ಒಳ್ಳೆಯತನವೆನ್ನುವುದು ಸರಾಗವಾಗಿ ಬಂದು ನಮ್ಮ ಕಾಲಡಿ ಬೀಳುವುದಿಲ್ಲ. ಅದನ್ನು ನಾವೇ ಬೆನ್ನತ್ತಿಕೊಂಡು ಹೋಗಬೇಕು. ಆದರೆ ನನ್ನೀ ಗೆಳೆಯ ಬದುಕಿನ ಉರಿ ಬಿಸಿಲಿನ ವೇಳೆ ತಂಗಾಳಿಯಂತೆ ಸಿಕ್ಕಿ ಬಿಟ್ಟವ. ಅವನ ಬೆನ್ನನ್ನು ನಾನು ಬಿದ್ದೆನಾ? ನನ್ನ ಬೆನ್ನನ್ನು ಅವನು ಬಿದ್ದನಾ? ಗೊತ್ತಿಲ್ಲ. ಆದರೆ ನಮ್ಮಿಬ್ಬರನ್ನೂ ಆ ಸ್ನೇಹ ಬೆಂಬಿಡದೆ ಕಾಯುತ್ತಿರುವುದಂತೂ ಸತ್ಯವೇ. ದೂರ ಬಹುದೂರ ನಡೆದು ಬಂದವನಿಗೆ ಅಸ್ಪಷ್ಟ ಎನ್ನಿಸಿ ಬಿಡುವ ರಸ್ತೆಯ ತಿರುವು, ಸುತ್ತಲೂ ಕಾಣುವ ಪರಿಚಿತ ಅನ್ನಿಸಿಕೊಳ್ಳುವ ಅಪರಿಚಿತ ಮುಖಗಳು, ಹೊಳೆ ದಾಟಿ ಆಚೆ ಹೋಗೋಣ ಎಂದರೇ ಮುರಿದುಬಿದ್ದ ಸೇತುವೆಯ ನಿಸ್ಸಾಯಕತೆ, ನಿಂತ ನೆಲದ ಕಾವು ಇಡೀಯ ದೇಹ ವ್ಯಾಪಿಸಿದ ಬೆವರ ಕುದಿತದ ಬಳಲಿಕೆ, ಬೇಸರದ ಸಂಜೆಗಳಿಗೆ ಬೇಕೆನಗೆ ಹಿತದ ಮಾತೊಂದು ಎಂಬ ತನ್ಮಯದ ಕ್ಷಣಗಳಿಗೆ, ನಂಬಿಕೆ ದ್ರೋಹ ಎನ್ನುವ ಮರಮೋಸದ ಬಿಗಿಬಲೆಯ ಹಿಡಿತಕ್ಕೆ ಅಲುಗಾಡಲಾರದೆ ಮನಸು ನೀರಿಗೆ ಬಿದ್ದ ಗುಬ್ಬಚ್ಚಿ ಆದಾಗಲೆಲ್ಲ ನೆನಪಿಗೆ ಬಂದು ಬಿಡುವ ಗೆಳೆಯ ದಿವಾಕರ್ ಶೆಟ್ಟಿ ಅಡ್ಯಾರು.
“ಉದಯ್ ನಮ್ಮದು ಭಾವುಕ ಪ್ರಪಂಚ ಕಣೋ, ಯಾರೆಂದರೇ ಯಾರೂ ಇಲ್ಲದೆಯೂ ನಾವು ಖುಷಿಯಾಗಿ ಇರಬಲ್ಲೆವು ಬಾವನೆಗಳ ಜೊತೆಗೆ ಮಾತನಾಡುತ್ತಾ…” ಎನ್ನುವ ಮುಗ್ದ ಮನಸಿನ ಕನಸುಗಾರನೀತ. ತುಂಬಾ ಓದುವ, ಕಡಿಮೆ ಬರೆಯುವ, ಬರೆದ ಪ್ರತಿ ಅಕ್ಷರಗಳನ್ನು ಹೃದಯದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿ ಬಿಡುವ ಸರಸ್ವತಿ ಪುತ್ರ.
ಮೊನ್ನೆಯ ದಿನ ಯುವರ್ ಕೋಟ್ ಪ್ರಕಾಶಿತ “ಜೀವನ ಒಂದು ಗೆಲುವಿನ ಹಿಂದೆ” ಎನ್ನುವ ಅಡ್ಯಾರ್ ರವರ ಪ್ರಥಮ ಅಧ್ಯಾಯದ ಪುಸ್ತಕವೊಂದು ಬಿಡುಗಡೆಗೊಂಡಿತ್ತು. ಸಾಲು ಸಾಲು ಸೋಲುಗಳನ್ನು ಮತ್ತು ಗೆದ್ದು ಬೀಗುವಷ್ಟು ಗೆಲುವುಗಳನ್ನು ಕಂಡಂತಹ ಭಾವ ಸಮುದ್ರವೊಂದರ ತಣ್ಣನೆಯ ಅಕ್ಷರದಲೆಗಳು ನಿಮ್ಮ ಮನದಂಗಣವನ್ನು ತೋಯಿಸಬೇಕೇ ಹಾಗಾದರೆ ಇದನ್ನು ನೀವು ಕೊಂಡು ಓದಲೇಬೇಕು. ಮತ್ತು ಗೆಳೆಯನೊಬ್ಬನ ಬರಹ ನಿರಂತರವಾಗಿರುವಂತೆ ನೀವೆಲ್ಲರೂ ನೋಡಿಕೊಳ್ಳಲೇಬೇಕು.
ಬೆಸ್ಟ್ ಆಫ್ ಲಕ್ ಡಿಯರ್ ಅಡ್ಯಾರ್…!
ಉದಯ್ ಕುಂದಾಪುರ (ಮುಂಬಯಿ)