


ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ತಮ್ಮ ವೃತ್ತಿ, ಉದ್ಯೋಗ, ವ್ಯವಹಾರಗಳ ನಡುವೆಯೂ ಅವರು ಕನ್ನಡದ ಬೇರುಗಳನ್ನು ಮರೆಯದೆ, ಹೊಸ ತಲೆಮಾರಿಗೆ ಭಾಷೆಯ ಮಹತ್ವವನ್ನು ಬೋಧಿಸುತ್ತ ಬಂದಿರುವುದನ್ನು ನಾವು ಕಾಣಬಹುದಾಗಿದೆ. ಇಂಥ ಸನ್ನಿವೇಶದ ನಡುವೆ ದುಬೈಯಂತಹ ಬಹುಭಾಷಾ, ಬಹುಸಂಸ್ಕೃತಿಯ ನಗರದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದವರು ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿರುವ ಕೊಡಗಿನ ಬಿ.ಕೆ ಗಣೇಶ್ ರೈ ತಮ್ಮ ಕಲಾತ್ಮಕ ದೃಷ್ಟಿ, ಸಂಘಟನಾ ಕೌಶಲ್ಯ ಮತ್ತು ಭಾಷಾ ಪ್ರೀತಿ ಮೂಲಕ ಅವರು ವಿದೇಶ ನೆಲದಲ್ಲೂ ಕನ್ನಡದ ಧ್ವಜವನ್ನು ಎತ್ತಿಹಿಡಿದಿದ್ದಾರೆ. ವಿಜ್ಞಾನದ ಕ್ರಿಯಾರೂಪದ ಅಧುನಿಕ ನಗರ, ವಿಶ್ವ ದರ್ಜೆಯ ವಾಣಿಜ್ಯ ಕೇಂದ್ರ, ವಿಶ್ವದ ನಾನಾ ಕಡೆಗಳ 250ಕ್ಕೂ ಹೆಚ್ಚು ದೇಶವಾಸಿಗಳ ನಾಗರಿಕರು ಅನಿವಾಸಿ ಪ್ರಜೆಗಳಾಗಿ ಉದ್ಯೋಗಿಗಳಾಗಿ, ಉದ್ಯಮಿಗಳಾಗಿ ನೆಲೆಸಿರುವ ದುಬೈನಲ್ಲಿ, ಹಲವಾರು ವರ್ಷಗಳಿಂದ ಕನ್ನಡದ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬಿ.ಕೆ ಗಣೇಶ್ ರೈ ಅವರು ಮಾಡಿಕೊಂಡು ಬಂದಿರುವ ಕೆಲಸ ಕಾರ್ಯಗಳು ಅವರನ್ನೋರ್ವ ಸಾಧಕನ ಸ್ಥಾನದಲ್ಲಿ ತಂದು ನಿಲ್ಲಿಸಿದೆ.













ಮೂಲತಃ ಕೊಡಗಿನವರಾಗಿರುವ ಬಿ.ಕೆ ಗಣೇಶ್ ರೈ, ಚಿತ್ರ ಶಿಲ್ಪ ಕಲಾವಿದ, ಕ್ರಿಯಾತ್ಮಕ ಕಲಾ ನಿರ್ದೇಶಕ, ಬರಹಗಾರ, ನಿರೂಪಕ, ರಕ್ತದಾನ ಶಿಬಿರದಂಥ ಮಾನವೀಯ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಯುಎಇಯಲ್ಲಿ ಕನ್ನಡ ಸೇವೆ ಮಾಡುತ್ತಾ, ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದೊಂದಿಗೆ, ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಶಾಲೆಯಲ್ಲಿ ಲಲಿತಕಲಾ ಡಿಪ್ಲೊಮಾ (ಕಾವಾ), ಮೈಸೂರಿನ ಕಲಾನಿಕೇತನ ಚಿತ್ರಕಲಾ ಶಾಲೆಯಲ್ಲಿ ಮತ್ತು ಮಂಗಳೂರಿನ ಮಹಾಲಸ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ತರಬೇತಿ ಪಡೆದು, ಬಳಿಕ ವೀರಾಜಪೇಟೆ ಸಂತ ಅನ್ನಮ್ಮ ಸಂಯುಕ್ತ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅನಂತರ ಯುಎಇಗೆ ಆಗಮಿಸಿದ ಅವರು, 1996ರಿಂದ ಅಬುಧಾಬಿಯಲ್ಲಿ ಡಾ. ಬಿ.ಆರ್ ಶೆಟ್ಟಿಯವರ ಎನ್ಎಂಸಿ ಸಮೂಹ ಸಂಸ್ಥೆಯಲ್ಲಿರುವ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾನಿರ್ದೇಶಕನಾಗಿ ಕಾರ್ಯನಿರ್ವಹಣೆ ಮಾಡಿದ್ದು, ಕಳೆದ 3 ದಶಕಗಳಿಂದ ಅರಬರ ನಾಡಿನಲ್ಲಿ ಕನ್ನಡದ ಸೇವೆಯಲ್ಲಿ ತೊಡಗಿದ್ದಾರೆ. ಹಲವಾರು ಕನ್ನಡಪರ, ತುಳು ಸಂಘಟನೆಗಳಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಿರುವ ಬಿ.ಕೆ ಗಣೇಶ್ ರೈ ಅವರ ಬಹುಮುಖ ಪ್ರತಿಭೆಯನ್ನು ಪುರಸ್ಕರಿಸಿ ದುಬೈ ಸರಕಾರ ಕಲ್ಚರಲ್ ಮಿನಿಸ್ಟ್ರಿ 2021ರಲ್ಲಿ ‘ಕಲ್ಚರಲ್ ಗೋಲ್ಡನ್’ 10 ವರ್ಷದ ವೀಸಾವನ್ನು ನೀಡಿ ಗೌರವಿಸಿದೆ. ಕಲ್ಚರಲ್ ಗೋಲ್ಡನ್ ವೀಸಾ ಪಡೆದಿರುವ ಪ್ರಮುಖ ಭಾರತಿಯರಲ್ಲಿ ಕನ್ನಡಿಗ ಗಣೇಶ್ ರೈ ಅವರು ಒಬ್ಬರು. ತಮ್ಮ ಧರ್ಮಪತ್ನಿ ಮಂಜುಳಾ ರೈ, ಪುತ್ರ ಮೋನೀಶ್ ರೈ- ವಿಜಿಶಾ ದಂಪತಿಗಳು, ಮಗಳು ಐಶ್ವರ್ಯ ರೈ- ವರುಣ್ ದಂಪತಿಗಳ ಜೊತೆಗೆ ದುಬೈಯಲ್ಲಿ ನೆಲೆಸಿದ್ದಾರೆ. ಡಾ. ಬಿ.ಆರ್ ಶೆಟ್ಟಿಯವರ ಗಲ್ಫ್ ಪಬ್ಲಿಕ್ ರಿಲೇಶನ್ಸ್ ಅಂಡ್ ಅಡ್ವರ್ಟೈಸಿಂಗ್ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ, ಮ್ಯಾನೆಜರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿದ್ದಾರೆ.
ಕಳೆದ ನಾಲ್ಕುವರೆ ದಶಕಗಳಿಂದ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ದಿನ ಪತ್ರಿಕೆ ವಾರಪತ್ರಿಕೆ, ವೆಬ್ ಅಂತರ್ ಜಾಲ ಮಾಧ್ಯಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿರುವುದು ಭಾರತದ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ, ಜನರಲ್ ತಿಮ್ಮಯ್ಯ, ತಲಕಾವೇರಿ ತೀರ್ಥೊದ್ಭವ, ಎಷ್ಟೊಂದು ಸುಂದರ ಮಡಿಕೇರಿ ದಸರಾ, ಅಬ್ದುಲ್ ಕಲಾಂಗೊಂದು ಸಲಾಮ್, ವಿಶ್ವೇಶ್ವರಯ್ಯ, ಭೀಮ್ ಸೇನ್ ಜೋಷಿ, ವಾಜಪೇಯಿ ಇತ್ಯಾದಿ. ಪ್ರಸ್ತುತ ಉದಯವಾಣಿ ದೇಸಿಸ್ವರ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣಗಾರರಾಗಿ, ದುಬೈಯಲ್ಲಿರುವ ವಿಶೇಷ ವಾಸ್ತು ಶಿಲ್ಪ ಹಾಗೂ ಸಾಂಸ್ಕೃತಿಕ ವೈಭವಗಳ ಲೇಖನಗಳನ್ನು ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿದ್ದಾರೆ.





























































































































