ಹೇಗೋ ಉಡುಪಿಗೆ ಬಂದೆಯಲ್ಲ ಮಠಕ್ಕೆ ಹೋಗಿ ಬರುವ ಎಂದು ಕಾರನ್ನು ಮಠಕ್ಕೆ ಹೋಗುವ ರಸ್ತೆಗೆ ತಿರುಗಿಸಿದ ಸಂತೋಷ ವುಡ್ ಲ್ಯಾಂಡ್ ಹೊಟೇಲಿನ ಎದುರುಗಡೆ ಬಲಬದಿಯಲ್ಲಿ ಕಾರು ಪಾರ್ಕ್ ಮಾಡಿ ಮುಂದೆ ರಥಬೀದಿಯಲ್ಲಿ ನಡೆಯುತ್ತಾ ಕೃಷ್ಣಮಠದತ್ತ ಹೋದ. ಹೋಗುವ ರಸ್ತೆಯಲ್ಲಿ ಅಕ್ಕ ಪಕ್ಕ ಸಂತೆಯ ಹಾಗೆ ಹೂವು, ಹಣ್ಣು, ತರಕಾರಿ, ಆಟದ ಸಾಮಾನುಗಳು, ಬಳೆ, ಭಜನೆ, ಶ್ಲೋಕದ ಪುಸ್ತಕಗಳು, ದೇವರ ಪೂಜೆಯ ಸಾಮಾನುಗಳು ಇತ್ಯಾದಿ ವಸ್ತುಗಳನ್ನು ಮಾರುವ ಮಾರಾಟಗಾರರು. ದಾರಿಯಲ್ಲಿ ಕುಳಿತು ಬೇಡುವ ಭಿಕ್ಷಕರಿಗೂ ಕಡಿಮೆ ಇರಲಿಲ್ಲ. ಅಮ್ಮ, ಅಣ್ಣ, ಅಕ್ಕ ಎಂದು ಏರು ಸ್ವರದಲ್ಲಿ ಬೇಡುತ್ತಿರುವಾಗ ಯಾರಾದರೂ ದಾನ ಕೊಟ್ಟೆ ಕೊಡಬೇಕು, ಕೊಡುತ್ತಾರೆ ಕೂಡ. ಸಂತೋಷ ಕೂಡ ತನ್ನ ಪ್ಯಾಂಟ್ ಶರ್ಟ್ ಕಿಸೆ ಹುಡುಕಾಡಿದ ಏನಾದರೂ ಚಿಲ್ಲರೆ ಹಣ ಸಿಗುತ್ತದೆಯೋ ಎಂದು. ಬಿಕ್ಷುಕರ ಸಾಲಲ್ಲಿ ಪಕ್ಕನೆ ಕಂಡುಕೊಂಡ ಒಬ್ಬ ವ್ಯಕ್ತಿ. ಆ ಬೋಳು ತಲೆಯ ಆಳವಾದ ದಣಿದ ಕಣ್ಣುಗಳ, ಸುಕ್ಕು ಕಟ್ಟಿದ ಕೋಲು ಮುಖದ, ಅಸ್ತವ್ಯಸ್ತವಾದ ಹರಿದ ಚಿಂದಿ ಧರಿಸಿದ ಸಪೂರ ಬಿಕ್ಷುಕ. ಅರೆ! ಇವನನ್ನು ಎಲ್ಲೂ ನೋಡಿದ ಹಾಗಿದೆಯಲ್ಲ. ಸುಮಾರು ತಲೆ ಕೆರೆದರೂ ಹೊಳೆಯಲೇ ಇಲ್ಲ. ಪ್ಯಾಂಟಿನ ಕಿಸೆಯಲ್ಲಿ ಹತ್ತರ ಒಂದು ಪಾವಲಿ ಸಿಕ್ಕಿತು ಅದನ್ನೇ ಆತನಿಗೆ ಕೊಟ್ಟುಬಿಟ್ಟ. ಅನಂತೇಶ್ವರ ದೇವಾಲಯದೊಳಗೊಗಿ ಎಣ್ಣೆ ಹಚ್ಚಿ ದೇವರ ದರ್ಶನ ಮಾಡಿ ಮಠದ ಕಡೆ ಸಾಗಿದ. ಆದರೂ ತಲೆಯಲ್ಲಿ ಆ ಭಿಕ್ಷುಕನೇ ತಿರುಗುತ್ತಿದ್ದ. ಅರೆ ಆತ ಯಾರೆಂದೇ ಗೊತ್ತಾಗುವುದಿಲ್ಲ ಆತನನ್ನು ನೋಡಿದ್ದೇನೆ ಎಂದೇ ಅನಿಸುತ್ತದೆ, ಎಲ್ಲಿ ಎಂದು ಹೊಳೆಯುತ್ತಿಲ್ಲ. ಯಾಕೋ ಮನಸು ಗಲಿಬಿಲಿಯಾದಂತೆ ತೋರಿತು. ಆತನ ವಿಚಾರ ಬಿಟ್ಟು ಕೃಷ್ಣನ ದರ್ಶನ ಮಾಡಿ ಕೆರೆಯ ಸುಂದರ ದೃಶ್ಯವನ್ನು ನೋಡುತ್ತಾ ಸಂತೋಷ ಹಿಂತಿರುಗಿದ. ಅದೇ ದಾರಿಯಲ್ಲಿ ಕಾರ್ ಪಾರ್ಕ್ ಮಾಡಿದ ಸ್ಥಳದ ಕಡೆ ಆ ಇಕ್ಕೆಲಗಳಲ್ಲಿ ಸಾಗುತ್ತಿರುವಾಗ ಪುನಃ ಕಂಡು ಬಂದ ಅದೇ ಬಿಕ್ಷುಕ. ಭಿಕ್ಷುಕನಲ್ಲೇ ಕೇಳಿ ಬಿಡ್ಲಾ ನೀನ್ಯಾರೆಂದು ಯೋಚಿಸಿದ. ಛೆ! ಬೇಡ ಎಂಥಾ ಸಣ್ಣತನ ಎಂದುಕೊಳ್ಳುತ್ತಾ ಆತನ ಸಮೀಪ ಹೋಗಿ ಸ್ವಲ್ಪ ಆತನನ್ನೇ ದಟ್ಟಿಸತೊಡಗಿದ. ಆತ ಸ್ವಲ್ಪ ಕಸಿವಿಸಿಕೊಂಡರೂ ತಲೆ ಕೆಡಿಸಿಕೊಳ್ಳದೆ ಅಣ್ಣ, ಹೊಟ್ಟೆ ಹಸಿವಾಗುತ್ತದೆ. ಏನಾದರೂ ಕೊಡಪ್ಪ ಎಂದು ಪ್ಯಾಂಟ್ ಎಳೆಯ ತೊಡಗಿದ. ಇನ್ನು ಈತನ ಮುಂದೆ ನಿಂತ್ರೆ, ಪ್ಯಾಂಟೆ ಎಳೆದು ಜಾರಿಸಿ ಬಿಟ್ಟಾನು ಎಂದು ಗಾಬರಿಗೊಂಡು ಮುಂದೆ ನಡೆದು ಬಿಟ್ಟ ಸಂತೋಷ. ಆದರೆ ಯಾರಾತ, ನನಗೆ ಯಾಕೆ ಹೀಗೆ ಅನ್ಸುತ್ತೆ ಆತನ್ನ ನಾನು ಎಲ್ಲೂ ನೋಡಿದ್ದೇನೆ ಎಂದು ಯೋಚಿಸುತ್ತಾ ಕಾರ್ ಸ್ಟಾರ್ಟ್ ಮಾಡಿದ. ಕಾರ್ ಅಡ್ಡ ರಸ್ತೆ ದಾಟಿ ಹೈವೆಗೆ ಬಂತು. ಬಂತು! ಬಂತು! ಸಂತೋಷನಿಗೆ ನೆನಪು ಬಂತು ಕೃಷ್ಣಮಠದ ಬಳಿ ನೋಡಿದ ಆ ಭಿಕ್ಷುಕ ಯಾರೆಂದು! ಪ್ರಮೀಳಾಳ ಗಂಡ!

ಉಡುಪಿ ಮಣಿಪಾಲದಲ್ಲಿ ‘ಮಹಾಮ್ಮಾಯಿ ಟ್ರೇಡರ್ಸ್ ‘ಎಂಬ ಹೋಲ್ಸೇಲ್ ಅಂಗಡಿ ಹೊಂದಿದ್ದ ಸಂತೋಷ ಕಾಪುವಿನವ. ಕಾಪು ಬೀಚ್ ರಸ್ತೆಯ ಒಳಗಡೆ ಹೋಗಿ ಎಡಗಡೆಯ ಮುಂದೆ ಸಿಗುವ ಎರಡನೆಯ ಮನೆಯೇ ಸಂತೋಷನದು. ಬೀಚ್ ರಸ್ತೆ ಹೋಗಿ ಕಾಪು ಕಡಲ ಬದಿಗೆ ಹೋಗಿ ಸೇರುತ್ತದೆ. ಸಮುದ್ರ ಎಂದರೆ ಮೀನು ಇರಲೇಬೇಕಲ್ಲ. ಹೌದು ಇಲ್ಲಿರುವನೇಕರು ಬೆಸ್ತರು. ಮೀನುಗಾರಿಕೆಯೇ ಇವರ ಮುಖ್ಯ ಕಸುಬು. ಇಲ್ಲಿನ ಹೆಚ್ಚಿನ ಯುವಕರು, ಗಂಡಸರು ದೋಣಿಯೋ, ಬೋಟ್ ಅಥವಾ ಸ್ವಲ್ಪ ದೊಡ್ಡ ಮೀನುಗಾರಿಕೆಯ ಬೋಟ್ ಗಳಲ್ಲಿ ಸಮುದ್ರಕ್ಕೆ ಹೋಗಿ ಬೆಳ್ಳಂಬೆಳಗ್ಗೆ ಮೀನು ಹಿಡಿದು ತರುವರು. ಹೆಂಗಸರು ಬುಟ್ಟಿ ಹಿಡಿದು ಮೀನುಗಳನೆಲ್ಲಾ ವಿಲೆವಾರಿ ಮಾಡಿ ಮನೆ ಮನೆಗೆ ಬುಟ್ಟಿ ಹಿಡಿದುಕೊಂಡು ಮಾರಾಟ ಮಾಡಲು ಸಜ್ಜಾಗುತ್ತಿದ್ದರು. ಇವರಲ್ಲಿ ಯಶೋಧ ಎಂಬುವವಳು ನಮ್ಮ ಇಲ್ಲಿನ ಬೀಚ್ ರಸ್ತೆಗಳಲ್ಲಿರುವ ಮನೆಗಳಿಗೆಲ್ಲಾ ಖಾಯಂ ಆಗಿ ಮೀನು ಮಾರುತ್ತಿದ್ದಳು. ನಮ್ಮನೆಗೂ ಬರುತ್ತಿದ್ದ ಯಶೋಧ ಅಮ್ಮನಿಗೆ ಬಹಳ ಆಪ್ತಳು. ಅಮ್ಮ ದಿನ ಹಣ ಕೊಡುವುದಿಲ್ಲ ಎಲ್ಲಾ ಲೆಕ್ಕ ಹಾಕಿ, ವಾರಕ್ಕೊಮ್ಮೆ ಹಣ ಕೊಡುವಳು. ದಿನ ಹಣ ಕೊಡು ಎಂದು ದಂಬಾಲು ಬೀಳದಿದ್ದರೂ, ಕೆಲವೊಮ್ಮೆ ‘ಅಮ್ಮ ಇವತ್ತು ಅಯ್ಯನಿಗೆ ಹುಷಾರಿಲ್ಲ ಅವರು ಬೋಟಿಗೆ ಹೋಗಿಲ್ಲ ಹಾಗಾಗಿ ನಾನು ಬೇರೆಯವರ ಹತ್ತಿರ ಕಡ ತೆಗೆದು ಮೀನು ತಂದಿದ್ದೇನೆ, ಹಾಗಾಗಿ ಇವತ್ತಿನ ಚುಕ್ತಾ ಮಾಡಿ’ ಎಂದು ತಗಾದೆ ತೆಗೆಯುತ್ತಿದ್ದಳು ಯಶೋಧ. ರಾತ್ರಿ ಹೊತ್ತು ಎಲ್ಲಾ ವ್ಯವಹಾರವನ್ನು ಮುಗಿಸಿ ಮನೆಗೆ ಮರಳುವ ಸಂತೋಷನಿಗೆ ಯಶೋಧ ಅಮ್ಮನಿಗೆ ತಿಳಿಸಿದ ಏನಾದರೂಂದು ತಾಜಾ ಖಬರ್ (ಸುದ್ದಿ) ದಿನಾ ತಯಾರಿರುತ್ತಿತ್ತು. ಅವತ್ತು ರಾತ್ರಿ ಬಂದ ಸಂತೋಷನಿಗೆ ಅಮ್ಮ ಉತ್ಸಾಹದಿಂದ ಬಂದು ಒಂದು ಖುಷಿಯ ವಿಷಯ ತಿಳಿಸಿದಳು. ಯಶೋಧನ ದೊಡ್ಡ ಮಗಳು ಪ್ರಮೀಳಾನಿಗೆ ಮದುವೆಯಂತೆ. ಹುಡುಗ ದೂರದ ಕುಮಟದವನಂತೆ. ಸ್ವಂತ ಬೋಟ್ ಕೂಡ ಇದೆಯಂತೆ. ಉಚ್ಚಿಲದಲ್ಲಿದ್ದ ಪ್ರಮೀಳಾಳ ಮದುವೆಗೆ ಸಂತೋಷ ಮತ್ತು ಆತನ ಅಮ್ಮ ಹೋಗಿ ಕವರ್ ಇಟ್ಟು ಆಶೀರ್ವದಿಸಿ ಬಂದಿದ್ದರು. ಪ್ರಮೀಳಾ ಮದುವೆಯಾಗಿ ಕುಮಟಾ ಸೇರಿದರೂ ಆಕೆಯ ನ್ಯೂಸ್ ಮಾತ್ರ ಅಮ್ಮನಿಗೆ ತಾಜಾ ತಲುಪುತ್ತಿತ್ತು ಯಶೋದೆಯ ಮೂಲಕ. ಕುಮುಟಾದಲ್ಲಿ ಪ್ರಮೀಳಾಳ ಗಂಡನ ಮನೆ ಟೆರೆಸಿದ್ದಂತೆ. ಪ್ರಮೀಳಳಿಗೆ ಅಲ್ಲಿ ಇಲ್ಲಿಯ ಹಾಗೆ ಮೈಮುರಿದು ದುಡಿಯಬೇಕಿಲ್ಲಂತೆ, ಬಹಳ ಆರಾಮವಂತೆ. ಬೆಳಿಗ್ಗೆ ಬೋಟಿಂಗ್ ಹೋಗಿ ಬಂದು ತಂದ ಮೀನೆಲ್ಲ ಏಲಂ ಆಗಿ ಮಾರಾಟ ಮಾಡುವ ಪ್ರಮೀಳಾಳ ಗಂಡ ರಾಜೇಶನಿಗೆ ರಾತ್ರಿಯ ಹೊತ್ತು ಸ್ವಲ್ಪ ಕುಡಿತ ಬಿಟ್ಟರೆ ಬೇರೇನೂ ಚಟವಿಲ್ಲವಂತೆ. ಪ್ರಮೀಳಾ ಅಲ್ಲಿ ರಾಣಿಯ ಹಾಗೆ ಇದ್ದಾಳಂತೆ. ಹಾಗೆ ಸ್ವಲ್ಪ ದಿನದ ಬಳಿಕ ಇನ್ನೊಂದು ಗುಡ್ ನ್ಯೂಸ್ ಬಂತು. ಪ್ರಮೀಳ ಬಸುರಿಯಂತೆ. ಯಶೋಧೆಗಂತು ಕಾಲು ನೆಲದಲ್ಲಿರಲಿಲ್ಲ. ಕುಮಟಾದಲ್ಲಿ ಸೀಮಂತ ಮುಗಿಸಿ ಇಲ್ಲಿಗೆ ಬರುತ್ತಾಳಂತೆ, ಸ್ವಲ್ಪ ದಿನದಲ್ಲಿ ಒಂದು ಹೊಸ ಸದಸ್ಯ ಕುಟುಂಬಕ್ಕೆ ಸೇರ್ಪಡೆಗೊಳ್ಳಲಿದೆ ಎಂದು ಬಹಳ ಹರ್ಷದಲ್ಲಿದ್ದಳು ಯಶೋಧೆ.
ಸೀಮಂತ ಮುಗಿಸಿ ಪ್ರಮೀಳಾ ಊರಿಗೆ ಬಂದಳು. ಗರ್ಭಿಣಿ ಪ್ರಮೀಳಾ ಮೈ ಕೈ ತುಂಬಿಕೊಂಡು ಮುಖದಲ್ಲಿ ಕಾಂತಿ ಏರುತ್ತಿತ್ತು. ಕೆಲವೇ ತಿಂಗಳಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು ಪ್ರಮೀಳಾ. ಅಮ್ಮ ಆಸೆಯಿಂದ ಯಶೋದಾಳ ಮೊಮ್ಮಗುವನ್ನೊಮ್ಮೆ ನೋಡಬೇಕು ಎಂದು ಆಕೆಯ ಮನೆಗೆ ದೌಡಾಯಿಸಿದ್ದಳು. ಪ್ರಮೀಳಾಳ ಗಂಡ ರಾಜೇಶ ಕುಮುಟದಿಂದ ಓಡಿ ಬಂದಿದ್ದ. ಮನೆಗೆ, ಕೇರಿಗೆ, ಊರಿಗೆ ಇದೊಂದು ಸಂಭ್ರಮದ ವಿಷಯವಾಗಿತ್ತು. ಮಗುವಿಗೆ ನಾಲ್ಕೈದು ತಿಂಗಳು ಕಳೆದು ಪ್ರಮೇಯ ಕುಮುಟಕ್ಕೆ ಹಿಂತಿರುಗಿದಳು. ಯಶೋಧೆಗಂತು ಬೇಸರವೇ ಬೇಸರ. ಅಮ್ಮನಲ್ಲಿ ಬಂದು ಮಗುವಿನ ಸುದ್ದಿ ತೆಗೆಯುವಾಗ ನೆನಪು ಬಂದು ಕಣ್ಣು ಒದ್ದೆ ಆದದ್ದು ಉಂಟು. ಮಗು ಏನು ಮಾಡುತ್ತದೆಯೋ ಏನೋ, ಅಂಬೆಕಾಲಿಟ್ಟು ಕಾಲೇಳೆದುಕೊಂಡು ಹೋಗುತ್ತೋ ಏನೋ, ಪ್ರಮೀಳಾಳಿಗೆ ತಂಟೆ ಕೊಡುತ್ತೋ ಏನು ಎಂದೆಲ್ಲಾ ಮಗುವಿದೇ ಜಪ ಯಶೋಧಳಿಗೆ. ಒಂದು ದಿನ ಯಶೋಥೆ ಅಮ್ಮನಲ್ಲಿ ಒಂದು ಗುಟ್ಟಿನ ವಿಷಯ ಹೇಳಿದಳು. ಪ್ರಮೀಳಾಳ ಗಂಡನಿಗೆ ಬೇರೆ ಹೆಣ್ಣಿನ ಸಹವಾಸ ಇದೆಯಂತೆ. ಪ್ರಮೀಳಾ ಅತ್ತು ಅತ್ತು ಫೋನಲ್ಲಿ ತಿಳಿಸಿದ್ದಳು. ಅದಕ್ಕೆ ಅಮ್ಮ ಅಯ್ಯೋ ಅದೂ ಹುಚ್ಚು ಉಂಟಾ? ಹಿಂದಿನ ಕಾಲದಲ್ಲಿ ಕೆಲವು ಗಂಡಸರಿಗೆ ಸಾಮಾನ್ಯ. ಆದರೆ ಈಗ ಯಾರು ಹಾಗೆ ಇರುತ್ತಾರೆ. ಆ ಮರ್ಲನಿಗೆ ಸಮ ನಾಲ್ಕು ಬಡಿದು ಸರಿ ಮಾಡಬೇಕು ಎಂದರು. ಊರಲ್ಲಿ ಮೈ ಮುರಿದು ದುಡಿದು ಮಾಡುವ ಕೆಲಸವಾದರೂ ಮಾಡುವೆ ಆದರೆ ಈ ಹೆಣ್ಣುಮರ್ಲ ಗಂಡ ಬೇಡ ಎಂದು ಪ್ರಮೀಳಾ ತವರು ಮನೆಗೆ ವಾಪಸ್ಸಾದಳು. ಅಳಿಯ ರಾಜೇಶನ ವರ್ತನೆ ಸರಿ ಇಲ್ಲದಿದ್ದರೂ ಪ್ರಮೀಳ ಮಗನೊಂದಿಗೆ ಇಲ್ಲಿ ಬಂದದ್ದು ಸರಿ ಕಾಣಲಿಲ್ಲ ಯಶೋಧಾಳಿಗೆ. ಬುದ್ಧಿ ಹೇಳಿದಳು, ಪ್ರಮೀಳಾಳ ಗಂಡನನ್ನು ಇಲ್ಲಿಗೆ ಕರೆಸಿ ಪಂಚಾಯಿತಿಗೆ ಮಾಡಿಸಿದರು. ಸರಿ, ಇನ್ನು ಈ ತರ ಮಾಡೋದಿಲ್ಲ ಎಂದು ನಂಬಿಸಿ ಪ್ರಮೀಳಾದ ಗಂಡ ರಾಜೇಶ ಮಗುವಿನೊಂದಿಗೆ ಕುಮುಟಕ್ಕೆ ವಾಪಸ್ಸಾದ. ರಾಜೇಶನೊಂದಿಗೆ ಅನ್ಯೋನ್ಯತೆಯಿಂದ ಇದ್ದ ಪ್ರಮೀಳಾ ಇನ್ನೊಂದು ಮಗುವಿನ ಗರ್ಭಿಣಿಯೂ ಆದಳು.
ಒಂದು ದಿನ ಪ್ರಮೀಳಾ ಮನೆಯಲ್ಲಿರಬೇಕಾದರೆ ಯಾರೋ ಒಂದು ಹೆಂಗಸು ಸಣ್ಣ ಮಗುವಿನೊಂದಿಗೆ ಮನೆಗೆ ಬಂದು ರಂಪಾಟ ಮಾಡತೊಡಗಿದಳು. ‘ನಾನು ರಾಜೇಶನ ಹೆಂಡತಿ, ನೀನ್ಯಾರು? ಈ ಮನೆ ನನ್ನದು, ನೋಡು ನಮ್ಮ ಮಗು ಕೂಡ ಇದೆ’ ಎಂದು. ರಾಜೇಶ ಆ ಮಹಿಳೆಯ ಬಾಯಿ ಮುಚ್ಚಿಸಿ ಈಗ ಹೋಗು ನಾನು ಮತ್ತೆ ಬರುತ್ತೇನೆ ಎನ್ನುತ್ತಿದ್ದ. ಪ್ರಮೀಳಾಳಿಗೆ ಎಲ್ಲಾ ಅರ್ಥವಾಗುತ್ತಿತ್ತು.’ಯಾವಾಗದಿಂದಿದೆ ಇವಳ ಸಹವಾಸ? ಮದುವೆಯ ಮೊದಲೋ ಅಥವಾ ನಂತರವೂ ಎಂದು ಗಂಡನಿಗೆ ನೇರ ಪ್ರಶ್ನೆ ಇಟ್ಟಳು. ಅದಕ್ಕೆ ಆ ಹೆಂಗಸು ಮಧ್ಯೆ ಬಾಯಿ ಹಾಕಿ ‘ಅವನತ್ರ ಏನು ಕೇಳುವುದು? ನೀನು ಬರುವುದಕ್ಕಿಂತ ಮೊದಲೇ ನನ್ನ ಜೊತೆ ಸ್ನೇಹವಿತ್ತು. ನೀನು ನಂತರ ಬಂದವಳು. ಈ ಮನೆ ನನ್ನ ಹೆಸರಲ್ಲಿದೆ, ನನಗೆ ಸೇರಬೇಕಾದದ್ದು, ನೀ ಹೋಗಾಚೆ ಎಂದು ಆ ಹೆಂಗಸು ಪ್ರಮೀಳಾಳನ್ನು ಮನೆಯಿಂದ ಹೊರಗೆ ದೂಡುತ್ತಿದ್ದಳು. ರಾಜೇಶನು ಏನು ಅನ್ನದೆ ಮೂಗನ ಹಾಗೆ ನಿಂತಿದ್ದ. ಇಂತಹ ಮೋಸಗಾರನ ಮನೆಯಲ್ಲಿ ನಾನು ಖಂಡಿತ ನಿಲ್ಲಲಾರೆ ಎಂದು ಪ್ರಮೀಳಾ ಆ ಕ್ಷಣದಿಂದ ತನ್ನ ತವರಿಗೆ ಹೊರಟು ಬಂದಳು. ತವರಿಗೆ ಮರಳಿ ಬಂದ ಗರ್ಭಿಣಿ ಪ್ರಮೀಳಾ ಮತ್ತೆ ಕುಮುಟಾಗೆ ಹಿಂತಿರುಗಿ ಹೋಗಲಿಲ್ಲ. ಇನ್ನೊಂದು ಗಂಡು ಮಗುವೂ ಆಯಿತು. ಅಲ್ಲೇ ಊರಲ್ಲಿದ್ದ ಒಂದು ಗೇರು ಬೀಜದ ಫ್ಯಾಕ್ಟರಿಗೆ ಕೆಲಸಕ್ಕೆ ಸೇರಿದ ಪ್ರಮೀಳಾ ಅಮ್ಮನ ಮೀನಿನ ಕೆಲಸಕ್ಕೂ ಕೈ ಕೊಡುತ್ತಿದ್ದಳು. ಮೀನು ಏಲಂ ಆಗುವಾಗ ಬುಟ್ಟಿ ಹಿಡಿದು ಆ ಮೀನುಗಳನ್ನೆಲ್ಲ ಅಮ್ಮನೊಂದಿಗೆ ಮನೆ ಮನೆಗೆ, ಪೇಟೆಗೆ ತೆರಳಿ ಮಾರಾಟ ಮಾಡುತ್ತಿದ್ದಳು. ಯಾವ ಕೆಲಸಕ್ಕೂ ಹೇಸದ ಪ್ರಮೀಳಾ ಮಾಡದ, ಕೈ ಹಾಕದ ಕೆಲಸವಿರಲಿಲ್ಲ. ಕಷ್ಟದಲ್ಲಿ ಮಕ್ಕಳನ್ನು ಪೊರೆಯುತ್ತಿದ್ದಳು. ಈ ಮಕ್ಕಳು ಸಂಸ್ಕಾರಯುತರಾಗಿ ಬೆಳೆದು ಮುಂದೆ ಒಂದು ದೊಡ್ಡ ಮನುಷ್ಯರಾಗಬೇಕೆಂದು ಹಾರೈಸುತ್ತಿದ್ದಳು. ಮಕ್ಕಳು ಕೂಡ ಅಮ್ಮನ ಕಷ್ಟ ಅರಿದು, ಸುಸಂಸ್ಕೃತರಾಗಿ ಚೆನ್ನಾಗಿ ಕಲಿತು ಬೆಳೆಯುತ್ತಿದ್ದರು. ಇತ್ತ ರಂಪಾಟ ಮಾಡಿಕೊಂಡು ಬಂದ ಆ ಹೆಂಗಸು ರಾಜೇಶನಲ್ಲಿ ಜಗಳ ಮಾಡಿಕೊಂಡು ಒಂದು ದಿನ ರಾಜೇಶನನ್ನೇ ‘ಈ ಮನೆ ನನ್ನ ಹೆಸರಿನಲ್ಲಿದೆ’ ಎಂದು ಮನೆಯಿಂದ ಹೊರಗೆ ಹಾಕಿದಳು. ರಾಜೇಶನಲ್ಲಿ ಹಣ ಕಡಿಮೆಯಾದಂತೆ ರಾಜೇಶ ಸಾಲಗಾರನಾದ. ತನ್ನಲ್ಲಿದ್ದ ಬೋಟನ್ನು ಮಾರಬೇಕಾಯಿತು. ಕುಡಿಯುವ ಚಟ ಹೆಚ್ಚಾಯಿತು. ಹಣವು ಇಲ್ಲ, ಬೋಟೂ ಇಲ್ಲ, ಹೆಂಡತಿಯೂ ಇಲ್ಲ. ನಿರ್ಗತಿಕನಾದ ರಾಜೇಶನಿಗೆ ನಿಲ್ಲಲ್ಲೊಂದು ಮನೆಯೂ ಇರಲಿಲ್ಲ. ಹಸಿವಿಗಾಗಿ ಬೇಡಲು ಪ್ರಾರಂಭಿಸಿದ. ಈಗ ರಾಜೇಶ ಅಕ್ಷರಶಃ ಭಿಕ್ಷುಕನಾಗಿದ್ದ!
ಲೇಖನ : ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)

















































































































