ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಇದೇ ನವೆಂಬರ್ 11ರಿಂದ 17ರ ವರೆಗೆ ನಡೆಯುವ 12ನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ರಲ್ಲಿ ಸಾಧಕ ಕಲಾವಿದರ ಸಮ್ಮಾನ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಕೀರ್ತಿಶೇಷ ಕಲಾವಿದರ ಸಂಸ್ಮರಣಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಸಂದರ್ಭ ನವೆಂಬರ್ 12 ರಂದು ತೆಂಕು ತಿಟ್ಟಿನ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟರಿಗೆ ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ ಮತ್ತು ದಿನಾಂಕ 17ರಂದು ಸಮಾರೋಪ ಸಮಾರಂಭದಲ್ಲಿ ಹವ್ಯಾಸಿ ಭಾಗವತ ಮತ್ತು ಪ್ರಸಂಗಕರ್ತ ಕೆ.ಎಸ್. ಮಂಜುನಾಥ ಶೇರೆಗಾರ್ ಹರಿಹರಪುರ ಅವರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ತೆಂಕುತಿಟ್ಟು ಯಕ್ಷಗಾನದಲ್ಲಿ ರಂಗಸ್ಥಳದ ರಾಜ ಎಂದೇ ಖ್ಯಾತರಾದ ಅರುವ ಕೊರಗಪ್ಪ ಶೆಟ್ಟರು ಪ್ರಸ್ತುತ 85ರ ಇಳಿ ವಯಸ್ಸಿನಲ್ಲೂ ವೇಷ ಮಾಡುವ ಹುಮ್ಮಸ್ಸು ಉಳಿಸಿಕೊಂಡ ಮೇರು ಕಲಾವಿದ. ಬೆಳ್ತಂಗಡಿ ತಾಲೂಕಿನ ಬಡಗ ಕಾರಂದೂರು ಗ್ರಾಮದ ಕಟ್ಟಪುಣಿ ಮನೆಯಲ್ಲಿ ಸುಬ್ಬಯ್ಯಶೆಟ್ಟಿ ಮತ್ತು ಕಾಂತಕ್ಕೆ ದಂಪತಿಗೆ 1940 ನವೆಂಬರ್ 24ರಂದು ಜನಿಸಿದ ಅವರು ಓರ್ವ ಪ್ರಗತಿಪರ ಕೃಷಿಕರಾಗಿಯೂ ಪ್ರಸಿದ್ಧರು. ದಿ. ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯ ಕಲಿತು ನಿರಂತರ ಏಳು ದಶಕಗಳ ತಿರುಗಾಟ ನಡೆಸಿದ ಚರಿತ್ರ ನಟ ಅರುವ. ಕರ್ನಾಟಕ ಮೇಳ ಒಂದರಲ್ಲೇ 35 ವರ್ಷ ಸೇವೆ ಸಲ್ಲಿಸಿದ ಅವರು ಕಟೀಲು, ಕುಂಡಾವು, ಕರ್ನಾಟಕ, ಸರಪಾಡಿ, ಬಪ್ಪನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ‘ದ್ರೌಪದಿ ವಸ್ತ್ರಾಪಹರಣ’ದ ದುಶ್ಯಾಸನ, ‘ಕಾಡಮಲ್ಲಿಗೆ’ಯ ಬೀರಣ್ಣ ಅವರಿಗೆ ಅಪಾರ ಜನಪ್ರಿಯತೆ ತಂದಿತ್ತ ಪಾತ್ರಗಳು. ಅಭಿಮನ್ಯು, ಬಬ್ರುವಾಹನ, ಚಂಡ ಮುಂಡ, ಅತಿಕಾಯ, ಹನುಮಂತ, ನಳ, ಋತುಪರ್ಣ, ಶ್ರೀಕೃಷ್ಣ, ಕೌರವ, ಕೋಟಿ, ದೇವುಪೂಂಜ, ಕೋರ್ದಬ್ಬು, ಕಾಂತಾಬಾರೆ, ಕೊಡ್ಸರಾಳ್ವ, ಕಾಂಜವ ಇತ್ಯಾದಿ ಪಾತ್ರಗಳಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಊರು ಪರವೂರುಗಳಲ್ಲಿ ನೂರಾರು ಮಾನ ಸಮ್ಮಾನಗಳಿಗೆ ಪಾತ್ರರಾಗಿರುವ ಅರುವ ಕೊರಗಪ್ಪ ಶೆಟ್ಟರು ಪತ್ನಿ ಮಹಾಲಕ್ಷ್ಮಿ ಹಾಗೂ ಈರ್ವರು ಮಕ್ಕಳನ್ನು ಪಡೆದಿರುವ ಸದ್ಗೃಹಸ್ಥರು.
ಕೊಪ್ಪ ತಾಲೂಕಿನ ಹರಿಹರಪುರ ಸೂರಳಿ ಶ್ಯಾಮ ಶೇರೆಗಾರ ಮತ್ತು ಕಲ್ಯಾಣಮ್ಮ (ಜಾನಕಿ) ದಂಪತಿಗೆ 1957 ಮೇ 20ರಂದು ಜನಿಸಿದ ಕೆ.ಎಸ್.ಮಂಜುನಾಥ ಶೇರೆಗಾರರು ಕೊಪ್ಪಗಡಿಕಲ್ಲು, ಬೊಮ್ಮಲಾಪುರಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಮುಂದೆ ಉಡುಪಿಯ ಕೋಟೇಶ್ವರದಲ್ಲಿ ಪ್ರೌಢ ಮತ್ತು ಪದವಿ ವ್ಯಾಸಂಗ ಮಾಡಿದರು. ವಿಜ್ಞಾನ ಪದವೀಧರರಾದ ಅವರು ಸಂಸ್ಕೃತ ಕೋವಿದ ಮತ್ತು ಹಿಂದಿ ಪ್ರವೀಣ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. ಕೇಂದ್ರ ಸರಕಾರದ ದೂರವಾಣಿ ಇಲಾಖೆಯಲ್ಲಿ ಅಭಿಯಂತರರಾಗಿ ಮಂಗಳೂರು ಮತ್ತು ಶಿವಮೊಗ್ಗಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಬಳಿಕ ಹಾಸನ ವಿಭಾಗದ ಭಾರತೀಯ ಸಂಚಾರ ನಿಗಮ ನಿಯಮಿತದಲ್ಲಿ ಉಪಮಂಡಲ ಅಭಿಯಂತರರಾಗಿ ನಿವೃತ್ತಿ ಹೊಂದಿದರು. ಎಳವೆಯಿಂದಲೇ ಯಕ್ಷಗಾನದತ್ತ ಆಸಕ್ತರಾಗಿದ್ದ ಮಂಜುನಾಥರು ತೆಂಕು ಹಾಗೂ ಬಡಗು ತಿಟ್ಟಿನ ಭಾಗವತಿಕೆ ಅಭ್ಯಸಿಸಿ ಹವ್ಯಾಸಿ ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. 1984ರಲ್ಲಿ ಮಂಗಳೂರಿನ ಗೌರಿಮಠ ರಸ್ತೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಕಲಾಸಂಘವನ್ನು ಸಮಾನ ಮನಸ್ಕರೊಂದಿಗೆ ಕಟ್ಟಿ ನಿರಂತರ ಐದು ವರ್ಷ ವಾರದ ಕೂಟ, ತಾಳಮದ್ದಳೆ ಸಪ್ತಾಹ, ಬಯಲಾಟ ಮತ್ತು ವಿಚಾರ ಸಂಕಿರಣಗಳನ್ನು ನಡೆಸುವಲ್ಲಿ ಅವರದು ಪ್ರಮುಖ ಪಾತ್ರ. ಅಲ್ಲದೆ ಅಂಚೆ ತಂತಿ ಯಕ್ಷಗಾನ ಕಲಾಸಂಘ ಪಾಂಡೇಶ್ವರ ಮತ್ತು ದೂರವಾಣಿ ಯಕ್ಷಗಾನ ಕೇಂದ್ರಗಳ ಮೂಲಕ ಯಕ್ಷಗಾನೀಯ ಚಟುವಟಿಕೆಗಳನ್ನು ನಡೆಸಿ ಇಲಾಖೆಯ ವರಿಷ್ಠರ ಗಮನ ಸೆಳೆದರು. ಕೋಟೇಶ್ವರ, ಆನೆಗುಡ್ಡೆ, ಹರಿಹರಪುರಗಳಲ್ಲಿ ಹಲವು ತಾಳಮದ್ದಳೆ ಕೂಟಗಳನ್ನು ಆಯೋಜಿಸಿದ ಹೆಗ್ಗಳಿಕೆ ಅವರದು. 2004ರಲ್ಲಿ ಕೊಪ್ಪ ತಾಲೂಕಿನಲ್ಲಿ ‘ಯಕ್ಷ ವೇದಿಕೆ ಹರಿಹರಪುರ’ವನ್ನು ಸ್ಥಾಪಿಸಿ ಪ್ರತಿ ತಿಂಗಳು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ತಾಳಮದ್ದಳೆಗಳನ್ನು ನಡೆಸುವುದಲ್ಲದೆ ವಿಶೇಷ ಸಂದರ್ಭಗಳಲ್ಲಿ ಸರಣಿ ತಾಳಮದ್ದಳೆ, ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಹಿರಿಯ ಕಲಾವಿದರ ಸನ್ಮಾನ ಸಂಸ್ಮರಣೆಗಳನ್ನು ಏರ್ಪಡಿಸುತ್ತಿದ್ದಾರೆ. ಯಕ್ಷಗಾನ ಪ್ರಸಂಗಕರ್ತರಾಗಿ ಸುಮಾರು 32 ಪ್ರಸಂಗಗಳನ್ನು ಅವರು ಬರೆದಿದ್ದಾರೆ. ಶ್ರೀ ಗಣೇಶೋದ್ಭವ, ಶ್ರೀ ಕೋಟಿಲಿಂಗೇಶ್ವರ ಕ್ಷೇತ್ರ ಮಹಾತ್ಮೆ, ಶಿವ ದೀಕ್ಷೆ, ಮಹಾಮುನಿ ಸೌಭರಿ, ಚಿತ್ರೋಪಾಖ್ಯಾನ, ನೀಲಾವರ ಕ್ಷೇತ್ರ ಮಹಾತ್ಮೆ, ಶ್ರೀಮದ್ಭಾಗವತ ಮಹಾತ್ಮೆ, ಪುರಂಜನೋಪಖ್ಯಾನ, ಕೆರೆಗೆ ಹಾರ, ಬ್ರಹ್ಮ ಸೃಷ್ಟಿ, ಮಹಾಮಾರಿ ರಾಜಯಕ್ಷ್ಮ, ಹಾಸ್ಯರತ್ನ ರಾಮಕೃಷ್ಣ.. ಇತ್ಯಾದಿ ಪ್ರಸಂಗಗಳನ್ನು ವಿವಿಧ ಯಕ್ಷಗಾನ ತಂಡಗಳು ಹಾಗೂ ಮೇಳಗಳು ಪ್ರದರ್ಶನಕ್ಕೆ ಬಳಸಿಕೊಂಡಿವೆ. ಸ್ತೋತ್ರಮಂಜರಿ, ಕಾವ್ಯಮಂಜರಿ, ಹತ್ತು ಲೇಖನ ಸಂಚಯ ಮೊದಲಾದವು ಅವರ ಇತರ ಬರಹಗಳು. ‘ಶ್ರೀ ಮಂಜುನಾಥ ವಚನಾಮೃತ’ ಎಂಬ ಬೃಹತ್ ವಚನ ಸಾಹಿತ್ಯ ಗ್ರಂಥ ರಚನೆಯಲ್ಲಿ ತೊಡಗಿರುವ ಮಂಜುನಾಥ್ ಈಗಾಗಲೇ 44,450 ವಚನಗಳನ್ನು ಬರೆದು ಪೂರೈಸಿದ್ದು ಯೋಗ್ಯ ಪ್ರಕಾಶಕರ ನಿರೀಕ್ಷೆಯಲ್ಲಿದ್ದಾರೆ. ಈ ಎಲ್ಲಾ ಕೆಲಸಗಳಿಗಾಗಿ ರಾಜ್ಯಮಟ್ಟದ ಬಸವ ಶಾಂತಿ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ದ.ರಾ.ಬೇಂದ್ರೆ ಕಾವ್ಯ ಪ್ರಶಸ್ತಿ, ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಸಾಹಿತ್ಯ ಸಿರಿ ಇತ್ಯಾದಿ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ತಾನು ದುಡಿದ ಹಣದಲ್ಲಿ ಅರ್ಧಾಂಶವನ್ನು ದೇವಸ್ಥಾನ, ಪೂಜೆ ಪುನಸ್ಕಾರಗಳಿಗಾಗಿ ವ್ಯಯಿಸುವ ಕೆ.ಎಸ್. ಮಂಜುನಾಥರು ಹರಿಹರಪುರದಲ್ಲಿ ದೇವಸ್ಥಾನವೊಂದನ್ನು ಕಟ್ಟಿಸಿದ್ದಾರೆ. ಪ್ರಸ್ತುತ ಪತ್ನಿ ವಿಜಯಲಕ್ಷ್ಮಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರೊಂದಿಗೆ ಹರಿಹರಪುರ ಶಾಂತಿನಗರದಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ.
ಯಕ್ಷಗಾನ ಕಲೆಯ ವಿವಿಧ ಪ್ರಕಾರಗಳಲ್ಲಿ ದುಡಿದು ನಮ್ಮನ್ನಗಲಿ ಹೋದ ಹಿರಿಯ ಮಹನೀಯರನ್ನು ಸ್ಮರಿಸಿ ಸಪ್ತಾಹದ ಎಲ್ಲಾ ದಿನಗಳಲ್ಲಿ ಯಕ್ಷಾಂಗಣ ವತಿಯಿಂದ ಸಂಸ್ಮರಣ ಕಾರ್ಯಕ್ರಮವನ್ನು ನಡೆಸಲಾಗುವುದು. ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನವೆಂಬರ್ 11ರಂದು ಉದ್ಘಾಟನೆಗೊಂಡು ಪ್ರತಿದಿನ ಸಾಯಂಕಾಲ ಗಂಟೆ 4: 30ಕ್ಕೆ ಜರಗುವ ತಾಳಮದ್ದಳೆಯ ಜೊತೆಗೆ ಕ್ರಮವಾಗಿ ಕೀರ್ತಿಶೇಷರಾದ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ವಿದ್ವಾನ್ ಕೆ.ಕಾಂತ ರೈ ಮೂಡಬಿದಿರೆ, ಕುಂಬಳೆ ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಎ.ಕೆ. ನಾರಾಯಣ ಶೆಟ್ಟಿ ಫರಂಗಿಪೇಟೆ ಮತ್ತು ಎ.ಕೆ. ಮಹಾಬಲ ಶೆಟ್ಟಿ ಇವರ ಸರಣಿ ಸಂಸ್ಮರಣೆ ನಡೆಯಲಿದೆ ಎಂದು ಭಾಸ್ಕರ ರೈ ತಿಳಿಸಿದ್ದಾರೆ.