ನಾನು ಅಲೆಮಾರಿ! ಹಿಂದಿನ ಜನ್ಮದಲ್ಲೆಲ್ಲೋ ನಾನು ಊರೂರು ಅಲೆದೇ ಬದುಕಿದ್ದ ಬರಿಗಾಲ ಪಕೀರನೋ? ಜೋಳಿಗೆಯ ಜೋಗಿಯೋ ಆಗಿರಬೇಕೇನೊ! ಸಂಚಾರವೇ ನನ್ನ ಚೈತನ್ಯಶೀಲತೆ. ಮೊನ್ನೆ ಹಾಗೆ ಹೋದದ್ದು ಧಾರವಾಡಕ್ಕೆ. ಅಲ್ಲಿನ ಎಸ್.ಡಿ.ಎಂ. ಅಂಗಳಕ್ಕೆ ಹೋದೆ. ಉತ್ತರಕ್ಕೆ ಹೋಗಲಿಕ್ಕೆ ಕೆಲಸವೂ ಇತ್ತು. ಅದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯ! ಪೂಜ್ಯ ಖಾವಂದರ ಕನಸು. ಅಲ್ಲಿ ಡಾ. ನಿರಂಜನ್ ಇದ್ದಾರೆ. ಅವರು ಅದರ ವೈಸ್ ಚಾನ್ಸಲರ್. ಜಗತ್ತಿನ ಸರ್ವಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಸಾಲಿನಲ್ಲಿ ಅವರೂ ಒಬ್ಬರಾಗಿ ನಿಂತಿದ್ದರು. ಅವರು ಯು.ಕೆಯಲ್ಲಿ ಅತ್ಯಂತ ಪ್ರಸಿದ್ದ ವೈದ್ಯರಾಗಿದ್ದವರು, ಜಗತ್ತಿನ ನಾನಾ ದೇಶಗಳು ಅವರನ್ನ ಆಹ್ವಾನಿಸುತ್ತಿದ್ದವು. ಡಾಕ್ಟರು 1993 ರ ಹೊತ್ತಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಬಂದದ್ದೇ ಸುದ್ದಿಯಾಗಿತ್ತು! ಆಗಲೇ ಅವರು ಸೆಲೆಬ್ರಿಟಿ ಪ್ಲಾಸ್ಟಿಕ್ ಸರ್ಜನ್! 2003 ರಲ್ಲಿ ನಿರಂಜನ್ ಸರ್ ಧಾರವಾಡಕ್ಕೆ ಬಂದಿಳಿದರು. ಅಲ್ಲಿ ವೀರೆಂದ್ರ ಹೆಗ್ಗಡೆಯವರು ಮೆಡಿಕಲ್ ಕಾಲೇಜು ಕಟ್ಟಿಸುವ ಕನಸು ಕಂಡಿದ್ದರು, ಅದಕ್ಕೆ ಕಸುವು ತುಂಬಲು, ಹೆಗಲು ನೀಡಲು ಡಾ.ನಿರಂಜನ್ ಬೇಕಿತ್ತು. ಇಂದು ಧಾರವಾಡದ ಸತ್ತೂರಿನ ಎಸ್.ಡಿ.ಎಂ ಯೂನಿವರ್ಸಿಟಿ ಉತ್ತರ ಕರ್ನಾಟಕದ ಭಾಗಕ್ಕೊಂದು ಜೀವಂತಿಕೆ ಕೊಟ್ಟಿದೆ. ನೀವು ಧರ್ಮಸ್ಥಳ ಏನು ಮಾಡಿದೆ ಎಂದು ಪ್ರಶ್ನೆ ಮಾಡುವವರನ್ನ ಒಮ್ಮೆ ಧಾರವಾಡಕ್ಕೆ ಕರೆದೊಯ್ದು ತೋರಿಸಿ! ಎರಡು ದಶಕದ ಹಿಂದೆ ಧಾರವಾಡದ ಆ ಊರಲ್ಲಿ ಆಸ್ಪತ್ರೆಯೊಂದು ಆರಂಭಗೊಳ್ಳುತ್ತದೆ, ಮತ್ತಲ್ಲಿ ಮೆಡಿಕಲ್ ಕಾಲೇಜಿನ ನಿರ್ಮಾಣವಾಗುತ್ತದೆ, ಅಲ್ಲಿಗೆ ಸಾವಿರಾರು ಜನ ಭೇಟಿ ನೀಡುತ್ತಾರೆ, ಲಕ್ಷಾಂತರ ವಿದ್ಯಾರ್ಥಿಗಳಿಗದು ಹೊಸ ಜೀವನ ಕೊಡುತ್ತದೆ ಎಂದು ಹೇಳಿದರೆ ನಂಬುವವರೇ ಇರಲಿಲ್ಲ! ಆದರೆ ಇಂದು? ಒಮ್ಮೆ ನೋಡಿ ಬನ್ನಿ.
ಎಸ್.ಡಿ.ಎಂ. ಆಸ್ಪತ್ರೆ ಸಾಮಾಜಿಕ ಸೇವೆಗೆ ಅದೆಷ್ಟು ಅದ್ಭುತವಾಗಿ ತೆರೆದುಕೊಂಡಿದೆ ಎನ್ನುವುದನ್ನ ಗಮನಿಸಿ ನಿಬ್ಬೆರಗಾಗಿ ಬಿಟ್ಟೆ! ಅಲ್ಲಿನ ಡಯಾಲಿಸಿಸ್ ವಾರ್ಡಿನಲ್ಲಿ ಎರಡು ಮೂರು ವಿಭಾಗಗಳಿವೆ, ಅಲ್ಲಿ ಸಿಗುತ್ತಿರುವ ಸೌಲಭ್ಯಗಳು ಅಷ್ಟು ಕಡಿಮೆ ವೆಚ್ಚದಲ್ಲಿ, ಅಷ್ಟು ಗುಣಮಟ್ಟದಲ್ಲಿ ಇನ್ನೆಲ್ಲಿಯೂ ಸಿಗಲಿಕ್ಕೆ ಸಾಧ್ಯವೇ ಇಲ್ಲವೇನೊ! ತಾಯಂದಿರ ಹಾಲನ್ನ ಸಂಗ್ರಹ ಮಾಡಿಡುವ human milk bank ಅಲ್ಲಿದೆ! ಮಕ್ಕಳು ಹುಟ್ಟಿದ ತಕ್ಷಣವೇ ಅವರ ಕಿವಿ ಸರಿಯಾಗಿ ಕೆಲಸ ಮಾಡುತ್ತಿದೆಯಾ ಇಲ್ಲವಾ? ಎಂದು ಪರಿಶೀಲಿಸಿ ಅದಕ್ಕೂ ಚಿಕಿತ್ಸೆ ನೀಡಿ ಆ ಮಕ್ಕಳು ಮೂಗರಾಗಿ, ಕಿವುಡರಾಗಿ ಬದುಕುವ ಅಪಾಯವನ್ನ ತಪ್ಪಿಸುವ ವಿಭಾಗವಿದೆ, ಬೆಳವಣಿಗೆ ಇಲ್ಲದ ಮಕ್ಕಳ ಕೈ ಹಿಡಿದು ನಡೆಸುವ ವೈದ್ಯರು, ಅವರಿಗೆ ಬದುಕು ಕಟ್ಟಿಕೊಡುವ ದಂಡು ಅಲ್ಲಿದೆ, ಅದಕ್ಕೊಂದು ವಿಭಾಗವೇ ಇದೆ. ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಆ ಆಸ್ಪತ್ರೆ ಡಾಕ್ಟರ್ ನಿರಂಜನ್ ಸರ್ ನೈತ್ರತ್ವದಲ್ಲಿ ನವ ಇತಿಹಾಸವನ್ನೇ ನಿರ್ಮಾಣ ಮಾಡಿದೆ. ಯಾವುದೋ international yoga center ಒಳಗೆ ಹೋದಂತೆ ಅನ್ನಿಸುತ್ತದೆ ಎಸ್.ಡಿ.ಎಂ. ಮೆಡಿಕಲ್ ಕಾಲೇಜಿಗೆ ಹೊಕ್ಕರೆ! Yes, ಆಸ್ಪತ್ರೆಗೊಂದು ಸೈನ್ಸ್ ಇದ್ದೇ ಇರುತ್ತದೆ ಮತ್ತು ಅದಕ್ಕೊಂದು ಸೆನ್ಸ್ ಕೂಡ ಇರಬೇಕಲ್ಲಾ? ಅದನ್ನ ನೀವಿಲ್ಲಿ ಗಮನಿಸಬಹುದು. ನಮ್ಮ ಮಂತ್ರಿಗಳು ಇದನ್ನ ಮಾದರಿಯಾಗಿ ತೆಗೆದುಕೊಂಡರೆ ರಾಜ್ಯಕ್ಕೆ ಅದೆಷ್ಟು ಅನುಕೂಲ!
ಆ ಮೆಡಿಕಲ್ ಕಾಲೇಜು ಹಾದು ಹೋಗುವಾಗ ಉತ್ತರಕರ್ನಾಟಕದ ಜನ ಕೈ ಮುಗಿದು ಹೋಗುತ್ತಾರೆ! ಆಗ ಅವರ ಕಾಲಿನ ಚಪ್ಪಲಿಯೂ ಕಳೆದಿರುತ್ತಾರೆ. ಎಸ್.ಡಿ.ಎಂ. ಇಂದು ಅಂಥಹ ಪ್ರಭಾವವನ್ನ ಸೃಷ್ಠಿಸಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಂತ ಪ್ರಖ್ಯಾತ ವೈದ್ಯರು ನಿಮಗಲ್ಲಿ ಚಿಕಿತ್ಸೆ ನೀಡುತ್ತಾರೆ. ಹಾಗಿನದ್ದೊಂದು ಕಾಲೇಜು ಅಲ್ಲಿ ಇರದೇ ಇದ್ದಿದ್ದರೆ ಆ ಉತ್ಕೃಷ್ಠ ಗುಣಮಟ್ಟದ ವೈದ್ಯರು ಪ್ರಪಂಚದ ಯಾವ ದೇಶದ ಯಾವ ಮೂಲೆಯಲ್ಲಿರುತ್ತಿದ್ದರೋ? ಅತ್ಯಂತ ಪರಿಣಿತರ ಸೇವೆ ನಮ್ಮ ನೆಲದ ಜನರಿಗೆ ಲಭ್ಯವಾಗಲಿಕ್ಕೆ ಕಾರಣಕರ್ತರು ಡಾ. ಹೆಗ್ಗಡೆ. ಇದನ್ನೆಲ್ಲ ಯಾಕೆ ಬರೆಯುತ್ತಿದ್ದೇನೆ ಎಂದರೆ ’ಠೀಕೆ ಮಾಡುತ್ತಲೇ ಇರುವವರು ಆ ಧರ್ಮಾತ್ಮನ ಇಂಥಹ ಅದ್ಭುತ ಕೆಲಸವನ್ನೂ ನೋಡಬೇಕಲ್ಲ? ಎಂದು. ಇಂದು ಅಂದಾಜು ಹತ್ತು ಸಾವಿರ ಕುಟುಂಬಕ್ಕೆ ಎಸ್.ಡಿ.ಎಂ. ಅನ್ನ ಮತ್ತು ಆಶ್ರಯ ಕೊಟ್ಟಿದೆ ಎಂದರೆ ನೀವು ನಂಬಲೇ ಬೇಕು. ಅದೆಷ್ಟೋ ಸಾವಿರ ವಿದ್ಯಾರ್ಥಿಗಳು ಅಲ್ಲಿಂದ ವೈದ್ಯರಾಗಿ ಹೊರ ಹೊಮ್ಮುತ್ತಿದ್ದಾರೆ. ಒಂದು ವಾರಕ್ಕೆ ಅಂದಾಜು ನಲವತ್ತು ಸಾವಿರ ಜನ ಹೊರರೋಗಿಗಳು ಈ ಆಸ್ಪತ್ರೆಗೆ ಭೇಟಿ ಕೊಡುತ್ತಾರೆ, ಆರೋಗ್ಯಸಂಬಂಧಿ ಸಮಸ್ಯೆಗಳ ಕಾರಣಕ್ಕೆ! ಮತ್ತೆ ಮರಳುವಾಗ ಅವರ ಮೊಗದಲ್ಲಿ ನಗುವಿರುತ್ತದೆ.ಆಸ್ಪತ್ರೆ ಅಂತಹದೊಂದು ಪವಾಡ ಮಾಡುತ್ತಿದೆ.
ನೀವು ಇದೊಂದು ಸಂಗತಿಯನ್ನ ಓದಲೇ ಬೇಕು: ಎಳನೀರಿನ ಅಂಗಡಿಯವನ ಪುಟ್ಟ ಮಗುವೊಂದು ಅಪ್ಪನ ಅನುಕರಿಸಿ ತನ್ನ ಎಡಗೈ ಕತ್ತರಿಸಿಕೊಂಡೇ ಬಿಟ್ಟಿತ್ತು! ಆ ಮಗುವಿಗೆ ಆಗಷ್ಟೇ ಎಂಟು ವರ್ಷ. ಎಸ್.ಡಿ.ಎಂ ಡಾಕ್ಟರು ರೇಡಿಯೋದಲ್ಲಿ ಹೇಳಿದ್ದು ಆತ ಕೇಳಿದ್ದ ’ದೇಹದ ಯಾವುದೇ ಅಂಗ ಕತ್ತರಿಸಿ ಹೋದರೆ ಆರು ಗಂಟೆಯ ಒಳಗೆ ಅದನ್ನ ಒಂದು ಪ್ಲಾಸ್ಟಿಕ್ ಕವರಿನಲ್ಲಿಟ್ಟು ಐಸುಗಳನ್ನ ಹಾಕಿ ಆಸ್ಪತ್ರೆಗೆ ತಂದರೆ ಮತ್ತೆ ಜೋಡಿಸಬಹುದು’ ಎಂಬುದನ್ನ ಅರ್ಥಮಾಡಿಕೊಂಡಿದ್ದ ಆತ ಆ ಮಗುವಿನ ತುಂಡಾದ ಕೈ ಸಮೇತ ಆಸ್ಪತ್ರೆಗೆ ಬಂದಿದ್ದ, ಆಗ ಅವನ ಬಳಿ ಇದ್ದದ್ದು ಹತ್ತತ್ತು ರೂಪಾಯಿ ಲೆಕ್ಕ ಹಾಕಿದರೆ ಎಂಟುನೂರು ರೂಪಾಯಿ! ಡಾ.ನಿರಂಜನ್ ’ನಿನ್ನಲ್ಲಿ ಹಣವಿಲ್ಲ, ಪ್ಲಾಸ್ಟಿಕ್ ಸರ್ಜರಿಗೆ ದೊಡ್ಡ ಮೊತ್ತ ಬೇಕು ಎಂದು ಆತನನ್ನ ವಾಪಾಸು ಕಳಿಸಿಲ್ಲ! ಅವಸರವಸರವಾಗಿ ಆ ಮಗುವಿಗೆ ತನ್ನ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸುತ್ತಾರೆ, ಕತ್ತರಿಸಿ ಹೋದ ಆ ಕೈ ಮತ್ತೆ ಜೋಡಿಸಿಕೊಳ್ಳುತ್ತದೆ! ಪ್ಲಾಸ್ಟಿಕ್ ಸರ್ಜರಿ ದೊಡ್ಡ ಮೊತ್ತದ ಚಿಕಿತ್ಸೆ ಎನ್ನುವುದು ಆ ಎಳನೀರು ಕತ್ತರಿಸುವ ಬಡವನಿಗೂ ಗೊತ್ತಾಗುತ್ತದೆ, ಅಲ್ಲೆಲ್ಲೋ ಅವರಿವರಲ್ಲಿ ಸಾಲ ಮಾಡಿ ಆತ ಹಣ ಹೊಂದಿಸಿ ತರುತ್ತಾನೆ! ಆದರೆ ಆತನ ತಬ್ಬಿ ಸಂತೈಸಿ ಮನೆಗೆ ಕಳುಹಿಸುತ್ತಾರೆ ಅಲ್ಲಿನ ವೈದ್ಯರು! ಇಂತಹ ಅಂತಕರಣ ಕಲಕುವ ನೂರಾರು ಕಥೆಗಳು ಆ ಮೆಡಿಕಲ್ ಕಾಲೇಜಿನ ಪ್ರಾಂಗಣದಲ್ಲಿದೆ. ಇನ್ನೊಂದು ಪ್ರಕರಣದಲ್ಲಿ ಬೈಕ್ ಅಪಘಾತದಲ್ಲಿ ಪುಟ್ಟ ಮಗುವಿನ ಕಾಲು ಚಕ್ರಕ್ಕೆ ಸಿಲುಕಿ ಕತ್ತರಿಸಿ ಹೋಗಿತ್ತು, ಎರಡು ತುಂಡಾಗಿ ಹೋಗಿದ್ದ ಆ ಹೆಣ್ಣು ಕಂದನ ಕಾಲು ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಜೋಡಣೆಯಾಗುತ್ತದೆ, ಇಂದು ಆ ಹುಡುಗಿಗೆ ಅದೆಷ್ಟು ವರ್ಷವೋ? ಆಕೆ ಮೊದಲಿನಂತೆ ನಡೆಯುತ್ತಿದ್ದಾಳೆ! ಆ ಚಿಕಿತ್ಸೆಯ ನಂತರ ನಡೆಯುತ್ತಿರುವ ಆ ಪುಠಾಣಿ ಕಂದನ ವಿಡಿಯೋ ತುಣುಕು ನೋಡಿ ನನ್ನ ಕಣ್ಣಲ್ಲಿ ಹನಿ ನೀರಿತ್ತು! ಇನ್ನು ಆ ಕುಟುಂಬಕ್ಕೆ? ಇದೆಲ್ಲವನ್ನೂ ಗಮನಿಸುತ್ತಾ ಅಲ್ಲಿನ ಶಲ್ಯಗಣಪತಿ ಹರಸುತ್ತಾ ಕುಳಿತಿದ್ದಾನೆ!
ಪ್ರವಾಸಕ್ಕೆ ಹೋದ ಪುಟ್ಟ ಮಗುವಿನ ಹಾಗೆ ಅಲ್ಲಿನ ಆಪರೇಶನ್ ಥಿಯೇಟರುಗಳನ್ನೆಲ್ಲಾ ಅಚ್ಚರಿಯ ಕಣ್ಣಲ್ಲಿ ನೋಡಿಬಂದೆ! ಧರ್ಮಸ್ಥಳದಲ್ಲಿ ನೀವು ಯಾವ ತೆರನಾದ ಶಿಸ್ತು, ಶುಚಿಯನ್ನ ಗಮನಿಸಿದ್ದೀರೋ? ಅದನ್ನ ಎಸ್.ಡಿ.ಎಂ. ಅಂಗಳದಲ್ಲಿಯೂ ಗಮನಿಸಬಹುದು. ಆ ಆಸ್ಪತ್ರೆಯ ಗೈನೋ ವಿಭಾಗದ್ದು ಮಗದೊಂದು ಇತಿಹಾಸ! ಬರೆದರೆ ಅದು ಪುಸ್ತಕವೇ ಅದೀತು. ಅಂತರಾಷ್ಟ್ರೀಯ ಮಟ್ಟದ ವೈದ್ಯರ ದಂಡನ್ನೇ ಹೊಂದಿರುವ ಅತ್ಯಂತ ಅಪರೂಪದ ಆಸ್ಪತ್ರೆಯದು. ಡಾ.ಡಿ. ವೀರೆಂದ್ರ ಹೆಗ್ಗಡೆಯವರು ಯಾವ ದೇಶಕ್ಕೇ ಹೋದರೂ ಅಲ್ಲಿನ ವೈದ್ಯಕೀಯ ತಂತ್ರಜ್ಞಾನ ನಮ್ಮ ಅಸ್ಪತ್ರೆಗೂ ಬೇಕು ಎಂದೇ ಬಹುಕೋಟಿ ರೂಪಾಯಿಗಳ ಸುರುವಿ ಆ ಯಂತ್ರಗಳನ್ನ ಭಾರತಕ್ಕೂ ಆಮದು ಮಾಡಿಕೊಂಡ ಕಾರಣಕ್ಕೆ ಎಸ್.ಡಿ.ಎಂ ಇಂದು ಅಡ್ವಾನ್ಸ್ ಟೆಕ್ನಾಲಜಿಯನ್ನ ಬಳಸಿಕೊಂಡು ತುರ್ತು ಚಿಕಿತ್ಸೆಯಲ್ಲಿ ಅತ್ಯಂತ ಯಶಸ್ವಿಯಾಗಿದೆ.
ಧಾರವಾಡದಿಂದ ಮರಳಿದ ಮೇಲೂ ನನ್ನ ತಲೆಯಲ್ಲಿ ಎಸ್.ಡಿಎಂ ಆಸ್ಪತ್ರೆ ಅಲ್ಲಲ್ಲ ದೇವಸ್ಥಾನವೇ ಇತ್ತು! ಅಲ್ಲಿ ನನಗೆ ಅವರೆಲ್ಲ ತೋರಿಸಿದ ಪ್ರೀತಿ, ಕಾಳಜಿ, ನೀಡಿದ ಗೌರವಕ್ಕೆ ನಾನಂತೂ ಅರ್ಹನಲ್ಲ ಅಂತಲೂ ತೀರಾ ಮುಜುಗರದಿಂದ ಸಣ್ಣವನಾಗಿ ಬಿಟ್ಟೆ. ಡಾ. ನಿರಂಜನ್ ಸರ್ ಮತ್ತು ಅವರ ಶ್ರೀಮತಿ, ಮಗ, ಸೊಸೆ ಮತ್ತು ಈಡೀ ತಂಡದ ಅಕ್ಕರೆಯ ಮಾತುಗಳು ಈ ಕ್ಷಣಕ್ಕೂ ನನ್ನ ಹೃದಯದ ಆಲಾಪನವಾಗಿದೆ. ಭಾಗ್ಯವತಿ ಭಗವತಿ ಕೊಲ್ಲೂರು ಮೂಕಾಂಬಿಕೆಯ ಆಶಿರ್ವಾದ ಆ ಎಸ್.ಡಿ.ಎಂ. ಕುಟುಂಬದ ಮೇಲಿರಲಿ, ಮನುಷ್ಯನ ಹಾರೈಕೆಯಲ್ಲಿ ಸ್ವಾರ್ಥವಿದ್ದೀತು! ಆದರೆ ನನ್ನ ಅಮ್ಮನ ಹಾರೈಕೆಗೆ ಅದರ ಸ್ಪರ್ಶವೂ ಇಲ್ಲ.
-ವಸಂತ್ ಗಿಳಿಯಾರ್