ಜಗತ್ತಿನಲ್ಲೇ ಪಶ್ಚಿಮ ಘಟ್ಟಗಳೆಂದರೆ ಅದು ಜೀವವೈವಿಧ್ಯದ ಆಗರ. ಇಲ್ಲಿರುವ ಜೀವಸಂಕುಲಗಳ ವೈವಿಧ್ಯತೆ ಪ್ರಪಂಚದ ಬೇರೆಲ್ಲೂ ಕಂಡುಬರುವುದಿಲ್ಲ. ಅದೇ ರೀತಿ ಇಲ್ಲಿನ ಸಸ್ಯ ಸಂಕುಲಗಳ ವೈವಿಧ್ಯತೆ ಕೂಡ. ಪಶ್ಚಿಮಘಟ್ಟಗಳ ದಟ್ಟವಾದ ಶೋಲಾ ಅರಣ್ಯಗಳ ಮಧ್ಯೆ ಮಧ್ಯೆ ಕಂಡುಬರುವ Montane grassland ಅನ್ನುವ ವಿಶಿಷ್ಟ ಬಗೆಯ ಹುಲ್ಲುಗಾವಲುಗಳ ಈ ವ್ಯವಸ್ಥೆ ತುಂಬಾ ಅಪರೂಪದ ಭೂಲಕ್ಷಣವಾಗಿದೆ. ದಟ್ಟಾರಣ್ಯದ ಮಧ್ಯೆ ಅಲ್ಲಲ್ಲಿ ಹುಲ್ಲುಗಾವಲುಗಳು ಕಂಡುಬರುವುದರಿಂದ ಇದನ್ನು ಭೂ ವಿಜ್ಞಾನಿಗಳು ಶೋಲಾ ಮೊಸಾಯಿಕ್ ಅಂತ ಕರೆಯುತ್ತಾರೆ. ಬಹುಶಃ ನಮ್ಮ ಕೊಯ್ಲದ ಸುಮಾರು ಏಳುನೂರು ಎಕರೆಯಷ್ಟು ವಿಶಾಲವಾದ ಈ ಹುಲ್ಲುಗಾವಲು ಕೂಡ ಪಶ್ಚಿಮ ಘಟ್ಟದ ಈ ಶೋಲಾ ಮೊಸಾಯಿಕ್ ನ ಭಾಗವೇ. ಕೊಯ್ಲದ ಈ ಹುಲ್ಲುಗಾವಲೀಗ ನಾಗರಿಕ ಸಮಾಜದ ಮಧ್ಯೆಯೇ ಇರುವುದರಿಂದ ಮತ್ತು ಸರ್ವಋತು ರಸ್ತೆಗಳು, ವಿದ್ಯುಚ್ಛಕ್ತಿ ಇತ್ಯಾದಿ ಎಲ್ಲಾ ಆಧುನಿಕ ಸೌಲಭ್ಯಗಳೂ ಇರುವ ಸ್ಥಳವಾದುದರಿಂದ ಅಧ್ಯಯನ ಕೇಂದ್ರ ಸ್ಥಾಪನೆಗೆ ಅತ್ಯಂತ ಸೂಕ್ತವಾದ ಜಾಗವಾಗಿದೆ.
ಇಲ್ಲಿ ಈಗ ಪಶುವೈದ್ಯಕೀಯ ಕಾಲೇಜು ಹೇಗೂ ಸ್ಥಾಪನೆಯಾಗಿರುವುದರಿಂದ ಇದನ್ನೊಂದು ಉನ್ನತ ಅಧ್ಯಯನ ಕೇಂದ್ರವನ್ನಾಗಿ, ತೋಟಗಾರಿಕಾ, ಅರಣ್ಯ, ಪರಿಸರಾಧ್ಯಯನ ಮತ್ತು ಜೀವವೈವಿಧ್ಯ ಅಧ್ಯಯನಗಳನ್ನೊಳಗೊಂಡ ಕೃಷಿ ವಿಶ್ವವಿದ್ಯಾಲಯವನ್ನಾಗಿ ರೂಪಿಸಬಹುದಾದ ಉಜ್ವಲ ಸಾಧ್ಯತೆಗಳಿವೆ. ಕೃಷಿ ಅಧ್ಯಯನ ಮಾಡಲು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಇಡೀ ಭಾರತದಲ್ಲೇ ಅತ್ಯಂತ ಹೆಚ್ಚಿರುವುದು ಕರ್ನಾಟಕದಲ್ಲೇ..! ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತಲಾ ಆರು ಕೃಷಿ ವಿಶ್ವ ವಿದ್ಯಾಲಯಗಳಿವೆ. ಹಾಗಾಗಿ ಕೃಷಿ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಇಡೀ ದೇಶಕ್ಕೆ ಕರ್ನಾಟಕವೇ ಪ್ರಮುಖ ಕೇಂದ್ರ. ಬೀದರ್ ನ ವೆಟರಿನರಿ, ಅನಿಮಲ್ ಅಂಡ್ ಫಿಶರೀಸ್ ಯುನಿವರ್ಸಿಟಿಯ ಅಧೀನದಲ್ಲೇ ಈಗ ಕೊಯ್ಲದಲ್ಲಿ ಪಶುವೈದ್ಯಕೀಯ ಕಾಲೇಜಿನ ಸ್ಥಾಪನೆ ಆಗುತ್ತಿರುವುದು. ಕರ್ನಾಟಕದ ಇತರ ಕೃಷಿ ವಿಶ್ವವಿದ್ಯಾಲಯಗಳು ಶಿವಮೊಗ್ಗ, ಬೆಂಗಳೂರು, ಧಾರವಾಡ, ರಾಯಚೂರು ಮತ್ತು ಬಾಗಲಕೋಟೆಯಲ್ಲಿದೆ. ಈ ಎಲ್ಲಾ ಸ್ಥಳಗಳಲ್ಲಿಯೂ ಬೇರೆ ಬೇರೆ ಕಾರಣಗಳಿಗೋಸ್ಕರ ಕೃಷಿ ವಿಶ್ವ ವಿದ್ಯಾಲಯಗಳ ಸ್ಥಾಪನೆಯಾಗಿದೆ.
ಆದರೆ ಇಡೀ ದೇಶದಲ್ಲಿಯೇ ಭೌಗೋಳಿಕವಾಗಿ ಒಂದು ಅತ್ಯಂತ ವಿಶಿಷ್ಟ ರೀತಿಯ ಕೃಷಿವಿಶ್ವವಿದ್ಯಾಲಯದ ಸ್ಥಾಪನೆಗೆ ನಮ್ಮ ಕೊಯ್ಲದಲ್ಲಿ ಮಾತ್ರ ಅವಕಾಶವಿದೆ. ಕೊಯ್ಲ ಪಶ್ಚಿಮ ಘಟ್ಟದ ಅತ್ಯಂತ ಸನಿಹದಲ್ಲಿರುವ ಒಂದು ವಿಶಾಲವಾದ ಹುಲ್ಲುಗಾವಲು. ಈ ರೀತಿಯ ಭೌಗೋಲಿಕ ಪ್ರದೇಶ ಬೇರೆ ಕಡೆಗಳಲ್ಲಿ ಸಿಗಲು ಸಾಧ್ಯವೇ ಇಲ್ಲ… ಅದಕ್ಕೆ ತಕ್ಕ ಹಾಗೆ ಸುಬ್ರಹ್ಮಣ್ಯದ ಕುಮಾರ ಪರ್ವತ ಪ್ರದೇಶದ ಅಪೂರ್ವ ಅರಣ್ಯ, ಗುಂಡ್ಯ, ಬಿಸಿಲೆ ಮತ್ತು ಶಿರಾಡಿ ಪ್ರದೇಶದ ಅರಣ್ಯ, ಚಾರ್ಮಾಡಿ ಪ್ರದೇಶದ ಅರಣ್ಯ, ಕುದುರೆಮುಖ ಪ್ರದೇಶದ ಅರಣ್ಯ ಗಳೆಲ್ಲವೂ ಕೊಯ್ಲ ಕ್ಕೆ ಹತ್ತಿರದಲ್ಲಿವೆ ಮತ್ತು ಈ ಎಲ್ಲ ಅರಣ್ಯ ಪ್ರದೇಶಗಳಿಗೂ ಅತ್ಯುತ್ತಮ ರಸ್ತೆ ಸೌಲಭ್ಯಗಳಿವೆ. ಹೀಗಾಗಿ ಶೋಲಾ ನಿತ್ಯಹರಿದ್ವರ್ಣ ಮಳೆಕಾಡಿನ ಅಧ್ಯಯನಕ್ಕೆ ಕೊಯ್ಲ ಅತ್ಯುತ್ತಮ ಸ್ಥಳವಾಗಿದೆ. ಇನ್ನು ತೋಟಗಾರಿಕೆಯ ವಿಷಯಕ್ಕೆ ಬಂದರೆ, ದಕ್ಷಿಣ ಕನ್ನಡದಲ್ಲಿ ಪಾರಂಪರಿಕ ಬೇಸಾಯಕ್ಕಿಂತ ತೋಟಗಾರಿಕಾ ಮತ್ತು ವಾಣಿಜ್ಯ ಬೆಳೆಗಳಿಗೇ ಪ್ರಾಮುಖ್ಯತೆ ಹೆಚ್ಚು. ಅಡಿಕೆಯ ಜೊತೆಗೆ, ತೆಂಗು, ಗೇರು, ಕೋಕೋ, ರಬ್ಬರ್, ಕಾಳುಮೆಣಸು, ವೆನಿಲ್ಲಾ, ಇತ್ಯಾದಿ ಅತ್ಯಂತ ವೈವಿಧ್ಯಮಯ ತೋಟಗಾರಿಕಾ ಬೆಳೆಗಳು ನಮ್ಮ ಜಿಲ್ಲೆಯಲ್ಲಿದೆ. ಇದರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವೈವಿಧ್ಯಮಯ ಹಲಸಿನ ತಳಿಗಳನ್ನೂ ಅಭಿವೃದ್ಧಿ ಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಇದೂ ಕೂಡಾ ಒಂದು ಪ್ರಮುಖ ತೋಟಗಾರಿಕಾ ಬೆಳೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಇನ್ನೂ ಅನೇಕ ರೀತಿಯ ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕೆ ಕೊಯ್ಲ ಅತ್ಯಂತ ಸೂಕ್ತ. ಯಾಕೆಂದರೆ, ಕೊಯ್ಲ ಪಶ್ಚಿಮಘಟ್ಟದ ಸೆರಗಿನಲ್ಲಿದ್ದರೂ ಕೂಡಾ ಅತ್ಯಂತ ವಿಶಿಷ್ಟ ಭೌಗೋಳಿಕ ಪ್ರದೇಶಗಳಿಗೆಲ್ಲಾ ಅತ್ಯಂತ ಸನಿಹದಲ್ಲಿದೆ. ನಿತ್ಯಹರಿದ್ವರ್ಣ ಮಳೆಕಾಡಿನ ತೀರಾ ಹತ್ತಿರದಲ್ಲಿದ್ದುಕೊಂಡೂ ಕೂಡಾ ಕೊಯ್ಲ ಸಮುದ್ರ ತೀರಕ್ಕೂ ಹತ್ತಿರವಾಗಿದೆ…! ಅಷ್ಟೇ ಅಲ್ಲ ಮಡಿಕೇರಿಯಂಥ ಪಕ್ಕಾ ಮಲೆನಾಡು, ಹಾಸನ ಚಿಕ್ಕಮಗಳೂರಿನಂಥ ಅರೆ ಮಲೆನಾಡು, ಮತ್ತು ಈ ಎರದೂ ಜಿಲ್ಲೆಗಳಲ್ಲೇ ಇರುವ ಬಯಲು ಸೀಮೆ. ಹೀಗೆ ಅತ್ಯಪೂರ್ವ ವೈವಿಧ್ಯಮಯ ಭೌಗೋಲಿಕ ಪ್ರದೇಶಗಳಿಗೆಲ್ಲಾ ಕೊಯ್ಲ ಅತ್ಯಂತ ಸನಿಹದಲ್ಲಿದೆ. ಹಾಗಾಗಿ ಕಾಫಿಯ ಜೊತೆಗೇ ಕಬ್ಬು ಹತ್ತಿ ತಂಬಾಕು ಮುಂತಾದ ವಾಣಿಜ್ಯ ಬೆಳೆಗಳ ಅಧ್ಯಯನಕ್ಕೂ, ಶೇಂಗಾ, ಸೂರ್ಯಕಾಂತಿ, ಎಳ್ಳು, ಹರಳು ಇತ್ಯಾದಿ ಎಣ್ಣೆಬೀಜ ಬೆಳೆಗಳ ಅಧ್ಯಯನಕ್ಕೂ ಕೊಯ್ಲ ಅತ್ಯಂತ ಹತ್ತಿರವಿರುವ ಪ್ರದೇಶ. ಇದಲ್ಲದೆಯೇ ಭತ್ತ, ರಾಗಿ, ಸಿರಿಧಾನ್ಯಗಳಂಥ ಬೆಳೆಗಳೂ, ಮಾವು, ಸಪೋಟ, ಕಿತ್ತಳೆ, ಇತ್ಯಾದಿ ಹಣ್ಣುಗಳು ಮತ್ತು ಎಲ್ಲಾ ವಿಧದ ತರಕಾರಿಗಳು ಹೀಗೆ ಅತ್ಯಂತ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಪ್ರದೇಶಗಳೆಲ್ಲಾ ಕೊಯ್ಲದ ಸುತ್ತಮುತ್ತಲೇ ಇವೆ.
ಹೀಗಾಗಿ ಹಲವಾರು ರೀತಿಯ ವೈವಿಧ್ಯಮಯ ಭೌಗೋಳಿಕ ಪ್ರದೇಶಗಳಿಗೆಲ್ಲಾ ಕೊಯ್ಲ ಹತ್ತಿವಾಗಿರುವುದರಿಂದ ಪರಿಸರಾಧ್ಯಯನಕ್ಕೂ ಅತ್ಯಂತ ಸೂಕ್ತ ಸ್ಥಳವಾಗಿದೆ. ಇದಲ್ಲದೆ ವಾತಾವರಣದಲ್ಲಿ ಸ್ವಾಭಾವಿಕ ಅಣುವಿಕಿರಣದ ಪ್ರಭಾವವನ್ನು ಅಧ್ಯಯನ ಮಾಡುವ ಏಕಮಾತ್ರ ಕೇಂದ್ರವಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ “ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಇನ್ ಇನ್ವಿರಾನ್ಮೆಂಟಲ್ ರೇಡಿಯೋ ಆಕ್ಟಿವಿಟಿ” ಎಂಬ ಅತ್ಯಾಧುನಿಕ ಪ್ರಯೋಗಾಲಯ ಇದೆ. ಹೀಗೆ ಪರಿಸರಾಧ್ಯಯನಕ್ಕೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳೂ ಕೂಡಾ ಕೊಯ್ಲ ಕ್ಕೆ ಹತ್ತಿರದಲ್ಲೆ ಇವೆ. ಇದಲ್ಲದೆ ಅಡಿಕೆ, ಗೇರು, ಕಾಫಿ, ಮುಂತಾದ ಬೆಳೆಗಳ ಉನ್ನತ ಅಧ್ಯಯನ ಕೇಂದ್ರಗಳೆಲ್ಲಾ ಕೊಯ್ಲದ ಆಸುಪಾಸಿನಲ್ಲೇ ಇವೆ.
ಕೊಯ್ಲದಲ್ಲಿ ತೋಟಗಾರಿಕಾ, ಅರಣ್ಯ, ಪರಿಸರಾಧ್ಯಯನ ಮತ್ತು ಜೀವವೈವಿಧ್ಯ ಅಧ್ಯಯನಗಳನ್ನೊಳಗೊಂಡ ಕೃಷಿ ವಿಶ್ವವಿದ್ಯಾಲ ಸ್ಥಾಪನೆ ಮಾಡಲು ಹೀಗೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಕೊಯ್ಲ ಫಾರ್ಮ್ ಇರುವ ಭೌಗೋಳಿಕ ಪ್ರದೇಶವು ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಎಲ್ಲಾ ರೀತಿಯ ಕ್ಷೇತ್ರ ಕಾರ್ಯಗಳನ್ನು ನಡೆಸಲು ಅತ್ಯಂತ ಸೂಕ್ತವಾದ ಪ್ರದೇಶವಾಗಿದೆ. ನಾನು ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಕೂಡಾ ಆಗಿರುವುದರಿಂದ ಅಕಾಡೆಮಿಕ್ ಕೇಂದ್ರಗಳ ಆಡಳಿತಾತ್ಮಕ ಸವಾಲುಗಳ ಬಗ್ಗೆಯೂ ಅರಿವಿದೆ, ಅದೇ ರೀತಿ ಅಕಾಡೆಮಿಕ್ ಅಧ್ಯಯನಗಳಿಗೆ ಬೇಕಾದ ಸೌಲಭ್ಯಗಳ ಬಗ್ಗೆಯೂ ಅರಿವಿದೆ. ಕೊಯ್ಲದ ಫಾರ್ಮ್ ಅನ್ನು ಕೂಡಾ ಹತ್ತಿರದಿಂದ ಬಲ್ಲೆ. ಇಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯಾಗುವಲ್ಲಿ ನನ್ನದೊಂದು ಸಣ್ಣ ಪಾತ್ರವೂ ಇದೆ. ಆಗಲೇ ನಾನು ಇಲ್ಲಿ ಒಂದು ವಿಶಿಷ್ಟ ಕೃಷಿ ವಿಶ್ವ ವಿದ್ಯಾಲಯ ಸ್ಥಾಪಿಸಬಹುದೆಂಬ ಕನಸು ಕಂಡದ್ದು. ಆ ಬಳಿಕ ಈ ಬಗೆ ಕೊಂಚ ಅಧ್ಯಯನವನ್ನು ಕೂಡಾ ಮಾಡಿದೆ. ಎಲ್ಲಾ ರೀತಿಯಲ್ಲೂ ಕೊಯ್ಲದಂಥಾ ಭೌಗೋಳಿಕವಾಗಿ ಅತ್ಯಂತ ಸೂಕ್ತವಾದ ಸ್ಥಳ ಬೇರೊಂದಿಲ್ಲ ಅಂತಲೇ ನನ್ನ ದೃಢವಾದ ನಂಬಿಕೆ. ಕೊಯ್ಲ ಎಂಬುದು ನಿಜಕ್ಕೂ ಒಂದು ಅಪೂರ್ವವಾದ ಪರಿಸರ. ಇಂಥದ್ದೊಂದು ಹುಲ್ಲುಗಾವಲು ಬಹುಶಃ ಬೇರೆಲ್ಲೂ ಇಲ್ಲ. ಹಾಗಾಗಿ ಕೊಯ್ಲವನ್ನು ಒಂದು ಸಮಗ್ರ ಅಧ್ಯಯನ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು, ವಿಶಿಷ್ಟ ರೀತಿಯ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಬಹಳಷ್ಟು ಅವಕಾಶಗಳಿವೆ.
ಮುಂದಿನ ದಿನಗಳಲ್ಲಿ ನನಗೆ ಸೂಕ್ತ ಅವಕಾಶಗಳು ಸಿಕ್ಕ ಪಕ್ಷದಲ್ಲಿ ಕೊಯ್ಲವನ್ನು ಭಾರತದಲ್ಲೇ ಅತ್ಯಂತ ಮಾದರಿಯಾದ ಒಂದು ಪರಿಸರಾಧ್ಯಯನ ಕೇಂದ್ರವನ್ನಾಗಿ, ಅತ್ಯಂತ ವಿಶಿಷ್ಟ ತೋಟಗಾರಿಕಾ ಬೆಳೆಗಳ ಅಧ್ಯಯನ ಕೇಂದ್ರವಾಗಿಸಬೇಕು ಅನ್ನೋ ಮಹತ್ವಾಕಾಂಕ್ಷೆಯಿದೆ.