2024 ರ ಪಟ್ಲ ಸಂಭ್ರಮವು ನಿಜ ಅರ್ಥದಲ್ಲಿ ಸಾರ್ಥಕ್ಯ ಪಡೆದಿದೆ ಎಂದರೆ ಖಂಡಿತವಾಗಿ ಅತಿಶಯದ ಮಾತಲ್ಲ. ಸದಾ ಮಂಗಲಮಯನಾದ ಅಡ್ಯಾರ್ ನ ಮಹಾಲಿಂಗೇಶ್ವರನ ಸನ್ನಿಧಾನದ ಪಕ್ಕದಲ್ಲಿ ನಡೆದ ಈ ಕಾರ್ಯಕ್ರಮವು ಸದಾಶಿವ ಶಶಿಧರನ ಅನುಗ್ರಹದಿಂದ ಹರಿ ಈಶರ ಪೂರ್ಣಾನುಗ್ರಹದೊಂದಿಗೆ ನಮ್ಮೆಲ್ಲರ ನಿರೀಕ್ಷೆಯಂತೆ ಸಂಪೂರ್ಣ ಯಶಸ್ಸಾಯಿತು ಎಂಬುದು ಎಲ್ಲರ ಉದ್ಘಾರ. ಕೇವಲ ಹಣವನ್ನು ವ್ಯಯಿಸಿ ದುಂದುವೆಚ್ಚ ಮಾಡಿ ಹೆಸರು ಕೇಳುವ ಗೀಳಿನ ಅದೆಷ್ಟೋ ಸಂಘ ಸಂಸ್ಥೆಗಳು ಇದ್ದಿರಬಹುದು. ಆದರೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಧ್ಯೇಯೋದ್ದೇಶಗಳು ಸ್ಪಷ್ಟ. ಇಲ್ಲಿ ಕಲಾವಿದರ ಯೋಗಕ್ಷೇಮದ ಮತ್ತು ಅವರ ನಾಳಿನ ಭವಿಷ್ಯದ ಬಗೆಗಿನ ಚಿಂತನೆ ಮತ್ತು ಕಾಳಜಿಯೇ ಮುಖ್ಯ ಹೊರತು ಕೇವಲ ಆಡಂಬರವಲ್ಲ. ಈ ಧ್ಯೇಯದೊಂದಿಗೆ ಕಳೆದ ಒಂಬತ್ತು ವರ್ಷಗಳಿಂದ ಈ ಸಂಸ್ಥೆಗೆ ಬೆನ್ನೆಲುಬಾಗಿ ನಿಂತ ದಾನಿಗಳನ್ನು ಒಂದೇ ವೇದಿಕೆಯಲ್ಲಿ ಗುರುತಿಸಿ, ಗೌರವಿಸುವುದು ಮತ್ತು ಅವರ ಮಾರ್ಗದರ್ಶನ ಪಡೆದು ಮುಂದುವರಿಯುವುದೇ ನಮ್ಮೀ ಕಾರ್ಯಕ್ರಮದ ಮುಖ್ಯ ಉದ್ದೇಶ. ಅದರೊಂದಿಗೆ ಯಕ್ಷಗಾನ, ನಾಟಕ, ಭೂತಾರಾಧನೆ, ಹರಿಕಥೆ, ಲೇಖಕ, ಸಮಾಜಸೇವಕ, ದೇಶಸೇವೆ, ವಿದ್ಯೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಒಂದು ವೇದಿಕೆಯಾಗಿ, ಅಲ್ಲದೇ ವಿಶೇಷವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ ಒಬ್ಬರಿಗೆ “ಪಟ್ಲ ಪ್ರಶಸ್ತಿ” ಯನ್ನು ನೀಡಿ ಗೌರವಿಸುವುದಕ್ಕಾಗಿ ಈ ಕಾರ್ಯಕ್ರಮವು ರೂಪುಗೊಂಡಿತ್ತು. ಇಲ್ಲಿ ಏನಿತ್ತು ಎನ್ನುವುದಕ್ಕಿಂತಲೂ ಏನಿರಲಿಲ್ಲ ಎಂದು ಕೇಳುವಂತಿತ್ತು!!!.
ಬೆಳಿಗ್ಗೆ 7 ಗಂಟೆಗೇ ಫ್ರಾರಂಭವಾದ ಉಪಹಾರದಿಂದ ತೊಡಗಿ ನಿರಂತರ ರಾತ್ರಿ 11 ಗಂಟೆಯವರೆಗೆ ಜಾತ್ರೆಯಂತೆ ಬಂದ ಪ್ರತೀಯೊಬ್ಬರಿಗೂ ಉಪಹಾರ, ಊಟ, ತಿಂಡಿ, ಚಾ, ಕಾಫಿ, ಲಿಂಬೆಯ ರಸದ ಪಾನಕ, ಪಾನ್ ಬೀಡಾ ಇತ್ಯಾದಿ. ಪೋಟೋ ವಿಡಿಯೋ ಪ್ರೇಮಿಗಳಿಗೆ 360 ಡಿಗ್ರೀಯ ಪೋಟೋ ವೀಡಿಯೋದ ವ್ಯವಸ್ಥೆ. ಪೋಸ್ಟ್ ಆಫೀಸು ಮತ್ತು ಇನ್ಶುರೆನ್ಸ್ ಕಂಪನಿಯ ಸಹಭಾಗಿತ್ವದಲ್ಲಿ ಯಕ್ಷಗಾನ, ನಾಟಕ ಕಲಾವಿದ, ದೈವನರ್ತಕ ಮತ್ತು ಕಂಬಳ ಕ್ಷೇತ್ರದಲ್ಲಿ ದುಡಿಯುವ ಮಂದಿಗೆ ಸುಮಾರು 8 ಲಕ್ಷದವರೆಗೆ ಉಚಿತ ವಿಮಾ ಯೋಜನೆ, ರಕ್ತದಾನ ಶಿಬಿರ, ಕಣ್ಣಿನ ಪರೀಕ್ಷೆ ಮತ್ತು ಕನ್ನಡಕದ ವ್ಯವಸ್ಥೆ ಇದು ಎಲ್ಲರ ಪ್ರಶಂಸೆಗೆ ಪಾತ್ರವಾದ ವಿಚಾರ. ಇನ್ನು ಯಕ್ಷಗಾನದ ವಿದ್ಯಾರ್ಥಿಗಳ, ಪ್ರಭುದ್ದ ಹಿರಿಯ ಕಲಾವಿದರ ಯಕ್ಷಗಾನ ಪ್ರದರ್ಶನ, ಯುವ ಭಾಗವತರುಗಳ ಗಾನ ವೈಭವ ಹೀಗೆ ಬೇರೆ ಬೇರೆ ವಿಭಾಗದ ಯಕ್ಷಗಾನ ಪ್ರದರ್ಶನಗಳು ಎಲ್ಲಾ ಯಕ್ಷಾಸಕ್ತರ ಮನಸೂರೆಗೊಂಡದ್ದಂತು ಅಕ್ಷರಸಹ ಸತ್ಯ.
ಮೂರು ಹೊತ್ತಿನಲ್ಲಿ ನಡೆದ ಸಭಾ ಕಾರ್ಯಕ್ರಮ. ಇದರಲ್ಲಿ ಪಾಲ್ಗೊಂಡವರೆಲ್ಲರೂ ದೇಶ ವಿದೇಶಗಳ ಗಣ್ಯಾತಿಗಣ್ಯರು. ಅವರು ಶ್ರೀಯುತ ಸತೀಶ್ ಪಟ್ಲರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಲಕ್ಷಾನುಗಟ್ಟಲೆ ಧನವನ್ನು ದಾನವಾಗಿ ನೀಡಿ ಅಲ್ಲದೇ, ತಮ್ಮ ಇಡೀ ದಿನದ ಅಮೂಲ್ಯವಾದ ಸಮಯವನ್ನು ನಮ್ಮೊಂದಿಗೆ ಕಳೆಯಲು ಬಂದಿರುವ ಕಾರಣ ಇವರನ್ನು ಯಥೋಚಿತವಾಗಿ ಸತ್ಕರಿಸಿ ಸಮಯೋಚಿತವಾಗಿ ಬೀಳ್ಕೊಡಬೇಕಾದ್ದು ನಮ್ಮ ಕರ್ತವ್ಯ ಎಂಬ ನೆಲೆಯಲ್ಲಿ ಸ್ವತಃ ಪಟ್ಲರೇ ವೇದಿಕೆಯಲ್ಲಿ ಅತೀವ ಮುತುವರ್ಜಿಯಿಂದ ಸಭಾ ಕಲಾಪಗಳನ್ನು ನಡೆಸಿಕೊಟ್ಟದ್ದು ವಿಶೇಷ. ಸಮಯ ಮೀರದಂತೆ ಮತ್ತು ಎಲ್ಲೂ ವ್ಯತ್ಯಾಸವಾಗದಂತೆ ಚಾಕಚಕ್ಯತೆಯಿಂದ ಚುರುಕಾಗಿ ಎಲ್ಲವನ್ನೂ ನಡೆಸಿ ಕೇವಲ ಭಾಗವತಿಕೆಗೆ ಮಾತ್ರ ಸೀಮಿತವಲ್ಲ. ಯಾವ ಸಂದರ್ಭದ ಸಭಾ ನಿರೂಪಣೆಗೂ ಸೈ ಎಂದು ತೋರಿಸಿಕೊಟ್ಟರು.
ಚಿತ್ರ ರಸಿಕರ ಬಹು ನಿರೀಕ್ಷೆಯ ಸಿನಿಮಾ ರಂಗಕ್ಕೆ ಹೊಸ ಆಯಾಮ ಕಲ್ಪಿಸಿ ನಟ ಚಕ್ರವರ್ತಿ ಎಂದು ಬಿರುದು ಗಳಿಸಿ, ಬಿಗ್ ಬಾಸ್ ಕಾರ್ಯಕ್ರಮದ ಯಶಸ್ವಿ ನಿರ್ವಾಹಕ, ಕನ್ನಡ, ಹಿಂದಿ, ತಮಿಳು, ತೆಲುಗು ಇತ್ಯಾದಿ ಭಾಷೆಗಳ ಚಿತ್ರಗಳಲ್ಲಿ ನಟಿಸಿ, ಜನರಿಗೆ ಹೊಸ ಹುಚ್ಚು ಹಿಡಿಸಿದ ಕಿಚ್ಚ ಸುದೀಪ್ ಆಗಮನವೇ ಅದೊಂದು ಸಡಗರದ ಕ್ಷಣವಾಗಿತ್ತು. ಸುಮಾರು ಸಂಜೆ ಏಳುವರೆಗೆ ಅಡ್ಯಾರ್ ನ ಸಭಾಂಗಣ ಪ್ರವೇಶಿಸುವಾಗ ಕಿಚ್ಚನನ್ನು ಕಂಡು ಹುಚ್ಚೆದ್ದ ಜನಗಳು ತಮ್ಮ ಮನದ ಭಾವನೆಗಳನ್ನು ಮುಚ್ಚುಮರೆ ಮಾಡದೆ ಬೊಬ್ಬೆ ಹೊಡೆದದ್ದಂತೂ ರೋಮಾಂಚಕಾರಿಯಾಗಿತ್ತು. ಕಿಚ್ಚನವರು ಅವರ ಮಾತಿನಲ್ಲಿ ಹೇಳಿದಂತೆ ಅವರಿಗೂ ಇಷ್ಟು ಜನಗಳು ಇರಬಹುದು ಎಂಬ ನಿರೀಕ್ಷೆಯೇ ಇರಲಿಲ್ಲವಂತೆ. ಜನಗಳ ಸಿನಿಮಾ ನಟರನ್ನು ಕಾಣುವ ಕ್ರೇಜಿಯೇ ವಿಶೇಷ!. ಪಟ್ಲರ ಸಾಧನೆಯನ್ನು ಕಂಡು ಕಿಚ್ಚ ಸುದೀಪರು ನಿಜಕ್ಕೂ ಸಕೇದಾಶ್ಚರ್ಯಗೊಂಡದ್ದಂತೂ ಸತ್ಯ. ಅವರ ಮಾತು ಇದನ್ನು ತಿಳಿಸಿತ್ತು. ಅವರಿದ್ದ ವೇದಿಕೆಯಲ್ಲಿ ನಮ್ಮ ಯಕ್ಷಗಾನದ ಕಲಾವಿದರ ಹಲ ನಿಮಿಷಗಳ ಅಧ್ಬುತ ಧಿಗಿಣವನ್ನು ಕಂಡು ಅವರು ಚಕಿತಗೊಂಡು ಇದು ನನ್ನಿಂದ ಖಂಡಿತಾ ಅಸಾಧ್ಯದ ಕೆಲಸ. ದೇವರು ಒಬ್ಬೊಬ್ಬರಿಗೆ ಒಂದೊಂದು ಶಕ್ತಿ ಕೊಟ್ಟಿದ್ದಾನೆ. ಈ ಕರಾವಳಿಯ ಯಕ್ಷಕಲೆ ಮತ್ತು ಕಲಾವಿದರು ನಿಜಕ್ಕೂ ಶ್ರೇಷ್ಠರು ಮತ್ತು ಉತ್ಕೃಷ್ಟರು. ಅಂತದ್ದರಲ್ಲಿ ಪಟ್ಲರು ಒಂಬತ್ತು ವರ್ಷಗಳಲ್ಲಿ 12 ಕೋಟಿಯನ್ನು ಕಲಾವಿದರಿಗೆ ಹಂಚಿರುವುದು ಇದೊಂದು ದಾಖಲೆಯೇ ಸರಿ. ಹಾಗಾಗಿ ನಾನೇನೂ ಅಲ್ಲ. ನನ್ನ ಅದೃಷ್ಟ ಚೆನ್ನಾಗಿತ್ತು ಹಾಗಾಗಿ ಬೇಗನೆ ಜನ ಮೆಚ್ಚುಗೆ ಗಳಿಸಿ ಅಭಿಮಾನಿಗಳು ಏನೇನೋ ಬಿರುದು ಕೊಟ್ಟರು. ನಿಜಕ್ಕೂ ಪಟ್ಲರೊಂದಿಗೆ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ನನಗೆ ಹೆಮ್ಮೆ ತಂದಿದೆ. ಅವರ ವ್ಯಕ್ತಿತ್ವ ನಿಜಕ್ಕೂ ಗ್ರೇಟ್ ಎಂದು ಅಭಿಮಾನದಿಂದ ಸುದೀಪರು ಅವರಿಗಾಗಿ ಮಾಡಲುದ್ದೇಶಿಸಿದ ಸನ್ಮಾನವನ್ನು ಅವರೇ ಸ್ವತಃ ಪಟ್ಲರಿಗೆ ಮಾಡಿದರು.
ಇದು ನಿಜವಾದ ಸಾಧಕನಿಗೆ ಸಂದ ಬಹುದೊಡ್ಡ ಸನ್ಮಾನ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುಯೋಗ ನನ್ನ ಬದುಕಿನ ಭಾಗ್ಯವೇ ಸರಿ.
-ಶರತ್ ಶೆಟ್ಟಿ ಪಡುಪಳ್ಳಿ