ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕರಾವಳಿ ಪ್ರದೇಶದ ಅತ್ಯಂತ ಸೂಕ್ಷ್ಮವಾದ ವ್ಯಾಪಾರ ಪ್ರದೇಶವಾಗಿ ಅದು ‘ಬಂದರು’ ಎಂದೇ ಹೆಸರುವಾಸಿಯಾಗಿದೆ. ಇಲ್ಲಿನ ಬಂದರು ಪ್ರದೇಶದ ಕಠಿಣ ಪರಿಶ್ರಮಿಗಳಿಗೆ ‘ಕಡಲಿನ ಮಕ್ಕಳು’ ಎಂಬ ಹೆಸರೂ ದಾಖಲೆಯಲ್ಲಿದೆ. ಹಗಲು ಇರುಳು ಬಂದರು ಪ್ರದೇಶದ ಚಟುವಟಿಕೆಗಳೆಂದರೆ ಮೀನುಗಾರಿಕೆ. ಈ ಮೀನುಗಾರಿಕೆಯ ಹೆಸರಿನಲ್ಲಿ ಎಲ್ಲಾ ವರ್ಗದವರು ಶಾಮೀಲಾಗಿ ವ್ಯಾಪಾರದ ದೃಷ್ಟಿಯಲ್ಲಿ ಹಣ ಸಂಪಾದಿಸಲು ಟೊಂಕಕಟ್ಟಿ ನಿಂತವರು. ಬಂದರು ಪ್ರದೇಶದಲ್ಲಿ ಪ್ರತಿಯೊಬ್ಬನ ಬದುಕೂ ಅತ್ಯಂತ ಶ್ರಮದಾಯಕವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಜೀವನಕ್ಕೆ ಆಧಾರವಾದ ಪ್ರಮುಖ ಪ್ರದೇಶ ‘ಬಂದರು’ ಯಾವ ರೀತಿಯಲ್ಲಿ ಶುಚಿತ್ವದಿಂದ ಸೊರಗುತ್ತಿದೆಯೆಂದರೆ, ಬಂದರಿನ ಅತೀ ಸೂಕ್ಷ್ಮವಾದ ಸ್ಥಳಗಳೆಲ್ಲಾ ಗಬ್ಬೆದ್ದು ನಾರುತ್ತಿದೆ. ಮೂಗು ಮುಚ್ಚಿಕೊಂಡು ಉಸಿರು ಬಿಗಿ ಹಿಡಿದುಕೊಂಡೇ ಬಂದರು ಪ್ರದೇಶವನ್ನು ಸುತ್ತಾಡುವಷ್ಟರಲ್ಲಿ ನಿಜಕ್ಕೂ ಶುಚಿತ್ವದ ಕೊರತೆ ಕಣ್ಣಿಗೆ ರಾಚುತ್ತದೆ. ದುರ್ವಾಸನೆಯ ಬಂದರು ಪ್ರದೇಶದ ಅವ್ಯವಸ್ಥೆಯನ್ನು ಅವಲೋಕಿಸುವಾಗ, ಸರಕಾರಕ್ಕೆ ಕಡಲಿನ ಮಕ್ಕಳ ಅಥವಾ ಬಂದರು ಪ್ರದೇಶದವರ ಸಂಕಟ ಅರ್ಥವಾಗದಿರುವುದು ವಿಪರ್ಯಾಸವೇ ಸರಿ.
‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳುತ್ತಿರುವುದು ಸರಕಾರದ ಹಣೆಬರಹವೋ? ಕಡಲಿನ ಮಕ್ಕಳ ಶಾಪವೋ ಅಥವಾ ಬಂದರು ಪ್ರದೇಶದವರ ದುರ್ಗತಿಯೋ ಗೊತ್ತಿಲ್ಲ. ಇಡೀ ಬಂದರಿನ ಸುತ್ತೆಲ್ಲಾ ಬರೀ ದುರ್ವಾಸನೆ ಬೀರುವ ಮೀನಿನ ನೀರು, ಅಲ್ಲಲ್ಲಿ ಹೆಪ್ಪುಗಟ್ಟಿ ಗಬ್ಬುನಾರುವ ಕೊಳಚೆ ಕೆಸರು, ಎಲ್ಲಿ ನೋಡಿದರಲ್ಲಿ ಬರೀ ಅವ್ಯವಸ್ಥೆಯದ್ದೇ ಕಿರಿಕಿರಿ. ವಾಹನ ನಿಲುಗಡೆಯ ರೀತಿ ದೇವರಿಗೇ ಪ್ರೀತಿ. ಬಂದರು ಪ್ರದೇಶಕ್ಕೆ ಹೋದವನು ಎಷ್ಟು ಗಂಟೆಗೆ ಹೊರಗೆ ಬರಬಹುದೆಂಬ ಲೆಕ್ಕಾಚಾರ ಹಾಕಿಕೊಂಡು ಹೋದವನು ಹೊರಗೆ ಬಂದಾಗ ಸುಸ್ತಾಗಿ ಹೈರಾಣಾಗಿ ಹೋಗಿರುತ್ತಾನೆ.
ಬಂದರು ಪ್ರದೇಶದಲ್ಲಿ ಯಾರು ಯಾವ ರೀತಿಯ ವ್ಯಾಪಾರ ಮಾಡುತ್ತಾರೆಂದರೆ, ಅಲ್ಲಿ ಏನಿಲ್ಲ ಏನುಂಟು ಎಂಬ ಸತ್ಯ ಗೋಚರವಾಗಬೇಕಾದರೆ ಒಂದೇ ದಿನದಲ್ಲಿ ಬಂದರು ಪ್ರದೇಶವನ್ನು ಸುತ್ತಾಡಿದರೆ ಏನೂ ಅರ್ಥವಾಗುವುದಿಲ್ಲ. ಒಂದೆರಡು ಬಾರಿ ಬಂದರನ್ನು ಸುತ್ತಾಡಿದಾಗ ಮಂಗಳೂರು ಕರಾವಳಿಯ ‘ಬಂದರು’ ಪ್ರದೇಶ ಎಂತೆಂತಹ ಅವ್ಯವಸ್ಥೆಯ ಆಗರವಾಗಿದೆಯೆಂಬುದು ಮನದಟ್ಟಾಗುತ್ತದೆ. ಯಾರನ್ನು ಭೇಟಿಯಾಗಬೇಕು? ಹೇಗೆ ಭೇಟಿಯಾಗಬೇಕು? ಯಾವ ರೀತಿಯಲ್ಲಿ ಭೇಟಿಯಾದವರನ್ನು ಮಾತನಾಡಿಸಿ ನಿಮ್ಮ ವಾಹನ ನಿಲುಗಡೆಯಲ್ಲಿಗೆ ಸೇರಬೇಕೆಂಬ ಅನುಭವವಾಗುವಷ್ಟರಲ್ಲಿ ನೀವು ಸುಸ್ತಾಗಿ ಹೋಗುತ್ತೀರಿ. ಯಾಕಂದರೆ, ಈ ಮಂಗಳೂರಿನ ಬಂದರು ಇನ್ನೂ ಪುರಾತನವನ್ನೇ ಹೊದ್ದುಕೊಂಡು ಮಲಗಿದೆ. ಬಂದರಿನ ಸುತ್ತ ಶಿಥಿಲವಾದ ಓಭಿರಾಯನ ಕಾಲದ ಕಟ್ಟಡಗಳು, ಹಳೆಯ ಪಾಳು ಬಿದ್ದ ಅಂಗಡಿ ಮುಂಗಟ್ಟುಗಳು, ಕಾಲಿಟ್ಟಲ್ಲಿ ಜಾರಿ ಬೀಳುವ ಕಪ್ಪು ಕೆಸರು ಹೂಳು ತುಂಬಿಕೊಂಡಿರುವುದನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಬಂದರು ಪ್ರದೇಶದ ಜನರಿಗೆ ಯಾವುದೇ ರೀತಿಯ ವ್ಯವಸ್ಥೆ ಇದ್ದಂತೆ ಗೋಚರವಾಗುವುದಿಲ್ಲ. ಎಲ್ಲಿ ನೋಡಿದರೂ ಅವ್ಯವಸ್ಥೆಯನ್ನೇ ಪ್ರತಿಬಿಂಬಿಸುವ ಮಂಗಳೂರು ಕರಾವಳಿ ಬಂದರಿನ ಹೀನಾಯ ಸ್ಥಿತಿಗೆ ಸರಕಾರವೇ ಹೊಣೆಯೋ ಅಥವಾ ಜನರ ನಿರ್ಲಕ್ಷ ಕಾರಣವೋ ಸಂಬಂಧ ಪಟ್ಟವರು ಯೋಚಿಸಬೇಕಾಗಿದೆ. ಯಾಕೆಂದರೆ, ಬಂದರು ಪ್ರದೇಶದ ಜನರ ಬದುಕು ನಿಂತ ನೀರಿನಂತಾಗಿರುವುದು ದುರಂತವೇ.
ಮಂಗಳೂರು ಕರಾವಳಿ ಬಂದರು ಪ್ರದೇಶದಲ್ಲಿ ದಲ್ಲಾಳಿಗಳ ಅಬ್ಬರವೇ ಹೆಚ್ಚಾಗಿದೆ. ಮುಖ್ಯವಾಗಿ ದಲ್ಲಾಳಿಗಳೇ ಶುಚಿತ್ವದ ಕಡೆಗೆ ಗಮನ ಹರಿಸಿಲ್ಲ. ಮೀನುಗಾರಿಕೆ ಸಂಬಂಧಪಟ್ಟವರೊಂದಿಗೆ ಶಾಮೀಲಾಗಿರುವ ಮಾಲಕರು ಹಾಗೂ ದಲ್ಲಾಳಿಗಳಿಂದ ಕೂಲಿಗಾಗಿ ದುಡಿಯುವವರು ಬೆವರು ಸುರಿಸಿದ್ದೇ ಬಂತು. ಆಯಾ ದಿನದ ಶುಚಿತ್ವಕ್ಕೆ ಬೆಲೆ ಕೊಡದೆ ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಕೆಲವಡೆ ತ್ಯಾಜ್ಯಗಳು ಕೊಳೆತು ನಾರುವ ಸ್ಥಿತಿಯಲ್ಲಿ ಮೂಗು ಮುಚ್ಚಿಕೊಂಡೇ ಮೀನು ಖರೀದಿಸುವ ದುಸ್ಥಿತಿ ‘ಬಂದರು’ ಪ್ರದೇಶಕ್ಕೆ ಬಂದವರಿಗೆ ಎದುರಾಗುವ ಗತಿ ಬಂದರು ಪ್ರದೇಶಕ್ಕೆ ಅವರದ್ದೇ ಆದ ಇತಿಹಾಸವಿದೆ. ಆದರೆ ಇಷ್ಟೂ ವರ್ಷಗಳಲ್ಲಿ ಅದೆಷ್ಟು ಸರಕಾರಗಳು ಬಂದರೂ ಹೋದರೂ, ಬಂದರು ಪ್ರದೇಶ ಮಾತ್ರ ಇಂದಿಗೂ ಹಳೆಯ ಕೊಳೆಯಲ್ಲೇ ಕೊಳೆಯುತ್ತಾ ದುರ್ನಾತ ಬೀರುತ್ತಾ ಇದೆ. ಬಂದರು ಪ್ರದೇಶದ ಜನರೂ ದುರ್ವಾಸನೆಯನ್ನೇ ಉಸಿರಾಡುತ್ತಾ ಸರಕಾರದ ಕಣ್ಣುಗಳನ್ನು ತೆರೆಸುವ ಕೆಲಸ ಮಾಡಿಲ್ಲ. ಹಾಗಾಗಿ ಸರಕಾರ ಬರುತ್ತದೆ ಹೋಗುತ್ತದೆ. ಆದರೆ ಬಂದರು ಪ್ರದೇಶ ಮಾತ್ರ ಯಾವುದೇ ಶುಚಿತ್ವವನ್ನು ಕಂಡಿಲ್ಲ. ಅಭಿವೃದ್ಧಿಯ ಹೆಸರಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯುವವರು ಹೊಡೆಯುತ್ತಲೇ ಇದ್ದಾರೆ. ಹೆಬ್ಬೆಟ್ಟು ಒತ್ತುವವರು ಒತ್ತುತ್ತಲೇ ಇದ್ದಾರೆ. ಕೂಲಿ ಮಾಡುವವರು ಮಾಡುತ್ತಲೇ ಇದ್ದಾರೆ. ಒಟ್ಟಿನಲ್ಲಿ ಮಂಗಳೂರು ಕರಾವಳಿ ಬಂದರು ಪ್ರದೇಶ ಎಂದು ಅಭಿವೃದ್ಧಿಯ ಮುಖವನ್ನು ಕಾಣುತ್ತದೋ ಜೊತೆಗೆ ಅವ್ಯವಸ್ಥೆಯಿಂದ ಮುಕ್ತವಾಗುತ್ತದೋ ದೇವರಿಗೆ ಗೊತ್ತು.
ರಂಜಿತ್ ಶೆಟ್ಟಿ
ಸಂಪಾದಕರು