“ಹಸಿದವರು ವ್ಯಾಕರಣವನ್ನು ಉಣ್ಣಲಾರರು ; ಬಾಯಾರಿದವರು ಕಾವ್ಯರಸದಿಂದ ತಣಿಯಲಾರರು ವೇದಗಳನ್ನೋದಿ ಯಾರೂ ಕುಲೊದ್ಧಾರ ಮಾಡಿಕೊಂಡವರಿಲ್ಲ. ಆದ್ದರಿಂದ ಹಣ ಗಳಿಸು ಅದಿಲ್ಲದೆ ಗುಣಗಳಿಗೆ ಬೆಲೆಯಿಲ್ಲ” ಬಹುಶಃ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಹೆಚ್ಚಿನವರ ಬದುಕಿನ ಹೆಜ್ಜೆಗುರುತನ್ನು ಅರಸುತ್ತ ಸಾಗಿದಾಗ ಮೇಲಿನ ಸುಭಾಷಿತದ ಆಳ ಅರಿವಾಗುತ್ತದೆ.
ಉಳ್ತೂರು ಮೋಹನ್ದಾಸ್ ಶೆಟ್ಟಿ ಬಂಟರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಮಾತೃ ಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ನಲ್ಲಿ ಉಪಕಾರ್ಯಾಧ್ಯಕ್ಷರಾಗಿ ಇದೀಗ ಕಾರ್ಯಾಧಕ್ಷರಾಗಿ ಆಯ್ಕೆಯಾಗಿರುವುದು ಅವರ ಸಾಧನೆಗೆ ಸಂದ ದೊಡ್ಡ ಗೌರವ. ಇವರು ಕಳೆದ 15 ವರ್ಷಗಳಿಂದ ಈ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಂಸ್ಥೆಗೆ ಶೇರು ಬಂಡವಾಳ ಸಂಗ್ರಹಿಸುವುದರಲ್ಲಿ ಮೈಲಿಗಲ್ಲು ನಿರ್ಮಿಸಿದವರು. ಇವರ ಸಮಾಜ ಸೇವೆಯ ತುಡಿತಕ್ಕೆ ಸಂಘಟನಾ ಶಕ್ತಿಯ ಚಾತುರ್ಯಕ್ಕೆ ಇದು ಒಂದು ಉತ್ತಮ ಉದಾಹರಣೆ.
ಉಳ್ತೂರು ಕಟ್ಟೆ ಮನೆ ಶ್ರೀ ದಾರಪ್ಪ ಶೆಟ್ಟಿ ಮತ್ತು ಶ್ರೀಮತಿ ಭಾಗೀರಥಿ ಶೆಟ್ಟಿಯವರ ಸುಪುತ್ರರಾದ ಇವರು ಉಳ್ತೂರಿನಲ್ಲಿ ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಪಡೆದರು. ನಂತರ 1982ರಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತಮ್ಮ ಬಿ ಕಾಂ. ಪದವಿಯನ್ನು ಪಡೆದರು. ಆ ಬಳಿಕ ಅನ್ನದ ಹಾದಿಗಾಗಿ ಮುಂಬಾಯಿ ಸೇರಿದರು. ಈ ನೆಲವನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡ ಇವರು ಹೆಸರಾಂತ ಆದಾರಾತಿಥ್ಯ ಸಂಸ್ಥೆಯಾದ ಮುಂಬಾಯಿಯ ಒಬಿರಾಯ್ಸ್ ಟವರ್ಸ್ ಹೋಟೆಲ್ ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ನಂತರ ಈ ವೃತ್ತಿ ತೊರೆದು ಎಂ. ಟಿ. ಎನ್. ಎಲ್. ನಲ್ಲಿ ಟೆಲಿಫೋನ್ ಇನ್ಸ್ಪೆಕ್ಟರ್ ಆಗಿ ಸೇರಿಕೊಂಡರು. ಇಲ್ಲಿ ಅದಾಗಲೇ ಸ್ಥಾಪನೆಗೊಂಡಿದ್ದ ಎಮ್. ಟಿ. ಎನ್ ಎಲ್. ಕಾಮಗಾರ್ ಯೂನಿಯನ್ನ ಮೊದಲ ಜತೆ ಕಾರ್ಯದರ್ಶಿಯಾಗಿ, ಇಲ್ಲಿನ ಶ್ರಮ ಜೀವಿಗಳ ಒಳಿತಿಗಾಗಿರುವ ಈ ಸಂಘಟನೆ ಗಟ್ಟಿಗೊಳಿಸಲು ಸುಮಾರು ಹತ್ತು ವರುಷಗಳ ಕಾಲ ದುಡಿದರು. ನೊಂದವರ ನೋವಿಗೆ ಕಿವಿಯಾಗುವ, ಧ್ವನಿಯಾಗುವ ಈ ಸಾರ್ಥಕ ಕೆಲಸವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿರುವ ಶ್ರೀಯುತರು ಜನಾನುರಾಗಿಯಾಗಿ ಬದುಕಿನಲ್ಲಿ ಸಾರ್ಥಕ್ಯ ಕಂಡರು.
1985 ರಲ್ಲಿ ಆದರಾತಿಥ್ಯ ಉದ್ಯಮಕ್ಕೆ ಕಾಲಿಟ್ಟ ಇವರು ಮುಂಬಾಯಿ ಹಾಗೂ ಥಾಣೆ ಜಿಲ್ಲೆಗಳಲ್ಲಿ ತನ್ನದೆ ಆದ ಹೋಟೆಲ್ ತೆರೆದರು.
ಉಳ್ತೂರು ಮೋಹನ್ದಾಸ್ ಶೆಟ್ಟಿಯವರದ್ದು ಸ್ವಕಾರ್ಯ ಸಮಾಜಕಾರ್ಯಕ್ಕಾಗಿ ಸದಾ ದುಡಿಯುತ್ತಿರುವ ಲವಲವಿಕೆಯ ಚೇತನ. ಇವರ ಈ ತುಡಿತನ್ನು ಗುರುತಿಸಿ ಮಹಾರಾಷ್ಟ್ರ ಸರಕಾರ ಸ್ಪೆಶಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ((SEM)) ಆಗಿ ನಾಮ ನಿರ್ದೇಶನ ಮಾಡಿತು.
ಇಲ್ಲಿ ಐದು ವರುಷಗಳ ಕಾಲ ಸೇವೆ ಸಲ್ಲಿಸಿ ಸಮಾಜ ಸೇವೆಯ ನಾಡಿ ಮಿಡಿತ ಅರಿತ ಕೀರ್ತಿ ಇವರದ್ದು. 2008-2011ರ ಕಾಲಾವಧಿಯಲ್ಲಿ ಮುಂಬಾಯಿ ಬಂಟರ ಸಂಘದ ಕ್ಯಾಟರಿಂಗ್ ಮತ್ತು ಡೆಕೊರೇಶನ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಶೆಟ್ಟರು 2011-2014ರ ಅವಧಿಗೆ ಸಂಘದ ಜತೆ ಕಾರ್ಯದರ್ಶಿಯಾಗಿ ಪದೋನ್ನತಿ ಪಡೆದರು. ಈ ಸಮಯದಲ್ಲಿ ಅವರ ಕರ್ತವ್ಯ ಪ್ರಜ್ಞೆ, ಸಮಾಜಪರ ಕಾಳಜಿ ಗುರುತಿಸಿ ಬಂಟರ ಸಂಘವು ಇವರಿಗೆ ಅತ್ಯುತ್ತಮ ಸೇವಾ ಕಾರ್ಯಕರ್ತ ಚಿನ್ನದ ಪದಕ ನೀಡಿ ಗೌರವಿಸಿತು. 2014-2017ರ ಅವಧಿಗೆ ಸಂಘದ ಕಾರ್ಯದರ್ಶಿಯೂ ಸೇವೆ ಸಲ್ಲಿಸಿದರು. ಇದೀಗ 2019-2022ರ ಅವಧಿಗೆ ಜಾಗತಿಕ ಬಂಟರ ಸಂಘದ ಕೋಶಾಧಿಕಾರಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಜಾಗತಿಕ ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಇವರು ಮುಲುಂದ್ ಬಂಟ್ಸ್ನಲ್ಲಿಯೂ ಸಕ್ರಿಯ ಕಾರ್ಯಕರ್ತರಾಗಿ, ಜೊತೆ ಕೋಶಾಧಿಕಾರಿ ಸೇವೆ ಸಲ್ಲಿಸಿ ಸ್ಮರಣ ಸಂಚಿಕೆಯ ಕಾರ್ಯಾಧ್ಯಕ್ಷರಾಗಿ ಬೃಹತ್ ಮೊತ್ತ ಸಂಗ್ರಹಿಸಿದ ಕೀರ್ತಿ ಇವರದ್ದು.
ಮುಂಬಾಯಿಯಲ್ಲಿ ಹೋಟೆಲ್ ಉದ್ಯಮಿಯಾಗಿ ಜನಪ್ರಿಯ ಸಮಾಜ ಸೇವಕರಾಗಿ ಮುಂಬಾಯಿಯ ಪ್ರತಿಷ್ಠಿತ ಬಂಟರ ಸಂಘದಲ್ಲಿ ಕಳೆದ ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಶ್ರೀಯುತರು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಮುದಾಯ ಬಾಂಧವರ ಶ್ರೇಯಸ್ಸಿಗೆ ಶ್ರಮಿಸುತ್ತಾ ಬಂದವರು. ಪ್ರಸ್ತುತ 2021 -2023 ನೇ ಅವಧಿಗೆ ಮುಂಬಯಿ ಬಂಟರ ಸಂಘದಲ್ಲಿ ಉಪಾಧ್ಯಕ್ಷರಾಗಿ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹುಟ್ಟಿದ ಊರಿನ ಎಲ್ಲಾ ಸಮಾಜದ ಋಣ ತನಗಿದೆ ಎನ್ನುವ ವಿನಮ್ರತೆಯೇ ಇವರ ಯಶಸ್ವಿನ ಗುಟ್ಟು. ಶ್ರೀಯುತರು ತಾವು ಕಲಿತ ಉಳ್ತೂರು ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸಿ ಹಳೆ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿದರು. ಇದರ ಕಾರ್ಯಧ್ಯಕ್ಷರಾಗಿ ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ ತಂದೆ ದಿ. ದಾರಪ್ಪ ಶೆಟ್ಟಿಯವರ ಸ್ಮರಣಾರ್ಥ ತಾವು ಓದಿದ ಪ್ರಾಥಮಿಕ ಶಾಲೆಗೆ ಸಭಾ ಮಂಟಪ ನಿರ್ಮಿಸಿದ ಕೀರ್ತಿ ಇವರದ್ದು.
ಉಳ್ತೂರು ಮೋಹನ್ದಾಸ್ ಶೆಟ್ಟರು ತಾವು ಕಲಿತ ಶಾಲೆಯಲ್ಲಿ ಪ್ರಸ್ತುತ ಆರ್ಥಿಕವಾಗಿ ತೊಂದರೆಯಲ್ಲಿರುವ ಉನ್ನತ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ನಿರಂತರ ಸಹಾಯ ನೀಡುತ್ತಿದ್ದಾರೆ. ಉಳ್ತೂರು ಗ್ರಾಮದ ನಿವಾಸಿಗಳಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ತನ್ನ ಬಂಧುಗಳಿಗೆ ಮನೆ ನಿರ್ಮಾಣಕ್ಕೆ, ಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡುತ್ತಿದ್ದು ಇತರ ಸಮುದಾಯದ ಶ್ರೀಮಂತರಿಗೆ ಮಾದರಿಯಾಗಿದ್ದಾರೆ. ಉಳ್ತೂರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ಉಚಿತ ಸಮವಸ್ತ್ರ ನೀಡುತ್ತಿರುವ ಜೊತೆಗೆ ಇತರ ಶಿಕ್ಷಣ ವಂಚಿತ ಬಂಧು ಮಿತ್ರರ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ಸೇರ್ಪಡೆ ಮಾಡಿ ಅರಿವಿನ ಜ್ಯೋತಿ ಹಚ್ಚುಸುವುದಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ.
ಉಳ್ತೂರು ಮೋಹನ್ ದಾಸ್ ಶೆಟ್ಟಿಯವರ ಧರ್ಮ ಪತ್ನಿ ಶ್ರೀಮತಿ ಜಯಶ್ರೀ ಶೆಟ್ಟಿ ಸಾಂತೂರು ಗಂಡನ ಸಮಾಜ ಸೇವೆಯ ಹಿಂದಿನ ಪ್ರೇರಕ ಶಕ್ತಿ, ಗಂಡು ಮಕ್ಕಳಾದ ಸುರಾನ್ ಶೆಟ್ಟಿ, ಸಿ.ಎ. ಸಚಿನ್ ಶೆಟ್ಟಿ ತಮ್ಮ ತಂದೆಯ ವಿನಮ್ರತೆಯನ್ನು ಮೈಗೂಡಿಸಿಕೊಂಡ ಯುವಕರು. ಒಂದರ್ಥದಲ್ಲಿ ಇವರದ್ದು ಸುಖೀ ಸಂಸಾರ.
ಸ್ವಕಾರ್ಯ ಸಮಾಜ ಕಾರ್ಯದ ಜೊತೆಗೆ ಸ್ವಾಮಿ ಕಾರ್ಯವನ್ನು ಅಷ್ಟೇ ಶೃದ್ದೆಯಿಂದ ಮಾಡುವವರು ಉಳ್ತೂರು ಮೋಹನ್ದಾಸ್ ಶೆಟ್ಟಿ, 2017 ರಲ್ಲಿ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಇವರು ದೇವಸ್ಥಾನದ ಜೀರ್ಣೋದ್ಧಾರದ ನೇತೃತ್ವವನ್ನು ವಹಿಸಿಕೊಂಡು ಸಮಸ್ತ ಸಮಾಜ ಬಾಂಧವರಿಗೆ ಪ್ರೇರಕ ಶಕ್ತಿಯಾಗಿ ವಿಜೃಂಭಣೆಯಿಂದ ನಡೆಯುವುದಕ್ಕೆ ಶ್ರಮಿಸಿದರು.
ಉಳ್ತೂರು ಮೋಹನ್ದಾಸ್ ಶೆಟ್ಟಿಯವರ ಈ ಸಾಧನೆಯು ಸಮುದಾಯ ಬಾಂಧವರಿಗೆ ಅದರಲ್ಲೂ ಕಿರಿಯರಿಗೆ ಮಾದರಿಯಾಗುವಂತಹದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.