
ಚೈತನ್ಯ ಕಲಾವಿದೆರ್ ಬೈಲೂರು ಇವರ ‘ರಾಘು ಮಾಸ್ಟ್ರ್’ ನಾಟಕವನ್ನು ವಿಟ್ಲ ಜಾತ್ರೋತ್ಸವ ಪ್ರಯುಕ್ತ ಸಮರ್ಪಣ್ ಎಂಬ ತಂಡ ಅಯೋಜನೆ ಮಾಡಿತ್ತು. ರಂಗಭೂಮಿಯಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ನಾಟಕ ನೋಡಲೇ ಬೇಕೆನ್ನುವ ಇರಾದೇ ನನ್ನದಾಗಿತ್ತು. ಸುಮಾರು ಎರಡು ಗಂಟೆ ಇಪ್ಪತ್ತು ನಿಮಿಷಗಳ ಈ ನಾಟಕ ಪ್ರತಿ ಪ್ರೇಕ್ಷಕರನ್ನು ಕುಳಿತಲ್ಲಿಂದ ಕದಲದಂತೆ ಮಾಡಿದ್ದು ನಿಜ. ಪ್ರಸ್ತುತ ಸಮಾಜದಲ್ಲಿ ತ್ಯಾಗ, ನೋವು, ಕಷ್ಟ, ತ್ಯಾಗ ಎಲ್ಲವೂ ಹೆಣ್ಣಿಗೆ ಮಾತ್ರ ಎಂಬ ದೊಡ್ಡ ಹಣೆಪಟ್ಟಿ ಇರುವ ಈ ಕಾಲದಲ್ಲಿ ಗಂಡಿಗೂ ಒಂದು ಬದುಕಿದೆ ಅವನಿಗೂ ನೋವು ನಲಿವಿದೆ ತ್ಯಾಗದ ರೂಪವಿದೆ ಎಂಬುದನ್ನು ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಗಂಡು ಮಗನಾಗಿ ಜನಿಸಿ, ಕುಟುಂಬದ ಜೊತೆಗಿನ ಸಂಬಂಧ ಜವಾಬ್ದಾರಿಯ ನಂತರ ಮದುವೆಯ ಅನುಬಂಧ ಪ್ರತಿ ಹಂತ ಉದ್ಯೋಗದ ಜೊತೆ ಅವನ ಪ್ರತಿ ಹಂತದಲ್ಲಿಯೂ ಅವನ ಕಷ್ಟ ಅವನಿಗೆ ಮಾತ್ರ ತಿಳಿದಿರುತ್ತದೆ ಎಂಬುದನ್ನು ಜನರಿಗೆ ತಿಳಿಸಿದ ರೀತಿ ಅರ್ಥಪೂರ್ಣವಾಗಿದೆ. ಆರಂಭದಿಂದ ಅಂತ್ಯದ ತನಕ ಇಲ್ಲಿ ಯಾರೂ ಕೂಡ ಜಾನರ್ ನಟರಿಲ್ಲ. ಬದಲಾಗಿ ಹೊಸ ಮುಖಗಳೇ ಇಲ್ಲಿರುವುದು. ಸಾಮಾನ್ಯ ಹಾಸ್ಯವನ್ನು ಕಥೆಯ ಜೊತೆ ಸಂಬಂಧ ತೂಗಿಸಿದರ ಜೊತೆ ಅಚ್ಚುಕಟ್ಟಾದ ಲೆಕ್ಕದ ಸಂಭಾಷಣೆ ಅರ್ಥಪೂರ್ಣವಾಗಿ ಕಲಾಭಿಮಾನಿಗಳಿಗೆ ತಲುಪುತ್ತದೆ. ಇಲ್ಲಿ ಹಾಸ್ಯ ಓವರ್ ಆಕ್ಟಿಂಗ್ ಇಲ್ಲದೇ ನಡೆಯುವುದು ಇವರಿಗೆ ಪ್ಲಸ್ ಪಾಯಿಂಟ್.

ಹಳ್ಳಿಯ ಮನೆ ತಕ್ಷಣ ಹಿನ್ನಲೆ ಮಾತಿನೊಂದಿಗೆ ಮಾಯನಗರಿಯ ಪ್ಲಾಟ್ ನ ಚಿತ್ರಣ ಇದೊಂದು ಅದ್ವಿತೀಯ ಸಾಧನೆ. ಇಲ್ಲಿ ಪರದೆಯ ಹಿಂದಿನ ಕಲಾವಿದರ ಸಾಧನೆ ನಿಜವಾಗಿ ಮೆಚ್ಚುವಂತದ್ದು. ಯಾಕೆಂದರೆ ಯಕ್ಷಗಾನದಲ್ಲಿ ನೇಪತ್ಯ ಕಲಾವಿದರು ಎಂಬಂತೆ ರಂಗಭೂಮಿಯಲ್ಲೂ ಈ ಕಲಾವಿದರಿದ್ದಾರೆ. ಬಣ್ಣ ಹಾಕಿ ರಂಗದಲ್ಲಿ ನಟನೆಯ ಕಲಾವಿದರ ಜೊತೆ ಸೆಲ್ಪಿ ಗೆಲ್ಪಿ ಸಾಮಾನ್ಯ. ಅಂತಹ ಕಲಾವಿದರನ್ನು ಸೃಷ್ಟಿ ಮಾಡುವಲ್ಲಿ ಬಹು ದೊಡ್ಡ ಸಾಧನೆ ಇರುವುದು ಅದು ಪರದೆಯ ಹಿಂದಿನ ನೇಪತ್ಯ ಕಲಾವಿದರಿಂದ ಮಾತ್ರ. ಅದೊಂದು ಸಾಧನೆಯ ತಪಸ್ಸೇ ಸರಿ. ಇಲ್ಲಿ ಪ್ರತಿ ದೃಶ್ಯದಲ್ಲಿ ಒಂದೊಂದು ಸೆಟ್ಟಿಂಗ್ ಪ್ರಮುಖ್ಯವಾಗಿ ಕಾಣುತ್ತದೆ. ಕಛೇರಿ ಸೆಟ್ಟಿಂಗ್, ಮನೆಯ ಬದಿಯಲ್ಲಿ ಶವರ್ ಮೂಲಕ ಸ್ನಾನ ಮಾಡಿಸುವ ಒಂದು ದೃಶ್ಯ ಮನ ಮುಟ್ಟುತ್ತದೆ. ಕಲಾವಿದರು ಇಲ್ಲಿ ನೀಡಿದ ಪಾತ್ರಕ್ಕೆ ಜೀವ ನೀಡಿದ್ದಾರೆ. ಇಲ್ಲಿ ಸಣ್ಣ ಕಥೆಯೊಂದು ಅದ್ವಿತೀಯವಾಗಿ ಮೂಡಿಬಂದಿದೆ. ಯಾಕೆಂದರ ನೈಜ ನಟನೆಯ ಜೊತೆ ಪ್ರಸ್ತುತ ಕಾಲಘಟ್ಟದ ಕತೆ ಇಲ್ಲಿದೆ. ಪ್ರಸನ್ನ ಶೆಟ್ರ ಕಥೆ, ಸಂಭಾಷಣೆ, ನಿರ್ದೇಶನ, ನಿಜವಾಗಿಯು ಗೆದ್ದಿದೆ. ಇಲ್ಲಿ ಸ್ಪಷ್ಟವಾಗಿ ಕಾಣುವುದು ಒಂದೇ ಪ್ರಸನ್ನರಿಗೆ ನಿಜವಾಗಿಯೂ ಕಲಾ ಮಾತೆ ಶಾರದೆಯ ಪೂರ್ಣನುಗ್ರಹ ಆಗಿದೆ. ಯಾಕೆಂದರೆ ವರ್ಷಕ್ಕೆ ಹಲವು ನಾಟಕ, ಹಲವು ಸಿನೆಮಾಗಳಿಗೆ ಕಥೆ ಸಂಭಾಷಣೆ ಬರೆಯುವುದು ಅಷ್ಟು ಸುಲಭವಲ್ಲ ಬದಲಾಗಿ ಅದೊಂದು ತಾಯಿ ಶಾರದೆಯ ಅನುಗ್ರಹ ಪ್ರಸಾದವೇ ಸೈ.
ಈ ನಾಟಕದ ಒಂದು ಕಡೆ ‘ನೀರುಡು ವೋಡ ಉಪ್ಪೋಲಿ, ಆಂಡ ವೋಡಡ್ ನೀರುಪ್ಪೆರೆ ಬಲ್ಲಿ’ ಈ ಡೈಲಾಗ್ ಎಷ್ಟು ಅರ್ಥ ಪೂರ್ಣ ಎಂಬುದು ಈ ನಾಟಕ ನೋಡಿದರೆ ಮಾತ್ರ ತಿಳಿಯಬಹುದು. ಎಲ್ಲಿ ಬೇಕಾದರೂ, ಯಾವ ಜಾಗದಲ್ಲಿ ಬೇಕಾದರೂ ನಾಟಕ ಆಡಿಸಬಹುದು. ಅದಷ್ಟು ಬೇಗ 250 ಪ್ರದರ್ಶನವಾಗಲಿ ಎಂದು ಹಾರೈಸುತ್ತೇನೆ. ಮೇಲೆ ಹೇಳಿದಂತೆ ‘ರಾಘು ಮಾಸ್ಟ್ರ್’ ನಾಟಕವಲ್ಲ ಬದಲಾಗಿ ಪ್ರಸ್ತುತ ದಿನದಲ್ಲಿರುವ ಯುವಕರ ನೈಜ ಕಥೆ.
ಬರಹ : ಮನ್ಮಥ ಶೆಟ್ಟಿ ಪುತ್ತೂರು


















































































































