ಕೆಲವು ವರ್ಷಗಳ ಹಿಂದೆ ಭಜನಾ ಮಂದಿರಗಳಾಗಲಿ, ಭಜನಾ ಸಂಘಗಳಾಗಲಿ ಇರಲಿಲ್ಲ. ದಾಸರೇಣ್ಯರು ಊರೂರು ಪರಿವ್ರಾಜಕರಾಗಿ (ನಿತ್ಯ ಸಂಚಾರಿ) ಗುಡಿಯ ದೇವರನ್ನು ತಮ್ಮ ಹೃದಯ ಮಂದಿರದಲ್ಲಿ ನೆಲೆಗೊಳಿಸಿ ಮಧುಕರ ವೃತ್ತಿ (ಜೇನುನೋಣಗಳಂತೆ) ಭಕ್ತಿ ಭಾವವನ್ನು ಪಸರಿಸಿದ್ದರು. ಇವರ ಭಕ್ತಿ ಶ್ರದ್ಧೆಗೆ ಗುಡಿಯ ಮುಂಭಾಗದಲ್ಲಿ ನಡೆಯುತ್ತಿದ್ದ ಯಾಗ, ಯಜ್ಞ, ಹೋಮ ಹವನಗಳೊಂದಿಗೆ ಹಾಲು ಜೇನಿನ ಅಭಿಷೇಕ ಸುರಿಯುತ್ತಿದ್ದರೂ ಹಿಂಭಾಗದಲ್ಲಿ ಮೈಮರೆತು ಹಾಡುತ್ತಿದ್ದ ಭಜನಾ ನೃತ್ಯಕ್ಕೆ ತುಳುನಾಡಿನಲ್ಲಿ ದೇವರ ವಿಗ್ರಹವೇ ತಿರುಗಿ ನಿಲ್ಲಲಿಲ್ಲವೇ? ಅದುವೇ ಭಜನೆಯ ಮಹತ್ವ.
ಭಜನೆ ಹಾಗೂ ಭಜಕರಲ್ಲಿ ಮೇಲು ಕೀಲು, ಬಡವ ಬಲ್ಲಿದ, ಬ್ರಾಹ್ಮಣ ದಲಿತ, ಪಂಡಿತ ಪಾಮರ ಎಂಬ ತಾರತಮ್ಯವಿಲ್ಲ. ಒಟ್ಟಿಗೆ ಕುಳಿತು ಸರ್ವ ನಾಮದಲ್ಲಿ ಏಕ ದೇವರನ್ನು ಕಾಣುವುದು ಭಜನೆಯಲ್ಲಿ ಮಾತ್ರ. ದೇವಸ್ಥಾನದಲ್ಲಿ ದೇವರ ಸ್ಥಾನ ಗರ್ಭಗುಡಿಯಾದರೆ, ಭಜನಾ ಮಂದಿರದಲ್ಲಿ ದೇವರ ಸ್ಥಾನ ಭಜಕನ ಹೃದಯದಲ್ಲಿ ಎಂಬ ಭಾವ. ಸಾಕ್ಷಿಗಾಗಿ ಒಂದು ದೀಪ.
ತುಳುನಾಡಿನಲ್ಲಿ ಭಜನಾ ಮಂದಿರದ ಉಗಮ 1970 ರ ನಂತರ ಆಗಿದೆ. ಕೃಷಿ ಕಾರ್ಮಿಕರು ಆ ಕಾಲದಲ್ಲಿ ಪ್ರಾರಂಭವಾದ ಕೃಷಿಯೇತರ ವೃತ್ತಿಯಲ್ಲಿ ದುಡಿದು ಸಂಪಾದಿಸಲು ಪ್ರಾರಂಭಿಸಿದರು. ಆ ಕಾಲದಲ್ಲಿ ಶಬರಿಮಲೆ ತೀರ್ಥಯಾತ್ರೆ ನಾಡಿನಾದ್ಯಂತ ಪಸರಿಸಿತ್ತು. 48 ದಿವಸ ಕಠಿಣ ವೃತಾಚರಣೆ ಮಾಲೆ ಹಾಕಿದವರು ಅಲ್ಲಲ್ಲಿ ಎಂಟು ಹತ್ತು ಜನರ ಗುಂಪುಗಳಾಗಿ ಎರಡು ಮಾಡಿನ ಮಡಲಿನಲ್ಲಿ ಶೆಡ್ಡು ಕಟ್ಟಿ ಅಲ್ಲಿ ಭಜನೆ ಹಾಡಿ ಉಂಡು ಮಲಗುತ್ತಿದ್ದರು. ಇದುವೇ ಕ್ರಮೇಣ ಸ್ಥಿರವಾದ ಕಟ್ಟಡವಾಯಿತು. ಇತರ ಸಮಯದಲ್ಲಿ ವಾರದ ಭಜನೆ ಪ್ರಾರಂಭವಾಯಿತು
ಪ್ರಸ್ತುತ ಸ್ಥಿತಿ : ಯಾರು ಒಂದೆರಡು ಸ್ಥಳಗಳಲ್ಲಿ ವಿಶೇಷ ದಾನಿಗಳ ಸಹಾಯದಿಂದ ಹಂಚಿನ ಮಾಡಿನ ಮಂದಿರವನ್ನು ಮುರಿದು ಕಟ್ಟುವಾಗ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿದಂತೆ ದೇವ ಪ್ರಶ್ನೆ ಚಿಂತಿಸಿ ವಿಶೇಷ ಪರಿಹಾರ ಕರ್ಮ ಮಾಡಿಸಿ ದೇವಸ್ಥಾನದಂತೆ, ಗರ್ಭಗುಡಿಯ ಎದುರು ರಾಜಗೋಪುರ ಸುತ್ತು ಗೋಪುರ ಅದಕ್ಕೆ ಸಣ್ಣ ಸಣ್ಣ ಕಿಟಕಿ ಬಾಗಿಲು ಸೂಕ್ಷ್ಮವಾಗಿ ಹೇಳಬೇಕೆಂದರೆ ಒಂದು ಹೈಟೆಕ್ ದೇವಾಲಯ. ನಂತರ ವಾರಗಟ್ಟಲೆ ವೈಭವದ ಬ್ರಹ್ಮಕಲಶ ಗುಡಿಯಲ್ಲಿ ದರ್ಪಣ ಪ್ರತಿಷ್ಠೆಯಾಗಿ ಮುಂದೆ ವಾರದ ಭಜನೆಗೆ ಕುಳಿತು ಭಜನೆಯಲ್ಲಿರುವಾಗ ಕರೆಂಟು ಹೋದರೆ ಶೆಕೆಗೆ ಬೆಂದು ಹೋಗುವ ಸ್ಥಿತಿ. ಕಾರಣ ಹೊರಗಿನ ಶುದ್ಧ ತಂಪು ಗಾಳಿ ಬೆಳಕು ಪ್ರವೇಶಕ್ಕೆ ಬೇಕಾದಷ್ಟು ಕಿಟಕಿ ಬಾಗಿಲುಗಳಿಲ್ಲ. ತಲೆಯ ಮೇಲೆ ಟೇರೆಸು ಮಾಡು ಕೋಟಿಗಟ್ಟಲೆ ಖರ್ಚು ಮಾಡಿ ನೆಮ್ಮದಿಯೇ ಇಲ್ಲದ ಮಂದಿರದಲ್ಲಿ ಹೇಗೆ ಭಕ್ತಿ ಬರಲು ಸಾಧ್ಯ. ಪ್ರಕೃತಿ ಮತ್ತು ಭಜಕನಿಗೆ ನಿಕಟ ಸಂಬಂಧವೇ ಇಲ್ಲವಾಯಿತು.
ಇಲ್ಲಿ ಚಿಂತಿಸಬೇಕಾದ ವಿಷಯವೇನೆಂದರೆ ಒಂದು ವಿದ್ಯಾಮಂದಿರ ಕಲ್ಯಾಣ ಮಂಟಪ ವಾಚನಾಲಯಗಳನ್ನು ಮುರಿದು ಕಟ್ಟುವಾಗ ದೇವ ಪ್ರಶ್ನೆ ಬ್ರಹ್ಮಕಲಶ ಮಾಡುವ ಪದ್ಧತಿ ಇದೆಯೇ? ಅದೇ ರೀತಿ ಭಜನಾ ಮಂದಿರ ನವೀಕರಣಕ್ಕೆ ಯಾವುದೇ ಕರ್ಮಗಳ ಅತ್ಯವಿಲ್ಲವೆಂದು ತಿಳಿಯಬೇಕು. ಭಕ್ತಿಯಿಂದ ದೇವರನ್ನು ನಿಂದಿಸಿದರು. ದೇವರು ಸಂಪ್ರೀತರಾಗುತ್ತಾರೆ ಎಂಬುದಕ್ಕೆ ಸಾಕ್ಷಿ, ಕೇರಳದಲ್ಲಿ ಕೊಡಂಗಲೂರು ಭಗವತಿ ಅಮ್ಮನಿಗೆ ಬೈಗುಳ ಭಜನೆಯ ಅರ್ಚನೆಯೇ ಪ್ರಧಾನವಂತೆ. ಆದರೆ ದೇವರ ಪೂಜೆ ಅರ್ಚನೆಗಳಿಗೆ ಕಠಿಣವಾದ ಸಂಸ್ಕೃತ ಶ್ಲೋಕಗಳಿವೆ. ಅದರ ಉಚ್ಚಾರಣೆಯಲ್ಲಿ ವ್ಯತ್ಯಾಸವಾದರೆ ಅರ್ಥವೇ ವ್ಯತಿರಿಕ್ತವಾಗುತ್ತದೆ. ಅದಕ್ಕಾಗಿ ದಾಸವರೇಣ್ಯರು ಹೇಳಿದ್ದು ಕಲಿಯುಗದಲ್ಲಿ ಸುಲಭದಲ್ಲಿ ಎಲ್ಲರೂ ದೇವರನ್ನು ಒಲಿಸಿಕೊಳ್ಳುವ ಸರಳ ಮಾತೃಭಾಷೆಯ ಪದಗಳೇ ಭಜನೆ ಎಂದು.
ಕಡಾರು ವಿಶ್ವನಾಥ ರೈ