
ಯಾವುದೇ ಕಲಾ ಪ್ರಕಾರವಿರಲಿ, ಅಲ್ಲಿ ಮೂಲ ನಂಬಿಕೆಗಳಿಗೆ ಧಕ್ಕೆಯಾಗಬಾರದು. ಸಿನಿಮಾ, ನಾಟಕ, ಯಕ್ಷಗಾನ ಅಥವಾ ಜನರನ್ನು ತಲುಪುವ ಯಾವುದೇ ಮಾಧ್ಯಮಗಳಲ್ಲಿ ಯಾವುದೇ ಮೂಲ ನಂಬಿಕೆಗಳನ್ನು ಸಮಾಜಕ್ಕೆ ತಲುಪಿಸುವ ಹಾದಿಯಲ್ಲಿ ಕೊಂಚ ಎಡವಟ್ಟಾದರೂ ಪರ-ವಿರೋಧದ ಚರ್ಚೆಗಳ ಜೊತೆಗೆ ಆಕ್ರೋಶ, ಅಸಮಾಧಾನ ಹಾಗೂ ಅಪಸ್ವರಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವರಿಗೆ ನಂಬಿಕೆಗಳು ಗಟ್ಟಿಯಾದ ಅನುಭವವಾದರೆ ಮತ್ತೆ ಕೆಲವರಿಗೆ ನಂಬಿಕೆಗೆ ಧಕ್ಕೆಯಾದ ಅನುಭವ. ಇದು ಸಹಜವಾಗಿಯೇ ಸಮಾಜದಲ್ಲಿ ಸಂಘರ್ಷದ ಸನ್ನಿವೇಶ ಸೃಷ್ಟಿಸುತ್ತದೆ. ದೈವಾರಾಧನೆಯನ್ನೇ ಮುಂದಿಟ್ಟುಕೊಂಡು ಬಂದ ಇತ್ತೀಚಿನ ಕೆಲ ಸಿನಿಮಾಗಳು ಕಮರ್ಷಿಯಲ್ ಹಿಟ್ ಅನಿಸಿಕೊಂಡಿದ್ದರ ಜೊತೆಗೆ ಸೃಷ್ಟಿಸಿದ ಅನಾಹುತಗಳು ಕೂಡಾ ಅಷ್ಟೇ ದೊಡ್ಡದು. ಇದೇ ಕಾರಣಕ್ಕೆ ದೈವಾರಾಧನೆಯನ್ನೇ ಕಥಾ ವಸ್ತುವಾಗಿ ಇಟ್ಟುಕೊಂಡು ಬರೋ ಸಿನಿಮಾಗಳ ಗೆಲುವು ಕೂಡ ಈ ಮಣ್ಣಿನ ಅಸ್ಮಿತೆಯಂತಿರೋ ದೈವ ನಂಬಿಕೆಗೆ ಭಾರೀ ಅಪಾಯ ತಂದೊಡ್ಡಬಹುದು ಅನ್ನೋ ಆತಂಕವಿದೆ. ಆದರೆ ತುಳು ಸಿನಿಮಾ ರಂಗದಲ್ಲಿ ಇತ್ತೀಚೆಗಷ್ಟೇ ತೆರೆಗೆ ಬಂದ ಸ್ವರಾಜ್ ಶೆಟ್ಟಿ, ಜೆ.ಪಿ ತೂಮಿನಾಡು, ಕೆ ಎಸ್ ಲಂಚುಲಾಲ್ ಅಭಿನಯದ ‘ಕಟ್ಟೆಮಾರ್’ ಎನ್ನುವ ಸಿನಿಮಾ ಈ ವಿಚಾರಗಳಲ್ಲಿ ಅಕ್ಷರಶಃ ವಿಭಿನ್ನವಾಗಿ ನಿಲ್ಲುತ್ತದೆ. ಮತ್ತದೇ ಹಾಸ್ಯ, ಕಾಮಿಡಿಗೆ ಕನೆಕ್ಟ್ ಆಗೋ ಕೌಟುಂಬಿಕ ಕಥೆಗಳನ್ನೇ ಇಟ್ಟುಕೊಂಡು ತೆರೆಯ ಮೇಲೆ ಬರೋ ತುಳು ಸಿನಿಮಾಗಳ ಕಾರಣದಿಂದಲೇ ಅನೇಕ ಪ್ರೇಕ್ಷಕರು ಇಂದು ಕೋಸ್ಟಲ್ ವುಡ್ ನ ಚಿತ್ರಗಳನ್ನು ಗೆಲ್ಲಿಸುತ್ತಿಲ್ಲವೇನೋ ಅನಿಸ್ತಿದೆ. ನಮ್ಮಲ್ಲೂ ಒಂದಷ್ಟು ಪ್ರಬುದ್ಧ, ಅನಿರೀಕ್ಷಿತ, ವಿಭಿನ್ನ ಕಥಾ ಹಂದರದ ಕಣ್ಣಲ್ಲಿ ಕಣ್ಣಿಟ್ಟು ನೋಡೋ ಚಿತ್ರಗಳು ಬಂದರೆ ನೋಡಬಹುದು ಅನಿಸುವಷ್ಟರ ಮಟ್ಟಿಗೆ ‘ಕಟ್ಟೆಮಾರ್’ ಹೊಸ ನಿರೀಕ್ಷೆ ಹುಟ್ಟಿಸಿದೆ. ದೈವದ ಸಿನಿಮಾ ಅಂದ ಮಾತ್ರಕ್ಕೆ ಕೋಲ, ನೇಮಗಳನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡಬಹುದು, ದೈವ ನರ್ತಕರ ನರ್ತನ, ನುಡಿಗಳನ್ನು ವಿಭಿನ್ನ ಸೌಂಡ್ ನಲ್ಲಿ ಆಸ್ವಾದಿಸಬಹುದು ಅನ್ನೋ ನಿರೀಕ್ಷೆಗಳನ್ನು ಇಟ್ಟುಕೊಂಡು ಕಟ್ಟೆಮಾರ್ ಸಿನಿಮಾ ನೋಡಬೇಡಿ. ಸಿನಿಮಾದ ಟ್ರೈಲರ್ ನಲ್ಲೇ ಹೇಳುವಂತೆ, ಕೆಲವರು ವೇಷವನ್ನೇ ದೈವ ಅಂದುಕೊಂಡಿದ್ದಾರೆ. ಪುರ್ಸೋತ್ತಿದ್ರೆ ಒಮ್ಮೆ ತುಳುನಾಡಿಗೆ ಬನ್ನಿ ಆಯ್ತಾ, ದೈವ ಏನೂಂತ ನಾವು ತೋರಿಸಿಕೊಡ್ತೇವೆ… ಅನ್ನೋ ಹಾಗೆ ಇಡೀ ಸಿನಿಮಾ ಆಡಂಬರವನ್ನು ಕಳಚಿ ದೈವದ ನಂಬಿಕೆಯ ಜೊತೆಗಷ್ಟೇ ನಿಂತಿರೋ ಸಿನಿಮಾದಂತೆ ಭಾಸವಾಗುತ್ತದೆ. ತುಳುವರು ಅನಾದಿ ಕಾಲದಿಂದಲೂ ನೋಡಿಕೊಂಡೇ ಬಂದಿರೋ ನೇಮ, ಕೋಲವನ್ನು ಮತ್ತೆ ಸಿನಿಮಾದಲ್ಲಿ ತೋರಿಸಿ ವೈಭವೀಕರಿಸಿಲ್ಲ. ದೈವಾರಾಧನೆಯ ಯಾವುದೇ ವಸ್ತು, ಕ್ರಮ ಹಾಗೂ ಪದ್ದತಿಗಳನ್ನು ಅನುಕರಿಸುವ ಮೂಲಕ ಈ ಸಿನಿಮಾ ಯಾರ ನಂಬಿಕೆಗೂ ಧಕ್ಕೆ ಮಾಡಿಲ್ಲ. ದೈವಾರಾಧನೆಗೆ ಎಲ್ಲೂ ಅಪಚಾರ ಆಗದಂತೆ ದೈವದ ಗಂಧ ಪ್ರಸಾದವನ್ನೇ ಇಡೀ ಸಿನಿಮಾದಲ್ಲಿ ದೈವದ ಅಸ್ತಿತ್ವದಂತೆ ತೋರಿಸಲಾಗಿದೆ. ಅಬ್ಬರ, ವೈಭವೀಕರಣ, ನೇಮ, ಕೋಲಗಳ ದೃಶ್ಯಗಳಿಲ್ಲದೆಯೂ ತುಳುನಾಡಿನ ದೈವಗಳ ಶಕ್ತಿಯನ್ನು ಸಮಾಜದ ಮುಂದೆ ಪ್ರೆಸೆಂಟ್ ಮಾಡಲಾಗಿದೆ. ದೈವದ ಗಂಧ ಪ್ರಸಾದದಲ್ಲೇ ಬದುಕಿನುದ್ದಕ್ಕೂ ದೈವಗಳ ಇರುವಿಕೆ ಕಾಣುವ ತುಳುವರ ಸಾಂಪ್ರದಾಯಿಕ ನಂಬಿಕೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿ ಕೊಡಲಾಗಿದೆ. ಗಂಧ ಪ್ರಸಾದದ ಎಲೆಯ ಮೂಲಕವೇ ಗಗ್ಗರದ ಸದ್ದು ಕಿವಿಗೆ ಅಪ್ಪಳಿಸೋ ಕಲ್ಪನೆಯಂತೂ ವಿಭಿನ್ನ. ತುಳುವ ಮಣ್ಣಿನ ತತ್ವ ಮತ್ತು ಸತ್ವ ಅರಿತ ನಿರ್ದೇಶಕ, ಬರಹಗಾರನಷ್ಟೇ ತನ್ನ ಆರಾಧನ ಪದ್ದತಿಗೆ ಎಳ್ಳಷ್ಟೂ ಧಕ್ಕೆ ತರದಂತೆ ದೈವಗಳ ಕಾರ್ಣಿಕವನ್ನು ಈ ರೀತಿ ತೋರಿಸಲು ಸಾಧ್ಯ ಅನಿಸಿ ಬಿಡುತ್ತದೆ.


ಕಮರ್ಷಿಯಲ್ ಯೋಚನೆಗಳನ್ನು ಯೋಜನೆಗೆ ಇಳಿಸಿದಾಗ ಕೆಲವೊಮ್ಮೆ ನೆಲದ ಸಂಪ್ರದಾಯಗಳನ್ನು ದಾಟಿ ಸಿನಿಮಾಗಳು ನಿರ್ಮಾಣವಾಗುತ್ತದೆ. ಹಾಗೆ ನೋಡಿದರೆ ‘ಕಟ್ಟೆಮಾರ್’ ಇದ್ಯಾವುದನ್ನೂ ದಾಟದೇ ದೈವದ ಹೆಸರಿನಲ್ಲಿ ನಿರ್ಮಾಣಗೊಂಡ ಅಪ್ಪಟ ತುಳು ಮಣ್ಣಿನ ಸಿನಿಮಾ. ‘ಒಂಜಿ ಇರೆ ಗಂಧ’ (ಒಂದು ಎಲೆ ಗಂಧ)ವೇ ಕಟ್ಟೆಮಾರ್ ಸಿನಿಮಾದ ಜೀವಾಳ. ದೈವದ ವೇಷ ಭೂಷಣ, ಬಣ್ಣ, ಗಗ್ಗರ, ಕೋಲ, ನೇಮ ಯಾವುದೂ ತೆರೆಯ ಮೇಲೆ ಬಂದಿಲ್ಲ. ಇದ್ಯಾವುದೂ ಇಲ್ಲದೆಯೂ ತುಳುನಾಡಿನ ದೈವಗಳ ಕಾರ್ಣಿಕ ಶಕ್ತಿಯ ಬಗ್ಗೆ ಸಿನಿಮಾವೊಂದನ್ನು ಮಾಡಬಹುದು ಅನ್ನೋದನ್ನು ಕಟ್ಟೆಮಾರ್ ಟೀಂ ತೋರಿಸಿಕೊಟ್ಟಿದೆ. ಕಿರಿಕಿರಿ ಅನಿಸದ ಸದ್ದುಗದ್ದಲವಿಲ್ಲದ ರೀತಿಯಲ್ಲಿ ಸಾಮಾನ್ಯ ಕಥೆಯೊಂದನ್ನು ದೈವೀ ಶಕ್ತಿಯ ಹಿನ್ನೆಲೆಯಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ತುಳುನಾಡಿನ ದೈವಗಳ ಕಾರ್ಣಿಕ ಶಕ್ತಿ ಹಾಗೂ ನಮ್ಮ ದೈವಾರಾಧನೆಯ ಬಗ್ಗೆ ಜಗತ್ತಿಗೇ ಗೊತ್ತಾಗಬೇಕು ಅನ್ನೋ ವಾದವೊಂದಿದೆ. ಆ ಕಾರಣಕ್ಕಾಗಿಯೇ ದೈವಾರಾಧನೆಯ ಕುರಿತು ಬರೋ ಸಿನಿಮಾಗಳು ಗೆದ್ದಾಗ ಸಂಭ್ರಮಿಸಿದ್ದೂ ಇದೆ. ಇದರ ಜೊತೆಗೆ ಆ ಬಳಿಕ ಎದುರಾದ ಅನಾಹುತಗಳ ಬಗ್ಗೆಯೂ ಸಮಾಜದಲ್ಲಿ ಪರ-ವಿರೋಧದ ಚರ್ಚೆಗಳಾಗಿದೆ. ಹಾಗಾಗಿ ಕಟ್ಟೆಮಾರ್ ನಂತ ಸಿನಿಮಾಗಳು ಬರಲಿ. ನಂಬಿಕೆ ಮತ್ತಷ್ಟು ಗಟ್ಟಿಯಾಗೋದರ ಜೊತೆಗೆ ಯಾವ ಅನಾಹುತ, ಅಪಚಾರಗಳಿಗೂ ಒಡ್ಡಿಕೊಳ್ಳದ ಈ ಸಿನಿಮಾವನ್ನ ಸಮಸ್ತ ತುಳುವರೂ ಯಾವ ವಿರೋಧಗಳೂ ಇಲ್ಲದೇ ಒಪ್ಪಿ ಕೊಳ್ಳಬಹುದು ಅನಿಸುತ್ತದೆ. ಹಾಗಾಗಿ ಒಮ್ಮೆ ಕಟ್ಟೆಮಾರ್ ಸಿನಿಮಾ ನೋಡಿ ಬನ್ನಿ…. ದೈವ ನಂಬಿಕೆಯ ವಿಚಾರದಲ್ಲಿ ನಮಗೆ ಸಿನಿಮಾಗಳು ಮಾದರಿಯಲ್ಲವಾದರೂ ನಮ್ಮದೇ ನಂಬಿಕೆ ಮತ್ತು ನಾವೇ ಪಾತ್ರಧಾರಿಗಳು ಅನ್ನೋವಷ್ಟರ ಮಟ್ಟಿಗೆ ಕೆಲವೊಮ್ಮೆ ಸಿನಿಮಾ ಸಣ್ಣದಾಗಿ ಆವರಿಸಿ ಬಿಡುತ್ತದೆ. ಆದರೆ ನೆನಪಿರಲಿ, ಈ ಹಿಂದೆ ಬಂದಿರೋ ದೈವಾರಾಧನೆ ಕುರಿತ ಮತ್ಯಾವುದೋ ಸಿನಿಮಾವನ್ನು ತಲೆಯಲ್ಲಿ ಇಟ್ಟುಕೊಂಡು ದಯವಿಟ್ಟು ಕಟ್ಟೆಮಾರ್ ನೋಡಲೇ ಬೇಡಿ… ಅದೇ ಬೇರೆ, ಇದೇ ಬೇರೆ…. ಸಹಜವಾಗಿ ಸಿನಿಮಾಗಳ ಬಗ್ಗೆ ನಾನು ಬರೆಯೋದಿಲ್ಲ, ಹಾಗೆ ನೋಡಿದರೆ ತುಳು ಸಿನಿಮಾವೊಂದರ ಬಗ್ಗೆ ಇದೇ ಮೊದಲ ಬಾರಿಗೆ ಅಭಿಪ್ರಾಯ ಬರೆದಿದ್ದೇನೆ. ಹಾಗಂತ ಕಟ್ಟೆಮಾರ್ ತಂಡದಲ್ಲಿ ನನಗೆ ಯಾವ ಪರಿಚಿತರೂ ಇಲ್ಲ. ನೋಡಿದ ಸಿನಿಮಾವೊಂದು ಇತ್ತೀಚಿನ ಕೆಲ ಘಟನೆಗಳ ಕಾರಣಕ್ಕೆ ಸ್ವಲ್ಪ ಕಾಡಿತು. ಹಾಗಾಗಿ ಈ ಬರಹ, ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ…!
ಬರಹ : ಭರತ್ ರಾಜ್





















































































































