ಭೂಮಿಯನ್ನು ತಂಪಾಗಿಸಿ, ಮಾತಾವರಣವನ್ನು ಸಮತೋಲನದಲ್ಲಿರಿಸುವ ಮ್ಯಾಂಗ್ರೋವ್ ಜಾಗತಿಕ ಹವಾಮಾನ ಸ್ಥಿರತೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಸಂಗ್ರಹಿಸಿ ಜಾಗತಿಕ ಮಟ್ಟದಲ್ಲಿ ಇಂಗಾಲದ ಚಕ್ರವನ್ನು ನಿಯಂತ್ರಿಸಲು ಮ್ಯಾಂಗ್ರೋವ್ ಅತೀ ಅಗತ್ಯ. ಭೂಮಿ ಮತ್ತು ಸಮುದ್ರವನ್ನು ಸುತ್ತುವರಿದ ಈ ಕಾಡು ಆರೋಗ್ಯಕರ ಪರಿಸರ ವ್ಯವಸ್ಥೆಯ ಭದ್ರಕೋಟೆ. ಎಲ್ಲಿಯಾದರೂ ಈ ಕಾಡುಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಾ ಹೋದರೆ ಮಾನವ ಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಮ್ಯಾಂಗ್ರೋವ್ ಮರಗಳು ನೈಸರ್ಗಿದತ್ತ ವರವಾಗಿದ್ದು, ಪ್ರಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಪರಿಸರದ ಉಷ್ಣಾಂಶ ತಗ್ಗಿಸಲು, ಭೂಮಿಯಲ್ಲಿನ ಅಂತರ್ಜಲವನ್ನು ಕಾಪಾಡುವಲ್ಲಿ ನಿಸರ್ಗದತ್ತವಾದ ಈ ಮರಗಳು ಒಮ್ಮೆ ಭೂಮಿಯಿಂದ ಕಣ್ಮರೆಯಾದರೆ ಮತ್ತೆ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಇದೇ ರೀತಿಯಾಗಿ ಹಲವಾರು ವಿಧದ ಮರಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ.ಹೆಚ್ಚಾಗಿ ಜೌಗು ಪ್ರದೇಶಗಳಲ್ಲಿ ಕಾಣಸಿಗುವ ಕಡಲ ಬಾಚುಗಳು, ಅಳಿವೆ ಮತ್ತು ಸಮುದ್ರ ಕಿನಾರೆಯಲ್ಲಿ ಉದ್ದಕ್ಕೂ ಹರಡಿ ಬೆಳೆದ ವಿಶೇಷ ಮರಗಳು. ಇವುಗಳ ಸಮೂಹವನ್ನು ಕಾಂಡ್ಲ ಕಾಡು ಎಂತಲೂ ಕರೆಯುವುದುಂಟು. ನಿಸರ್ಗದ ಅಚ್ಚರಿಗಳಲ್ಲಿ ಕಾಂಡ್ಲ ವನವೂ ಒಂದು. ನದಿ ಮತ್ತು ಸಮುದ್ರಗಳು ಸೇರುವ ಸಂಗಮದಲ್ಲಿ ಬೆಳೆದು ನಿಲ್ಲುವ ಸಸ್ಯವರ್ಗ. ಗಾಢ ಹಸಿರು ಎಲೆಗಳು ಮತ್ತು ನೀರನ್ನು ಅವಲಂಭಿಸಿ ಉದ್ದ ಬೇರುಗಳನ್ನು ಬಿಡುವ ಸಸ್ಯವಿದು.
ಊರು ಬೆಳೆದು ಕಾಡುಗಳು ಕಡಿಮೆ ಆದಂತೆ ಮ್ಯಾಂಗ್ರೊವ್ ಗಿಡಗಳು ಇತ್ತೀಚೆಗೆ ಕಡಿಮೆ ಆಗುತ್ತಿರುವುದು ಅಪಾಯದ ಸಂಕೇತ. ವೇಗವಾಗಿ ಈ ಸಸ್ಯಗಳು ಕ್ಷೀಣಿಸುತ್ತಿದೆ. ಹವಾಮಾನ ಬದಲಾವಣೆಯು ಈ ಮರಗಳ ಮೇಲೆ ತೀವ್ರ ಪರಿಣಾಮ ಬಿರಿದೆ. ಸಮೀಕ್ಷಾ ಅಧ್ಯಯನದ ವರದಿಯೊಂದರಲ್ಲಿ ಬಂದ ಹೇಳಿಕೆಯಂತೆ ಮ್ಯಾಂಗ್ರೋವ್ ಗಿಡಗಳು ಕಡೆಗಣಿಸಲ್ಪಡುತ್ತಿದೆ. ಪರಿಸರದ ಮೇಲಿನ ಮನುಷ್ಯನ ಮಿತಿ ಮೀರಿದ ದಾಳಿಯಿಂದಾಗಿ ಅಪಾಯದಲ್ಲಿದೆ. ಎಲ್ಲಿಯಾದರೂ ಈ ಸಸ್ಯಗಳು ಅಳಿವಿನಂಚಿಗೆ ಸರಿದರೆ ಜೀವ ವೈವೀಧ್ಯತೆಯ ತಾಣವನ್ನು ಕಳೆದುಕೊಂಡಂತೆ. ಅಷ್ಟೇ ಅಲ್ಲದೇ ಮ್ಯಾಂಗ್ರೋವ್ ಮರಗಳ ದ್ರಢವಾದ ಬೇರು ನದಿ, ಸಮುದ್ರ ನೀರು ರಭಸದಿಂದ ಭೂಮಿ ಕೊರೆತವನ್ನು ತಡೆಗಟ್ಟುತ್ತದೆ.
ಈ ಸಸ್ಯಗಳು ವಿಶಿಷ್ಟ ಜಲಚರಗಳ ನೆಲೆಗೆ, ಪಕ್ಷಿಗಳು ಗೂಡು ಕಟ್ಟಲು ಆಸರೆಯ ತಾಣ. ಮ್ಯಾಂಗ್ರೋವ್ ಸಸ್ಯ ಅನೇಕ ಪ್ರಾಣಿ, ಪಕ್ಷಿಗಳು ಕಾಂಡ್ಲ ಬೇರುಗಳ ಶಾಖೆಗಳಲ್ಲಿ ಆಶ್ರಯ ಪಡೆಯುತ್ತವೆ. ಸಂತಾನಾಭಿವೃಧ್ದಿಗಾಗಿ ವಲಸೆ ಹೋಗುವ ಮೀನುಗಳಿಗೆ ಕೂಡಾ ಆಶ್ರಯ ತಾಣ. ಕಾಂಡ್ಲಾ ಗಿಡದ ಸಂದಿನಲ್ಲಿ ಏಡಿ, ಸಿಗಡಿ, ಮೀನುಗಳು ಹೇರಳವಾಗಿ ಬದುಕುತ್ತವೆ. ವಲಸೆ ಪಕ್ಷಿಗಳಿಗೂ ಇದು ನೆಚ್ಚಿನ ತಾಣ. ಪ್ರಕೃತಿಯ ಸಮತೋಲನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಾಕೃತಿಕ ಅನಾಹುತಗಳು ಖಂಡಿತ. ಇಂದು ಭೌತಿಕ, ಜೈವಿಕ ಹಾಗೂ ಭೌಗೋಳಿಕ ಪರಿಸರದ ಆರೋಗ್ಯ ಕೆಟ್ಟಿದ್ದು ಕುಡಿವ ನೀರು, ಸೇವಿಸುವ ಗಾಳಿ, ನಡೆದಾಡುವ ಭೂಮಿ ಮಲಿನಗೊಂಡು ತಾಪಮಾನ ಏರಿಕೆ ಆಗುತ್ತಿದೆ. ಸಮತೋಲನ ತಪ್ಪಿದ ಪರಿಸರದಿಂದಾಗಿ ಮುಂದೆ ಒದಗಿ ಬರಬಹುದಾದ ಅನಾಹುತಗಳು ಬಹು ಗಂಭೀರ. ಪರಿಸರ ಹಾನಿ ಇದರ ಅರ್ಥವೇ ಜೀವ ಕೋಟಿಗಳ ಅವನತಿ. ಪರಿಸರ ರಕ್ಷಣೆಯ ಕೂಗು ನಿನ್ನೆ ಮೊನ್ನೆಯದಲ್ಲವಾದರೂ ಮಾನವರ ದುಷ್ಕೃತ್ಯಗಳನ್ನು ತಡೆಯಲಾರದೆ ಪ್ರಥ್ವಿ ನಲುಗುತ್ತಿದೆ.
ತನ್ನ ಪ್ರಗತಿಯ ಬಗ್ಗೆ ಯೋಚಿಸುತ್ತಾ ಯೋಜನೆಗಳನ್ನು ರೂಪಿಸಿಕೊಳ್ಳುವ ಮಾನವ ಪರಿಸರವನ್ನು ಸ್ವೇಚ್ಛೆಯಾಗಿ ನಾನಾ ತರದಲ್ಲಿ ಬಳಸಿಕೊಳ್ಳುತ್ತಿದ್ದಾನೆ. ಮಾನವನ ದುಷ್ಕತ್ರ್ಯಗಳಿಂದ ಪೃಥ್ವಿಯು ವಿರೂಪಗೊಳ್ಳುತ್ತಿದೆ. ಸೃಷ್ಟಿಯ ಸಂತುಲಿತ ಚಲನೆಗೆ ಮತ್ತು ಮನುಷ್ಯ ಜೀವನಕ್ಕೆ ಉಪಯುಕ್ತವಾಗಿರುವ ಪ್ರಕೃತಿ ಕಲಿಸಿದ ಪಾಠ ಮರೆಯದಿದ್ದರೆ ಉತ್ತಮ ಭವಿಷ್ಯ ನಮ್ಮ ಮುಂದೆ ಇದೆ. ಆದರೆ ಮಾನವ ನಿರ್ಮಿತ ಅನಾಹುತ ಒಂದೇ? ಎರಡೇ? ಪ್ರಕೃತಿ ವಿಕೋಪದ ಮುಂದೆ ಮನುಷ್ಯನ ಬುದ್ಧಿಶಕ್ತಿ ಗೌಣ. ಪ್ರಕೃತಿಯ ಮೇಲೆ ಮಾನವ ನಡೆಸಿದ ದುರಾಕ್ರಮಣ ಎಲ್ಲಾ ದುಸ್ಥಿತಿಗಳಿಗೂ ಕಾರಣ. ಮ್ಯಾಂಗ್ರೋವ್ ಅಂತಹ ಸಸ್ಯಗಳ ಸಂರಕ್ಷಿಸಿ ಉಳಿಸುವ ಕೆಲಸ ಪ್ರತಿಯೊಬ್ಬ ನಾಗರೀಕನದ್ದೂ ಆಗಿದೆ. ಮಾನವ ಆರೋಗ್ಯಪೂರ್ಣನಾಗಿ ಬದುಕಲು ಬೇಕಾದ ಉತ್ತಮ ಪರಿಸರ, ಪರಿಶುದ್ಧ ಗಾಳಿ, ನೀರು ಸಿಗಲೇ ಬೇಕೆಂದರೆ ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಲೇ ಬೇಕು.
ಹೆಚ್ಚಿನ ಲವಣಾಂಶ ಇರುವ ಕಡಲು ಹಾಗೂ ಕಡಲ ಹಿನ್ನೀರಿನಲ್ಲಿ ಬದುಕಬಲ್ಲ ದಟ್ಟವಾಗಿ ಒತ್ತಾಗಿ ಈ ಮರಗಳ ಸಂಕೀರ್ಣ ಬೇರುಗಳನ್ನು ಹೊಂದಿರುತ್ತವೆ. ಹೊರ ಚಾಚಿದ ಬೇರು ಈ ಗಿಡದ ರಕ್ಷಕ. ಭೂಮಿಯ ಸವಕಳಿಯನ್ನು ತಡೆಯುವ ಶಕ್ತಿವಂತ ಗಿಡಗಳು ಬೆಳೆದು ನಿಂತ ಕಾಡ್ಲ ವನಗಳು ಭೂಮಿಯ ಆರೋಗ್ಯಕ್ಕೆ ಪೂರಕ. ಭೂಮಿಯನ್ನು ಹೆಚ್ಚು ತಂಪಾಗಿಸಿ ವಾತಾವರಣವನ್ನು ಸಮತೋಲನದಲ್ಲಿರಿಸುವ ಶಕ್ತಿ ಮ್ಯಾಂಗ್ರೋವ್ ಮರಗಳಿಗಿವೆ.ಮುಂಬಯಿಯಲ್ಲಿ 2 ದಶಕಗಳ ಹಿಂದೆ ಕಾಂಡ್ಲವನದ ಕಾಂಡವೊಂದು ಎಷ್ಟು ದಟ್ಟವಾಗಿ ಬೆಳೆದು ನಿಂತಿತೆಂದರೆ ಕಾಂಡ್ಲವನದಲ್ಲಿ ಟೆಂಟ್ ನಿರ್ಮಿಸಿ ಗಂಟೆಗಳ ಲೆಕ್ಕಾಚಾರದಲ್ಲಿ ಬಾಡಿಗೆಗೆ ಮುಂಬಯಿಯ ಪ್ರೇಮಿಗಳಿಗೆ ಏಕಾಂತದ ಕೊರತೆ ನೀಗಿಸಲು ನವಿ ಮುಂಬಯಿಯ ಮಿನಿ ಚೌಪಾಟಿ ಎಂಬ ಹೆಸರಿನ ಸಮುದ್ರ ತೀರದಲ್ಲಿ ಕಾಂಡ್ಲವನವನ್ನು 10 ರಿಂದ 20 ಮೀಟರ್ ತನಕ ಗಿಡಗಳ ಕೊಂಬೆ ರಂಬೆಗಳನ್ನು ಕತ್ತರಿಸಿ ಒಂದಿಷ್ಟು ಜಾಗ ಮಾಡಿ ಹಗುರಾದ ಹಾಸಿಗೆ ಹಾಸಿ ಟೆಂಟ್ ರಚಿಸಿ ಪ್ರೇಮಿಗಳಿಗೆ ಬಾಡಿಗೆ ನೀಡುತ್ತಿದ್ದ ಕಾನೂನು ಬಾಹಿರ ಕೃತ್ಯ ಪೋಲಿಸರಿಗೆ ತಿಳಿದು ರೈಡ್ ಮಾಡಿದಾಗ ಕದ್ದು ಮುಚ್ಚಿ ಪ್ರೇಮಿಸುತ್ತಿದ್ದ ಪ್ರೇಮಿಗಳನ್ನು ಬಂಧಿಸಿದ್ದರು. ಆದರೆ ಟೆಂಟ್ ಕಟ್ಟಲು ಕಾಂಡ್ಲವನ ಕಡಿದ ಖದೀಮರು ಸೆರೆ ಸಿಕ್ಕಿಲ್ಲ. ಪ್ರಕೃತಿಯ ಸಮತೋಲನಕ್ಕೆ ಪರಿಸರ ರಕ್ಷಣೆ ಪೂರಕ. ಪರಿಸರವನ್ನು ನಾವು ಅವಲಂಬಿಸಿದ್ದೇವೆಯೇ ಹೊರತು ಅದು ನಮ್ಮನ್ನು ಅವಲಂಬಿಸಿಲ್ಲ ಎಂಬುದನ್ನು ಮೊದಲು ಗಮನಿಸಿಕೊಳ್ಳಬೇಕು. ಭೂರಮೆಯ ಒಡಲು ವಿಸ್ಮಯಗಳ ಆಗರ ಆದರೆ ಮಾನವನ ಅತಿ ಆಸೆಯಿಂದ ಪ್ರಕೃತಿಯ ಮೇಲೆ ವಿಧ್ವಂಸಕ ಕೃತ್ಯಗಳ ಆಕ್ರಮಣಗಳು ಆಗುತ್ತಿದ್ದರೂ ಎಲ್ಲವನ್ನೂ ಸಹಿಸಿಕೊಂಡ ಭೂಮಿ ಜೀವ ರಾಶಿಗಳನ್ನು ಕಾಪಾಡಿಕೊಂಡು ಬರುತ್ತಿದೆಯಾದರೂ ಒಂದಲ್ಲ ಒಂದು ದಿನ ತನ್ನ ತಾಳ್ಮೆಯನ್ನು ಕಳೆದುಕೊಂಡು ಯಾವುದೇ ರೂಪದಲ್ಲಿ ಆಕ್ರಮಿಸಿ ಬುದ್ದಿ ಕಲಿಸದೆ ಬಿಡಲಾರದು.
ಭೂಮಿಯ ತಾಪಮಾನ ಏರುತ್ತಲಿದೆ ಎಂಬ ಸೂಕ್ಷ್ಮತೆಯ ಬಗ್ಗೆ ಚಿಂತಿಸದೆ ನಿಸರ್ಗದ ಉಳಿವಿಗಾಗಿ ಹೋರಡಬೇಕಾದ ಮಾನವನೇ ನಿಸರ್ಗದ ಅನಾಹುತಕ್ಕೆ ಕಾರಣವಾಗುತ್ತಿರುವುದು ವಿಪರ್ಯಾಸ. ಪೃಕೃತಿಯನ್ನು ಅರಿತು ಯಾಕೆ ನಾವು ಬಾಳುತ್ತಿಲ್ಲ. ಈಗಾಗಲೇ ಹಲವು ಪಾಠ ಕಲಿಸಿದ ಪ್ರಕೃತಿಯೆದುರು ನಾವ್ಯಾಕೆ ಮೂರ್ಖರಾಗುತ್ತಿದ್ದೇವೆ? ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸ ವೇಷನ್ ಆಫ್ ನೇಚರ್ (IUVN) ನೈಸರ್ಗಿಕ ವಾಟರ್ ಟ್ಯಾಂಕ್ ಎಂದು ಕರೆಯುವ ಬಾಬಾಬ್ ಮರಗಳು (Baobab Tree) ಮತ್ತು ಮ್ಯಾಂಗೋವ್ ಮರಗಳು ಅಳಿವಿನಂಚಿಗೆ ಸರಿಯುತ್ತಿದೆ ಎಂದು ಸೂಚಿಸಿದ್ದು, 2080 ರ ವೇಳೆಗೆ ಈ ವರ್ಗದ ಕೆಲವು ಮರಗಳು ಸಂಪೂರ್ಣವಾಗಿ ನಾಶ ಹೊಂದಲಿದೆ ಎಂದು ತಿಳಿಸಿದೆ. ಆದ್ದರಿಂದ ಈ ಸಸ್ಯ ಸಂಕುಲಗಳ ಉಳಿವಿಗೆ ಕಾರ್ಯ ಪ್ರವರ್ತರಾಗಬೇಕು.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ