ಮಾತೃಮೂಲ ಪದ್ಧತಿಯ ಶಕ್ತಿಯ ಪ್ರಭಾವವನ್ನು ಅರ್ಥ ಮಾಡಿದ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕುಟುಂಬದ ಯಜಮಾನನ ಹಕ್ಕನ್ನು ಸ್ತ್ರೀಗಳಿಗೆ ನೀಡಿತು. ಇದರಿಂದಾಗಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಯಿತು. ಪ್ರತೀ ಮನೆಯ ರೇಷನ್ ಕಾರ್ಡಿನಲ್ಲಿ ಯಜಮಾನನ ಸ್ಥಾನದಲ್ಲಿ ಮನೆಯೊಡತಿಗೆ ಸ್ಥಾನ ನೀಡಲಾಯಿತು. ಅವಳೇ ಕುಟುಂಬದ ಪ್ರಧಾನಿಯಾದಳು. ಪಡಿತರ ವ್ಯವಸ್ಥೆ ಮಾತ್ರವಲ್ಲ ಆ ಕುಟುಂಬಕ್ಕೆ ಸರಕಾರದಿಂದ ನೀಡುವ ಯಾವುದೇ ಪರಿಹಾರ ಸಹಾಯಧನ ಇದ್ದರೂ ಅವಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಇಂದು ಜಮೆಯಾಗುತ್ತಿದೆ. ಇದ್ದ ಆದಾಯದಲ್ಲಿ ಕುಟುಂಬವನ್ನು ಹೇಗೆ ವ್ಯವಸ್ಥಿತವಾಗಿ ನಡೆಸಿಕೊಳ್ಳಬೇಕೆಂಬ ಬುದ್ಧಿವಂತಿಗೆ ಮಾತೆಯರಿಗೆ ಇದ್ದೇ ಇದೆ. ನಮ್ಮ ದೇಶದಾದ್ಯಂತ ಪಡಿತರ ಚೀಟಿಯನ್ನು ಮನೆಯ ಒಡತಿಯ ಭಾವಚಿತ್ರ ರಾರಾಜಿಸಲು ಮೂಲ ಕಾರಣ ತುಳುನಾಡಿನ ಮಾತೃ ಪ್ರಧಾನ ಪದ್ಧತಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.
ತುಳುನಾಡಿನಲ್ಲಿ ಮಾತ್ರ ಜಾರಿಯಲ್ಲಿ ಅಳಿಯ ಕಟ್ಟು ಸಂಪ್ರದಾಯಕ್ಕೆ ಅದೆಷ್ಟು ಶತಮಾನಗಳ ಇತಿಹಾಸವಿದೆ. ಬಾರ್ಕೂರು ಸಂಸ್ಥಾನವನ್ನು ಆಳಿದ ಭೂತಾಳ ಪಾಂಡ್ಯನು, ತನ್ನೆಲ್ಲಾ ಆಸ್ತಿಯನ್ನು ತಂಗಿಯ ಮಗನಿಗೆ ಕೊಟ್ಟಂದಿನಿಂದ ಇದು ಜಾರಿಯಾಯಿತು ಎನ್ನುತ್ತಾರೆ. ಸಮುದ್ರ ವ್ಯಾಪಾರಕ್ಕಾಗಿ ರಾಜನು ಹಡಗನ್ನು ಕಟ್ಟಿಸುತ್ತಾನೆ. ಆದರೆ ಏನು ಮಾಡಿದರೂ ನೀರಿಗೆ ಇಳಿಯುವುದಿಲ್ಲ. ಶತ ಪ್ರಯತ್ನಗಳೆಲ್ಲಾ ವ್ಯರ್ಥವಾಗುತ್ತದೆ. ಆಗ ಧರ್ಮ ದೈವ ಕುಂಡೋದರನನ್ನು ಸ್ಮರಿಸುತ್ತಾನೆ. ದೈವದ ಆಶರೀರವಾಣಿಯಾಗುತ್ತದೆ ನಿನ್ನ ಹಡಗಿನಲ್ಲಿ ನಾನು ವಾಸವಾಗಿದ್ದೇನೆ ನನಗೆ ನರ ಬಲಿ ಕೊಟ್ಟರೆ ನಿನ್ನಾಸೆ ಈಡೇರುವುದು. ಆಗ ಚಿಂತಾಕ್ರಾಂತನಾದ ರಾಜ ತನ್ನ ಪತ್ನಿಯನ್ನು ನಮಗಿರುವ ಏಳು ಮಕ್ಕಳಲ್ಲಿ ಒಂದನ್ನು ಬಲಿ ಕೊಡೋಣ ಎಂದಾಗ ಪತಿಯನ್ನು ಧಿಕ್ಕರಿಸಿ ತನ್ನೆಲ್ಲಾ ಮಕ್ಕಳನ್ನು ಕರೆದುಕೊಂಡು ತವರು ಸೇರುತ್ತಾಳೆ. ಇನ್ನೇನು ಗತಿ ಎಂದು ಕೊರಗುವಾಗ ಸಹೋದರಿಯು ತನ್ನ ಏಕ ಮಗನಾದ ಜಯನನ್ನು ಬಲಿಕೊಟ್ಟು ಅಣ್ಣನ ಮಾನ ಪ್ರಾಣ ರಕ್ಷಣೆಗೆ ಮಂದಾದಳು. ಬಲಿ ಕೊಡಲು ತಯಾರಾಗಿ ಕರ್ಮಿ ಖಡ್ಗ ಎತ್ತಿದಾಗ ಪ್ರತ್ಯಕ್ಷವಾದ ಕುಂಡೋದರ ದೈವವೂ ಮಗುವನ್ನು ಬಿಗಿದಪ್ಪಿ ತಾಯಿಯ ತಲೆಗೆ ಕೈಯಿಟ್ಟು ನಾನು ಕೇವಲ ನಿನ್ನ ಸಹೋದರ ಪ್ರೇಮವನ್ನು ಪರೀಕ್ಷಿಸಲು ಈ ನಾಟಕ ಎಂದಿತು ದೈವ. ರಾಜನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ತನ್ನೆಲ್ಲಾ ಆಸ್ತಿಪಾಸ್ತಿಯನ್ನು ಅಳಿಯನಿಗೆ ಒಪ್ಪಿಸಿ ತೌಳವ ದೇಶದ ಪಟ್ಟಾಭಿಷೇಕ ಮಾಡಿ ಅರಸೋತ್ತಿಗೆಯನ್ನು ನೀಡಿದನು. ಅಂದಿನಿಂದ ತುಳುನಾಡಿನಲ್ಲಿ ಮಾತೃ ಪ್ರಧಾನ ಅಳಿಯಕಟ್ಟು ಜಾರಿಯಾಯಿತು.
ತುಳುನಾಡಿನಲ್ಲಿ ಕೆಲವು ಪ್ರತಿಷ್ಠಿತ ಬಂಟ ಮನೆತನದಲ್ಲಿ ಆಸ್ತಿಯ ಹಕ್ಕು ಇಂದು ಕೂಡ ಸ್ತ್ರೀಯರ ಹೆಸರಲ್ಲಿ ನಿಕ್ಷೀಪ್ತವಾಗಿರುತ್ತಿತ್ತು. ಕುಟುಂಬದ ಪಾಲಿನಲ್ಲಿ ಸಿಕ್ಕಿದ ಭೂಮಿಯನ್ನು ಕುಟುಂಬದಿಂದ ಹೊರಗಿನವರಿಗೆ ಮಾರುವಂತಿಲ್ಲ. ಆದ್ದರಿಂದ ಸೋದರ ಸಂಬಂಧದಲ್ಲಿ ವಿವಾಹಗಳು ನಡೆಯುತ್ತಿತ್ತು. ಕೂಡಿ ಬಾಳುವುದೇ ಕುಟುಂಬ ಎಂಬ ಮಹತ್ತರ ಸಂದೇಶವನ್ನು ಸಾರುತ್ತಿದೆ ಅಲ್ಲವೇ. ತಾಯಿ ಮಕ್ಕಳನ್ನು ಹೆರುವುದು ಕತ್ತೆಯಂತೆ ದುಡಿಯುವ ಜೀತದಾಳುವಿನ ಕರಾಳ ಬದುಕಿನಿಂದ ಕುಟುಂಬದ ಪರಮಾಧಿಕಾರ ನೀಡಿ ಇದರ ಫಲದಿಂದ ನೆಮ್ಮದಿಯ ನಾಗರಿಕ ಸಮಾಜ ಇಂದು ರೂಪುಗೊಂಡಿತು. ಈ ಸಂಪೂರ್ಣ ಕೀರ್ತಿ ತುಳುನಾಡಿನ ಮಾತೃಮೂಲ ಪರಂಪರೆಗೆ ಸಲ್ಲಬೇಕು. ಮಾತೃ ದೇವೋಭವ ಮಿಕ್ಕ ಎಲ್ಲಾ ದೇವರ ಪೂಜೆಯ ಫಲ ಮಾತೃಪೂಜೆಯಲ್ಲಿ ಅಡಕವಾಗಿದೆ ಎಂದು ಶಾಸ್ತ್ರವಿದೆ.
-ಕಡಾರು ವಿಶ್ವನಾಥ್ ರೈ