ಸಾಮಾನ್ಯ ಅರ್ಥದಲ್ಲಿ ಗ್ರಹಣ ಅಂದರೆ ಹಿಡಿಯುವುದು ಎಂದು. ಪಾಣಿ ಗ್ರಹಣ ಅಂದರೆ ಕೈ ಹಿಡಿಯುವುದು. ಆದರೆ ನಾವು ಸೂರ್ಯ ಚಂದ್ರರಿಗೆ ಗ್ರಹಣ ಹಿಡಿಯುವುದು (ಬಿಡುವುದು) ಎನ್ನುತ್ತೇವೆ. ರಾಹುಗ್ರಸ್ತ ಸೂರ್ಯ, ಚಂದ್ರ ಅಂತಲೂ ಹೇಳುತ್ತೇವೆ. ಮೋಹಿನಿಯ ರೂಪದಲ್ಲಿ ವಿಷ್ಣು ಸುರರಿಗೆ ಅಮೃತ ಬಡಿಸುವಾಗ, ಅಸುರನಾದ ಸ್ವರ್ಭಾನು ವೇಷ ಮರೆಸಿ ಸುರ ಪಂಕ್ತಿಯಲ್ಲಿ ಕುಳಿತು ಅಮೃತ ಸೇವನೆ ಮಾಡಿದನಂತೆ. ಅದನ್ನು ಸೂರ್ಯ ಚಂದ್ರರು ವಿಷ್ಣುವಿಗೆ ತಿಳಿಸಿದ ತಕ್ಷಣ ಆತ ಚಕ್ರದಿಂದ ಇವನ ತಲೆ ಕತ್ತರಿಸಿದ. ಆಮೃತ ಕುಡಿದ ದೆಸೆಯಿಂದಾಗಿ ಆತ ಸಾಯಲಿಲ್ಲ. ರುಂಡ ರಾಹುವಿನ ಹೆಸರಲ್ಲಿ, ಮುಂಡ ಕೇತವಿನ ಹೆಸರಲ್ಲಿ ಸೌರಮಂಡಲದಲ್ಲಿ ಸುತ್ತುತ್ತಾ ಸೂರ್ಯ ಚಂದ್ರರನ್ನು ಪೀಡಿಸುತ್ತಾರೆ. ರಾಹು ನವಗ್ರಹಗಳಲ್ಲಿ ಎಂಟನೆಯವನಂತೆ. ಎಂತಹ ಮೋಸ, ಸುರಾಸುರರು ಒಟ್ಟಾಗಿ ಸಮುದ್ರ ಮಂಥನ ಮಾಡಿ, ಬಂದ ಅಮೃತ ತಾವು ಮಾತ್ರ ಸೇವಿಸಿದ್ದಲ್ಲದೆ, ಕುಡಿದ ಒಬ್ಬ ಅಸುರರನ್ನು ನಾಶಗೊಳಿಸಿದರು. ಇಂತಹ ಒಂದು ಕಟ್ಟು ಪುರಾಣದ ಅಗತ್ಯ ಏತಕ್ಕೆ ಬಂತು? ತಿಳಿಯಲಾರೆ.
ಖಗೋಳಶಾಸ್ತ್ರದ ಪ್ರಕಾರ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದರೆ, ಚಂದ್ರ ಗ್ರಹಣ. ಹಾಗೆಯೆ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದರೆ ಸೂರ್ಯಗ್ರಹಣ. ಈ ಎರಡೂ ಗ್ರಹಣಗಳಲ್ಲಿ, ಸೂರ್ಯ, ಚಂದ್ರ, ಭೂಮಿ ಒಂದೇ ರೇಖೆಯಲ್ಲಿ (ಮೂರು ಆಯಾಮಗಳೂ) ಬರುತ್ತಾರೆ. ಭೂಮಿಯಿಂದ ನಮಗೆ ಚಂದ್ರ ಗ್ರಹಣ ಕಂಡರೆ, ಚಂದ್ರನಲ್ಲಿ ನಿಂತು ನೋಡಿದರೆ ಸೂರ್ಯ ಗ್ರಹಣ (ಖಗ್ರಾಸ) ಕಾಣಬಹುದು. ಅಮವಾಸ್ಯ ಅಂದರೆ ಇಬ್ಬರೂ (ಒಟ್ಟಿಗೆ) ವಾಸ ಎಂದು ಅರ್ಥವಂತೆ. ಇಲ್ಲಿ ಜನ ಸಾಮಾನ್ಯರಿಗೆ ಬರುವ ಒಂದು ಸಣ್ಣ ಸಂಶಯ, ಹುಣ್ಣಿಮೆ ಬಿಟ್ಟು, ಉಳಿದೆಲ್ಲಾ 28.5 ದಿನ ಸೂರ್ಯನ ಬೆಳಕು ಚಂದ್ರನ ಮೇಲೆ ಪೂರ್ತಿ ಬೀಳದಂತೆ ಭೂಮಿ ಪಾರ್ಶಿಕವಾಗಿ ತಡೆಯುತ್ತದೆ. ಅಮಾವಾಸ್ಯೆಯ ದಿನ ಚಂದ್ರ ಪೂರ್ತಿಯಾಗಿ ಭೂಮಿ ಮತ್ತು ಸೂರ್ಯನ ಮಧ್ಯೆ ಇದ್ದು, ಭೂಮಿಯಿಂದ ಚಂದ್ರ ಕಾಣುವುದಿಲ್ಲ. ಹುಣ್ಣಿಮೆಯ ದಿನ ಚಂದ್ರ ಸೂರ್ಯನ ಎದುರು 180° ಕೋನದಲ್ಲಿ ಬರುತ್ತಾನೆ. ಅರ್ಥಾತ್ ಅಮಾವಾಸ್ಯೆ, ಹುಣ್ಣಿಮೆಗಳಂದು ಸೂರ್ಯ ಚಂದ್ರರು ಎದುರು ಬದಿರಾಗಿರುತ್ತಾರೆ. ಹುಣ್ಣಿಮೆಯಂದು ಇವರ ಮಧ್ಯೆ ಭೂಮಿ ಇದ್ದರೆ, ಅಮಾವಾಸ್ಯೆಯಂದು, ಚಂದ್ರ ಮಧ್ಯದಲ್ಲಿ ಇರುತ್ತಾನೆ.
ಹಾಗಾದರೆ ಪ್ರತೀ ಅಮಾವಾಸ್ಯೆ, ಹುಣ್ಣಿಮೆಗಳಂದು ಏಕೆ ಗ್ರಹಣ ಸಂಭವಿಸುವುದಿಲ್ಲ? ಚಂದ್ರನ ಕಕ್ಷೆಯು ಸೂರ್ಯನ ಸುತ್ತ ಭೂಮಿಯ ಕಕ್ಷೆಗೆ ಹೋಲಿಸಿದರೆ ಓರೆಯಾಗಿರುತ್ತದೆ, ಆದ್ದರಿಂದ ಚಂದ್ರನು ಭೂಮಿಯ ಕೆಳಗೆ ಅಥವಾ ಮೇಲೆ ಹಾದು ಹೋಗುತ್ತಾನೆ. ಉಳಿದ ಅಮಾವಾಸ್ಯೆ ಸಮಯದಲ್ಲಿ, ಚಂದ್ರ, ಸೂರ್ಯ ಮತ್ತು ಭೂಮಿಯ ನಡುವಿನ ರೇಖೆಯನ್ನು ದಾಟುವುದಿಲ್ಲ, ಹಾಗಾಗಿ ಸೂರ್ಯಗ್ರಹಣವನ್ನು ಸೃಷ್ಟಿಸುವುದಿಲ್ಲ. ಹಾಗೆಯೇ ಉಳಿದ ಹುಣ್ಣಿಮೆಯಂದು ಭೂಮಿ, ಚಂದ್ರ ಮತ್ತು ಸೂರ್ಯರ ನಡುವಿನ ರೇಖೆಯನ್ನು ದಾಟುವುದಿಲ್ಲ. ಸಂಪೂರ್ಣ ಗ್ರಹಣವು ಮೆಕ್ಸಿಕೋದಲ್ಲಿ ಸುಮಾರು ಭಾರತೀಯ ಕಾಲಮಾನ ಸೋಮವಾರ 23:37 ಗಂಟೆಗೆ ಪ್ರಾರಂಭವಾಗುತ್ತದೆ. ಮಂಗಳವಾರ 01:05 ಗಂಟೆಗೆ ಟೆಕ್ಸಾಸ್ ದಾಟುತ್ತದೆ. ಗ್ರಹಣ ಮಂಗಳವಾರ 13:05 ಕ್ಕೆ ಮೈನೆಯಲ್ಲಿ ಕೊನೆಗೊಳ್ಳುತ್ತದೆ. ನಾಲ್ಕು ನಿಮಿಷಗಳ ಖಗ್ರಾಸ ಗ್ರಹಣ ಕಳೆದ ನೂರು ವರ್ಷಗಳಲ್ಲಿ ಅತೀ ದೀರ್ಘವಾದುದಂತೆ. ಹೆಚ್ಚಿನ ವರ್ಷಗಳಲ್ಲಿ ಎರಡು ಚಂದ್ರ ಗ್ರಹಣವಿರುತ್ತದೆ. ಮತ್ತೆ ಕೆಲವು ವರ್ಷಗಳಲ್ಲಿ ಒಂದು, ಮೂರು ಗ್ರಹಣಗಳು ಸಂಭವಿಸುತ್ತವೆ. ಚಂದ್ರ ಗ್ರಹಣವೇ ಇಲ್ಲದ ವರ್ಷಗಳೂ ಇವೆ. ಸೂರ್ಯ ಗ್ರಹಣ ವರ್ಷದಲ್ಲಿ ಎರಡರಿಂದ ಐದು ಬಾರಿ ಸಂಭವಿಸುತ್ತದೆ. ಐದು ಬಾರಿ ಬಹು ಅಪರೂಪ, 1935 ರಲ್ಲಿ ಆಗಿತ್ತು, ಮುಂದೆ 2206 ರಲ್ಲಿ ಅಂತೆ (271 ವರ್ಷಗಳ ನಂತರ).
ಕೌಡೂರು ನಾರಾಯಣ ಶೆಟ್ಟಿ, ಇಟೆಲಿ