ಬಂಟ್ವಾಳ ತಾಲೂಕು ಕೊಯಿಲ ಗ್ರಾಮದ ಮಾಡಂದೂರು ನಿವಾಸಿ ಪ್ರಶಾಂತ್ ಶೆಟ್ಟಿ ಮತ್ತು ಸವಿತಾ ಶೆಟ್ಟಿ ದಂಪತಿಯ ಸುಪುತ್ರ ತೀರ್ಥೇಶ್ ಶೆಟ್ಟಿಯವರ ಸಾಧನೆಯ ಮುಕುಟಕ್ಕೆ ಹೊಸ ಗರಿ ಸೇರಿಕೊಂಡಿದೆ. ಚೀನಾದಲ್ಲಿ ನಡೆದ ಏಷ್ಯನ್ ರಿಲೇ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕ್ರೀಡಾ ಕೂಟದ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ರಜತ ಪ್ರಶಸ್ತಿ ವಿಜೇತರಾಗಿದ್ದಾರೆ. ಜೆ.ಎಸ್.ಡಬ್ಲ್ಯೂ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಪ್ರಸ್ತುತ ಇಂಡಿಯನ್ ಕ್ಯಾಂಪ್ ನಲ್ಲಿ ತರಬೇತಿ ಪಡೆಯುತ್ತಿರುವ ತೀರ್ಥೇಶ್ ಮುಂದಿನ ದಿನಗಳಲ್ಲಿ ತನ್ನದೇ ದಾಖಲೆಗಳನ್ನು ಮುರಿದು ಮುನ್ನುಗ್ಗಿ ವಿಶ್ವದಾಖಲೆಯನ್ನು ನಿರ್ಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಬೋಟ್ಸ್ವಾನಾದ ವಿಶ್ವ ರಿಲೇಸ್ ಆಯೋಜನೆಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶೇಷ ಅನುಭವ ಹೊಂದಿದ ಇವರು ಸಾಧನೆಯ ಹಾದಿಯಲ್ಲಿ ಹಿಂದಿರುಗಿ ನೋಡಲಿಲ್ಲ. ಒಂದರ ಮೇಲೊಂದು ರಾಷ್ಟ್ರೀಯ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಅನೇಕ ಪ್ರಶಸ್ತಿ ಪತ್ರಗಳನ್ನು ಪಡೆದ ಹೆಗ್ಗಳಿಕೆ ಇವರದ್ದು.





ವಿಶ್ವ ವಿದ್ಯಾಲಯ ಮಟ್ಟದಿಂದ ವಿಶ್ವ ಮಟ್ಟಕ್ಕೆ ಏರಿದ ಇವರು ಸದಾ ಪ್ರಯತ್ನ ಶೀಲರು. ಮುಂಬರುವ ಏಷ್ಯನ್ ಮತ್ತು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಪೂರ್ವಭಾವಿಯಾಗಿ ಯೋಗ್ಯ ಅಕಾಡೆಮಿ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಆಳ್ವಾಸ್ ಕಾಲೇಜಿನ ಪರಿಸರ ಮಿತ್ರರು, ತರಬೇತುದಾರರು ಇವರ ಕ್ರೀಡಾ ಜೀವನದ ಮೇಲೆ ಪರಿಣಾಮ ಬೀರಿದ ಫಲವೇ ಅವರ ಇಂದಿನ ಯಶಸ್ಸಿನ ಗಾಥೆಯ ಹಿಂದಿನ ಪ್ರೇರಣಾ ಶಕ್ತಿ. ಬಂಟ್ವಾಳದ ಗಲ್ಲಿಯಿಂದ ಆರಂಭಗೊಂಡ ಇವರ ಕ್ರೀಡಾ ಯಾತ್ರೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಆರಂಭಿಕ ದಿನಗಳಲ್ಲಿ ಅಂತರ್ ಕಾಲೇಜು ಮಟ್ಟದ ಖೇಲೋ ಇಂಡಿಯಾ, ಇಂಡಿಯನ್ ಅತ್ಲೆಟಿಕ್ಸ್ ಸೀರೀಸ್, ರಾಷ್ಟ್ರೀಯ ಓಪನ್ ಅತ್ಲೆಟಿಕ್ಸ್ ಮೊದಲಾದ ಕಡೆಗಳಲ್ಲಿ ಭಾಗವಹಿಸಿ ಚಿನ್ನ ಗೆದ್ದ ಹೆಗ್ಗಳಿಕೆ ತೀರ್ಥೇಶ್ ಅವರಿಗಿದೆ. ರೈಲ್ವೆ ತಂಡದ ಸ್ಪರ್ಧೆಯಲ್ಲಿ ಹತ್ತು ವರ್ಷಗಳ ಹಳೆ ದಾಖಲೆ ಮುರಿದ ಕೀರ್ತಿಯೂ ಇವರಿಗಿದೆ.
ಪುಣ್ಯ ಸಿಲ್ಕ್ಸ್ ಸೀರೆ ವ್ಯಾಪಾರ ಮಳಿಗೆ ಹೊಂದಿದ ತಾಯಿ ಯಶಸ್ವಿ ಮಹಿಳಾ ಉದ್ಯಮಿ ಸವಿತಾ ಪಿ ಶೆಟ್ಟಿ ಹಾಗೂ ತಂದೆ ಪ್ರಶಾಂತ್ ಶೆಟ್ಟಿಯವರ ನಿರಂತರ ಪ್ರೋತ್ಸಾಹ ತನ್ನನ್ನು ಇಂದಿನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಭಾವುಕರಾಗಿ ನುಡಿಯುವ ತೀರ್ಥೆಶ್ ಶೆಟ್ಟಿಯವರು ಕರ್ನಾಟಕ ರಾಜ್ಯದ ಕ್ರೀಡಾಪಟುಗಳ ಪಾಲಿಗೆ ಪ್ರೇರಣಾಶಕ್ತಿಯಾಗಿದ್ದಾರೆ. ಭವಿಷ್ಯದ ಭರವಸೆಯ ತಾರೆ ರಾಮಕುಂಜ ಶಾಲೆಯ ಹಾಸ್ಟೆಲ್ನಲ್ಲಿದ್ದ ಸಾಮಾನ್ಯ ಬಾಲಕ ಇಂದು ಚೀನಾ ಮತ್ತು ಬೋಟ್ಸ್ವಾನಾದ ಅಂತರಾಷ್ಟ್ರೀಯ ಟ್ರ್ಯಾಕ್ಗಳಲ್ಲಿ ದೇಶದ ಧ್ವಜ ಹಿಡಿದು ಪದಕ ಗೆಲ್ಲುವ ಹಂತಕ್ಕೆ ಬೆಳೆದಿರುವುದು ಕರಾವಳಿ ಹಾಗೂ ಇಡೀ ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಅತ್ಯಂತ ಸ್ಪೂರ್ತಿದಾಯಕವಾಗಿದೆ. ಪ್ರಸ್ತುತ ದೇಶೀಯ ರೈಲ್ವೆ ಸ್ಪರ್ಧೆಗಳ ದಾಖಲೆಗಳನ್ನು ಮುರಿಯುತ್ತಾ ಮುಂದಿನ ಏಷ್ಯಾನ್ ಗೇಮ್ಸ್ ಹಾಗೂ ಒಲಿಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಭಾರತಕ್ಕೆ ಕೀರ್ತಿ ತರುವ ಮಹತ್ವಾಕಾಂಕ್ಷೆ ಹೊಂದಿದ ಉದಯೋನ್ಮುಖ ಕ್ರೀಡಾ ಸಾಧಕ ತೀರ್ಥೇಶ್ ಶೆಟ್ಟಿ ಅವರಿಗೆ ಸರ್ವ ವಿಧದ ಯಶಸ್ಸು ದೊರೆಯಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.



ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು




















































































































