇದು ನನ್ನ ಖಚಿತ ಅಭಿಪ್ರಾಯವೂ ಹೌದು.
ಸರಕಾರ ಮತ್ತು ನ್ಯಾಯಾಂಗದ ಮಧ್ಯೆ ಇರುವ ಈ ತಣ್ಣಗಿನ ಸಂಘರ್ಷದಿಂದ ಜನಸಾಮಾನ್ಯರಿಗೆ, ಅದರಲ್ಲೂ ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ. ಇವತ್ತು ಭಾರತೀಯ ನ್ಯಾಯಾಲಯಗಳಲ್ಲಿ ಲಕ್ಷಾಂತರ ಕೇಸುಗಳು ಇತ್ಯರ್ಥವಾಗದೇ ಬಾಕಿಯಿದೆ. ಒಂದೊಂದು ಸಿವಿಲ್ ಪ್ರಕರಣಗಳೂ ಕೂಡ ವಿಚಾರಣೆ ನಡೆದು ತೀರ್ಪು ಬರಲು ಹತ್ತಿಪ್ಪತ್ತು ವರ್ಷಗಳೇ ಹಿಡಿಯುತ್ತವೆ. ಕ್ರಿಮಿನಲ್ ಪ್ರಕರಣಗಳಲ್ಲಿಯೂ ಕೂಡಾ ಕೇಸುಗಳ ವಿಚಾರಣೆ ಕ್ಲಪ್ತ ಸಮಯದಲ್ಲಿ ನಡೆಯದೇ ಸಾವಿರಾರು ಜನ ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಹೀಗೆ ಲಕ್ಷಾಂತರ ಕೇಸುಗಳು ಬಾಕಿಯಾಗಲು ದೊಡ್ಡ ಕಾರಣವೆಂದರೆ ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರ ನೇಮಕವಾಗದೇ ಇರುವುದು.
ಸರಕಾರ ಆದಷ್ಟು ಶೀಘ್ರದಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಬಾಕಿ ಇರುವ ಈ ಲಕ್ಷಾಂತರ ಕೇಸುಗಳ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಂಡು ಸೂಕ್ತ ನಿರ್ದೇಶನ ನೀಡಿ ನ್ಯಾಯದಾನ ಪ್ರಕ್ರಿಯೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬವನ್ನು ತಪ್ಪಿಸಿ ಬಡಜನತೆಯ ಕಷ್ಟ ಪರಿಹರಿಸಬೇಕೆಂದು ನನ್ನ ನಿರೀಕ್ಷೆ.
ಅಶೋಕ್ ಕುಮಾರ್ ರೈ
ರೈ ಎಸ್ಟೇಟ್, ಕೋಡಿಂಬಾಡಿ.