ಬಂಟರ ಸಂಘ ಮುಂಬಯಿ ಇದರ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ ವತಿಯಿಂದ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಗುರುವಂದನೆಯನ್ನು ಜೂನ್ 28 ರಂದು ಬಂಟರ ಭವನದ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟರ ಸಂಘ ಮುಂಬಯಿಯ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ಇನ್ನಾ ಮಾತನಾಡುತ್ತಾ, ಗುರುವಿನ ಗುರುವಂದನೆ ಶಿಷ್ಯನಿಗೆ ಸಾವಿರ ಯಶಸ್ಸಿನ ಮಾರ್ಗವನ್ನು ತೋರಿಸುತ್ತದೆ. ಆದ್ದರಿಂದ ಇವತ್ತಿನ ದಿವಸ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ 15ನೇ ವರ್ಷದ ವಾರ್ಷಿಕೋತ್ಸವದ ಪರವಾಗಿ ಹಮ್ಮಿಕೊಳ್ಳಲಾದ ‘ಅಮರಶಿಲ್ಪಿ ವೀರ ಶಂಭು ಕಲ್ಕುಡ’ ಎನ್ನುವ ಯಕ್ಷಗಾನ ನಿರ್ದೇಶನ ಮಾಡಿ ಎಲ್ಲಾ ಕುರ್ಲಾ ಭಾಂಡೂಪ್ ನ ಹವ್ಯಾಸಿ ಕಲಾವಿದರಿಗೆ ಈ ಪ್ರಸಂಗವನ್ನು ಕಲಿಸಿ ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನವನ್ನು ಮಾಡಿಸಿದ್ದಾರೆ. ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದ್ದು, ಎಲ್ಲರ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೆಷ್ಟೋ ಕಲಾವಿದರು ಮೊದಲ ಬಾರಿ ವೇಷ ಹಾಕಿದರೂ ಕೂಡ ಅವರನ್ನು ಸಮರ್ಪಕವಾಗಿ ತಯಾರು ಮಾಡಿದಂತಹ ಹೆಗ್ಗಳಿಕೆ ಗುರುವಿಗೆ ಸಲ್ಲುತ್ತದೆ. ಅದಕ್ಕಾಗಿ ವಿಶೇಷವಾಗಿ ಈ ಗುರುವಂದನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುವಂತಹ ಶಕ್ತಿ ನಮಗೂ ಮತ್ತು ನಿರ್ದೇಶಿಸುವಂತಹ ಶಕ್ತಿ ಗುರುವಿಗೂ ಕೊಡಲಿ ಎನ್ನುವ ವಿಶೇಷವಾದ ಆಶಯ ನಮ್ಮದು ಎಂದರು. ಗುರುಗಳಿಗೆ ಫಲಪುಷ್ಪ ಮತ್ತು ಶಾಲು ಹೊಂದಿಸಿ ಗುರುವಂದನೆಯನ್ನು ಮಾಡಲಾಯಿತು.



ಗುರುವಂದನೆಗೆ ಉತ್ತರವಾಗಿ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ, ಮೊಟ್ಟ ಮೊದಲ ಬಾರಿಗೆ ಈ ರೀತಿಯ ಗುರುವಂದನೆಯನ್ನು ಸ್ವೀಕರಿಸುತ್ತಾ ಇದ್ದೇನೆ. ನನಗೆ ಇದು ಭಾವನಾತ್ಮಕ ಕ್ಷಣ ಬಂಟರ ಸಂಘ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಅವಕಾಶ ಮಾಡಿಕೊಟ್ಟು ನನ್ನಿಂದ ನಿರ್ದೇಶಸಲ್ಪಟ್ಟಂತಹ ‘ವೀರ ಶಂಭು ಕಲ್ಕುಡ’ ಅನ್ನುವ ಪ್ರಸಂಗವನ್ನು ಪ್ರಸ್ತುತಪಡಿಸಿದ ತೃಪ್ತಿ ನನಗಿದೆ. ಇದಕ್ಕೆ ಕಾರಣರಾದವರಿಗೆಲ್ಲರಿಗೂ ಕೃತಜ್ಞತೆಗಳು. ನನ್ನ ಅಕ್ಟೋಬರ್ 3 ಮತ್ತು 4ನೇ ತಾರೀಕಿಗೆ ನಡೆಯುವ ಯಕ್ಷಗಾನ ಸಮ್ಮೇಳನದಲ್ಲಿಯೂ ನನ್ನ ಶಿಷ್ಯರೆಲ್ಲರೂ ಭಾಗವಹಿಸಿ, ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರೆ ಅದು ನನಗೆ ನಿಜವಾದ ಗುರುದಕ್ಷಿಣೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಅಮೃತ ಅಜಯ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ನಂದಳಿಕೆ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ವಿನುತಾ ಶೆಟ್ಟಿ, ಜೊತೆ ಕಾರ್ಯದರ್ಶಿ ನಂದ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ್ ಶೆಟ್ಟಿ, ಸಮಿತಿಯ ಜೊತೆ ಕೋಶಾಧಿಕಾರಿ ಸುರೇಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಅಕ್ಷಯ್ ಟಿ ಶೆಟ್ಟಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.





















































































































