

ತಾನಾಯಿತು ತನ್ನ ಪಾಡಾಯಿತು ಎನ್ನುವ ಈ ಸ್ವಾರ್ಥಮಯ ಜಗದಲಿ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನಿಸ್ವಾರ್ಥವಾಗಿ ದುಡಿಯುವ ಸಂದೀಪ್ ಶೆಟ್ಟಿಯವರ ವ್ಯಕ್ತಿತ್ವ ನಿಜಕ್ಕೂ ಅಪರೂಪದ್ದು. ಇತರರ ನೋವಿಗೆ ಸ್ಪಂದಿಸುವ ಮಾನವೀಯ ಹೃದಯ, ಸಮಾಜದ ಒಳಿತಿಗಾಗಿ ಸದಾ ತುಡಿವ ಸೇವಾ ಮನೋಭಾವ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಸಂದೀಪ್ ಶೆಟ್ಟಿಯವರು ಬೆಳುವಾಯಿ ಗಿರೀಶ್ ಶೆಟ್ಟಿ ಹಾಗೂ ಬಂಟ್ವಾಳ ತಾಲೂಕಿನ ನಯನಾಡು ಪ್ರಭಾವತಿ ಜಿ ಶೆಟ್ಟಿಯವರ ಸುಪುತ್ರರಾಗಿ ಜನಿಸಿದರು. ಡಿಪ್ಲೋಮ ಇಂಜಿನಿಯರಿಂಗ್ ಪದವಿ ಮುಗಿಸಿ ಕಳೆದ 13 ವರ್ಷಗಳಿಂದ ‘ಸಮರ್ಥ ಬಿಲ್ಡರ್ಸ್’ ಎಂಬ ಸ್ವಂತ ಸಂಸ್ಥೆ ಸ್ಥಾಪಿಸಿ ಯಶಸ್ವೀ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.



ಸದಾ ನಗುಮೊಗದೊಂದಿಗೆ ಎಲ್ಲರೊಂದಿಗೆ ಬೆರೆತು ಬಾಳುವ ವಿಶೇಷ ಗುಣ, ಸ್ನೇಹಪರ ವ್ಯಕ್ತಿತ್ವ ಹಾಗೂ ಸೇವಾ ಮನೋಭಾವದಿಂದ ಜನಮನ ಗೆದ್ದಿರುವ ಸಂದೀಪ್ ಶೆಟ್ಟಿಯವರು ಯುವ ಬಂಟರ ಸಂಘ ಮೂಡುಬಿದಿರೆಯ 2026-27 ರ ಸಾಲಿಗೆ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಜವಾಬ್ದಾರಿಯನ್ನು ಹೊತ್ತರೆ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಛಲ ಮತ್ತು ಶ್ರಮ ಇವರ ವಿಶೇಷತೆಯಾಗಿದೆ. ಯುವ ಬಂಟರ ಸಂಘ ಮೂಡುಬಿದಿರೆಯ ಉಪಾಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಬೆಳುವಾಯಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವಿರುವ ಸಂದೀಪ್ ಶೆಟ್ಟಿಯವರನ್ನು ಹಲವಾರು ಸಂಘ ಸಂಸ್ಥೆಗಳು ಇವರ ಸಮಾಜಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿವೆ.

ತನ್ನ ಸಾಧನೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಧರ್ಮಪತ್ನಿ ರಮಿತಾ ಎಸ್ ಶೆಟ್ಟಿ, ಸುಪುತ್ರಿಯರಾದ ಸನ್ಮಿ ಶೆಟ್ಟಿ ಹಾಗೂ ಸಿಯಾ ಶೆಟ್ಟಿಯವರೊಂದಿಗೆ ಸುಖೀ ಜೀವನ ನಡೆಸುತ್ತಿರುವ ಸಂದೀಪ್ ಶೆಟ್ಟಿಯವರಂತಹ ಮಹನೀಯ ವ್ಯಕ್ತಿತ್ವವು ಸಮಾಜಕ್ಕೆ ಸದಾ ಪ್ರೇರಣೆಯಾಗಿರಲಿ. ತಮ್ಮ ನಾಯಕತ್ವ, ಸಂಘಟನಾ ಕೌಶಲ್ಯ ಹಾಗೂ ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದಲ್ಲಿ ಮಾದರಿಯಾಗಿರುವ ನೀವು ಇನ್ನಷ್ಟು ಯಶಸ್ಸು, ಗೌರವ ಮತ್ತು ಜನಸೇವೆಯ ಅವಕಾಶಗಳನ್ನು ಪಡೆಯಲಿ. ನಿಮ್ಮ ಸೇವಾ ಪಯಣ ನಿರಂತರವಾಗಿ ಸಾಗುತ್ತಾ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.





























































































































