ನಾಗರಾಜ್ ಬಿ ಶೆಟ್ಟಿ ಅವರು ತನ್ನ ವಿಚಕ್ಷಣ ಮತಿಯಿಂದ ಹಣಕಾಸು ಕ್ಷೇತ್ರದಲ್ಲಿ ಬಹು ಎತ್ತರದ ಸ್ಥಾನ ಗಳಿಸಿದವರು. ಎಂ.ಬಿ.ಎ, ಎಲ್.ಎಲ್.ಬಿ ಹಾಗೂ ಡಿ.ಲಿಟ್ ಪಡೆದ ಅಪರೂಪರ ವ್ಯಕ್ತಿತ್ವ ಇವರದ್ದಾಗಿದೆ. ಬಹುಮುಖಿ ಸಾಧಕರಾಗಿ ಬಹು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮನುಷ್ಯ ಸಂಕಲ್ಪ ಮಾಡಿದರೆ ಏನೆಲ್ಲಾ ಸಾಧಿಸಬಹುದೆನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅಖಿಲ ಭಾರತ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಕುರಿತ ಸಂಘಟನೆಯಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರಿಗಿದೆ. ಅವೆನ್ ಸ್ಪ್ರಿಂಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಓಪ್ಟಿನ್ ಬಿ2ಬಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಕ್ಯಾರಿಯರ್ ಹಾಗೂ ಲೈಫ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಯಾಂಕಿಂಗ್, ತಂತ್ರಜ್ಞಾನ, ಆಡಳಿತ ಕುರಿತು ವಿಸ್ತೃತ ಅಧ್ಯಯನ ಮಾಡಿರುವ ನಾಗರಾಜ್ ಶೆಟ್ಟಿ ಅವರು ತನ್ನ ಬಿಡುವಿಲ್ಲದ ಕಾಯಕದ ಕಾರ್ಯಕ್ಷೇತ್ರದಲ್ಲಿ ಯಶ ಸಾಧಿಸುವುದರ ಮೂಲಕ ಬಂಟ ಸಮುದಾಯದ ಕಣ್ಮಣಿಯಾಗಿ ಪ್ರತಿಯೊಬ್ಬರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ರಾಂಕ್ ವಿಜೇತರಾದ ಶೆಟ್ಟಿ ಅವರು ವಾಣಿಜ್ಯ, ಕಾನೂನು, ಆಡಳಿತ ವ್ಯವಸ್ಥೆ, ಬ್ಯಾಂಕಿಂಗ್ ಮೊದಲಾದ ವಿಷಯಗಳು ಜೊತೆಗೆ ಅವುಗಳಿಗೆ ಪೂರಕವಾದ ಸ್ನಾತಕೋತ್ತರ ಪದವಿಗಳನ್ನು ಸಂಪಾದಿಸಿಕೊಂಡ ಮೇಧಾವಿ. ರೋಟರಿ ಕ್ಲಬ್ ಸೇರಿದಂತೆ ಅದೆಷ್ಟೋ ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡು ಸಮಾಜಪರ ಚಿಂತನೆ ಕಾಳಜಿಗಳಿಂದಲೂ ಜನ ಮನ್ನಣೆ ಗಳಿಸಿದ್ದಾರೆ. ಟ್ರೇಡ್ ಫ್ಲೋಕ್ 40ಯು40 ಅವಾರ್ಡ್, ಗುರುವರ್ಯ ಸನ್ಮಾನ ಪ್ರಶಸ್ತಿ, ಯಶಸ್ವೀ ನ್ಯಾಷನಲ್ ಅವಾರ್ಡ್, ಎಜುಕೇಶನ್ ಐಕಾನ್, ನ್ಯಾಷನಲ್ ಬಿಲ್ಡರ್ ಅವಾರ್ಡ್, ಹೀಗೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ.
ಓರ್ವ ಬಹುಮುಖ ಪ್ರತಿಭೆಯ ಸಂಪನ್ಮೂಲ ವ್ಯಕ್ತಿಯಾಗಿ ಸ್ವಸಮುದಾಯ ಸೇರಿದಂತೆ ಸಕಲ ಮಾನವ ಸಮಾಜದ ಸೇವೆಯ ಭಾವದಲ್ಲಿ ಆನಂದ ಕಾಣುವ ಶ್ರೀಯುತರು ವ್ಯಕ್ತಿತ್ವ ವಿಕಸನದಂಥಹ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಡದಿ ಶ್ರೀಮತಿ ಜಯಂತಿ ಶೆಟ್ಟಿ ಅವರು ಔಷಧ ನಿಗಮ ಸಂಸ್ಥೆ ಯಲ್ಲಿ ಉತ್ತಮ ಉದ್ಯೋಗ ಹೊಂದಿದ್ದು, ಆಯುಷ್ ಎಂಬ ಸುಪುತ್ರ ಎಂಟನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಗಳು ಶನಯಾ ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದಾಳೆ. ತಂದೆ ಬಾಡ್ಯ ಶೆಟ್ಟಿ ಹಕ್ಲಾಡಿ ಇವರು ಕುಂದಾಪುರ ಮೂಕಾಂಬಿಕಾ ಟೈಲ್ಸ್ ನ ನಿವೃತ್ತ ಉದ್ಯೋಗಿ. ಈಗ ಕೃಷಿ ಬೇಸಾಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ರುದ್ರಮ್ಮ ಶೆಟ್ಟಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಹೀಗೆ ಶಿಕ್ಷಣ, ಬ್ಯಾಂಕಿಂಗ್, ಆಡಳಿತ ತಂತ್ರ, ತರಬೇತಿ, ಕಾನೂನು, ವಾಣಿಜ್ಯೋದ್ಯಮ ಕ್ಷೇತ್ರಗಳಲ್ಲಿ ಸಮನ್ವಯತೆ ಸಾಧಿಸಿ ಈಗ ಓರ್ವ ಸ್ವಉದ್ಯಮಿಯಾಗಿ ಯಶಸ್ಸನ್ನು ಸಂಪಾದಿಸಿ ಅನೇಕ ವಿದ್ಯಾವಂತರ ಬಾಳಿಗೆ ಬೆಳಕಾಗಿದ್ದಾರೆ. ಇವರ ಕಾರ್ಯಕ್ಷೇತ್ರ, ಉದ್ಯಮ ಕ್ಷೇತ್ರ ಇನ್ನಷ್ಟು ವಿಸ್ತಾರಗೊಂಡು ಇದರಿಂದ ಒಟ್ಟು ಸಮಾಜ ಉಪಕೃತವಾಗಲೆಂಬುವುದೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಆಶಯ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು





































































































